ನಿರಾಶ್ರಿತ ಪುನರ್ವಸತಿ ಕೇಂದ್ರದಲ್ಲಿ ಹಳಕಟ್ಟಿ ಸ್ಮರಣೆ

ದಾವಣಗೆರೆ:

ಸ್ಥಳೀಯ ತುರ್ಚಘಟ್ಟದ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಕದಳಿ ಮಹಿಳಾ ವೇದಿಕೆ ತಾಲೂಕು ಘಟಕದಿಂದ 183ನೇ ಕದಳಿ ಕಮ್ಮಟ ನಡೆಯಿತು.

ಲಿಂಗೈಕ್ಯ ಷಡಾಕ್ಷರಪ್ಪ ಮತ್ತು ಅಂಜಿನಮ್ಮ ಬಿ. ಕಲಪನಹಳ್ಳಿ ದತ್ತಿ ಅಂಗವಾಗಿ ವಚನ ಪಿತಾಮಹ, ಶರಣ ಫ.ಗು ಹಳಕಟ್ಟಿ ಸ್ಮರಣೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತಿ ಸತ್ಯಭಾಮ ಮಂಜುನಾಥ ಅವರು ‘ಶರಣ ಫ.ಗು ಹಳಕಟ್ಟಿ ಸ್ಮರಣೆ’ ವಿಷಯದ ಬಗ್ಗೆ ದತ್ತಿ ಅನುಭಾವ ನೀಡುತ್ತ, ಶರಣರದ್ದು ವಚನ ಚಳುವಳಿಯಾದರೆ, ಹಳಕಟ್ಟಿಯವರದು ವಚನ ಜಾಗೃತಿ ಚಳುವಳಿಯಾಗಿತ್ತು. ಶರಣ ಚಳುವಳಿ ನಡೆದು 850 ವರ್ಷ ಕಳೆದ ನಂತರ ನಮ್ಮ ಅದೃಷ್ಟವೆಂಬಂತೆ ಕಳೆದ ಶತಮಾನದಲ್ಲಿ, ಹಳಕಟ್ಟಿ ಅವರು ಕಾಲದ ದೂಳಿನಲ್ಲಿ ಕಣ್ಮರೆಯಾಗಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದದ್ದನ್ನು ನಾವು ಎಷ್ಟು ನೆನೆದರು ಸಾಲದು.

ಇಂತಹ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ, ಪ್ರಕಾಶಿಸಿ, ಪ್ರಸಾರ ಮಾಡಿದ್ದು ಅವಿಸ್ಮರಣೀಯ ಸಂಗತಿ ಯಾಗಿದೆ.

ವಿಶ್ವ ಸಾಹಿತ್ಯದಲ್ಲಿ ಅದ್ವಿತೀಯವೆನಿಸಿದ ಒಂದು ಶ್ರೇಷ್ಠ ವಸ್ತುನಿಷ್ಠ ವಚನ ಸಾಹಿತ್ಯ ಸಂಪತ್ತಿನಿಂದಲೇ ನಾವು ಹೆಮ್ಮರವಾಗಿ ಬೆಳೆದಿದ್ದೇವೆ ಎಂದರು.

ದತ್ತಿ ದಾಸೋಹಿಗಳಾದ ಮಮತಾ ನಾಗರಾಜ ಅವರು, ಮಾನವೀಯ ಮೌಲ್ಯಗಳು ಹಾಗೂ ಸಮಾನತೆಯ ವಚನಗಳನ್ನು ಉದಾಹರಣೆ ಸಮೇತ ವಿವರಿಸಿದರು.

ಇಲ್ಲಿನ ನಿವಾಸಿಗಳು ಹೊಸ ಚೈತನ್ಯ ಪಡೆದು ಉತ್ಸಾಹಿಗಳಾಗಿ ಈ ಕೇಂದ್ರದಿಂದ ಬಿಡುಗಡೆ ಹೊಂದಲಿ ಎಂದು ಅನೇಕ ಕ್ರೀಡಾ ಸಾಮಗ್ರಿಗಳನ್ನು ಬಟ್ಟೆಗಳನ್ನು ಕೊಡುಗೆಯಾಗಿ ನೀಡಿದರು.

ಕದಳಿ ವೇದಿಕೆಯ ರಾಜ್ಯ ಉಪಸಂಚಾಲಕರಾದ ಪ್ರಮೀಳಾ ನಟರಾಜ ಅವರು, ಈ ಕೇಂದ್ರದ ನಿವಾಸಿಗಳು ತಮ್ಮ ಕೈಲಾದ ಕೆಲಸ ಮಾಡಬೇಕು. ಇನ್ನೊಬ್ಬರ ಮೇಲೆ ಅವಲಂಬಿತರಾಗಬಾರದು, ಎಂದು ತಿಳಿಸಿದರು. ವಚನ ಭಜನೆಯನ್ನು ಅಭ್ಯಾಸ ಮಾಡಿಕೊಳ್ಳಲು ತಿಳಿಸಿದರು.

ಇದೇ ವೇಳೆ ಕಲ್ಯಾಣಿ ವಚನ ಗಾಯನ ತಂಡದಿಂದ ಹಾರ್ಮೋನಿಯಂ, ತಬಲ, ಕಂಜರ, ತಾಳಗಳನ್ನು ಕೊಡುಗೆಯಾಗಿ ನೀಡಲಾಯಿತು. ಶೈಲಾ ನೀಲಕಾಂತ ಅವರು ಟೀ ಶರ್ಟ್ ಗಳನ್ನು ಕೊಡುಗೆಯಾಗಿ ನೀಡಿದರು.

ಮುಖ್ಯ ಅತಿಥಿಗಳಾಗಿ ಕೇಂದ್ರದ ಅಧೀಕ್ಷರಾದ ಕಾಶೀನಾಥ ಅವರು, ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಇಲ್ಲಿರುವ ನಿರಾಶ್ರಿತರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢ ಹಾಗೂ ಸೌಹಾರ್ದತೆಯಿಂದಿರಲು ಭಜನೆ, ಕ್ರೀಡೆ ಹಾಗೂ ವಿವಿಧ ರೀತಿಯ ಚಟುವಟಿಕೆಗಳನ್ನು ಪ್ರತಿದಿನ ಆಯೋಜಿಸುತ್ತಿದ್ದೇವೆ.

ನಿವಾಸಿಗಳ ಕೆಲಸಕ್ಕೆ ತಕ್ಕಂತೆ ಅವರ ಒಂದು ವರ್ಷದ ಸಂಭಾವನೆಯನ್ನು ಅವರು ನಿರ್ಗಮಿಸುವ ವೇಳೆ ನೀಡುತ್ತಿದ್ದು, ಅದನ್ನು ಉಪಯೋಗಿಸಿಕೊಂಡು ಬೇರೆಯವರಿಗೆ ಹೊರೆಯಾಗದಂತೆ ತಮ್ಮ ಗಳಿಕೆಯನ್ನು ತಾವೇ ದುಡಿದು ಸ್ವಾವಲಂಬಿಯಾಗಬೇಕೆಂಬುದೇ ಇಲಾಖೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಮಾಜದ ದುರಂತವೆಂದರೆ ಈ ರೀತಿ ನಿರಾಶ್ರಿತರು ತಮ್ಮ ಸ್ವಗೃಹಗಳಿಗೆ ಹಿಂದಿರುಗಲು ಸಿದ್ದರಾದರೂ ಅವರ ಕುಟುಂಬದವರು ಅವರ ಬಯಕೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.

ಇಲ್ಲಿ ಕಾರ್ಯಕ್ರಮ ಮಾಡಿದ ವೇದಿಕೆಯವರಿಗೆ ಧನ್ಯವಾದ ಅರ್ಪಿಸಿ, ಈ ರೀತಿಯ ಹಲವು ಕಾರ್ಯಕ್ರಮ ಮಾಡಿದಲ್ಲಿ ಇಲ್ಲಿರುವವರು ಮಾನಸಿಕವಾಗಿ ಸಶಕ್ತರಾಗುತ್ತಾರೆ ಎಂದು ಆಶಿಸಿದರು.

ವೇದಿಕೆಯ ತಾಲೂಕು ಘಟಕದ ಅಧ್ಯಕ್ಷೆ ವಿಜಯ ಚಂದ್ರಶೇಖರ ಅವರು ಮಾತನಾಡಿ, ಬಸವಣ್ಣನವರ ವಚನ ಕಳಬೇಡ ಕೊಲಬೇಡ ವಚನದ ಸಪ್ತ ಸೂತ್ರಗಳನ್ನು ನಾವು ಅಳವಡಿಸಿಕೊಂಡರೆ ಆಪ್ತ ಸಮಾಲೋಚಕರ ಅವಶ್ಯಕತೆ ಬರುವುದಿಲ್ಲ ಎಂದು ತಿಳಿಸಿದರು.

ಕಾರ್ಯದರ್ಶಿ ವಿಜಯಲಕ್ಷ್ಮಿ ಬಸವರಾಜ ಸರ್ವರನ್ನು ಸ್ವಾಗತಿಸಿ, ವಂದಿಸಿದರು.

ಸಹಕಾರ್ಯದರ್ಶಿ ಲಕ್ಷ್ಮಿ ಮಲ್ಲಿಕಾರ್ಜುನ ದತ್ತಿ ಹಾಗೂ ದಾನಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷೆ ವಸಂತ ಕಾರ್ಯಕ್ರಮ ನಿರೂಪಿಸಿದರು. ಮಮತಾ ಶ್ರೀಧರ ವಚನ ದಾಸೋಹ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಚಂದ್ರಿಕಾ, ಲೀಲಾ, ಶೋಭಾ, ಶೈಲಾ, ಪುನರ್ವಸತಿ ಕೇಂದ್ರದ ಸಿಬ್ಬಂದಿಗಳು, ನಿವಾಸಿಗಳು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *

ಅಧ್ಯಕ್ಷೆ, ತಾಲೂಕು ಕದಳಿ ಮಹಿಳಾ ವೇದಿಕೆ, ದಾವಣಗೆರೆ