ಸಾಣೇಹಳ್ಳಿ:
ಇಲ್ಲಿನ ಎಸ್.ಎಸ್. ರಂಗಮಂದಿರದಲ್ಲಿ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ, ಕನಕದಾಸರ ಬದುಕು-ಬರಹ ಆಧಾರಿತ ‘ಮುತ್ತು ಬಂದಿದೆ ಕೇರಿಗೆ’ ನೃತ್ಯರೂಪಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು, ” ಕನಕದಾಸರ ತತ್ವ ಹಾಗೂ ಬದುಕಿನ ವಿವಿಧ ಹಂತಗಳನ್ನು ಇಂದಿನ ಪೀಳಿಗೆಗೆ ನೃತ್ಯ ರೂಪಕದ ಮೂಲಕ ತಲುಪಿಸುತ್ತಿರುವುದು ಅತ್ಯಂತ ಶ್ಲಾಘನೀಯ.

“ನಮ್ಮ ನಡುವೆ ಇರುವ ಕಲೆ, ಸಾಹಿತ್ಯ ಹಾಗೂ ಸಂಗೀತದಂತಹ ತತ್ವಗಳು ಪ್ರತಿಯೊಬ್ಬರಲ್ಲೂ ಒಲವು ಮತ್ತು ಪ್ರೀತಿಯನ್ನು ಮೂಡಿಸುತ್ತವೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ”.
ನಾಟಕದ ಹಿನ್ನೆಲೆ, ವಸ್ತ್ರ ವಿನ್ಯಾಸ ಮತ್ತು ಇಡೀ ರಂಗಸ್ಥಳವನ್ನು ಬಳಸಿಕೊಂಡ ವಿಧಾನ ಅತ್ಯಂತ ಕಲಾತ್ಮಕವಾಗಿ ಮೂಡಿಬಂದಿದೆ. ಕಲಾವಿದರು ಕನಕದಾಸರ ತತ್ವಗಳನ್ನು ಅರಿತು, ತಕ್ಕಂತೆ ಮುಖಭಾವ ಹಾಗೂ ಆಂಗಿಕ ಅಭಿನಯದ ಮೂಲಕ ನವರಸಗಳನ್ನು ಯಶಸ್ವಿಯಾಗಿ ವ್ಯಕ್ತಪಡಿಸಿದ್ದಾರೆ.
ಕನಕದಾಸರಿಗೆ ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸಿದಾಗ ಮತ್ತು ಕೊನೆಗೆ ದೇವರು ಪ್ರತ್ಯಕ್ಷನಾಗಿ ಮುಖ ತಿರುಗಿಸಿದ ರೋಮಾಂಚನಕಾರಿ ಪ್ರಸಂಗಗಳನ್ನು ನೃತ್ಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.

ಸ್ನೇಹಾ ಅವರ ಅದ್ಭುತ ನೃತ್ಯ ನಿರ್ದೇಶನ ಹಾಗೂ ಕಪ್ಪಣ್ಣ ಅವರ ಪರಿಶ್ರಮದಿಂದ ಇಂತಹ ಅಪರೂಪದ ಪ್ರಯೋಗ ಸಾಧ್ಯವಾಗಿದೆ. ಸಂಗೀತ ಮತ್ತು ತಾಂತ್ರಿಕ ವಿಚಾರಗಳಲ್ಲಿ ಇನ್ನೂ ಸಣ್ಣಪುಟ್ಟ ಸುಧಾರಣೆಗಳಿಗೆ ಅವಕಾಶವಿದೆ. ಇಂತಹ ಕಲಾ ಪ್ರದರ್ಶನಗಳನ್ನು ನಿರಂತರವಾಗಿ ನಡೆಸಲು ಮತ್ತು ದೇಶ-ವಿದೇಶಗಳಲ್ಲಿ ಪ್ರಚಾರ ಮಾಡಲು ಸರ್ಕಾರ ಹಾಗೂ ಕಲಾಭಿಮಾನಿಗಳ ಆರ್ಥಿಕ ನೆರವು ಅತ್ಯಗತ್ಯವಾಗಿದೆ.
ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದ ಜಗದ್ಗುರು ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ; ಕನಕದಾಸರ ತತ್ವ ಸಂದೇಶಗಳು ಸಮಾಜಕ್ಕೆ ಆದರ್ಶ. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಕಲ್ಪಿಸಿದ ವರ್ಗ ಹಿತ, ವರ್ಣ ಹಿತ ಮುಕ್ತ ಆರೋಗ್ಯಕರ ಸಮಾಜದ ಕನಸನ್ನೇ ೧೬ನೇ ಶತಮಾನದಲ್ಲಿ ದಾಸಶ್ರೇಷ್ಠ ಕನಕದಾಸರು ತಮ್ಮ ತತ್ವ ಸಂದೇಶಗಳ ಮೂಲಕ ಮುಂದುವರಿಸಿದ್ದರು. ಅವರು ಸಮಾಜದಲ್ಲಿ ಅನುಭವಿಸಿದ ನೋವು ಮತ್ತು ನೀಡಿದ ಮಾನವೀಯ ಮೌಲ್ಯಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.
ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನದ ಜಗದ್ಗುರು ಶಾಂತವೀರ ಸ್ವಾಮೀಜಿ ಮಾತನಾಡಿ; ಕನಕದಾಸರ ವೈಚಾರಿಕತೆ ಹಾಗೂ ಬಸವಣ್ಣನವರ ಚಿಂತನೆಗಳ ನಡುವೆ ಅತ್ಯಂತ ಸಾಮ್ಯತೆಯಿದೆ. ಬಸವಣ್ಣನವರು ಯಾವ ಜಾತೀಯತೆ ಮತ್ತು ಶೋಷಣೆಯನ್ನು ವಿರೋಧಿಸಿ ವಚನ ಸಾಹಿತ್ಯ ರಚಿಸಿದರೋ, ಅದೇ ಮಾದರಿಯಲ್ಲಿ ಶೋಷಣೆ ಅನುಭವಿಸಿದ ಕನಕದಾಸರು ಜನಪರ ಮತ್ತು ಜೀವಪರ ಸಾಹಿತ್ಯದ ಮೂಲಕ ತಮ್ಮ ವೈಚಾರಿಕ ಪ್ರಜ್ಞೆಯನ್ನು ಸಮಾಜಕ್ಕೆ ಉಣಬಡಿಸಿದ್ದಾರೆ.
“ಹಿಂದಿನ ಕಾಲದಲ್ಲಿ ಸನ್ಯಾಸಿಗಳು ಇಂದಿನಂತೆ ಮಠಗಳಲ್ಲಾಗಲಿ, ಕಾರು-ಚೇರುಗಳಲ್ಲಾಗಲಿ ಇರುತ್ತಿರಲಿಲ್ಲ. ಅವರು ಕಾಡಿನಲ್ಲಿ ತಪಸ್ಸಿಗೆ ಕೂರುತ್ತಿದ್ದಾಗ ಪ್ರಾಣಿಗಳಿಂದ ಹಾಗೂ ಕೀಟಗಳಿಂದ ರಕ್ಷಣೆ ಪಡೆಯಲು ಚರ್ಮಗಳನ್ನು ಬಳಸುತ್ತಿದ್ದರೇ ಹೊರತು ಅದು ಹಿಂಸೆಯ ಸಂಕೇತವಾಗಿರಲಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಯಾವ ಸ್ವಾಮೀಜಿಗಳೂ ಇವುಗಳನ್ನು ಬಳಸುತ್ತಿಲ್ಲ ಮತ್ತು ಅದು ಸಾಧ್ಯವೂ ಇಲ್ಲ” ಎಂದರು.
“ನಾವು ಬೇರೆಯವರಿಂದ ಗೌರವವನ್ನು ಬಯಸುವಾಗ, ನಾವೂ ಸಹ ಇತರರಿಗೆ ಗೌರವ ಕೊಡುವುದನ್ನು ಕಲಿಯಬೇಕು. ನಮಗೆ ಇತರರು ಕೆಟ್ಟದ್ದನ್ನು ಮಾಡಬಾರದು ಎಂದು ಬಯಸುವ ನಾವು, ಇತರರಿಗೂ ಅದನ್ನು ಮಾಡಬಾರದು. ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಹಾಗೂ ವಾಲ್ಮೀಕಿಯವರ ತತ್ವಗಳು ಇದನ್ನೇ ಸಾರುತ್ತವೆ” ಎಂದು ಅವರು ಹೇಳಿದರು.
ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ; ಕನಕದಾಸರ ಸೋದರತೆ, ಸಮಾನತೆ ಹಾಗೂ ಸಾಮಾಜಿಕ ಸೌಹಾರ್ದತೆಯ ದೊಡ್ಡ ಸಂದೇಶವನ್ನು ಒಳಗೊಂಡ “ಮುತ್ತು ಬಂದಿದೆ ಕೇರಿಗೆ” ಎಂಬ ಅಪೂರ್ವ ನೃತ್ಯ ರೂಪಕ ಪ್ರದರ್ಶನವು ಇಲ್ಲಿನ ಸಾರ್ವಜನಿಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಸಮಾಜದ ಏಳಿಗೆಗಾಗಿ ಶ್ರಮಿಸಿದ ಕನಕದಾಸರ ವಿಚಾರಧಾರೆಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಅತ್ಯಂತ ಪ್ರಸ್ತುತವಾಗಿತ್ತು.
ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಈ ಸುದೀರ್ಘ ನೃತ್ಯ ರೂಪಕವು ವೀಕ್ಷಕರಲ್ಲಿ ಯಾವುದೇ ಬೇಸರ ಮೂಡಿಸದೇ, ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತು. ಸ್ವತಃ ಕನಕದಾಸರೇ ರಂಗದ ಮೇಲೆ ಬಂದು ಅಭಿನಯಿಸುತ್ತಿದ್ದಾರೇನೋ ಎಂಬಂತಹ ಭಾವನೆ ಪ್ರೇಕ್ಷಕರಲ್ಲಿ ಮೂಡಿಬಂದಿದ್ದು ಈ ಪ್ರದರ್ಶನದ ವಿಶೇಷತೆಯಾಗಿತ್ತು.
“ಪ್ರತಿಯೊಂದು ನೃತ್ಯ ರೂಪಕದಲ್ಲೂ ಕನಕದಾಸರ ಪಾತ್ರವನ್ನು ಪ್ರತ್ಯೇಕವಾಗಿ ಬಿಂಬಿಸಿದರೆ ಜನರಿಗೆ ಮತ್ತಷ್ಟು ಹತ್ತಿರವಾಗುತ್ತದೆ. ತಂಬೂರಿ, ಕಂಬಳಿ ಮತ್ತು ಶಂಖ ಹಿಡಿದ ಕನಕದಾಸರ ಮೂಲ ರೂಪ ರಂಗದ ಮೇಲೆ ಬಂದು ಹೋದರೆ ಸಾರ್ವಜನಿಕರಿಗೆ ಅವರ ಬಗ್ಗೆ ಮತ್ತಷ್ಟು ಅರಿವು ಮೂಡುತ್ತದೆ” ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲೂ ಈ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ವಿನಂತಿಸಿದರು.
ಕರ್ನಾಟಕ ಸರಕಾರದ ರಾಜ್ಯಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್. ಎಂ. ರೇವಣ್ಣ ಮಾತನಾಡಿ, ಕನಕದಾಸರ ಕೀರ್ತನೆಗಳನ್ನು ಸಾಂಪ್ರದಾಯಿಕ ಕೀರ್ತನೆಗಳ ರೂಪದಲ್ಲಷ್ಟೇ ಸೀಮಿತಗೊಳಿಸದೆ, ಯಾವುದೇ ಹಾರ್ಮೋನಿಯಂ ಅಥವಾ ತಬಲಾದ ಅಬ್ಬರವಿಲ್ಲದೆ, ಹೊಸ ಶೈಲಿಯ ರಂಗರೂಪದಲ್ಲಿ ತಂದಿರುವುದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿದೆ. ಇದರ ಸಾರಾಂಶವನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಮುಟ್ಟಿಸುವಲ್ಲಿ ತಂಡ ಯಶಸ್ವಿಯಾಗಿದೆ.

