ಜಾನಪದ ‌ಸಾಹಿತ್ಯ ಕನ್ನಡಿಗರ ಸಂಸ್ಕೃತಿ ಬಿಂಬಿಸುವ ಆಕರ:  ಡಾ. ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ಜನಪದ ಸಾಹಿತ್ಯ ಬಹಳ ವೈಶಿಷ್ಟ್ಯಪೂರ್ಣವಾದುದು. ಗ್ರಾಮೀಣ ಭಾಗದಲ್ಲಿ ಜಾನಪದ ಹಾಡುಗಳು ಅತ್ಯಂತ ಹೆಚ್ಚು ಪ್ರಚಲಿತದಲ್ಲಿವೆ. ಜಾನಪದ ಹಾಡುಗಳು ಜನಸಾಮಾನ್ಯರ ಜೀವನಾಡಿಯಾಗಿವೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೦೨ನೆಯ ಶಿವಾನುಭವದಲ್ಲಿ ಮಾತನಾಡಿದ ಶ್ರೀಗಳು, ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ದಿನನಿತ್ಯದ ಬದುಕಿನ ಕಾಯಕ, ಸುಖ, ದುಃಖ ಹೀಗೆ ಅನೇಕ ಘಟನೆಗಳನ್ನು ಈ ಜಾನಪದ ಹಾಡುಗಳ ಮೂಲಕ ಹೊರಹಾಕುತ್ತಿದ್ದರು.

ತಮ್ಮ ಸೃಜನಶೀಲತೆಯ ಮೂಲಕ ಅವರು ಸಾಹಿತ್ಯವನ್ನಾಗಿಸಿದರು.

ಜನಪದರು ಯಾವುದೇ ಪದವಿಗಳನ್ನು ಪಡೆಯದಿದ್ದರೂ ತಾವು ಅನುಭವಿಸಿದ ಎಲ್ಲ ಲೋಕಾನುಭವಗಳನ್ನು ಸುಂದರವಾಗಿ ಕಟ್ಟಿಕೊಡುವ ಶಕ್ತಿಯನ್ನು ಹೊಂದಿದ್ದರು. ಅವರು ತಮ್ಮ ಆಶು ಕವಿತ್ವದ ಮೂಲಕ ಕಟ್ಟಿಕೊಟ್ಟ ಜನಪದ ಸಾಹಿತ್ಯ ಕನ್ನಡಿಗರ ಸಂಸ್ಕೃತಿಯನ್ನು ಬಿಂಬಿಸುವ ಆಕರಗಳಾಗಿವೆ.

ಜನಪದ ಕೋಗಿಲೆ ಗೌರಮ್ಮ ಚಲವಾದಿ ಹೇಳಿದ ಕಥೆಗಳು ತುಂಬಾ ಮೌಲಿಕತೆಯನ್ನು ಸಾರುತ್ತವೆ. ಅವರ ಕಥೆಗಳು ಇಂಗ್ಲಿಷ್ ಭಾಷೆಗೆ ಅನುವಾದವಾದರೆ, ವಿಶ್ವಮಟ್ಟದಲ್ಲಿ ಚರ್ಚೆ ಮಾಡುವ ವಿಚಾರಗಳನ್ನು ಹೊಂದಿವೆ ಎಂದರು.

‘ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ಎಂಬ ವಿಷಯ ಕುರಿತು ಕುಷ್ಟಗಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಜೀವನಸಾಬ ಮಾ. ವಾಲಿಕಾರ ಮಾತನಾಡಿ, ಜನಪದರು ಸಂಸ್ಕೃತಿಯ ರಾಯಭಾರಿಗಳು. ಸಮಾಜದಲ್ಲಿ ವ್ಯಕ್ತಿ ಕೇವಲ ವ್ಯಕ್ತಿಯಾಗಿ ಬಾಳದೆ ಸಮಷ್ಟಿ ಹಿತ ಬಯಸುವ ಸಮಾಜ ಜೀವಿಯಾಗಬೇಕು.

ಲಿಂಗೈಕ್ಯ ಗೌರಮ್ಮ ಚಲವಾದಿ ಸಾವಿರಕ್ಕೂ ಅಧಿಕ ಹಾಡುಗಳನ್ನು, ಅನೇಕ ಕಥೆಗಳನ್ನು ಕಟ್ಟಿಕೊಟ್ಟು ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಬಿಟ್ಟುಹೋದ ಅಪರೂಪದ ವ್ಯಕ್ತಿಗಳು ಎಂದರು.

ಗೌರವ ಅತಿಥಿಗಳಾದ ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಈಶ್ವರಪ್ಪ ಮುನವಳ್ಳಿ ದಂಪತಿಗಳು ಪೂಜ್ಯರಿಂದ ಆಶೀರ್ವಾದ ಪಡೆದು ಮಾತನಾಡಿ, ಲಿಂಗಾಯತ ಪ್ರಗತಿಶೀಲ ಸಂಘ ವಿಶ್ವಮಟ್ಟದಲ್ಲಿ ಗಿನ್ನಿಸ್ ದಾಖಲೆ ಮಾಡಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ.

ಸಂಘವು ಶ್ರೀಮಠದಲ್ಲಿ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ತನ್ನ ಹಿರಿಮೆಯನ್ನು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಈ ಪರಂಪರೆ ನಿರಂತರವಾಗಿ ಮುಂದುವರಿಯಬೇಕು ಎಂದರು.

ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ತಿರುಪತಿ ಶಿವನಗುತ್ತಿ ಅವರು ಗೌರವ ಸನ್ಮಾನವನ್ನು ಪಡೆದು ಮಾತನಾಡುತ್ತಾ, ತೋಂಟದಾರ್ಯ ಮಠ ಬಹುಜನಾಂಗದ, ಬಹುಧರ್ಮದ, ಪ್ರತಿಯೊಬ್ಬರನ್ನೂ ಸಮಾನತೆಯಿಂದ ಕಾಣುವ, ಪ್ರೀತಿಸುವ ಸರ್ವಜನಾಂಗದ ಶಾಂತಿಯ ತೋಟದಂತಿದೆ ಎಂದರು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ನಡೆಸಿದರು. ಧರ್ಮಗ್ರಂಥ ಪಠಣ ಮನೋಜಕುಮಾರ ಸಂಗನಾಯಕರ, ವಚನ ಚಿಂತನ ಅನುಶ್ರೀ ಶರಣು ದೊಡ್ಡೂರ ನಡೆಸಿದರು. ದಾಸೋಹ ಸೇವೆ ಮಲ್ಲಿಕಾರ್ಜುನ ಚಲವಾದಿ ಮತ್ತು ಪರಿವಾರದವರು ನೆರವೇರಿಸಿದರು.

ಸ್ವಾಗತ ಶಿವಾನುಭವ ಸಮಿತಿ ಚೇರ್ಮನ್ ರಮೇಶ ಕಲ್ಲನಗೌಡರ, ಕಾರ್ಯಕ್ರಮ ನಿರೂಪಣೆ ವಿದ್ಯಾಶ್ರೀ ಗಂಜಿಹಾಳ ನೆರವೇರಿಸಿದರು. ಶಿವಾನುಭವ ಸಂಘದ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಹಾಗೂ ಶ್ರೀಮಠದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಾನುಭವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *