ಶಿಕ್ಷಣ, ಸಂಸ್ಕಾರ ಮತ್ತು ಗುಣಮಟ್ಟದ ಕಲಿಕೆಗೆ ಬಸವಲಿಂಗ ಸ್ವಾಮೀಜಿ ಕರೆ

ಬಸವ ಮೀಡಿಯಾ
ಬಸವ ಮೀಡಿಯಾ

ಮೊಳಕಾಲ್ಮುರು:

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಮೂಲಾಧಾರವಾಗಿದ್ದು, ಮಕ್ಕಳು ಸಂಸ್ಕಾರ, ವಿನಯತೆ ಮತ್ತು ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾವಂತರಾಗಿ ಬೆಳೆದು ಸಮಾಜದ ಆಸ್ತಿಯಾಗಬೇಕು ಎಂದು ಸಿದ್ಧಯ್ಯನಕೋಟೆ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಶಾಖಾಮಠದ ಪೀಠಾಧ್ಯಕ್ಷರಾದ ಪೂಜ್ಯ ಬಸವಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದ ಶ್ರೀ ವಿಜಯಮಹಾಂತೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀಮಠದ ಆಶ್ರಯದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರ, ವಿನಮ್ರತೆ ಮತ್ತು ಶಿಸ್ತುಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ಬೋಧಿಸುವ ಪಾಠಗಳನ್ನು ಏಕಾಗ್ರತೆಯಿಂದ ಗ್ರಹಿಸಿ ಜ್ಞಾನ ಸಂಪಾದಿಸಬೇಕು. ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲದೆ ಉತ್ತಮ ವ್ಯಕ್ತಿತ್ವ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೂ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ವಿದ್ಯೆಯ ಮುಂದೆ ಹಣ, ಆಸ್ತಿ, ಅಂತಸ್ತು ಯಾವುದೂ ಸಮನಾಗುವುದಿಲ್ಲ. ಆದ್ದರಿಂದ ಪೋಷಕರು ಮಕ್ಕಳಿಗೆ ಶಿಕ್ಷಣವನ್ನೇ ಶಾಶ್ವತ ಆಸ್ತಿಯನ್ನಾಗಿ ನೀಡಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಸದುಪಯೋಗಪಡಿಸಿಕೊಂಡು ಕಾಲಹರಣ ಮಾಡದೆ ನಿರಂತರ ಅಧ್ಯಯನದತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪಿ.ಆರ್. ಕಾಂತರಾಜ, ಗಡಿಭಾಗದ ಬಡ ಮತ್ತು ಹಿಂದುಳಿದ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಬಹುವರ್ಷಗಳಿಂದ ಶ್ರೀಮಠವು ಉಚಿತ ಶಿಕ್ಷಣ, ವಸತಿ ಹಾಗೂ ದಾಸೋಹ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.

ಸಿದ್ಧಯ್ಯನಕೋಟೆಯಲ್ಲಿರುವ ಶ್ರೀ ವಿಜಯಮಹಾಂತೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಜೊತೆಗೆ ಬಳ್ಳಾರಿ, ವಿಜಯನಗರ ಸೇರಿದಂತೆ ಹೊರ ಜಿಲ್ಲೆಗಳ ಹಾಗೂ ಇತರೆ ತಾಲೂಕುಗಳ ವಿದ್ಯಾರ್ಥಿಗಳು ಕೂಡ ಪ್ರವೇಶ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಅನುಭವಿ ಮತ್ತು ಅರ್ಹ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ವಸತಿ, ಶುಚಿ-ರುಚಿಯಾದ ಆಹಾರ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

ಈ ಸೌಲಭ್ಯಗಳನ್ನು ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಶ್ರೀಮಠದ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳು ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮಂಜಯ್ಯ, ಶಿಕ್ಷಕರಾದ ನವೀನ, ಕಾಮಯ್ಯ, ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *