‘ವಚನಗಳ ಓದಿನಿಂದ ವೈದಿಕರ ವಿಷವರ್ತುಲ ಭೇದಿಸಲು ಸಾಧ್ಯ’

ಶಹಾಪುರ

ಬಸವಣ್ಣನವರು ಜೀವಂತ ದೇವರು ಎಂದು ಜನಪದಿಯರು ಮನದುಂಬಿ ಬರೆದು ಹಾಡಿದ್ದಾರೆ. ಇದಕ್ಕೆ ಮೂಲ ಕಾರಣ ಶರಣರ ವಚನಗಳು. ಸರಳ ಕನ್ನಡದಲ್ಲಿರುವ ವಚನಗಳನ್ನು ಓದಿಕೊಂಡರೆ ನಾವೆಲ್ಲ ವೈದಿಕರ ವಿಷ ವರ್ತುಲವನ್ನು ಭೇದಿಸಲು ಸಾಧ್ಯವಾಗುತ್ತದೆ ಎಂದು ವಿಶ್ವನಾಥ ಗೊಂದಡಗಿ ನುಡಿದರು.

ಸ್ಥಳೀಯ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ, ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ನಡೆದ ತಿಂಗಳ ಬಸವ ಬೆಳಕು ೧೩೪ ರ ಕಾರ್ಯಕ್ರಮದಲ್ಲಿ ಲಿಂಗಣ್ಣ ಸತ್ಯಂಪೇಟೆ, ಗುರಪ್ಪ ಯಜಮಾನ, ಶಿವಮ್ಮ ತಾಯಿಯ ಅವರ ಸ್ಮರಣೆಯ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶರಣರ ನೆನೆದರ ಸರಗಿಯ ಇಟ್ಟಂಗ ಎಂಬ ವಿಷಯ ಕುರಿತು ಮಾತನಾಡಿದರು.

ವೈದಿಕರು ಬಹು ಬಹು ಹುನ್ನಾರಗಳಿಂದ ಜನರ ಬುದ್ದಿಯನ್ನು ಹಾಳು ಮಾಡಿದ್ದರು.ಅಲ್ಲಿ ಅಜ್ಞಾನ ತುಂಬಿ ತುಳುಕುತ್ತಿತ್ತು, ಕಂದಾಚಾರ, ಮೂಢನಂಬಿಕೆಗಳು ಬೆಳೆದು ನಿಂತಿದ್ದವು.

ದುಡಿಯುವ ವರ್ಗವನ್ನು ಅಸಹ್ಯವಾಗಿ ನೋಡುವ ಮನಸ್ಥಿತಿ ರೂಢಿಯಾಗಿತ್ತು. ಪಂಚಾಂಗ, ಜ್ಯೋತಿಷ್ಯ, ದೇವರು ಇತ್ಯಾದಿ ನರಕಗಳಿಂದ ಜನ ಜೀವನ ಹಾಳಾಗಿದ್ದ ಸಂದರ್ಭದಲ್ಲಿ ಬಸವಣ್ಣನವರು ವಚನಗಳೆಂಬ ಚಳುವಳಿಯ ಮೂಲಕ ಜನ ಜಾಗೃತಿಯನ್ನು ಉಂಟು ಮಾಡಿದರು ಎಂದು ಸ್ಪಷ್ಟವಾಗಿ ಹೇಳಿದರು.

ಶರಣರು ಪವಾಡಗಳನ್ನು ಮಾಡಲಿಲ್ಲ. ಆದರೆ ಅವರ ಬದುಕು ಬರಹ ಮತ್ತು ಚಿಂತನೆಗಳೇ ಪವಾಡಗಳ ರೂಪದಲ್ಲಿ ನಮ್ಮ ಮುಂದೆ ಇವೆ. ಶೋಷಣೆಯ ಕೇಂದ್ರಗಳಾದ ಸ್ಥಾವರಗಳನ್ನು ತಿರಸ್ಕರಿಸಿ ನಿಜದ ನಿಲುವನ್ನು ಸಮಾಜಕ್ಕೆ ತಿಳಿಸಿದರು. ಶರಣರ ತತ್ವ ಅಂದರೆ ವಾಕ್ ಸ್ವಾತಂತ್ರ್ಯ, ರೈತ ತತ್ವ, ಜಾಗೃತಿ ತತ್ವ , ಶ್ರಮಿಕ ತತ್ವದ ಪರವಾಗಿ ಅವರ ನಿಲುವುಗಳಿದ್ದವು ಎಂದು ವಿವರಿಸಿದರು.

ಲಿಂಗಣ್ಣ ಸತ್ಯಂಪೇಟೆ ಅವರು ಪತ್ರಕರ್ತರಾಗಿದ್ದರು, ಶರಣ ಚಿಂತಕರಾಗಿದ್ದರು. ಅವರೊಂದಿಗೆ ಒಡನಾಡಿಯಾಗಿದ್ದ ನಾನು ಅವರ ಸರಳತೆ, ದುಡಿಮೆ, ಪ್ರಾಮಾಣಿಕತೆ ನನ್ನನ್ನು ದಂಗು ಬಡಿಸಿವೆ. ಶರಣರ ತತ್ವಗಳನ್ನು ಮನೆ ಮನಕ್ಕೆ ತಲುಪಿಸಬೇಕೆಂಬುದು ಅವರ ಹಂಬಲವಾಗಿತ್ತು, ಅಗ್ನಿ ಅಂಕುರ ಹಾಗೂ ಬಸವ ಮಾರ್ಗ ಮತ್ತು ಲಂಕೇಶ ಪತ್ರಿಕೆಗಳ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಬಹುದೊಡ್ಡ ಮನ್ವಂತರವನ್ನು ಅವರು ಹುಟ್ಟು ಹಾಕಿದ್ದರು.

ಸತ್ಯಂಪೇಟೆಯವರು ಹಾಕಿಕೊಟ್ಟ ಬಸವಮಾರ್ಗದಲ್ಲಿ ನಡೆಯುವುದು ಎಂದರೆ ಜಾತಿರಹಿತವಾಗಿ ಬದುಕುವುದು ಎಂದರ್ಥ ಎಂದು ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉಪಾಧ್ಯಕ್ಷರಾಗಿರುವ ಗುಂಡಪ್ಪ ಕಲಬುರ್ಗಿ ಸಭೆಗೆ ತಿಳಿಸಿದರು.

ದೆಹಲಿಯ ಜಂತರ ಮಂತರ್ ನಲ್ಲಿ ಪೊಲೀಸ್ ಗುಂಡಾಗಿರಿ ನಡೆದಿದೆ. ಇದು ಪ್ರಜಾಪ್ರಭುತ್ವ ವಿರೋಧಿಯಾದ ಧೋರಣೆ. ಇಂಥ ಇಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರವನ್ನು ಎಚ್ಚರಿಸಬೇಕಾದ ಮಾಧ್ಯಮಗಳು ಮಾರಾಟವಾಗಿವೆ. ಆದ್ದರಿಂದ ಯುವಕರು ಹೊಸ ದಾರಿಯನ್ನು ಕಂಡು ಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮೇಲಾದ ಅನ್ಯಾಯದ ವಿರುದ್ಧ ಕಿಡಿಕಾರುತ್ತಿದ್ದಾರೆ. ಯುವ ಶಕ್ತಿಯೊಂದು ಪ್ರವಾಹ, ಅದನ್ನು ತಡೆದು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಪೊಲೀಸ್ ಮಿಲಿಟರಿ ಇರುವುದು ದೇಶದ ವಿಚ್ಛೀದ್ರಕಾರಿ ಶಕ್ತಿಗಳ ತಡೆಯುವುದಕ್ಕೆ ಮಾತ್ರ ಇರಬೇಕು, ಆದರೆ ಯುವಕರ ಹಕ್ಕೊತ್ತಾಯವನ್ನು ಬಗ್ಗು ಬಡಿಯುವುದಕ್ಕೆ ಅಲ್ಲ.

ಶರಣರು ಬರೆದ ವಚನಗಳ ಸ್ಪರ್ಶ ಸರ್ಕಾರಕ್ಕೆ ಇದ್ದರೆ ಅವರೆಂದೂ ಯುವಕರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರಲಿಲ್ಲ ಎಂದು ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಗುರುಮಠಕಲ್ ಖಾಸಾ ಮಠದ ಪೂಜ್ಯ ಶಾಂತವೀರ ಸ್ವಾಮೀಜಿಗಳು ಮಾತನಾಡಿ, ಲಿಂಗಣ್ಣ ಸತ್ಯಂಪೇಟೆ ಅವರು ಸಮಾಜ ಮುಖಿಯಾಗಿ ಕೆಲಸ ಮಾಡಿ ದೈಹಿಕವಾಗಿ ಕಣ್ಮರೆಯಾಗಿದ್ದಾರೆ. ಆದರೆ ಅವರು ಸದಾ ನಮ್ಮೊಂದಿಗೆ ಇದ್ದಾರೆ ಎಂದು ಭಾಸವಾಗುತ್ತಿದೆ. ಸತ್ಯಂಪೇಟೆ ಕುಟುಂಬ ಅವರ ಮಕ್ಕಳಾದ ವಿಶ್ವಾರಾಧ್ಯ ಸತ್ಯಂಪೇಟೆ, ಶಿವರಂಜನ ಸತ್ಯಂಪೇಟೆ, ಮಲ್ಲಿಕಾರ್ಜುನ ಸತ್ಯಂಪೇಟೆ, ವಿಶ್ವರೂಪ ಸತ್ಯಂಪೇಟೆ, ಪ್ರಮಥ ಸತ್ಯಂಪೇಟೆ, ಅಮೋಘ ಸತ್ಯಂಪೇಟೆ ಅವರೂ ಸಹ ಲಿಂಗಣ್ಣನವರು ಅತಿಯಾಗಿ ಪ್ರೀತಿಸುತ್ತಿದ್ದ ಬಸವಣ್ಣನವರ ಚಿಂತನಗಳನ್ನು ಮೈಗೂಡಿಸಿಕೊಂಡು ಹೊರಟಿರುವುದು ತುಂಬ ಸಂತೋಷದ ಸಂಗತಿ ಎಂದು ಸಭೆಗೆ ಹೇಳಲು ಹೆಮ್ಮೆಯಾಗುತ್ತದೆ ಎಂದರು.
ಇಂದಿನ ಸಮಾಜ ಶರಣರ ತತ್ವಚಿಂತನೆ ಮತ್ತು ಹೋರಾಟದ ಬದುಕಿಗೆ ತೀವ್ರವಾಗಿ ಸ್ಪಂದಿಸಬೇಕಾಗಿದೆ ಎಂದವರು ತಮ್ಮ ಹಂಬಲವನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಸವ ಬೆಳಕು ದಾಸೋಹಿಗಳಾದ ರೇಣುಕಾ ಗುಂಡಪ್ಪ ಕಲಬುರ್ಗಿ ಅವರನ್ನು ಸನ್ಮಾನಿಸಲಾಯಿತು. ಫಜಲುದ್ದೀನ್ ಖಾಜಿ ವಚನ ಪ್ರಾರ್ಥನೆ ಮಾಡಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಸುರೇಶ ಅರುಣಿ ಸ್ವಾಗತಿಸಿದರು. ಲಕ್ಷ್ಮಣ ಲಾಳಸೇರಿ ವಂದಿಸಿದರು.

ಸಭೆಯಲ್ಲಿ ಶಿವು ಆವಂಟಿ, ಚಂದ್ರಕಲಾ ಕುಂಬಾರ, ಸಿದ್ಧಾರ್ಥ ಸಲಾದಪುರ, ಶಂಕರಲಿಂಗಪ್ಪ ಸರ್, ತಿಪ್ಪಣ್ಣ ನಾಟೇಕಾರ, ಸಿದ್ದಲಿಂಗಪ್ಪ ಆನೆಗುಂದಿ, ಸಂಗಮ್ಮ ಹರನೂರ ಮುಡಬೂಳ, ಬಸವರಾಜ, ಗುರಣ್ಣ ಮದರಿ, ಶಿವುಕುಮಾರ ಆವಂಟಿ, ಕಾವೇರಿ ಲಾಳಸೇರಿ, ಮರೆಪ್ಪ ಶಿಕ್ಷಕರು ಅಣಬಿ, ಷಣ್ಮುಖ ಅಣಬಿ, ಶ್ರೀಶೈಲ ಹೊಸಮನಿ, ಪ್ರಮೋದ ಶಿಕ್ಷಕರು, ಸಂಗಣ್ಣಗೌಡ ವಡಗೇರಿ, ಶಿವಕುಮಾರ ಕರದಳ್ಳಿ, ಸುರೇಶ ಅರುಣಿ, ನೀಲಾಂಬಿಕೆ, ಅಮ್ಮರಮ್ಮ, ಬಸಮ್ಮ ಮಳಗ, ವಿರೂಪಾಕ್ಷಿ ಸಿಂಪಿ, ಪಂಪಣ್ಣಗೌಡ ಮಾಲಿ ಪಾಟೀಲ, ಡಿ. ದೇವರಾಜ ಅರಸು ಶಿಕ್ಷಣ ಸಂಸ್ಥೆಯ ನೂರಾರು ಮಕ್ಕಳು ಭಾಗವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *