ಮೈಸೂರು:
ಮಹಿಳೆಗೂ ಇಷ್ಟಲಿಂಗ ದಯಪಾಲಿಸಿ, ಪುರುಷನಷ್ಟೇ ಆಕೆಗೂ ಧಾರ್ಮಿಕ ಸ್ವಾತಂತ್ರ್ಯ ಪ್ರಸಾದಿಸಿ, ಕ್ರಿ.ಶ. ಪೂರ್ವ ೨ ನೇ ಶತಮಾನದಿಂದ ಅವಳಿಗಂಟಿದ್ದ ‘ಶೂದ್ರ’ ಎಂಬ ಕಳಂಕದ ಶಾಪ ವಿಮೋಚನೆ ಮಾಡಿ, ಆಕೆಯನ್ನು ಸಮತೆ ಮಮತೆಗಳಿಂದ ಸಮಾನವಾಗಿ ಕಂಡವರು ಬಸವಾದಿ ಶರಣರು ಎಂದು, ಕವಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷರಾದ ಡಾ. ಜಯಪ್ಪ ಹೊನ್ನಾಳಿ ಹೇಳಿದರು.

ಹೆಬ್ಬಾಳು-ವಿಜಯನಗರದ ಬಸವ ಸಮಿತಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕ ಸಂಯುಕ್ತವಾಗಿ, ವಿಜಯ ನಗರದ ಬಸವ ಭವನದಲ್ಲಿ ಏರ್ಪಡಿಸಿದ್ದ ದತ್ತಿ ಸಮಾರಂಭದಲ್ಲಿ “ಶರಣರ ಸ್ತ್ರೀಪರ ನಿಲುವುಗಳು” ಎಂಬ ವಿಚಾರವಾಗಿ ಮುಖ್ಯ ಅತಿಥಿಯಾಗಿ ಮಾತಾಡುತ್ತಿದ್ದರು.
“ಅಕ್ಕನಿಗಿಲ್ಲಿದ ಜನಿವಾರ ಆಕೆಯ ತಮ್ಮನಾದ ನನಗೆ ಮಾತ್ರ ಏಕೆ..!?” ಎಂದು ಪುರೋಹಿತಶಾಹಿ ವ್ಯವಸ್ಥೆಯನ್ನು ಬಸವಣ್ಣ ಪ್ರಶ್ನೆ ಮಾಡಿ ಪ್ರತಿಭಟಿಸುವ ಮೂಲಕ, ಸ್ತ್ರೀ ಸಮಾನತೆಯ, ಪ್ರಜ್ಞಾಪೂರ್ಣ ಯುಗವೊಂದರ ಉದ್ಘಾಟನೆಯನ್ನು ೧೨ ನೇ ಶತಮಾನದಲ್ಲೇ ಮಾಡಿದನು ಎಂದರು.
” ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿವಾತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ ರಾಮನಾಥ ” ಎಂದ ಜೇಡರ ದಾಸಿಮಯ್ಯ, ಆತ್ಮಸಮಾನತೆಯಲ್ಲಿ ಹೆಣ್ಣು ಗಂಡೆಂಬ ಭೇದವಳಿದು, ಜೀವನದ ಘನತೆಯನ್ನು ಹೆಚ್ಚಿಸಿದರೆ, ಶರಣ ಸಿದ್ಧರಾಮ “ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ” ಎಂದು ಆಕೆಯ ಸ್ಥಾನವನ್ನು ದೈವತ್ವಕ್ಕೇರಿಸಿದನು.
ಶೂನ್ಯಸಿಂಹಾಸನಾಧೀಶ್ವರ ಅಲ್ಲಮ, ” ಉಭಯ ದೃಷ್ಟಿ ಏಕದೃಷ್ಟಿಯಲ್ಲಿ ಕಾಂಬಂತೆ, ದಂಪತಿ ಏಕಭಾವವಾಗಿ ನಿಂದಲ್ಲಿ, ಗುಹೇಶ್ವರ ಲಿಂಗಕ್ಕೆ ಅರ್ಪಿತವಾಯಿತ್ತು” ಎಂದು ಮಹಿಳೆಯ ಮಹತ್ವಕ್ಕೆ ಸಮ್ಮತಿಸಿ ಒಪ್ಪಿತ ಮುದ್ರೆ ಹಾಕಿದನು, ಅಲ್ಲಿಗೆ ಶರಣ ದಾಸಿಮಯ್ಯ ಹೇಳಿದಂತೆ “ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎಂಬ ಸೂಳ್ನುಡಿ ಎಲ್ಲರ ಸಮ್ಮತಿ ಪಡೆದ ಕಲ್ಯಾಣದ ಶರಣರ ಸಂದೇಶವಾಗಿ, ಮಹಿಳೆಗೆ ಪುರುಷನಷ್ಟೇ ಎಲ್ಲಾ ವಿಚಾರದಲ್ಲೂ ಸಮಾನತೆ ಸಾರಿತು ಎಂದರು.
“ಶರಣರ ಸ್ತ್ರೀಪರ ನಿಲುವುಗಳು” ವಿಚಾರವಾಗಿ ಸಾಹಿತಿ ಡಾ. ಅನುಸೂಯ ಎಸ್. ಕೆಂಪನಳ್ಳಿ ಅವರು ಮಾತನಾಡುತ್ತ, ಅಲ್ಲಮ ಪ್ರಭು “ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ, ಮನದ ಮುಂದಣ ಆಸೆಯೆ ಮಾಯೆ ಕಾಣ ಗುಹೇಶ್ವರ” ಎಂದು ಹೇಳುವ ಮೂಲಕ ಅದುವರೆಗಿನ ಹಣ್ಣಿಗಂಟಿದ್ದ ಕಳಂಕ ಕಳೆದರು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಿಜಯನಗರ ಬಸವ ಸಮಿತಿಯ ಅಧ್ಯಕ್ಷರಾದ ಹೆಚ್.ವಿ. ಬಸವರಾಜು ವಹಿಸಿದ್ದರು, ಅವರ ವಿವಾಹ ವಾರ್ಷಿಕೋತ್ಸವದ ಕಾರಣದಿಂದಾಗಿ ಅವರನ್ನು ಹಾಗೂ ಅವರ ಧರ್ಮಪತ್ನಿ ಲೋಕಮಣಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕದಳಿ ಅಧ್ಯಕ್ಷರಾದ ಶೋಭಾರಾಣಿ ಜೈಪ್ರಕಾಶ್ ಉಪಸ್ಥಿತರಿದ್ದರು. ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಯಿತು.

ಡಾ. ಲೋಕೇಶಪ್ಪ, ಶೋಭಾಮಣಿ, ಚೆನ್ನಬಸಪ್ಪ, ಲೋಕೇಶ, ಲೋಕಮಣಿ, ನಂದೀಶ್ವರ, ಕಾಂತಾಮಣಿ, ಮರಿಸ್ವಾಮಿ ಹಾಗೂ ಕುಟುಂಬ ವರ್ಗದವರು, ಬಸವ ಬಳಗದ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
