ಅರಿವು, ಸದಾಚಾರದಿಂದ ಮಾತ್ರ ವ್ಯಕ್ತಿತ್ವ ವಿಕಸನ: ಸಾಣೇಹಳ್ಳಿ ಸ್ವಾಮೀಜಿ

ಸಾಣೇಹಳ್ಳಿ:

“ಬಾಹ್ಯ ಪ್ರಪಂಚಕ್ಕೆ ನೀಡುವ ಗಮನಕ್ಕಿಂತ ಅಂತರಂಗದತ್ತ ದೃಷ್ಟಿ ಹರಿಸಿದಾಗ ಮಾತ್ರ ಮನುಷ್ಯನ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯ. ಶ್ರವಣ, ಮನನ ಮತ್ತು ನಿಧಿಧ್ಯಾಸನಗಳು ವ್ಯಕ್ತಿತ್ವ ರೂಪುಗೊಳ್ಳಲು ಪ್ರಮುಖ ಅಡಿಪಾಯ” ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಇಲ್ಲಿನ ಎಸ್.ಎಸ್. ರಂಗಮಂದಿರದಲ್ಲಿ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ವ್ಯಕ್ತಿತ್ವ ವಿಕಸನ’ ಕುರಿತ ದಂದಣ ದತ್ತಣ ಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

“ಮಕ್ಕಳಲ್ಲಿ ಕೇವಲ ಮಾತನಾಡುವ ಕಲೆಯಷ್ಟೇ ಸಾಲದು, ಶ್ರದ್ಧೆಯಿಂದ ಕೇಳಿಸಿಕೊಳ್ಳುವ ಮನಸ್ಥಿತಿ (ಶ್ರವಣ) ಇರಬೇಕು. ಕೇಳುವಾಗ ಮನಸ್ಸು ಅತ್ತ-ಇತ್ತ ಹರಿಯಬಾರದು. ಕಿವಿಯ ಮೂಲಕ ಪ್ರವೇಶಿಸಿದ ವಿಚಾರಗಳನ್ನು ಮಥನ ಮಾಡುತ್ತಾ ಹೋದಾಗ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ‘ವ್ಯಕ್ತಿ, ವ್ಯಕ್ತಿತ್ವ ಮತ್ತು ವಿಕಸನ’ ಎಂಬ ಮೂರೂ ಪದಗಳು ವ್ಯಕ್ತಿಗೆ ಸಂಬಂಧಪಟ್ಟಿದ್ದು. ಬಹಿರಂಗಕ್ಕಿಂತ ಅಂತರಂಗದ ಪ್ರವೇಶ ಬಹಳ ಮುಖ್ಯ. ನಮ್ಮ ಇಂದ್ರಿಯಗಳನ್ನು ಬಾಹ್ಯ ಪ್ರಪಂಚಕ್ಕೆ ಹರಿಬಿಟ್ಟರೆ ವ್ಯಕ್ತಿತ್ವ ಎಂದಿಗೂ ವಿಕಸನಗೊಳ್ಳುವುದಿಲ್ಲ.

“ವ್ಯಕ್ತಿತ್ವ ವಿಕಸನವು ಮನೆಯಿಂದ, ತಾಯಿಯಿಂದ ಮತ್ತು ಸಮಾಜದಿಂದ ಪ್ರಾರಂಭವಾಗಬೇಕು. ಜನನಿ ನೀಡುವ ಸನ್ನಡತೆ ಹಾಗೂ ಪಾಠದಿಂದ ಮನುಷ್ಯತ್ವ ಉಳಿಯುತ್ತದೆ; ಇಲ್ಲವಾದರೆ ಮನುಷ್ಯ ಮೃಗವಾಗುತ್ತಾನೆ. ನಾವು ಇನ್ನೊಬ್ಬರಿಗೆ ಒಳಿತನ್ನು ಬಯಸಿದರೆ ನಮಗೂ ಒಳಿತಾಗುತ್ತದೆ. ಕೇಡನ್ನು ಬಯಸಿದರೆ ಪ್ರತಿಕ್ರಿಯೆಯೂ ಹಾಗೆಯೇ ಇರುತ್ತದೆ.”

“ಸಿಟ್ಟಿನಿಂದ ವರ್ತಿಸುವ ಹುಡುಗನಿಗೆ ಅವನ ತಂದೆ ಮರಕ್ಕೆ ಮೊಳೆ ಹೊಡೆಯಲು ಹೇಳಿ, ನಂತರ ಅದನ್ನು ಕೀಳಲು ಹೇಳಿದ ಪ್ರಸಂಗವನ್ನು ನೆನಪಿಸಿಕೊಂಡ ಶ್ರೀಗಳು; ಮೊಳೆಗಳನ್ನು ಕಿತ್ತರೂ ಮರದಲ್ಲಿ ಗಾಯ ಹಾಗೂ ತೂತುಗಳು ಹಾಗೆಯೇ ಉಳಿಯುತ್ತವೆ. ಅಂತೆಯೇ, ನಾವು ಸಿಟ್ಟಿನ ಭರದಲ್ಲಿ ಆಡುವ ಕಠೋರ ಮಾತುಗಳು ಎದುರಿಗರ ಮನಸ್ಸಿನಲ್ಲಿ ಎಂದಿಗೂ ಮಾಸದ ಗಾಯವನ್ನು ಉಂಟುಮಾಡುತ್ತವೆ. ಆಡುವ ಮಾತು ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾಗಿರಬೇಕು.

“ನಾವು ಹಿತವಾದ, ಮಿತವಾದ, ಭಕ್ತಿ ಹೊಮ್ಮಿಸುವ ನುಡಿಗಳನ್ನಾಡಬೇಕು ಮತ್ತು ನುಡಿದಂತೆ ನಡೆಯಬೇಕು. ಇಂದಿನ ದಿನಗಳಲ್ಲಿ ವ್ಯಕ್ತಿತ್ವ ಅರಳುವುದಕ್ಕಿಂತ ಕೆರಳುವುದು ಜಾಸ್ತಿಯಾಗಿದೆ. ಮಕ್ಕಳು ಬಳಸುವ ಭಾಷೆಯಲ್ಲಿ ಕಳಪೆ ಪದಗಳಿದ್ದರೆ ಅದು ಅವರ ಸಂಸ್ಕಾರವನ್ನು ತೋರಿಸುತ್ತದೆ. ಮಾವಿನ ಹಣ್ಣು ಬೇಕೆಂದರೆ ಮಾವಿನ ಬೀಜವನ್ನೇ ಬಿತ್ತಬೇಕು. ಹಾಗೆಯೇ ಸತ್ಯ, ಪ್ರಾಮಾಣಿಕತೆ, ಅಹಿಂಸೆ, ಸಹಕಾರ, ಪರೋಪಕಾರ ಎಂಬ ಸದ್ಬೀಜಗಳನ್ನು ಬಾಲ್ಯದಲ್ಲೇ ಬಿತ್ತಬೇಕು.”

“ಒಳ್ಳೆಯವರ ಸಂಗ ಸಿಹಿಯಿದ್ದಂತೆ, ದುರ್ಜನರ ಸಂಗ ಕಾಳಕೂಟ ವಿಷವಿದ್ದಂತೆ. ‘ಅರಿವೇ ಗುರು’ ಎಂಬುದನ್ನು ಅರಿತು ನಮ್ಮೊಳಗಿನ ವಿವೇಕವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜಗತ್ತಿನಲ್ಲಿ ಹೊನ್ನು, ಹೆಣ್ಣು, ಮಣ್ಣಿಗಾಗಿ ಯುದ್ಧಗಳು ಹಾಗೂ ಅಹಂನ ಹೋರಾಟಗಳು ನಡೆಯುತ್ತಿವೆ. ಆದರೆ, ‘ಜ್ಞಾನರತ್ನ’ವೇ ನಿಜವಾದ ಸಂಪತ್ತು. ‘Knowledge is Power’. ಯಾವ ವ್ಯಕ್ತಿ ವಿನಯವಂತನಾಗಿ ಸರಿಯಾದ ಅರಿವನ್ನು ಪಡೆದುಕೊಳ್ಳುತ್ತಾನೋ ಅವನೇ ನಿಜವಾದ ಶ್ರೇಷ್ಠ ವ್ಯಕ್ತಿ” ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೊಸದುರ್ಗದ ಜೀವ ವಿಮಾ ನಿಗಮದ (LIC) ಅಧಿಕಾರಿ ಎಚ್.ಎಸ್. ನವೀನಕುಮಾರ ಮಾತನಾಡಿ, “ನಮ್ಮ ಒಳಗಡೆ ‘ವ್ಯಕ್ತಿತ್ವ’ ಎಂಬ ಮಹಾ ಧನವಿದೆ. ಗೌತಮ ಬುದ್ಧ ಹೇಳಿದ ನಿನಗೆ ನೀನೇ ಬೆಳಕಾಗು ಎಂದು. ಈ ತತ್ವದಂತೆ ಪ್ರತಿಯೊಬ್ಬರೂ ತಮ್ಮೊಳಗಿನ ಶಕ್ತಿಯನ್ನು ಗುರುತಿಸಬೇಕು.”

