ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 10
ಕಲಬುರಗಿ:
ಬದುಕಿಗೆ ಗುರಿ ತೋರಿಸುವ ಗುರು ಇರಬೇಕು. ಆದರೆ ಆ ಗುರು ಅರಿವಿನ ಗುರುವಾಗಿರಬೇಕು. ಗುರು ಮರವೆಯಲ್ಲಿರಬಾರದು. ಅರಿವಿನ ದಾರಿಯತ್ತ ಕೊಂಡೊಯ್ಯಬೇಕು. ನಿನ್ನನ್ನರಿಸದೆ ಎನ್ನನ್ನರಿಸು ಎಂದು ಶರಣರು ಹೇಳಿದ್ದಾರೆ. ಗುರುವಿನಿಂದ ನಮ್ಮೊಳಗಿನ ಅರಿವಿನ ಪ್ರಜ್ಞೆ ಜಾಗೃತವಾಗಬೇಕು.
ಮಡಕೆಯ ಮಾಡುವೊಡೆ ಮಣ್ಣೇ ಮೊದಲು,
ತೊಡಿಗೆಯ ಮಾಡುವೊಡೆ ಹೊನ್ನೇ ಮೊದಲು,
ಶಿವಪಥ ಅರಿವೊಡೆ ಗುರುಪಥ ಮೊದಲು,
ಕೂಡಲಸಂಗಮ ದೇವರನರಿವೊಡೆ,
ಶರಣರ ಸಂಗವೇ ಮೊದಲು, ಮೊದಲು!!
ಶಿವಪಥ ಅರಿಯಬೇಕಾದರೆ ಗುರುಪಥ ಬೇಕು ಎಂದು ಬಸವಣ್ಣನವರು ಬಹಳ ಸುಂದರ ಸೂತ್ರ ಕೊಟ್ಟಿದ್ದಾರೆ. ಬಸವಣ್ಣನವರು ಗುರುವಿಲ್ಲದ ಗುಡ್ಡ. ಅವರಿಗೆ ಅವರೇ ಗುರು. ಅವರಲ್ಲಿ ಅಂತರಂಗದ ಜಾಗೃತಪ್ರಜ್ಞೆ ಅರಿವಾಗಿ ಬೆಳಕಾಗಿತ್ತು. ಬುದ್ಧದೇವನಿಗೆ ಯಾರು ಗುರು? ಆ ನಿಲುವಿಗೆ ಎಲ್ಲ ಮಾನವರು ಹೋಗಲು ಸಾಧ್ಯವಿಲ್ಲ. ಇದನ್ನೇ ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು ಎಂದು ಬಲ್ಲವರು ಹೇಳಿದ್ದಾರೆ.
ಶರಣರ ಸಂಗದಿಂದ ದೇವರ ಅರಿವು ಸಾಧ್ಯ. ಗುರುವಾದವನಿಗೆ ತಾಪ, ಕೋಪ, ಮಾಯೆ, ಮೋಹ ಮುಂತಾದ ವಿಷಯಾಸಕ್ತಿಗಳಿರಬಾರದು. ತಾಪರಹಿತಂ ಗುರುಪದಂ ಎಂದು ಬಲ್ಲವರು ಹೇಳಿದ್ದಾರೆ. ತತ್ವಪದಕಾರ ಕಡಕೋಳ ಮಡಿವಾಳಪ್ಪನವರು ಎಂಥ ಆಕಳ ಕೊಟ್ಟಿ ಗುರುರಾಯ, ಎಂಥ ಮಾನವ ಜನ್ಮ ಇದು ಮಾಯೆಗೆ ಸೋತಾದ ಎಂದು ಹೇಳಿದ್ದಾರೆ.
ಹೀಗೆ ಗುರು ದರುಶನ, ಗುರು ಕರುಣೆ ಪಡೆಯಲು ಮಾಯೆ ಬನವಾಸಿ ದೇಶಕ್ಕೆ ಪ್ರವೇಶ ಪಡೆಯುವುದನ್ನು ಅಲ್ಲಿನ ಜನ ನಿಬ್ಬೆರಗಾಗಿ ನೋಡುತ್ತ ನಿಂತರು. ಮಧುಕೇಶ್ವರನನ್ನು ಒಲಿಸಿಕೊಳ್ಳಲು ಅಂತರಂಗದ ವಾಸನಾ ಭಾವನೆಯೊಳಗೆ ಬಂದಳು.
ಸುಗಂಧ ದ್ರವ್ಯದ ಧೂಪವ ಹಾಕಿ ಕರ್ಪೂರದಾರತಿಯ ದೀಪವ ಬೆಳಗಿ ಆರಾಧಿಸುವೆ ಮಧುಕೇಶ ನಿನ್ನ ಅನುಗ್ರಹಿಸೋ ನೀ ಪರಮೇಶ ಶರಣೆಂಬೆ ಮಧುಕೇಶ್ವರ ವರ ನೀಡು ನೀ ಬಂದು ಪರಮೇಶ್ವರ ಎಂದು ಮಧುಕೇಶ್ವರನಲ್ಲಿ ಪ್ರಾರ್ಥಿಸಿದಳು.
