ಅನುಭವ ಮಂಟಪ ಕಾಮಗಾರಿ ಪ್ರಗತಿ ಪರಿಶೀಲಿಸಿದ ಶಿವಕುಮಾರ್
ಬಸವಕಲ್ಯಾಣ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಇಲ್ಲಿನ ನಿರ್ಮಾಣ ಹಂತದ ನೂತನ ಅನುಭವ ಮಂಟಪಕ್ಕೆ ಭೇಟಿ ನೀಡಿದರು.
ಕಾಮಗಾರಿಯ ಪ್ರಗತಿ ವೀಕ್ಷಿಸಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಇದಕ್ಕೂ ಮುನ್ನ ಅವರು ನಗರದ ಬಸವೇಶ್ವರ ದೇವಸ್ಥಾನ, ರಾಜಾಬಾಗ್ ಸವಾರ್ ದರ್ಗಾಕ್ಕೆ ಭೇಟಿ ಕೊಟ್ಟರು. ಆನಂತರ ನಗರದ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಶಿವಾಜಿ ಪಾರ್ಕ್ ಗೆ ಭೇಟಿ ಕೊಟ್ಟು, ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿದರು.
ಬಳಿಕ ಬಸವಧರ್ಮ ಪೀಠದ ಬಸವ ಮಹಾಮನೆಯ ಆವರಣದಲ್ಲಿ ಏರ್ಪಡಿಸಿದ್ದ ‘ಅಕ್ಕ ಪಡೆ’ ಸಾಮರ್ಥ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದಾದ ನಂತರ ಹಳೆಯ ಅನುಭವ ಮಂಟಪಕ್ಕೆ ಭೇಟಿ ಕೊಟ್ಟರು.
ಅನುಭವ ಮಂಟಪ ಪ್ರಗತಿ ಪರಿಶೀಲನಾ ಸಭೆಯ ಹೊರಡಿಸಿದ ಪ್ರಕಟಣೆಯಲ್ಲಿ, “ನೂತನ ಅನುಭವ ಮಂಟಪವು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವಗಳನ್ನು ಬಿಂಬಿಸುವ ಒಂದು ಬೃಹತ್ ಯೋಜನೆಯಾಗಿದೆ.

12ನೇ ಶತಮಾನದ ಬಸವಾದಿ ಶರಣರ ಮಹಾನ್ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪವನ್ನು ನಿರ್ಮಿಸಲಾಗುತ್ತಿದೆ.
ಈ ಅನುಭವ ಮಂಟಪವು ಕೇವಲ ಕಟ್ಟಡವಲ್ಲ, ಬಸವ ತತ್ವ, ವಚನ ಸಾಹಿತ್ಯ, ಕಾಯಕ ದಾಸೋಹ, ಸಮಾನತೆ ಹಾಗೂ ಶರಣ ಸಂಸ್ಕೃತಿಯ ಜೀವಂತ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಇಲ್ಲಿ ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ, ಚನ್ನಬಸವಣ್ಣ ಸೇರಿದಂತೆ ಶರಣ, ಶರಣೆಯರ ಚಿಂತನೆ, ವಚನಗಳು ಹಾಗೂ ಅವರ ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ಪರಿಚಯಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ,” ಎಂದು ತಿಳಿಸಿದರು.

ಈ ವೇಳೆ ಪೂಜ್ಯ ನಾಡೋಜ ಬಸವಲಿಂಗ ಪಟ್ಟದೇವರು, ಶಿವಾನಂದ ಮಹಾಸ್ವಾಮೀಜಿ, ಗುರುಬಸವ ಪಟ್ಟದ್ದೇವರು, ಅಕ್ಕಾ ಗಂಗಂಬಿಕಾ ತಾಯಿ, ಬಸವ ಪ್ರಭು ಸ್ವಾಮೀಜಿ, ಡಾ. ಬೆಲ್ದಾಳ ಶರಣರು, ಪರ್ವತಲಿಂಗ ಪರಮೇಶ್ವರ್ ಮಹಾರಾಜ, ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಸಚಿವರಾದ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಸಂಸದರಾದ ಸಾಗರ ಖಂಡ್ರೆ ಸೇರಿದಂತೆ ಬಸವಾದಿ ಶರಣರು ಜೊತೆಗಿದ್ದರು.