“ವ್ಯಕ್ತಿತ್ವ ವಿಕಸನಕ್ಕೆ ಆತ್ಮವಿಶ್ವಾಸ ಅತ್ಯಗತ್ಯ. ಹರಿತವಾದ ಆತ್ಮವಿಶ್ವಾಸವಿದ್ದರೆ ಯಾವುದೇ ಸಾಧನೆ ಸಾಧ್ಯ ಎಂದರು.”

“ಕೇವಲ ಮಾತು ಸಂವಹನವಲ್ಲ; ತಾಳ್ಮೆಯಿಂದ ಕೇಳಿಸಿಕೊಳ್ಳುವುದು. ಮತ್ತು ಎಂಪಥಿ (ಸಹಾನುಭೂತಿ/ಅನುಭೂತಿ) ಬೆಳೆಸಿಕೊಳ್ಳುವುದು ಇಂದಿನ ಮಕ್ಕಳಿಗೆ ಅಗತ್ಯ. IQ ಜೊತೆಗೆ EQ (Emotional Quotient) ಹಾಗೂ RQ (Relationship Quotient) ಬೆಳೆಸಿಕೊಳ್ಳಬೇಕು.”

“ಮಾನಸಿಕ ವಿಕಸನಕ್ಕೆ ತಡೆಯೊಡ್ಡುವ ಕೀಳರಿಮೆ, ಮೇಲರಿಮೆ, ಸೋಲಿನ ಭಯ, ಹಾಗೂ ಏಕಾಗ್ರತೆಯ ಕೊರತೆ ಎಂಬ ವೈರಸ್‌ಗಳನ್ನು ತೊಡೆದುಹಾಕಬೇಕು. ಬಸವಣ್ಣನವರ ಶೀಲ ಕುರಿತ ವಚನಗಳು ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ಪಂಚಶೀಲಗಳಾಗಿವೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿದ್ದ ಎಸ್.ಆರ್. ಚಂದ್ರಶೇಖರಯ್ಯ ಮಾತನಾಡಿ, “ತಾಯಿಯ ಪ್ರೀತಿ, ತಂದೆಯ ರಕ್ಷಣೆ, ಶಿಕ್ಷಕನ ಶಿಕ್ಷಣ ಹಾಗೂ ಗುರುವಿನ ಮಾರ್ಗದರ್ಶನವಿದ್ದರೆ ಸಮಾಜದಲ್ಲಿ ಯೋಗ್ಯ ವ್ಯಕ್ತಿಯನ್ನು ನಿರ್ಮಿಸಲು ಸಾಧ್ಯ.”

“ಸಾಣೇಹಳ್ಳಿಯ ಈ ವಿದ್ಯಾಸಂಸ್ಥೆಯಲ್ಲಿ ಕೇವಲ ರ್ಯಾಂಕ್ ಗಳಿಸುವುದು ಮಾತ್ರವಲ್ಲ, ಶ್ರೇಷ್ಠ ವ್ಯಕ್ತಿತ್ವಗಳನ್ನು ರೂಪಿಸಲಾಗುತ್ತಿದೆ. ಬಡ ಸೇವಕನ ಮಗ ಇಂದು ಎಂಬಿಬಿಎಸ್, ಎಂಡಿ ಮಾಡಿ ಶ್ರೇಷ್ಠ ವೈದ್ಯನಾಗಿರುವುದು ಹಾಗೂ ಇಲ್ಲಿನ ವಿದ್ಯಾರ್ಥಿಗಳು ಐಪಿಎಸ್, ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ. ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಹಾಗೂ ಸ್ವಚ್ಛತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಿಂಧೂ ಪಿ – 6ನೆಯ ತರಗತಿ, ತರುಣಗೌಡ ಎಂ ಪಾಟೀಲ – 7ನೆಯ ತರಗತಿ, ದಿಗಂತ ಸಿ ಬಿ – 9ನೆಯ ತರಗತಿ, ಹೆಚ್. ಝಾನ್ಸಿರಾಣಿ, ವೈ.ಸಿ. ಅಂಬಿಕಾ, ಗೌತಮ್ ಕೆ.ಸಿ. ನಲ್ಮೆ ವ್ಯಕ್ತಿತ್ವ ವಿಕಸನದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆರಂಭದಲ್ಲಿ ಶಿವಸಂಚಾರದ ಕಲಾವಿದ ನಾಗರಾಜ ಹೆಚ್. ಎಸ್. ವಚನ ಗೀತೆಗಳನ್ನು ಹಾಡಿದರು. ಉಭಯ ಶಾಲೆಗಳ ವಿದ್ಯಾರ್ಥಿಗಳು‌ ನೃತ್ಯರೂಪಕ ಪ್ರದರ್ಶಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *