‘ವಿದ್ಯಾರ್ಥಿಗಳು ಫಲಿತಾಂಶದ ಕಡೆ ಗಮನ ಕೊಡದೆ ಪ್ರಯತ್ನ ಮುಂದುವರೆಸಿ’

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ವಿದ್ಯಾರ್ಥಿಗಳು ಯಾವತ್ತು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಆತ್ಮವಿಶ್ವಾಸವೇ ವಿದ್ಯಾರ್ಥಿಗಳ ನಿಜವಾದ ಶಕ್ತಿಯಾಗಿರುತ್ತದೆ. ಫಲಿತಾಂಶದ ಕಡೆ ಗಮನ ಕೊಡದೆ ಪ್ರಯತ್ನದ ಕಡೆ ಗಮನಕೊಟ್ಟರೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಶೇಗುಣಸಿಯ ಪೂಜ್ಯ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಹೇಳಿದರು.

ಇಲ್ಲಿನ ಶ್ರೀ ಚನ್ನಬಸವೇಶ್ವರ ಗುರುಕುಲ ಕರಡ್ಯಾಳದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕೇವಲ ಅಂಕಗಳ ಪಡೆಯುವ ಸಂಬಂಧ ಓದುವುದುಕ್ಕಿಂತಲೂ ಸಂಸ್ಕಾರ ಪಡೆಯುವುದಕ್ಕಾಗಿ ಓದಿದರೆ ಅದು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡಯ್ಯುತ್ತದೆ. ವಸ್ತುಗಳಿಂದ ನಿಮಗೆ ಬೆಲೆ ಬರಬಾರದು. ನಿಮ್ಮಿಂದ ವಸ್ತುವಿಗೆ ಬೆಲೆ ಬಂದಾಗ ನಿಮ್ಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.

ಹೃದಯ ಶ್ರೀಮಂತಿಕೆಯೇ ನಿಜವಾದ ಸೌಂದರ್ಯ ಎಂಬ ಮಾತು ಭಾರತದ ರಾಷ್ಟ್ರಪತಿಗಳಾದ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಯಾವಾಗಲೂ ಹೇಳುತ್ತಿದ್ದರು. ಅದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಹೃದಯ ಶ್ರೀಮಂತಿಕೆ ಎಂದರೆ ನಮ್ಮ ಆಚರಣೆಯಲ್ಲಿ ಮಾನವೀಯತೆ, ಕರುಣೆ, ಪ್ರೀತಿ ಇರಬೇಕು. ನಾವು ಸತ್ಯದ ಮಾರ್ಗದಲ್ಲಿ ನಡೆಯಬೇಕು. ಸತ್ಯ ಮಾರ್ಗದಿಂದ ನಮ್ಮ ಆತ್ಮವಿಶ್ವಾಸ ಗಟ್ಟಿಕೊಳ್ಳುತ್ತದೆ.

ಆತ್ಮವಿಶ್ವಾಸವಿದ್ದರೆ ನಾವು ಜಗತ್ತನ್ನೇ ಗೆಲ್ಲಬಹುದು. ಇಂತಹ ಅನೇಕ ಉದಾಹರಣೆಗಳು ಇತಿಹಾಸದ ಪುಟಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಂದ ನೋಡಬಹುದು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಶಿಕ್ಷಣ ಇಂದು ನಮ್ಮ ಶ್ರೀ ಚನ್ನಬಸವೇಶ್ವರ ಗುರುಕುಲ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.

ಅದಕ್ಕಾಗಿಯೇ ನಮ್ಮ ನಾಡು ಅಷ್ಟೇ ಅಲ್ಲದೆ, ಹೊರನಾಡಿನ ವಿದ್ಯಾರ್ಥಿಗಳು ಕೂಡ ಗುರುಕುಲದಲ್ಲಿ ಪ್ರವೇಶ ಪಡೆದು ಅಧ್ಯಯನ ಮಾಡಿ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಇಂತಹ ಅಪರೂಪದ ಶಿಕ್ಷಣ ವ್ಯವಸ್ಥೆ ಈ ಭಾಗದಲ್ಲಿ ರೂಪಿಸಿದವರು ನಮ್ಮ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು. ಅವರ ದೂರದೃಷ್ಟಿ, ಶಿಕ್ಷಣದ ಕಾಳಜಿ, ಬಡಮಕ್ಕಳ ಕುರಿತು ಕರುಣೆ, ಮಾತೃಹೃದಯ ನಮ್ಮೆಲ್ಲರಿಗೆ ದಾರಿದೀಪಗಳಾಗಿವೆ.

ಅವರ ಕರಕಮಲಸಂಜಾತರಾದ ಪೂಜ್ಯ ಗುರುಬಸವ ಪಟ್ಟದ್ದೇವರು ಅತ್ಯಂತ ಕ್ರಿಯಾಶೀಲರಾಗಿ ಶ್ರೀಮಠ ಸಂಸ್ಥೆ ಅಷ್ಟೇ ಅಲ್ಲದೆ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಅವಿಶ್ರಾಂತವಾಗಿ ಪರಿಶ್ರಮ ಪಡುತ್ತಿದ್ದಾರೆ. ಇಂತಹ ಗುರುಪರಂಪರೆ ದೊರೆತ ಈ ಗುರುಕುಲ ನಿಜಕ್ಕೂ ನಮ್ಮ ನಾಡಿನ ಹೆಮ್ಮೆ ಎಂದು ಹೇಳಲು ಅಭಿಮಾನ ಉಕ್ಕಿ ಬರುತ್ತದೆ ಎಂದು ಆಶೀರ್ವಚನ ನೀಡಿದರು.

ಸಾನಿಧ್ಯ ವಹಿಸಿದ್ದ ಗುರುಬಸವ ಪಟ್ಟದ್ದೇವರು ಮಾತನಾಡುತ್ತ, ದಿನಮಾನದ ಅಪರೂಪದ ಪೂಜ್ಯ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಯುವ ಸನ್ಯಾಸಿಗಳಾಗಿದ್ದಾರೆ. ಅವರ ಅಧ್ಯಯನಶೀಲತೆ, ಬಹುಭಾಷಾ ಪಾಂಡಿತ್ಯ, ಅನುಭಾವ, ಪ್ರವಚನಶೈಲಿ ಅತ್ಯದ್ಭುತವಾಗಿದೆ.

ಅತ್ಯಂತ ಕಡಿಮೆ ವಯಸ್ಸಿನಲ್ಲಿ ವಿದೇಶಗಳಲ್ಲಿ ಹೋಗಿ ಬಸವಾದಿ ಶರಣರ ಸಂದೇಶ ಸಾರಿ ಬಂದಿರುವುದು ನಮಗೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ.

ಇಂತಹ ಪೂಜ್ಯರು ಇಂದು ನಮ್ಮ ಗುರುಕುಲಕ್ಕೆ ಆಗಮಿಸಿ, ಮಕ್ಕಳಿಗೆ ಸ್ಫೂರ್ತಿಯ ನುಡಿಗಳು ನುಡಿದು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆರ್ಯ ತುಂಬಿರುವುದು ನಮಗೆ ಅತ್ಯಂತ ಸಂತೋಷವಾಗಿದೆ ಎಂದರು.

ಶಶಿಧರ ಕೋಸಂಬೆ, ಮಹೇಶ ಘಾಳೆ, ಶೈಲೇಶ ಚಳಕಾಪೂರೆ ಮತ್ತಿತರರು ಉಪಸ್ಥಿತರಿದ್ದರು.

ನಾಳೆ ಭಾಲ್ಕಿ ಶ್ರೀಮಠದಲ್ಲಿ ಗುರುಪೂರ್ಣಿಮೆ ಉತ್ಸವ

ಹಿರೇಮಠದಲ್ಲಿ 29 ರಂದು ಗುರುಪೂರ್ಣಿಮೆ ಉತ್ಸವ ಭಕ್ತಿ, ಶ್ರದ್ಧೆಯಿಂದ ಆಯೋಜಿಸಲಾಗಿದೆ. ಶ್ರೀಮಠಕ್ಕೆ ಕರ್ನಾಟಕ ಅಷ್ಟೇ ಅಲ್ಲದೆ ಮಹಾರಾಷ್ಟ್ರ ತೆಲಂಗಾಣದ ಸದ್ಭಕ್ತರು ಬರುವ ಭವ್ಯ ಪರಂಪರೆ ಇದೆ. ಪ್ರತಿವರ್ಷ ಎಲ್ಲ ಕಡೆಯಿಂದ ಶ್ರೀಮಠಕ್ಕೆ ಆಗಮಿಸಿ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರ ದರ್ಶನ ಮಾಡಿ ಆಶೀರ್ವಾದ ಪಡೆಯುತ್ತಾರೆ.

ಈ ವರ್ಷವೂ ಶ್ರೀಮಠದ ಸಕಲ ಸದ್ಭಕ್ತರು ಗುರುಪೂರ್ಣಿಮೆ ನಿಮಿತ್ಯವಾಗಿ ಬೆಳಿಗ್ಗೆಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿವರ:

ಬೆಳಗ್ಗೆ 7 ಗಂಟೆಗೆ ಷಟ್‌ಸ್ಥಲ ಧ್ವಜಾರೋಹಣ, ಬೆಳಗ್ಗೆ 8 ಗಂಟೆಗೆ ಶ್ರೀಗಳ ಪೂಜೆ-ಪಾದೋದಕ-ಪ್ರಸಾದ, ಬೆಳಗ್ಗೆ 10 ಗಂಟೆಗೆ ಇಷ್ಟಲಿಂಗ ದೀಕ್ಷೆ ನಡೆಯುವುದು. ಬೆಳಗ್ಗೆ 11 ಗಂಟೆಗೆ ಬಸವಗುರುಪೂಜೆ ಹಾಗೂ ಪ್ರಾರ್ಥನೆ ಬೆಳಗ್ಗೆ 11-15 ಗಂಟೆಗೆ ಗುರುಕರಣ ತ್ರಿವಿಧಿ ಪಠಣ ಹಾಗೂ ಬೆಳಗ್ಗೆ 11-30 ಗಂಟೆಗೆ ಪೂಜ್ಯರ ಆಶೀರ್ವಚನ ಹಾಗೂ ಗುರುದರ್ಶನ ಇರುವುದು. ಮಧ್ಯಾಹ್ನ 1-00 ಗಂಟೆಗೆ ಮಹಾಪ್ರಸಾದ ಇರುತ್ತದೆ. ಎಲ್ಲ ಬಸವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪೂಜ್ಯರ ದರ್ಶನ ಪಡೆಯಲು ತಿಳಿಸಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *