ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಯುವ ಮುಖಂಡರಿಂದ ತೀವ್ರ ವಿರೋಧ

ಸಂಗಮೇಶ ಜವಾದಿ
ಸಂಗಮೇಶ ಜವಾದಿ

ಬಸವಕಲ್ಯಾಣದಲ್ಲಿ ಐತಿಹಾಸಿಕ ಪ್ರತಿಭಟನೆ

ಬಸವಕಲ್ಯಾಣ

ಇಂದು ಬಸವಕಲ್ಯಾಣದ ಬಂಗ್ಲಾದಲ್ಲಿ ಬಸವ ತತ್ವನಿಷ್ಠರ ಐತಿಹಾಸಿಕ, ಅರ್ಥಪೂರ್ಣ ಮತ್ತು ಶಾಂತಿಯುತ ಪ್ರತಿಭಟನೆ ಯಶಸ್ವಿಯಾಗಿ ಜರುಗಿತು. ಬೆಳಗ್ಗೆ 10 ಗಂಟೆಯಿಂದ 1.30 ಗಂಟೆಯವರೆಗೆ ಸಾವಿರಾರು ಬಸವಾಭಿಮಾನಿಗಳು ಬೀದಿಗಿಳಿದು, ಬಸವಣ್ಣನ ಹೆಸರಿನಲ್ಲಿ ಜರುಗುತ್ತಿರುವ “ಹಿಂದೂ ಸಮಾವೇಶ”ವನ್ನು ತೀವ್ರವಾಗಿ ಖಂಡಿಸಿದರು.

ಬಸವಣ್ಣ ಅನುಭವ ಮಂಟಪ ಕಟ್ಟಿದ ಪವಿತ್ರ ಭೂಮಿ ಬಸವಕಲ್ಯಾಣದಲ್ಲೇ ಬಸವತತ್ವ ವಿರೋಧಿ ಸಮಾವೇಶ ನಡೆಸುತ್ತಿರುವುದನ್ನು ಮತ್ತು ಅದಕ್ಕೆ ಕುಮ್ಮಕ್ಕು ಕೊಡುತ್ತಿರುವ ಲಿಂಗಾಯತ ಧರ್ಮದ್ರೋಹಿಗಳ ನಡೆಯನ್ನು ಪ್ರತಿಭಟನಾಕಾರರು ತೀವ್ರವಾಗಿ ವಿರೋಧಿಸಿದರು.

ಸಿಡಿದೆದ್ದ ಯುವ ಜನತೆ

ಕಲ್ಬುರ್ಗಿಯ ಸಾಹಿತಿ, ವೈಚಾರಿಕ ಚಿಂತಕ ಆರ್.ಕೆ. ಹುಡುಗಿ, ಮೀನಾಕ್ಷಿ ಬಾಳಿ ಮತ್ತು ಕೆ. ನೀಲಾ ಅವರ ಸಮ್ಮುಖದಲ್ಲಿ ಪ್ರತಿಭಟನೆ ನಡೆಯಿತು.

ವಿಶೇಷವಾಗಿ ಈ ಪ್ರತಿಭಟನೆ ಜಿಲ್ಲೆಯ ಎಲ್ಲಾ ಯುವ ಮುಖಂಡರ ನೇತೃತ್ವದಲ್ಲಿ ನಡೆಯಿತು.

ಜಿಲ್ಲೆಯ ಹಲವಾರು ಯುವ ಮುಖಂಡರು ವೇದಿಕೆ ಏರಿ ಮಾತನಾಡಿದರು. ಸಿದ್ದು ಶೆಟಗಾರ, ಸಿದ್ದಪ್ಪಾ ಮೂಲಗೆ, ರವಿ ಪಾಪಡೆ, ರವೀಂದ್ರ ಕೊಳಕೋರ್ ಸೇರಿದಂತೆ ಅನೇಕ ಯುವ ಮುಖಂಡರು ಬಸವಣ್ಣನ ಹೆಸರಿನಲ್ಲಿ ಹಿಂದೂ ಸಮಾವೇಶ ಆಯೋಜಿಸಿದ್ದನ್ನು ತೀವ್ರವಾಗಿ ಖಂಡಿಸಿದರು.

ಪ್ರತಿಭಟನಾಕಾರರು ಸ್ಪಷ್ಟವಾಗಿ ಹೇಳಿದರು: “ಅವರು ಹಿಂದೂ ಸಮಾವೇಶ ಮಾಡಲಿ, ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಬಸವಣ್ಣನವರು ಸಮಾನತೆಯಿಲ್ಲದ, ವೈಚಾರಿಕತೆಯಿಲ್ಲದ ಹಿಂದೂ ಧರ್ಮವನ್ನು ವಿರೋಧಿಸಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ. ಹಾಗಾಗಿ ಬಸವಣ್ಣನವರ ಹೆಸರಿನಲ್ಲಿ ಸಮಾವೇಶ ಮಾಡುವುದು ಬಸವ ಅಭಿಮಾನಿಗಳಿಗೆ ನೋವುಂಟಾಗಿದೆ. ಇದಕ್ಕೆ ಆಸ್ಪದ ನೀಡುತ್ತಿರುವ ವ್ಯಕ್ತಿಗಳ ನಡೆ, ನುಡಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ”.

ಮಹಿಳಾ ಮುಖಂಡರ ಗುಡುಗು

ಈ ಸಂದರ್ಭದಲ್ಲಿ ನೀಲಾ ಮತ್ತು ಮೀನಾಕ್ಷಿ ಬಾಳಿ ಮೇಡಂ ಮಾತನಾಡಿ, ಬಸವಣ್ಣ ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳ ಸಿದ್ಧಾಂತ ಬೋಧಿಸಿದರು. ಅದರಂತೆಯೇ ಕೊನೆಯವರೆಗೂ ಜೀವಿಸಿದರು. ಇಂತಹ ವೈಚಾರಿಕತೆಯ ಗುರುಗಳನ್ನು ಹಿಂದೂ ಧರ್ಮದೊಂದಿಗೆ ಹೋಲಿಕೆ ಮಾಡಿ ಸಮಾವೇಶ ಮಾಡುವುದು ಅತ್ಯಂತ ಅನಾಗರಿಕ ಕೆಲಸ. ಪ್ರಗತಿಪರ ಚಿಂತಕರು, ಬಸವಭಕ್ತರು, ನಾಡಿನ ವೈಚಾರಿಕ ಚಿಂತಕರೆಲ್ಲ ಇದನ್ನು ತೀವ್ರವಾಗಿ ಖಂಡಿಸುತ್ತೇವೆ.‌ ಮುಂಬರುವ ದಿನಗಳಲ್ಲಿ ಇಂತಹ ಸಮಾವೇಶಕ್ಕೆ ಸರ್ಕಾರ ಯಾವುದೇ ರೀತಿಯ ಆಸ್ಪದ ನೀಡಬಾರದು ಎಂದು ಎಚ್ಚರಿಸಿದರು.

ಆರ್ ಕೆ ಹುಡುಗಿ ಅವರ ನೋವಿನ ನುಡಿ

ಕೊನೆಯಲ್ಲಿ ಸಾಹಿತಿ, ವೈಚಾರಿಕ ಚಿಂತಕ ಆರ್.ಕೆ. ಹುಡಗಿ ಮಾತನಾಡಿ, “ಬಸವಕಲ್ಯಾಣದಲ್ಲಿ ಬಸವಣ್ಣನ ಹೆಸರಿನಲ್ಲಿ ಹಿಂದೂ ಸಮಾವೇಶ ನಡೆಯುತ್ತಿರುವುದು ಅತ್ಯಂತ ನಾಚಿಕೆಯ ಸಂಗತಿ. ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಷಯವಿದು. ಇಂತಹ ಸಮಾವೇಶಗಳು ರಾಜ್ಯದಲ್ಲಿ ಇನ್ನು ಮುಂದೆ ಖಂಡಿತ ಎಲ್ಲೂ ನಡೆಯಬಾರದು. ಇದಕ್ಕೆ ಯಾರೂ ಸಹಕಾರ, ಆಸ್ಪದ ಕೊಡಬಾರದು” ಎಂದು ತಿಳಿಸಿದರು.

ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಿರ್ಣಯ ಅಂಗೀಕಾರ

ಪ್ರತಿಭಟನೆ ಕೊನೆಯಲ್ಲಿ ಜಮಾಯಿಸಿದ ಸಾವಿರಾರು ಬಸವಾಭಿಮಾನಿಗಳ ಸಮ್ಮುಖದಲ್ಲಿ ಹಲವು ನಿರ್ಣಯಗಳನ್ನು ಮಂಡಿಸಲಾಯಿತು. ಪ್ರತಿ ನಿರ್ಣಯಕ್ಕೂ ಪ್ರತಿಭಟನಾಕಾರರು ಚಪ್ಪಾಳೆ ಹೊಡೆದು, ಕಂಠಪೂರ್ತಿ ಒಪ್ಪಿಗೆ ಸೂಚಿಸಿದರು.

ಬಸವತತ್ವ ವಿರೋಧಿ ಸಮಾವೇಶ ನಿಷೇಧಿಸಬೇಕು. ಕೇಂದ್ರ ಸರ್ಕಾರದಿಂದ ಬಸವ ಜಯಂತಿ ಆಚರಣೆ ಮಾಡಬೇಕು. ಬಸವಕಲ್ಯಾಣಕ್ಕೆ ಜಿಲ್ಲಾ ಕೇಂದ್ರದ ಸ್ಥಾನಮಾನ ಕೊಡಬೇಕು. ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕೊಡಬೇಕು. ಬಸವಕಲ್ಯಾಣವನ್ನು ಸಾಂಸ್ಕೃತಿಕ ರಾಜಧಾನಿಯಾಗಿ ಮಾಡಬೇಕು. ಅದೇ ರೀತಿ ಬಸವಕಲ್ಯಾಣವನ್ನು ಪ್ರವಾಸೋದ್ಯಮ ತಾಣವಾಗಿ ಘೋಷಣೆ ಮಾಡಬೇಕು
ಎಂಬ ನಿರ್ಣಯಗಳು ಸರ್ವಾನುಮತದಿಂದ ಅಂಗೀಕಾರವಾದವು.

“ಏಳಿ ಎದ್ದೇಳಿ” ಕರೆಗೆ ಸಿಕ್ಕ ಉತ್ತರ-

ಇಂದು ಬಸವಕಲ್ಯಾಣದ ಬಾಂಗ್ಲಾ ಬಸವ ಮಹಾದ್ವಾರದಲ್ಲಿ ನಡೆದ ಈ ಪ್ರತಿಭಟನೆ “ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂಬ ಕರೆಗೆ ಯುವಜನತೆ ಕೊಟ್ಟ ಉತ್ತರವಾಗಿದೆ. ಬಸವಣ್ಣನ ತತ್ವ ಉಳಿಸಲು ಯುವ ಜನತೆ ರಸ್ತೆಗಿಳಿದಿದೆ. ಮೌನ ಮುರಿದಿದೆ ಹೋರಾಟ ಆರಂಭಿಸಿದೆ ಎಂದರು.

ಬಸವಕಲ್ಯಾಣದಿಂದ ಮೊಳಗಿದ ಈ ದನಿ ಈಗ ಇಡೀ ರಾಜ್ಯಕ್ಕೇ ಕೇಳಬೇಕು ಎಂದು ಶಾಂತಿಯುತವಾಗಿ ಪ್ರತಿಭಟನೆ ಮಾಡಿದರು. ಈ ಪ್ರತಿಭಟನೆಯಲ್ಲಿ ರಾಜ್ಯದ ಅನೇಕ ಜಿಲ್ಲೆಗಳಿಂದ ಸಾವಿರಾರು ಬಸವ ಭಕ್ತರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
1 Comment

Leave a Reply

Your email address will not be published. Required fields are marked *