(ಕರ್ನಾಟಕದಲ್ಲಿ ಇಲ್ಲಿಯವರೆಗೆ ಸಬಲವಾದ ಪ್ರಾದೇಶಿಕ ಪಕ್ಷಗಳು ಬೆಳೆದಿಲ್ಲ. ಈಗ ಬಸವ ಸಂಘಟನೆಗಳನ್ನು ರಾಜಕೀಯವಾಗಿ ಸಕ್ರಿಯಗೊಳಿಸುವ ಚಿಂತನೆ ನಡೆದಿರುವಾಗ ಎಲ್ಲರನ್ನು ಒಳಗೊಳ್ಳುವ ನೆಲಮೂಲದ ಬಸವತತ್ವ ಆಧಾರಿತ ಪ್ರಾದೇಶಿಕ ಪಕ್ಷದ ಒಂದು ಆಲೋಚನೆ ಇಲ್ಲಿದೆ.)
ಬೆಳಗಾವಿ
ಜಾತಿ ಧರ್ಮದ ಆಧಾರದಲ್ಲಿ ಯಾರಿಗೂ ಯಾವುದೇ ಬೇಧಭಾವ ಮಾಡದೇ, ಎಲ್ಲರನ್ನೂ ಸಮಾನವಾಗಿ ಕಾಣುವುದೇ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದ ಮೂಲ ಉದ್ದೇಶವಾಗಿದೆ. ಸಮಸಮಾಜವೇ ಲಿಂಗಾಯತದ ಮುಖ್ಯ ಪರಿಕಲ್ಪನೆ. ಇದು ಸಂವಿಧಾನದ ಆಶಯಗಳಿಗೆ ಸಂಪೂರ್ಣ ಪೂರಕವಾಗಿದೆ.
ಆದ್ದರಿಂದ ಲಿಂಗಾಯತ ಜನತಾ ಪಕ್ಷ ಯಾವುದೇ ಒಂದು ಧರ್ಮದ ಪಕ್ಷವಲ್ಲ, ಬದಲಿಗೆ ಜಾತಿ ಧರ್ಮದ ಆಧಾರದಲ್ಲಿ ಉಂಟಾಗುವ ತಾರತಮ್ಯಗಳನ್ನು ನಿವಾರಣೆ ಮಾಡಲು ಇಂತಹ ಪಕ್ಷದ ಪರಿಕಲ್ಪನೆ ಮೂಡಿದೆ. ಇದು ಜಾತಿ-ಧರ್ಮದ ಪಕ್ಷವಲ್ಲ, ಜಾತ್ಯತೀತ-ಧರ್ಮಾತೀತ ಪಕ್ಷವಾಗಿದೆ.
ಲಿಂಗಾಯತ ಜನತಾ ಪಕ್ಷದ ಪ್ರಮುಖ ಧ್ಯೇಯೋದ್ದೇಶಗಳು-
1) ಲಿಂಗ-ವರ್ಗ-ವರ್ಣಗಳ ಬೇಧರಹಿತ ಸಮಸಮಾಜವನ್ನು ನಿರ್ಮಿಸುವುದು.
2) ಸಂವಿಧಾನದ ಆಶಯಗಳನ್ನು ಜಾರಿಗೆ ತರುವುದು.
3) ಮಕ್ಕಳಲ್ಲಿ ಬಾಲ್ಯದಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವದ ಅರಿವು ಮೂಡಿಸುವುದು.
4) ರಾಷ್ಟ್ರಪ್ರೇಮ ಬೆಳೆಸುವುದು ಮತ್ತು ದೇಶ ಮೊದಲು ಎಂಬ ಜಾಗೃತಿ ಮೂಡಿಸುವುದು.
5) ನಾಡು ನುಡಿ ಸಂಸ್ಕೃತಿಯ ಅರಿವು ಮೂಡಿಸುವುದು, ಮನುಕುಲದ ಉದ್ಧಾರ ಮತ್ತು ವಿಶ್ವಕಲ್ಯಾಣಕ್ಕಾಗಿ ಶ್ರಮಿಸುವುದು.
6) ಬಸವತತ್ವವು ನೀಡಿದ ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು.
7) ಜಾತಿ ಧರ್ಮದ ಆಧಾರದಲ್ಲಿ ಯಾರಿಗೂ ಯಾವುದೇ ಬೇಧಭಾವ ತಾರತಮ್ಯ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣುವುದು ಮತ್ತು ಎಲ್ಲರಿಗೂ ಸಮಾನ ಅವಕಾಶ ನೀಡುವುದು.
8) ಜಾತಿ ಧರ್ಮದ ಹಿನ್ನೆಲೆಯಲ್ಲಿ ಮನುಷ್ಯರಲ್ಲಿ ಇರುವ ಮೇಲರಿಮೆ ಕೀಳರಿಮೆಗಳನ್ನು ಹೋಗಲಾಡಿಸುವುದು.
9) ಸಮಾಜದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಬೇಧಭಾವ ಮಾಡುವ ಯಾವುದೇ ರೀತಿಯ ಕಟ್ಟುಪಾಡು, ಸಂಪ್ರದಾಯ, ಮೌಢ್ಯ ಆಚರಣೆಗಳನ್ನು ನಿಷೇಧಿಸುವುದು.
10) ಸತ್ಯ ಅಹಿಂಸೆಗಳ ಮೌಲ್ಯಯುತ ತತ್ವಗಳನ್ನು ಬಾಲ್ಯದಿಂದಲೇ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವುದು.
11) ಜನರಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವುದು.
12) ಅವೈಚಾರಿಕ ಮತ್ತು ಅವೈಜ್ಞಾನಿಕ ಚಿಂತನೆಗಳನ್ನು ಹರಡುವ, ಮೌಢ್ಯ ವಿಷಯ ಮತ್ತು ಕಾರ್ಯಕ್ರಮಗಳನ್ನು ಬಿತ್ತರಿಸುವ ಯಾವುದೇ ವ್ಯಕ್ತಿ ಅಥವಾ ಸಮೂಹ ಮಾಧ್ಯಮಗಳನ್ನು ನಿಯಂತ್ರಿಸುವುದು.
13) ಕಾನೂನು ವ್ಯವಸ್ಥೆಯ ಆಮೂಲಾಗ್ರ ಸುಧಾರಣೆಗೆ ಒತ್ತು ಕೊಡುವುದು ಮತ್ತು ನ್ಯಾಯಾಂಗವನ್ನು ಸದೃಢಗೊಳಿಸುವುದು.
14) ಜನರಿಗೆ ತ್ವರಿತ ನ್ಯಾಯದಾನ ಮಾಡಲು ನ್ಯಾಯಾಂಗಕ್ಕೆ ಬೇಕಾಗಿರುವ ಎಲ್ಲ ರೀತಿಯ ತಾಂತ್ರಿಕ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
15) ಭ್ರಷ್ಟಾಚಾರ ತಡೆಗೆ ಪ್ರತಿಯೊಬ್ಬ ಅಧಿಕಾರಿ, ರಾಜಕೀಯ ನಾಯಕರ ಕುಟುಂಬದ ಹಣಕಾಸು ಮತ್ತು ಆಸ್ತಿ ವಿವರಗಳನ್ನು ತಂತ್ರಜ್ಞಾನದ ಮೂಲಕ ನಿರಂತರವಾಗಿ ನಿಗಾವಹಿಸುವುದು ಮತ್ತು ಸಾರ್ವಜನಿಕವಾಗಿ ತೆರೆದಿಡುವುದು.
16) ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿ ಅನುಷ್ಠಾನ ಮಾಡುವಲ್ಲಿ ತಂತ್ರಜ್ಞಾನದ ಮೂಲಕ ನಿರಂತರವಾಗಿ ನಿಗಾ ವಹಿಸುವುದು ಮತ್ತು ಸಾರ್ವಜನಿಕವಾಗಿ ತೆರೆದಿಡುವುದು..
17) ಕಾಯಕವೇ ಕೈಲಾಸ ಎಂದು ದುಡಿದು ತಿನ್ನುವ ಮನೋಭಾವ ಬೆಳೆಸುವುದು.
18) ಸಮಾಜದಲ್ಲಿ ಪ್ರತಿಯೊಂದು ಕಾಯಕವೂ ಸಮಾನವಾಗಿದೆ ಮತ್ತು ಅದು ಅಷ್ಟೇ ಘನತೆ, ಗೌರವ ಹೊಂದಿದೆ ಎಂಬ ಅರಿವು ಮೂಡಿಸುವುದು.
19) ಎಲ್ಲ ರೀತಿಯ ವೃತ್ತಿ, ಉದ್ಯೋಗ, ನೌಕರಿ ಸೇವೆಗಳಲ್ಲಿ ತೊಡಗಿರುವ ಪ್ರತಿಯೊಬ್ಬ ವ್ಯಕ್ತಿಗೂ ಘನತೆ ಗೌರವಗಳಿಂದ ಬಾಳುವಂತಹ ಸಮಾನ ಅವಕಾಶವನ್ನು ಮಾಡಿಕೊಡುವುದು. ಮತ್ತು
20) ಅದಕ್ಕಾಗಿ ಶ್ರೇಣೀಕೃತ ಸಂಬಳದ, ಆದಾಯದ ತಾರತಮ್ಯವನ್ನು, ಅಂತರವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು.
21) ಉಳ್ಳವರ ಮತ್ತು ಉಳ್ಳದವರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಉಳ್ಳವರಿಗೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಲು ಹೆಚ್ಚಿನ ಆರ್ಥಿಕ ಹೊಣೆಗಾರಿಕೆ ವಹಿಸುವುದು.
22) ಸರ್ಕಾರದ ಯೋಜನೆಗಳನ್ನು ಬಡವರಿಗೆ ಉಚಿತವಾಗಿ, ಮಧ್ಯಮ ವರ್ಗದವರಿಗೆ ಕಡಿಮೆ ಮತ್ತು ಉಳ್ಳವರಿಗೆ ಗರಿಷ್ಠ ಪ್ರಮಾಣದಲ್ಲಿ ಹೊಣೆಗಾರಿಕೆಯೊಂದಿಗೆ ನೀಡುವುದು.
23) ಮೂಲಭೂತ ಅವಶ್ಯಕತೆಗಳಾದ ಸರ್ಕಾರದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಎಲ್ಲಾ ವರ್ಗದ ಜನರಿಗೆ ಉಚಿತವಾಗಿ ಒದಗಿಸುವುದು.
24) ಖಾಸಗಿ ಸಂಸ್ಥೆಗಳಲ್ಲಿ ಸಹ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಬಡವರಿಗೆ ಉಚಿತವಾಗಿ, ಮಧ್ಯಮ ವರ್ಗದವರಿಗೆ ಕಡಿಮೆ ಮತ್ತು ಉಳ್ಳವರಿಗೆ ಗರಿಷ್ಠ ಪ್ರಮಾಣದಲ್ಲಿ ಹೊಣೆಗಾರಿಕೆಯೊಂದಿಗೆ ನೀಡುವಂತೆ ನೋಡಿಕೊಳ್ಳುವುದು.
25) ಹಂತಹಂತವಾಗಿ ಸರ್ಕಾರಿ ದಾಖಲೆಗಳಲ್ಲಿ ಪ್ರಜೆಗಳ ಜಾತಿ ಧರ್ಮಗಳನ್ನು ನಮೂದಿಸುವುದನ್ನು ಬಿಟ್ಟುಬಿಡುವುದು, ತನ್ಮೂಲಕ ಜಾತಿ ಧರ್ಮಗಳ ಮಹತ್ವ ಕಡಿಮೆ ಮಾಡಿ ಮನುಷ್ಯರೊಂದೇ ಜಾತಿ, ಮನುಷ್ಯತ್ವವೇ ಎಲ್ಲರ ನಿಜವಾದ ಧರ್ಮ ಎಂದು ಜಗತ್ತಿಗೆ ಸಂದೇಶ ಸಾರುವುದು.

ಮೀಸಲಾತಿಗೆ ಸಂಬಂಧಿಸಿದ ಯಾವುದೇ ವಿಚಾರ ಇರಬಾರದು. ಇದ್ದರೆ ಮೀಸಲಾತಿ ಪಡೆಯುವ ಜನರು ಈ ಪಕ್ಷಕ್ಕೆ ಬೆಂಬಲಿಸುವುದಿಲ್ಲ.
ಧರ್ಮ, ಜಾತಿ ಯ ಹೆಸರಿನ ಪಕ್ಷಗಳಿಗೆ ಬೆಳವಣಿಗೆ ಇರುವುದಿಲ್ಲ
ಒಳ್ಳೆಯ ವಿಚಾರ ಕಾರ್ಯಗತಗೊಳಿಸಿ