ಬಸವಕಲ್ಯಾಣ ಹಿಂದೂ ಸಮಾವೇಶ ತಡೆಯಲು ಬಸವಪರ ಸಂಘಟನೆಗಳ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

 ದಾವಣಗೆರೆ:

ಬಸವಕಲ್ಯಾಣದಲ್ಲಿ ಕನ್ನೇರಿ ಸ್ವಾಮಿಗಳ ನೇತೃತ್ವದ ಬಸವಾದಿ ಶರಣರ ಹಿಂದೂ ಸಮಾವೇಶ ತಡೆಯಬೇಕು. ಬಸವಾನುಯಾಯಿಗಳನ್ನು ಬಸವ ತಾಲಿಬಾನ್ ಎಂದು ಕರೆದ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಬಸವಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯ ಮಾಡಿವೆ.

ಸಂಘಟನೆಗಳ ಸದಸ್ಯರು ಗುರುವಾರ ಪ್ರತಿಭಟನೆ ಮಾಡಿ, ಉಪವಿಭಾಗಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದವು.

ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರು ಹಾಗೂ ಅವರ ಸಮಕಾಲೀನ ಎಲ್ಲಾ ಶರಣರು 12ನೇ ಶತಮಾನದಲ್ಲಿ ಸಮಾಜದಲ್ಲಿರುವ ಮೌಡ್ಯತೆ, ಅಂಧಕಾರ, ಕಂದಾಚಾರ, ವೈಧಿಕಶಾಹಿಯಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಜನರನ್ನು ಜಾಗೃತಿಗೊಳಿಸಿದವರು.

ವಚನ ರಚನೆಯ ಮೂಲಕ ಸಾಮಾನ್ಯ ಜನಕ್ಕೂ ಸಾಹಿತ್ಯದ ಅರಿವನ್ನು ಅರ್ಥೈಸಿದಂತವರು, ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸಿ, ಕನ್ನಡ ಭಾಷೆ ಶ್ರೀಮಂತವಾಗಲು ಬಸವಾದಿ ಶರಣರು ನೀಡಿದ ಕೊಡುಗೆ ಅಪಾರವಾದುದು.

ಇಂತಹ ಶರಣ ಧರ್ಮವನ್ನು ವಚನ ಸಾಹಿತ್ಯವನ್ನು ನಾಡಿನೆಲ್ಲೆಡೆ ಪ್ರಚಾರಪಡಿಸಲು ಅನೇಕ ಬಸವಪರ ಸಂಘಟನೆಗಳು, ಬಸವ ಅನುಯಾಯಿಗಳು, ಮಠ-ಮಾನ್ಯಗಳು ಹಲವಾರು ವರ್ಷಗಳಿಂದ ಹಗಲಿರುಳು ಶ್ರಮಿಸಿರುತ್ತಾರೆ.

ಇತ್ತೀಚಿನ ಕೆಲವು ದಿನಗಳ ಹಿಂದೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಬಸವ ಬಳಗ, ಬಸವ ಧರ್ಮಪೀಠ ಇಂತಹ ಹತ್ತಾರು ಸಂಘಟನೆಗಳ ಸಹಕಾರದೊಂದಿಗೆ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರ್ವ ಜನಾಂಗಗಳೊಂದಿಗೆ ಸಾಮಾರಸ್ಯ ನಡಿಗೆ, ವಿದ್ಯಾರ್ಥಿಗಳೊಂದಿಗೆ ಸಂವಾದ, ವೇದಿಕೆಯ ಕಾರ್ಯಕ್ರಮ ನಡೆಸುತ್ತಾ ಬಸವತತ್ವ ಪ್ರಚಾರವನ್ನು ಯಶಸ್ವಿಯಾಗಿ ನಡೆಸಿತು.

ಈ ಯಶಸ್ವಿ ಕಾರ್ಯಕ್ರಮದ ನಂತರ ಕನ್ನೇರಿ ಮಠದ ಶ್ರೀಗಳು ಮಠಾಧಿಪತಿಗಳನ್ನು, ಬಸವಾಭಿಮಾನಿಗಳನ್ನು ಉದ್ದೇಶಿಸಿ ಹೀನ ಪದಗಳಿಂದ ನಿಂದಿಸಿದರು. ಆ ಸಮಯದಲ್ಲಿ ಬಸವಾಭಿಮಾನಿಗಳು ಕನ್ನೇರಿ ಶ್ರೀಗಳನ್ನು ವಿರೋಧಿಸಿದರು.

ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಇವರನ್ನು ಮೂರು ಜಿಲ್ಲೆಗಳಿಗೆ ಪ್ರವೇಶಿಸದಂತೆ ನಿರ್ಬಂಧ ಹೇರಿತು. ಇದರ ವಿರುದ್ಧವಾಗಿ ನ್ಯಾಯಾಲಯದಲ್ಲಿ ಕನ್ನೇರಿ ಶ್ರೀಗಳು ದಾವೆ ಹೂಡಿದರು. ಕನ್ನೇರಿ ಶ್ರೀಗಳಿಗೆ ನ್ಯಾಯಾಲಯವು ಕೂಡ ಛೀಮಾರಿ ಹಾಕಿತು. ಮೊದಲು ನಿಮ್ಮ ಭಾಷೆಯನ್ನು ಸರಿಪಡಿಸಿಕೊಳ್ಳಿ ಎಂದು ಎಚ್ಚರಿಸಿತು ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.

ಇದಾದ ಕೆಲವು ದಿನಗಳವರೆಗೆ ಸುಮ್ಮನಿದ್ದ ಕನ್ನೇರಿ ಶ್ರೀಗಳು ಕೆಲವು ಸಂಘಟನೆಗಳೊಂದಿಗೆ ಬಸವಾದಿ ಶರಣರ ಹಿಂದೂ ಸಮಾವೇಶ ಎಂಬ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಮತ್ತೆ ಬಸವಾಭಿಮಾನಿಗಳನ್ನು, ಬಸವ ತಾಲಿಬಾನಿಗಳೆಂದು ಇನ್ನೂ ಅನೇಕ ಪದಗಳಿಂದ ಹೀನಾ-ಮಾನವಾಗಿ ಎಲ್ಲಾ ವೇದಿಕೆಗಳಲ್ಲಿ ನಿಂದಿಸುತ್ತಾ ಬಂದಿರುತ್ತಾರೆ.

ಇವರ ವಿರುದ್ಧ ಕಠಿಣ ಕ್ರಮಕೈಗೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡದಂತೆ ಎಚ್ಚರಿಕೆ ನೀಡಬೇಕೆಂದು ಕೇಳಿಕೊಳ್ಳುತ್ತೇವೆ. ಮುಂದೆ ಇದೆ ರೀತಿ ಮುಂದುವರೆದರೆ ಇವರ ವಿರುದ್ಧ ಉಗ್ರ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

ಪ್ರತಿಭಟನೆಯ ನೇತೃತ್ವವನ್ನು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ. ಶಿವಕುಮಾರ, ಪ್ರಧಾನ ಪ್ರಧಾನ ಕಾರ್ಯದರ್ಶಿ ಬಸವನಾಳ ಮರಳಸಿದ್ದಯ್ಯ, ರಾಷ್ಟ್ರೀಯ ಬಸವದಳ, ಬಸವ ಬಳಗ, ಶರಣ ಸಾಹಿತ್ಯ ಪರಿಷತ್ತು ಈ ಸಂಘಟನೆಗಳ ಮುಖಂಡರಾದ ರುದ್ರಗೌಡ, ಬಿ.ಎಂ. ವಿಶ್ವೇಶ್ವರಯ್ಯ, ಶಶಿಧರ ಬಸಾಪುರ, ವೀಣಾ ಮಂಜುನಾಥ, ಕುಸುಮಾ ಲೋಕೇಶ, ವಿನೋದ ಅಜಗಣ್ಣ, ನರೇಶಪ್ಪ ಮಲೆಬೆನ್ನೂರು, ಅಗಸನಕಟ್ಟೆ ಷಣ್ಮುಖಯ್ಯ, ಚಂದ್ರಶೇಖರ, ಶಾಮನೂರು ಕೊಟ್ರೇಶ ಮತ್ತಿತರರು ವಹಿಸಿದ್ದರು. ನೂರರಷ್ಟು ಪ್ರತಿಭಟನಾಕಾರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
1 Comment
  • ಹೌದು ತಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು. ಕನ್ನೇರಿ ಸ್ವಾಮಿಗಳು ಅವಾಚ್ಯ ಶಬ್ದಗಳನ್ನು ಊಪಯೋಗಿಸಿ ಬೈಯುವುದು ಮತ್ತು ಬಸವಣ್ಣನವರ ಹೆಸರಿಗೆ ತಾಲಿಬಾನ್ ಪದ ಜೋಡಣೆ ಮಾಡಿ ಧರ್ಮದ್ರೋಹ ಎಸಗಿರುವುದು ಒಂದುಕಡೆಯಾದರೆ ಬಸವ ಧರ್ಮಿಯರನ್ನು ಹಿಂದೂಗಳಾಗಿ ಮಾಡಲು ಹೊರ ಗುತ್ತಿಗೆ ಪಡೆದು ಕೆಲಸ ಮಾಡುತ್ತಿದ್ದಾರೆ. ಇದು ತುಂಬಾ ಗಂಭೀರವಾದ ವಿಷಯ. ಇದನ್ನು ತಡೆಯಲೇಬೇಕು ಅದಕ್ಕಾಗಿ ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬೇಕು.

Leave a Reply

Your email address will not be published. Required fields are marked *