ಡಾ. ನಂದಾ ಪಾಟೀಲ ವಚನ ಸಂಗೀತ ದತ್ತಿ ಕಾರ್ಯಕ್ರಮ
ಧಾರವಾಡ:
ಕರ್ನಾಟಕ ವಿಶ್ವವಿದ್ಯಾಲಯ ಶ್ರೀ ಬಸವೇಶ್ವರ ಪೀಠದ ಅಲ್ಲಮಪ್ರಭು ಸಭಾ ಭವನದಲ್ಲಿ ಈಚೆಗೆ ವಿದುಷಿ ಡಾ. ನಂದಾ ಪಾಟೀಲ ವಚನ ಸಂಗೀತ ದತ್ತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಎ. ಎಂ. ಖಾನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶ್ರೀ ಬಸವೇಶ್ವರ ಪೀಠವು ಕ್ರಿಯಾಶೀಲ ಮತ್ತು ಮಾದರಿಯ ಪೀಠವಾಗಿದೆ.
ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯದ ಕುರಿತು ಜಾಗೃತಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಸರ್ವ ಜನಾಂಗದವರ ಒಳಿತನ್ನು ಬಯಸಿದ ಶ್ರೀ ಬಸವೇಶ್ವರ ಚಿಂತನೆಗಳು ಎಲ್ಲಾ ದೇಶ ಕಾಲಗಳಿಗೂ ಮಾದರಿಯಾಗಿವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಲಸಚಿವರಾದ ಪ್ರೊ. ಮೃತ್ಯುಂಜಯ ಅಗಡಿ ಅವರು ಮಾತನಾಡುತ್ತಾ, ಸಾಹಿತ್ಯ ಮತ್ತು ಸಂಗೀತಕ್ಕೆ ಅವಿನಾಭಾವ ಸಂಬಂಧವಿದೆ. ವಚನ ಸಾಹಿತ್ಯವು ಸಂಗೀತದ ಮೂಲಕ ಹೆಚ್ಚು ಜನರನ್ನು ತಲುಪಲು ಸಾಧ್ಯವಾಯಿತು ಎಂದರು. ಇಂತಹ ವಚನ ಸಂಗೀತ ದತ್ತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯ ಮತ್ತು ಸಂಗೀತ ಕುರಿತು ಹೆಚ್ಚು ಆಸಕ್ತಿಯನ್ನು ಮೂಡಿಸಲು ಸಹಾಯಕವಾಗಿವೆ ಎಂದರು.
ದತ್ತಿದಾನಿಗಳಾದ ಪ್ರೊ. ಮಲ್ಲಿಕಾರ್ಜುನ ಪಾಟೀಲ ಅವರು ಮಾತನಾಡುತ್ತಾ, ಪಶ್ಚಿಮದ ಚಿಂತಕರಾದ ಪ್ಲೇಟೋ, ಕಾರ್ಲ್ ಮಾರ್ಕ್ಸ್, ರೂಸೋ, ಅರಿಸ್ಟಾಟಲ್ ಇವರ ಎಲ್ಲ ಚಿಂತನೆಗಳನ್ನು 12ನೇ ಶತಮಾನದಲ್ಲಿಯೇ ಕನ್ನಡ ನಾಡಿನಲ್ಲಿ ಜನಿಸಿದ ಶ್ರೀ ಬಸವೇಶ್ವರರ ಆಲೋಚನೆಗಳಲ್ಲಿ ಕಾಣುತ್ತೇವೆ. ಇಂತಹ ಶ್ರೇಷ್ಠ ಚಿಂತನೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಬೆಳೆಯಬೇಕಾಗಿದೆ ಎಂದು ಸಲಹೆ ನೀಡಿದರು.
ಕರ್ನಾಟಕ ವಿಶ್ವವಿದ್ಯಾಲಯದ ಬೋಧನಾ ಸಹಾಯಕರಾದ ಡಾ. ಶಕ್ತಿ ಪಾಟೀಲ ಅವರು ವಚನ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶ್ರೀ ಬಸವೇಶ್ವರ ಪೀಠದ ಸಂಯೋಜಕರಾದ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಶ್ರೀ ಬಸವೇಶ್ವರ ಪೀಠವು ಯಾವುದೇ ಸರಕಾರದ ನೆರವಿಲ್ಲದೆ ಕೇವಲ ದಾಸೋಹದ ಮೂಲಕ ಗುಣಮಟ್ಟದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವುದರ ಕುರಿತು ತಿಳಿಸಿದರು.
ವೇದಿಕೆ ಮೇಲೆ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ಪ್ರೊ. ನಂದಾ ಪಾಟೀಲ, ಡಾ. ಶಕ್ತಿ ಪಾಟೀಲ, ಡಾ. ಈರಣ್ಣ ಇಂಜಗನೇರಿ ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ಸಂಶಿ ಮತ್ತು ಸೋಹೈಲ್ ಸೈಯದ್ ಪ್ರಾರ್ಥಿಸಿದರು. ಪವಿತ್ರಾ ಭಂಡಾರಿ ವಂದಿಸಿದರು. ಡಾ. ಈರಣ್ಣ ಇಂಜಗನೇರಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಡಾ. ವೀರಣ್ಣ ರಾಜೂರ, ಡಾ. ಸಿ.ಎಮ್. ಕುಂದಗೋಳ, ಡಾ. ಅನುಸೂಯ ಕಾಂಬಳೆ, ಡಾ. ಮಲ್ಲಪ್ಪ ಬಂಡಿ ಆಮಂತ್ರಿತ ಗಣ್ಯರು ಮತ್ತು ಶ್ರೀ ಬಸವ ಪೀಠದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