ಕನಕದಾಸರ ಬದುಕಿನ ಕೊನೆಯ ದಿನಗಳ ಹಾಡನ್ನು ಕೇಳಿದಾಗ ಕಣ್ಣೀರು ಬರುವಂತಾಯಿತು. ಒಬ್ಬರೇ ಕನಕದಾಸರ ಪಾತ್ರ ಮಾಡುವ ಬದಲು ಇಡೀ ತಂಡವೇ ಕನಕದಾಸರ ತತ್ವಗಳನ್ನು ಬಿಂಬಿಸುವ ರೀತಿ ಅದ್ಭುತವಾಗಿತ್ತು ಎಂದರು.
ಇಡೀ ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಇಂತಹ ಸಾಂಸ್ಕೃತಿಕ ಪ್ರದರ್ಶನಗಳನ್ನು ನಿರಂತರವಾಗಿ ನಡೆಸುವುದು ಸುಲಭವಲ್ಲ. ಇಂತಹ ಕಠಿಣ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿರುವ ಇಡೀ ತಂಡಕ್ಕೆ ನನ್ನ ಕೃತಜ್ಞತೆಗಳು ಎಂದರು.
ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಎಸ್ ಷಡಾಕ್ಷರಿ ಮಾತನಾಡಿ, “ಸಾಣೇಹಳ್ಳಿ ಮಠವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಶರಣರ ವಿಚಾರಧಾರೆಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡುತ್ತಿದೆ. ಕನಕದಾಸರ ಹಾಡುಗಳು ಮತ್ತು ಅವರ ವಿಚಾರಗಳನ್ನು ಜೀವಂತ ರೂಪಕಗಳ ಮೂಲಕ ಪ್ರಸ್ತುತಪಡಿಸಿರುವುದು ಇಂದಿನ ಪೀಳಿಗೆಗೆ ಇತಿಹಾಸ ಮತ್ತು ವಾಸ್ತವ ಸಂಗತಿಗಳನ್ನು ನೆನಪಿಸುವ ಅತ್ಯುತ್ತಮ ಕಾರ್ಯವಾಗಿದೆ. ನಮ್ಮ ಸಾಹಿತ್ಯ, ಸಂಸ್ಕೃತಿ ಮತ್ತು ಶರಣರ ಪರಂಪರೆಯನ್ನು ಉಳಿಸಲು ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಅತ್ಯಗತ್ಯ. ಇಂದಿನ ತಾಂತ್ರಿಕ ಯುಗದಲ್ಲಿ ಚಲನಚಿತ್ರಗಳು ಮತ್ತು ಗ್ರಾಫಿಕ್ಸ್ ತಂತ್ರಜ್ಞಾನಗಳ ಅಬ್ಬರವಿದ್ದರೂ, ರಂಗವೇದಿಕೆಯ ಮೇಲೆ ಕಲಾವಿದರು ತೋರಿದ ಲೈವ್ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು. ಯಾವುದೇ ತಪ್ಪುಗಳಿಲ್ಲದೆ, ಸಿನಿಮಾ ಶೈಲಿಯ ನೃತ್ಯ ಮತ್ತು ನಟನೆಯನ್ನು ಅತ್ಯಂತ ನಿಖರವಾಗಿ ಪ್ರಸ್ತುತಪಡಿಸಿದ ಕಲಾವಿದರ ನಿಜಕ್ಕೂ ಮಚ್ಚುವಂಥದ್ದು.
ನೃಪತುಂಗ ವಿಶ್ವವಿದ್ಯಾಲಯ ಕೊಡಮಾಡುವ ಗೌರದ ಡಾಕ್ಟರೇಟ್ ಪಡೆದ ರಂಗಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಬಸವಣ್ಣನವರ ತತ್ವಗಳಿಗೆ ಅತ್ಯಂತ ಹತ್ತಿರವಾಗಿದ್ದ ಮತ್ತೊಬ್ಬ ಮಹಾನ್ ಚೇತನ ಪೂಜ್ಯ ಕನಕದಾಸರು. “ದೇಶದಲ್ಲಿ ಮಠ ಕಟ್ಟದ, ಯಾವುದೇ ಒಂದು ಜಾತಿಗೆ ಸೀಮಿತವಾಗದ ಇಬ್ಬರು ಮಹಾತ್ಮರೆಂದರೆ ರಾಮಕೃಷ್ಣ ಪರಮಹಂಸರು ಮತ್ತು ಕನಕದಾಸರು”.
ಪ್ರಾಣಿ ಹಿಂಸೆಯ ಚರ್ಮದ ಆಸನಗಳನ್ನಷ್ಟೇ ಬಳಸುವ ಪದ್ಧತಿಯನ್ನು ಪ್ರಶ್ನಿಸುತ್ತಾ, ಕುರಿಯ ಉಣ್ಣೆಯಿಂದ ಮಾಡಿದ ಕಂಬಳಿಯನ್ನೇ ಆಸನವಾಗಿ ಬಳಸಿ, ಜೀವಂತ ಪ್ರಾಣಿಗಳನ್ನು ಪ್ರೀತಿಸಿದ ಏಕೈಕ ಮಹಾನ್ ವ್ಯಕ್ತಿ ಕನಕದಾಸರು ಎಂದು ಅವರ ಸರಳತೆ ಮತ್ತು ಅಹಿಂಸಾ ತತ್ವವನ್ನು ಸ್ಮರಿಸಿಕೊಂಡರು.

ಕಾ. ತ. ಚಿಕ್ಕಣ್ಣ ಮಾತನಾಡಿ, “ಸಂಗೀತ, ನೃತ್ಯ ಮತ್ತು ಸಾಹಿತ್ಯಗಳು ನಮ್ಮ ಮನಸ್ಸನ್ನು ಸುಲಭವಾಗಿ ತಲುಪುತ್ತವೆ. ಇಂತಹ ಕಲಾ ಪ್ರಕಾರಗಳನ್ನು ನಾವು ಆಳವಾಗಿ ಅನುಭವಿಸಬೇಕಾದರೆ ಮಾತು ಕಡಿಮೆಯಾಗಿ, ಮೌನ ಮತ್ತು ಧ್ಯಾನದ ಸ್ಥಿತಿ ನಿರ್ಮಾಣವಾಗಬೇಕು. ಶಬ್ದಮುಕ್ತ ವಾತಾವರಣದಲ್ಲಿ ಮಾತ್ರ ಕಲೆಯ ನಿಜವಾದ ರಸಸ್ವಾದನೆ ಸಾಧ್ಯ.
“ಸ್ವಾಮೀಜಿಯವರ ಕೃಪಾಶೀರ್ವಾದದಿಂದ ಇಲ್ಲಿ ಅತ್ಯಂತ ಸುಂದರವಾದ ಕಲಾ ವಾತಾವರಣ ನಿರ್ಮಾಣವಾಗಿದೆ. ಈ ಸ್ಥಳಕ್ಕೆ ಬರುವುದೆಂದರೆ ನನಗೆ ತವರು ಮನೆಗೆ ಬಂದಂತಹ ಅನುಭವವಾಗುತ್ತದೆ. ತವರು ಮನೆಗೆ ಬಂದಾಗ ಉಂಟಾಗುವ ಆನಂದ ಮತ್ತು ಪುಳಕವನ್ನು ನಾನಿಲ್ಲಿ ಅನುಭವಿಸುತ್ತಿದ್ದೇನೆ. ಇಷ್ಟು ಅದ್ಭುತವಾಗಿ ಈ ಕಾರ್ಯಕ್ರಮ ಮೂಡಿಬಂದಿರುವುದು ಶ್ಲಾಘನೀಯ ಎಂದರು.
ವೇದಿಕೆಯ ಮೇಲೆ ಚಿತ್ರದುರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಗುರುನಾಥ್ ಹಾಗೂ ನೃತ್ಯ ಸಂಯೋಜಕಿ ಸ್ನೇಹ ಕಪ್ಪಣ್ಣ ಉಪಸ್ಥಿತರಿದ್ದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದ ನಾಗರಾಜ ಹಾಗೂ ಶರಣ್ ವಚನ ಗೀತೆಗಳನ್ನು ಹಾಡಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
