ವಚನ ಕಂಠಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಲಿಂಗಾಯತ ಸಂಘಟನೆ ವತಿಯಿಂದ ಫ.ಗು. ಹಳಕಟ್ಟಿ ಜಯಂತಿ

ಬೆಳಗಾವಿ:

12 ನೇ ಶತಮಾನದ ಶರಣರ ವಚನಗಳನ್ನು ಒಗ್ಗೂಡಿಸುವ ಮೂಲಕ ಅವುಗಳನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಅವುಗಳಿಗೆ ಪುಸ್ತಕ ರೂಪ ನೀಡಿ ಪ್ರಕಟಿಸುವುದರ ಜೊತೆಗೆ ಇಡೀ ವಚನ ಸಾಹಿತ್ಯವನ್ನು ಜಗತ್ತಿನೆಲ್ಲೆಡೆ ಹರಡಿಸಿದ ಕೀರ್ತಿ ಫ. ಗು. ಹಳಕಟ್ಟಿಯವರಿಗೆ ಸಲ್ಲುತ್ತದೆ.

ಅವರ ಸಾದಾ ಜೀವನ, ಹೆಸರಿಗೆ ತಕ್ಕಂತೆ ಫಕೀರನಂತೆ ಬದುಕಿ, ಇಡೀ ಜೀವನವನ್ನೇ ಸರಳವಾಗಿ ಜೀವಿಸುವುದರ ಜೊತೆಗೆ ವಚನ ಸಾಹಿತ್ಯವನ್ನು ಸಂರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಅವರ ಕಾರ್ಯ ಸದಾ ಸ್ಮರಣೀಯವಾಗಿದೆ ಎಂದು ಬೆಳಗಾವಿಯ ಬಸವತತ್ವ ಅನುಭಾವ ಕೇಂದ್ರದ ಪೂಜ್ಯ ವಾಗ್ದೇವಿತಾಯಿ ಅವರು ಹೇಳಿದರು.

ರವಿವಾರ ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿ ನಗರದ ಹಳಕಟ್ಟಿ ಭವನದಲ್ಲಿ ಹಮ್ಮಿಕೊಳ್ಳಲಾದ ” ಡಾ. ಫ. ಗು.ಹಳಕಟ್ಟಿಯವರ ಜಯಂತೋತ್ಸವ ಮತ್ತು ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಇಡೀ ಜಗತ್ತಿನ ಸಾಹಿತ್ಯ ತೆಗೆದುಕೊಂಡರೂ ವಚನ ಸಾಹಿತ್ಯ ಎಲ್ಲಕ್ಕೂ ಮಿಗಿಲಾಗಿ ನಿಲ್ಲುತ್ತದೆ. ಪ್ರಕೃತಿಯಲ್ಲಿ ನಾನು ಎನ್ನುವುದು ಅಹಂ. ನಾನು ನನ್ನದು ಎಂಬುದು ಹೋಗಬೇಕು. ಶಕ್ತಿ ನೋಡಲು ಸಿಗುವುದಿಲ್ಲ. ಸೃಷ್ಠಿಯಲ್ಲೂ ಶಕ್ತಿ ಇದೆ. ಹಾಗೆ ಹಳಕಟ್ಟಿಯವರು ಅತ್ಯುನ್ನತ ಸ್ಥಾನದಲ್ಲಿ ಇದ್ದರೂ ಸ್ವಾಥ೯ಕ್ಕಾಗಿ ಏನೊಂದೂ ಮಾಡಲಿಲ್ಲ.

ವಚನ ಸಾಹಿತ್ಯ ಹೆಕ್ಕಿಹೆಕ್ಕಿ ತೆಗೆದು ಪ್ರಕಟಿಸಿ ಸಮಾಜಕ್ಕೆ ನೀಡಿದರು. ಅವರ ಜೀವನ ಮಾದರಿ ಅನ್ನುವ ಪದಕ್ಕೆ ಮಾದರಿಯಾದುದು ಎಂದು ಹಳಕಟ್ಟಿ ಅವರ ಜೀವನ ಮತ್ತು ಅವರ ಮಾಡಿದ ಕಾರ್ಯವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಬಸವ ತತ್ವ ಅನುಭಾವ ಕೇಂದ್ರ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ಚೆನ್ನಪ್ಪ ನರಸಣ್ಣವರ ಪ್ರಥಮ ₹ 5001, ಸರಸ್ವತಿ ಯಡಾಲ ದ್ವಿತೀಯ ₹ 3001, ಸಂಕೇತ ಮೇಟಿ ತೃತೀಯ ₹ 2001, ಶಕುಂತಲಾ ನರಸಣ್ಣವರ ಪ್ರೋತ್ಸಾಹಕರ ₹ 1001 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ವಚನ ಕಂಠಪಾಠ ಸ್ಪರ್ಧೆಯನ್ನು ವ್ಯವಸ್ಥಿತವಾಗಿ ಆಯೋಜಿಸಿದ ಸಂಚಾರಿ ಗುರುಬಸವ ಬಳಗದ ಮಹಾಂತೇಶ ತೋರಣಗಟ್ಟಿ ಮತ್ತು ಈರಣ್ಣ ದೇಯನ್ನವರ ಅವರನ್ನು ಬಸವ ತತ್ವ ಅನುಭಾವ ಕೇಂದ್ರದ ವತಿಯಿಂದ ಸತ್ಕರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈರಣ್ಣಾ ದೇಯನ್ನವರ ವಹಿಸಿದ್ದರು. ಕುಮದಿನಿ ತಾಯಿಯವರು ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸುರೇಶ ನರಗುಂದ, ಶಂಕರ ಗುಡಸ, ಪ. ಬ. ಕರಿಟ್ಟಿ, ಮಹದೇವ ಕೆoಪಿಗೌಡ್ರ, ವಿರೂಪಾಕ್ಷ ದೊಡ್ಡಮನಿ, ಸದಾಶಿವ ದೇವರಮನಿ, ಮಹಾಂತೇಶ ಮೆಣಸಿನಕಾಯಿ, ಶಂಕರ ಗುಡಗನಟ್ಟಿ, ಶಿವಾನಂದ ನಾಯಕ, ಡಾ. ಅ. ಬ. ಇಟಗಿ, ಶಿವಾನಂದ ತಲ್ಲೂರ, ಕುಸುಮಾ ವಿರುಪಾಕ್ಷಿ     ಹಿಡದುಗ್ಗಿ, ಅಕ್ಕಮಹಾದೇವಿ ತೆಗ್ಗಿ, ಆನಂದ ಕರ್ಕಿ ಸೇರಿದಂತೆ ಶರಣ ಶರಣೆಯರು ಉಪಸ್ಥಿತರಿದ್ದರು.

ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *