ವೈಚಾರಿಕತೆಯ ದೀಪ ನಿಜಸುಖಿ ಹಡಪದ ಅಪ್ಪಣ್ಣನವರು

ಗೋಕಾಕ

ಹನ್ನೆರಡನೇ ಶತಮಾನದಲ್ಲಿ ನಡೆದ ಶರಣರ ವಚನ ಕ್ರಾಂತಿಯು ಬಹುದೊಡ್ಡ ಸಂದೇಶವನ್ನು ಜಗತ್ತಿಗೆ ನೀಡಿದೆ. ವರ್ಣ, ಜಾತಿ ಮತ್ತು ಧರ್ಮ ಆಧಾರಿತವಾಗಿ ನೋಡದೆ ಸಮಸ್ತ ಮನುಕುಲವು ಒಂದೇ ಎಂಬ ದಿವ್ಯ ಸಂದೇಶವನ್ನು ನೀಡಿದ್ದು ಮರೆಯಲಾಗದು. ಅದನ್ನೇ ಮಹಾಕವಿ ಕುವೆಂಪು ಹೀಗೆ ಹೇಳಿದ್ದು “ಮನುಜ ಮತ ವಿಶ್ವ ಪಥ” ಎಂದು.

ಅಂದು ಬಸವಣ್ಣನವರ ನೇತೃತ್ವದಲ್ಲಿ ನಡೆದ ಅನುಭವ ಮಂಟಪದ ಚಟುವಟಿಕೆ ಜಗದ ಮೊಟ್ಟಮೊದಲು ಪ್ರಜಾಪ್ರಭುತ್ವದ ಸಂಸತ್ತು ಇದ್ದಂತೆ ಎಂದು ಹೇಳಲಾಗುತ್ತದೆ. ಆ ಕಾಲಘಟ್ಟದಲ್ಲಿ ನಡೆದ ವಚನ ಚಳುವಳಿ ಮಹತ್ವಪೂರ್ಣ ಮತ್ತು ಚರಿತ್ರಾರ್ಹವಾದುದು ಆಗಿದೆ. ದುಡಿಯುವ ವರ್ಗದ, ಶೋಷಿತರ ಪರವಾಗಿ ಹೊಸ ಬೆಳಕಾಗಿ ಮೂಡಿ ಬಂದಿದ್ದೇ ಬಸವಣ್ಣನವರ ನೇತೃತ್ವದಲ್ಲಿಯ ಈ ಚಳುವಳಿ.

ಸಾಮಾಜಿಕ, ಆರ್ಥಿಕ ಸಮಾನತೆಯ ಪರಿಕಲ್ಪನೆಯೊಂದಿಗೆ ಶೋಷಿತ ವರ್ಗದ ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿತು. ಅಂದು ಇಷ್ಟಲಿಂಗ ಧಾರಣೆಯೊಂದಿಗೆ ಎಲ್ಲರಲ್ಲಿಯೂ ಸಮಾನತೆಯನ್ನು ಬಿತ್ತಲಾಯಿತು. ಅದರಲ್ಲಿಯೂ ವಿಶೇಷವಾಗಿ ಅಕ್ಷರ ಜ್ಞಾನವನ್ನು ಮೂಡಿಸಲಾಯಿತು.

ಅಧ್ಯಯನ ಅವಕಾಶವು ಕೆಲವೇ ಕೆಲವರ ಸ್ವತ್ತಾಗಿದ್ದ ಆ ಸಂದರ್ಭದಲ್ಲಿ ಎಲ್ಲ ವರ್ಗಕ್ಕೂ ಅಕ್ಷರ ಜ್ಞಾನ ಒದಗಿಸಿ, ಅದರಲ್ಲಿಯೂ ವಿಶೇಷವಾಗಿ ಹೆಣ್ಣು ಮಕ್ಕಳಿಗೂ ಅಕ್ಷರ ಜ್ಞಾನ ಹಾಗೂ ವೈಚಾರಿಕತೆಯ ಜ್ಞಾನ ಬಿತ್ತಿದ್ದು ಈ ಸಂದರ್ಭದಲ್ಲಿಯೇ ಎಂಬುದು ಗಮನಾರ್ಹ.

ಶ್ರೇಣೀಕೃತ ವ್ಯವಸ್ಥೆಯ ಕಾಲ ಘಟ್ಟದಲ್ಲಿ ಬಹು ವಿದ್ಯೆ, ತರ್ಕ ಇತ್ಯಾದಿಗಳು ಕನಿಷ್ಠರೆನಿಸಿಕೊಂಡ ಜನರಿಗೂ ತಲುಪಿಸಲು ಸಾಧ್ಯವಾಗಿದ್ದು ಬಸವಣ್ಣನವರ ನೇತೃತ್ವದಲ್ಲಿ ಈ ಅನುಭವ ಮಂಟಪದ ಮೂಲಕ. ಅಲ್ಲಮ ಪ್ರಭುಗಳ ಅಧ್ಯಕ್ಷತೆಯಿತ್ತು. ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಿದ್ದರಾಮೇಶ್ವರ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸೂಳೆ ಸಂಕವ್ವೆ, ಆಯ್ದಕ್ಕಿ ಮಾರಯ್ಯ ದಂಪತಿಗಳು, ಹಡಪದ ರೇಚಣ್ಣ, ಬಹುರೂಪಿ ಚೌಡಯ್ಯ ಇತ್ಯಾದಿ ಸಾವಿರಾರು ಶರಣರು ಸಹಿತ ೭೭೦ ವಚನಕಾರರು ಅಲ್ಲಿದ್ದರು. ಈ ಶರಣರ ಮಹಾ ಕೂಟದಲ್ಲಿ ಹಡಪದ ಅಪ್ಪಣ್ಣ ದಂಪತಿಗಳೂ ಇದ್ದರು.

ಹಡಪದ ಅಪ್ಪಣ್ಣನವರು ಅನುಭವ ಮಂಟಪದ ಕಾರ್ಯದರ್ಶಿ ಆಗಿದ್ದು ಬಸವಣ್ಣನರಿಗೆ ಆಪ್ತ ಕಾರ್ಯದರ್ಶಿಯೂ ಆಗಿದ್ದರು. ಬಸವಣ್ಣನವರ ಎಲ್ಲ ಕಾರ್ಯಗಳಲ್ಲಿ ಜೊತೆಯಾಗಿ ನಿಂತವರು, ಜೊತೆಯಾಗಿಯೇ ನಡೆದವರು. ಅವರ ಇಚ್ಛೆ, ವಿಚಾರಕ್ಕೆ ಅನುಗುಣವಾಗಿ ಬೆರೆತು ವಚನ ಆಂದೋಲನ ಹಾಗೂ ವೈಚಾರಿಕತೆ ಬಿತ್ತನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.

ಅಪ್ಪಣ್ಣನವರು ಸುಮಾರು 250 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು ಅಂಕಿತ ನಾಮ “ಬಸವಪ್ರಿಯ ಕೂಡಲಚೆನ್ನಬಸವಣ್ಣ” ಅಂತಾ ಇದೆ. ಸಮಸ್ತ ಶರಣರು ಇವರನ್ನು “ನಿಜಸುಖಿ ಅಪ್ಪಣ್ಣ” ಎಂದು ಕರೆದಿದ್ದಾರೆ. ಇವರ ಧರ್ಮಪತ್ನಿ ಲಿಂಗಮ್ಮನವರು ಕೂಡ ನೂರಾರು ವಚನಗಳನ್ನು ರಚಿಸಿದ್ದು ಇವರನ್ನು “ನಿಜ ಮುಕ್ತೆ” ಎಂದು ಕರೆದಿದ್ದಾರೆ.

ಹಡಪದ ಜನಾಂಗದವರು ಅಪ್ಪಣ್ಣನವರನ್ನು ಇಂದಿಗೂ ತಮ್ಮ ಕುಲದ ಶರಣ ಗುರು ಎಂದೇ ನಂಬಿಕೊಂಡು ಬಂದಿದ್ದು ಸಮಸ್ತ ಹಡಪದ ಜನಾಂಗವು ತಮ್ಮ ಕುಲದ ಶರಣ ಗುರುವೆಂದು ಸ್ವೀಕರಿಸಿದ್ದಾರೆ. ಹಡಪ ಎಂದರೆ ಕ್ಷೌರಿಕದ ಸಾಮಗ್ರಿಗಳನ್ನು ಇಡುವ ಪೆಟ್ಟಿಗೆ ಅಂತಾದರೆ ಮತ್ತೊಂದೆಡೆ ವೀಳ್ಯದೆಲೆ ಇಡುವ ಪೆಟ್ಟಿಗೆ ಎಂಬರ್ಥವನ್ನೂ ನೀಡುತ್ತದೆ. ಹೀಗಾಗಿ ಅಪ್ಪಣ್ಣನವರು ತಮ್ಮ ಕುಲಕಸುಬಿನೊಂದಿಗೆ ಅನುಭವ ಮಂಟಪದಲ್ಲಿಯ ಶರಣರಿಗೆ ವೀಳ್ಯದೆಲೆ ಹಂಚುವ ಕಾಯಕವನ್ನು ನಿರ್ವಹಿಸುತ್ತಿದ್ದರೆಂಬುದನ್ನು ನಂಬಬಹುದಾಗಿದೆ.

ಇವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಸಮೀಪದ ಮಸಬಿನಾಳ ಗ್ರಾಮದಲ್ಲಿ. ಇವರ ತಂದೆ ಚೆನ್ನವೀರಪ್ಪ ತಾಯಿ ದೇವಕಮ್ಮ. ಸಮೀಪದ ಬಸವನಬಾಗೇವಾಡಿಯಲ್ಲಿ ಅಣ್ಣ ಬಸವಣ್ಣನವರು ಜನಿಸಿದ್ದು. ಅಪ್ಪಣ್ಣನವರು ಬಸವಣ್ಣನವರಿಗಿಂತಲೂ ವಯಸ್ಸಿನಲ್ಲಿ ಸ್ವಲ್ಪ ಹಿರಿಯರು ಹಾಗೇನೇ ಬಾಲ್ಯ ಸ್ನೇಹಿತರೂ ಕೂಡ. ಕೂಡಲ ಸಂಗಮದಲ್ಲಿ ಇಬ್ಬರೂ ಇದ್ದ ಸಂದರ್ಭದಲ್ಲಿ ಇಬ್ಬರಲ್ಲಿಯೂ ಆತ್ಮೀಯತೆ ಬಾಂಧವ್ಯ ಹೆಚ್ಚಾಗುತ್ತದೆ. ತದನಂತರದಲ್ಲಿ ಕಲ್ಯಾಣದಲ್ಲಿಯೂ ಜೊತೆಗಾರರಾಗಿ ಅದೇ ಪ್ರೀತಿ ಬಾಂಧವ್ಯದೊಂದಿಗೆ ಉಳಿಯುತ್ತಾರೆ.

ಅಪ್ಪಣ್ಣನವರು ಮಹಾ ಜ್ಞಾನಿ ಆಗಿದ್ದರು. ಬಸವಣ್ಣನವರನ್ನು ಯಾರೇ ಬೆಟ್ಟಿಯಾಗಬೇಕೆಂದರೆ ಮೊದಲು ಅಪ್ಪಣ್ಣನವರನ್ನು ಬೆಟ್ಟಿಯಾಗಬೇಕಿತ್ತು.  ಮೊದಲ ಬಾರಿ ಕಲ್ಯಾಣಕ್ಕೆ ಆಗಮಿಸಿದ ಅಲ್ಲಮಪ್ರಭು ಹಾಗೂ ಸೊನ್ನಲಿಗೆ ಸಿದ್ದರಾಮಯ್ಯನವರನ್ನು ತಮ್ಮ ಜ್ಞಾನದೊಂದಿಗೆ ಗುರ್ತಿಸಿ ಬಸವಣ್ಣನವರಿಗೆ ತಿಳಿಸಿದ ಪ್ರಸಂಗ ಮಹತ್ವಪೂರ್ಣವಾದ ಘಟನೆಯೆಂದು ಪರಿಗಣಿಸಲಾಗುತ್ತದೆ.  ಅನೇಕ ಸಂದಿಗ್ಧ ಸಂದರ್ಭದಲ್ಲಿ ಅಪ್ಪಣ್ಣನವರು ಬಸವಣ್ಣ ಮತ್ತು ಇತರೆ ಶರಣರಿಗೆ ಮಾರ್ಗದರ್ಶಕರಾಗಿದ್ದರೆಂದು ತಿಳಿದು ಬರುತ್ತದೆ.

ಇವರು ಲೌಕಿಕ ಮತ್ತು ಅಲೌಕಿಕ ಸಾಧನೆಗೈದವರಾಗಿದ್ದರು. ಅಲ್ಲಮ ಹಾಗೂ ಅಕ್ಕಮಹಾದೇವಿಯರಂತೆ ಬೆಡಗಿನ ವಚನಗಳನ್ನು ರಚಿಸಿದವರು. ಇವರು ತಮ್ಮ ವಚನಗಳ ಮೂಲಕ ಕಾಯಕನಿಷ್ಠೆ, ದಾಸೋಹ, ಭಕ್ತಿ, ವೈರಾಗ್ಯ, ಆಚಾರ, ವಿಚಾರಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಸಿದ್ದಾರೆ. ತನ್ಮೂಲಕ ವೈಚಾರಿಕತೆ ಚಿಂತನೆಯನ್ನು ಬಿತ್ತಿದ್ದಾರೆ. ಇವರ ವಚನಗಳು ಅಜ್ಞಾನಿಗಳಿಗೆ ಜ್ಞಾನದ ಬೆಳಕಾಗಿವೆ. ಆತ್ಮಶುದ್ಧಿ, ನಡೆ-ನುಡಿ, ಶುದ್ಧ ಆಚಾರ-ವಿಚಾರ ಹಾಗೂ ನಿರ್ಮಲ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಇವರ ವಚನಗಳು ಪರಿಣಾಮಕಾರಿಯಾಗಿವೆ.

ಮನುಷ್ಯನ ಮೌಢ್ಯವನ್ನು ಕಳಚಿ ಅರಿವವನ್ನು ಮೂಡಿಸುವ ಈ ವಚನವನ್ನು ನೋಡಿ.

ಮನವನರಿದಂಗೆ ಮತದ ಹಂಗೇಕೋ?

ನಿತ್ಯವನರಿದಂಗೆ ತೀರ್ಥದ ಹಂಗೇಕೋ?

ಪರಮಾರ್ಥವನರಿದಂಗೆ ಪ್ರಸಾದದ ಹಂಗೇಕೋ?

ಜ್ಯೋತಿಯವನರಿದಂಗೆ ವ್ಯಾಕುಲದ ಹಂಗೇಕೋ?

ಈ ತೆರನನರಿದಂಗೆ ಮುಂದಾವ ಭೀತಿಯುಂಟು

ಹೇಳಾ ಬಸವಪ್ರಿಯ ಕೂಡಲಚೆನ್ನಬಸವಣ್ಣ

ಮನುಷ್ಯ ಹೇಗಿರಬೇಕು? ಆತನ ನಡೆ ನುಡಿಗಳು ಹೇಗಿರಬೇಕೆಂದು ಈ ಕೆಳಗಿನ ವಚನದ ಮೂಲಕ ಸರಳ ಮತ್ತು ಸುಂದರವಾಗಿ ಹೇಳಿದ್ದಾರೆ.

ನುಡಿದರೆ ಗುರುವಾಗಿ ನುಡಿಯಬೇಕು

ನಡೆದರೆ ಪರವಾಗಿ ನಡೆಯಬೇಕು

ಇದ್ದರೆ ಜಂಗಮವಾಗಿ ಇರಬೇಕು

ಕುಳಿತರೆ ಲಿಂಗವಾಗಿ ಕುಳಿತಿರಬೇಕು

ಈ ನಾಲ್ಕರ ಹೊಂದಿಗೆಯನರಿಯದವರು

ಎಷ್ಟು ದಿನವಿದ್ದರೂ ಫಲವೇನು ಹೇಳಾ

ಬಸವಪ್ರಿಯ ಕೂಡಲಚೆನ್ನಬಸವಣ್ಣ

ಸಮಾಜದಲ್ಲಿ ಮೇಲ್ವರ್ಗದವರು ನಡೆಸುವ ಶೋಷಣೆಯನ್ನು ಖಂಡಿಸುತ್ತಲೇ ಅನ್ನ, ಹೆಣ್ಣು, ಮಣ್ಣು, ನೀರು ಇತ್ಯಾದಿಗಳನ್ನು ಕೊಟ್ಟು ಪಾಪ ಕಳೆದುಕೊಂಡು ಪುಣ್ಯ ಗಳಿಸಿಕೊಳ್ಳಲು ಈ ಎಲ್ಲವುಗಳನ್ನು ನೀವು ಸೃಷ್ಟಿಸಿದ್ದೆ? ಎಂದು ಅವರಿಗೆ ಖಾರವಾಗಿ ಪ್ರಶ್ನಿಸುತ್ತಾರೆ.

ಅನ್ನವನಿಕ್ಕಿದರೇನು? ಹೊನ್ನ ಕೊಟ್ಟರೇನು?

ಹೆಣ್ಣು ಕೊಟ್ಟರೇನು? ಮಣ್ಣು ಕೊಟ್ಟರೇನು?  ಪುಣ್ಯ ಉಂಟೆಂಬರು,

ಅವರಿಂದಾದೊಡೆ ಏನು ಅವರಿರುವುದಕ್ಕೆ?

ಇದಕ್ಕೆ ಪುಣ್ಯವಾವುದು, ಪಾಪವಾವುದು?

ನದಿಯ ಉದಕವ ನದಿಗೆ ಅರ್ಪಿಸಿ

ತನತನಗೆ ಪುಣ್ಯ ಉಂಟೆಂಬ ಬಡ ಹಾರುವರಂತೆ

ಸದಮಳ ಶಾಶ್ವತ ಮಹಾಘನಲಿಂಗವನರಿಯದೆ

ಇವೇನ ಮಾಡಿದರೂ ಕಡೆಗೆ ನಿಷ್ಫಲವೆಂದಾತ

ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ

ಅಂಗ ಲಿಂಗ ಜಂಗಮದ ಮಹತ್ವ ಹೇಳುತ್ತಲೇ ಅಂಗದ ಮೇಲೆ ಲಿಂಗವಿದ್ದವರು ತ್ರಿಕರ್ಣಶುದ್ಧರಾಗಿ ಅರಿವಿನೊಂದಿಗೆ ಹೇಗಿರಬೇಕು ಎಂಬುದನ್ನು ಈ ವಚನದಲ್ಲಿ ನೇರ ಮತ್ತು ಸ್ಪಷ್ಟವಾಗಿ ತಿಳಿಸುತ್ತಾರೆ.

ಅಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ

ಲಿಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ

ಜಂಗಮವ ತೋರಿಕೊಂಡು ಉಂಬಾತನೊಬ್ಬ ಠಕ್ಕ

ಇವರು ಮೂವರು ಕಂಗಳು ಕಾಲು ಹೋದವರ ಸಂಗದಂತೆ

ಲಿಂಗ ಜಂಗಮಕ್ಕೆ ದೂರ, ನಮ್ಮ ಶರಣರ ಸಂಗ ಸುಖಕ್ಕೆ ಸಲ್ಲರು ನೋಡಾ ಬಸವಪ್ರಿಯ ಕೂಡಲ ಚೆನ್ನಬಸವಣ್ಣ.

ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ ಎಂದೆನ್ನುವ ಬಸವಣ್ಣನವರ “ಜಗದಗಲ ಮುಗಿಲಗಲ ಮಿಗೆಯಗಲ “ವಚನವನ್ನು ಈ ಕೆಳಗಿನ ವಚನವು ನೆನಪಿಸುತ್ತದೆಯಾದರೂ ಇಲ್ಲಿ ಅಪ್ಪಣ್ಣನವರು” ದೇವನೊಳಗೆ ನಾನಿರುವೆ ನನ್ನೊಳಗೆ ದೇವನಿದ್ದಾನೆ” ಎನ್ನುವ ಮೂಲಕ, ಸ್ಥಾವರ ಪೂಜೆಯನ್ನು ನೇರವಾಗಿ ತಿರಸ್ಕರಿಸುತ್ತಾರೆ. ಸ್ವರ್ಗ, ನರಕ, ಎಂಬ ನಂಬಿಕೆಗಳನ್ನೂ ತಿರಸ್ಕರಿಸಿ ಹೃದಯವಂತಿಕೆ, ಮನುಷ್ಯ ಪ್ರೀತಿಯೇ ನಿಜದ ದೇವರೆಂಬುದನ್ನು ಅರಿಯಬೇಕೆಂದು ಈ ರೀತಿಯಲ್ಲಿ ಹೇಳುವರು.

ಜಗದಗಲ ಮುಗಿಲಗಲ ಪಾದ ಪಾತಾಳದಿಂದತ್ತತ್ತ. ಮುಕುಟ ಬ್ರಹ್ಮಾಂಡದಿಂದತ್ತತ್ತ ವಿಶ್ವ ಬ್ರಹ್ಮಾಂಡವನು

ತನ್ನ ಕುಕ್ಷಿಯೊಳು ನಿಕ್ಷೇಪವ ಮಾಡಿಕೊಂಡಿಪ್ಪ

ದೇವನೀಗ ಎನ್ನ ದೇವ, ಆ ದೇವನೊಳಗೆ

ನಾನಡಕ ನನ್ನೊಳಗೆ ಆ ದೇವನಡಕ ಇಂತಪ್ಪ

ದೇವನ ನಂಬಿ, ನಾ ಕೆಟ್ಟು ಬಟ್ಟ ಬಯಲಾದೆ

ಈ ದೇವನರಿಯದೆ ಜಗವೆಲ್ಲ ಕಲ್ಲದೇವರು

ಮಣ್ಣದೇವರು ಮರದೇವರು ಎಂದು

ಇವನಾರಾದಿಸಿ ಕೆಟ್ಟರಲ್ಲ, ಸ್ವರ್ಗ ಮರ್ತ್ಯು ಪಾತಾಳದವರೆಲ್ಲರೂ ಎನ್ನ ದೇವನರಿದು

ಆರ್ಚಿಸಲಿಲ್ಲ, ಪೂಜಿಸಲಿಲ್ಲ, ಭಾವಿಸಲಿಲ್ಲ

ಇದು ಕಾರಣ ನೆರೆ ನಂಬಿದರ

ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ

ಹೀಗೆ ಅಪ್ಪಣ್ಣನವರು ತಮ್ಮ ನೇರ ನುಡಿಯ ಜೊತೆಗೆನೇ ವೈಚಾರಿಕತೆ ಚಿಂತನೆಯ ಮೂಲಕ ಸಮಾಜದಲ್ಲಿ ತುಂಬಿಕೊಂಡಿದ್ದ ಅಂಧ ಶ್ರದ್ದೆ ಹಾಗೂ ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು.

“ಕಟ್ಟಬೇಕು ಮನವ, ಮೆಟ್ಟಬೇಕು ಮದವ, ಸುಟ್ಟುರುಹಬೇಕು ಸಪ್ತವ್ಯಸನನಗಳ ” ಎಂದೆನ್ನುತ ವ್ಯಕ್ತಿಯ ದೋಷಗಳನ್ನು ತಿದ್ದಲೂ ಪ್ರಯತ್ನಿಸಿದ್ದನ್ನು ಅವರ ವಚನಗಳಲ್ಲಿ ಕಾಣಬಹುದಾಗಿದೆ. ಜಾತಿಯ ಸಂಕೋಲೆಯನ್ನು ಕಿತ್ತೊಗೆದು ಸಮಾಜದಲ್ಲಿ ಸಮಾನತೆಯನ್ನು ತರಲು ಹಾಗೂ ದಯೆ, ಕಾಯಕ ಮತ್ತು ದಾಸೋಹದ ಮಹತ್ವವನ್ನು ತಿಳಿಸಲು ಬಸವಣ್ಣನವರ ಜೊತೆಗೂಡಿ ಪ್ರಯತ್ನ ಪಟ್ಟವರಲ್ಲಿ ಪ್ರಮುಖವಾಗಿ ಅಪ್ಪಣ್ಣನವರು ಎದ್ದು ಕಾಣುತ್ತಾರೆ.

ಅನುಭವ ಮಂಟಪದಲ್ಲಿ ಬಸವಣ್ಣ ಅಲ್ಲಮರ ಜೊತೆಗೂಡಿ ವಚನಗಳ ವಿಶ್ಲೇಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಕಾಣುತ್ತದೆ. ಅಂತಲೇ ಬಸವಣ್ಣನವರು ಹೀಗೆ ಹೇಳುತ್ತಾರೆ ” ಹಡಪದ ಅಪ್ಪಣ್ಣನವರಿಂದ ಎನ್ನ ಜನ್ಮ ಸಫಲವಾಯಿತಯ್ಯಾ”.  ಸಿದ್ದರಾಮೇಶ್ವರರು – “ಎನ್ನ ಶ್ರೋತ್ರದಲ್ಲಿ” ಯ ” ಕಾರವಾಗಿದ್ದಾತ ಹಡಪದ ಅಪ್ಪಣ್ಣ” ಎಂದಿದ್ದಾರೆ.  ಇನ್ನೂ ಕೆಲವು ವಚನಕಾರರು ಅಪ್ಪಣ್ಣನವರರನ್ನು ತಮ್ಮ ವಚನಗಳಲ್ಲಿ ನೆನಪಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರು ಜ್ಞಾನಿಗಳಾದಿದ್ದರು, ನಿಜ ಶರಣರಾಗಿದ್ದರು, ಜೊತೆಗೆ ಅನೇಕ ವಚನಕಾರರಿಗೆ ಮಾರ್ಗದರ್ಶಕರೂ ಆಗಿದ್ದರೆಂಬುದನ್ನು ತಿಳಿಯಬಹುದಾಗಿದೆ.

ಅಪ್ಪಣ್ಣನವರು ಬಸವಣ್ಣನವರ ಆಪ್ತಕಾರ್ಯದರ್ಶಿ ಅಷ್ಟೇ ಅಲ್ಲದೇ ಅವರ ಅಂತರಂಗದ ಆಪ್ತ ಮಿತ್ರರೂ ಆಗಿದ್ದರು. ಮೇಲ್ವರ್ಗದ ಯುವತಿಯನ್ನು ಕೆಳವರ್ಗದ ಯುವಕನೊಂದಿಗೆ ವಿವಾಹ ಮಾಡಿಸಿದ ಕಾರಣ ಮೇಲ್ವರ್ಗದ ಜನರು ಸಿಟ್ಟಾಗಿ ದೊರೆಗೆ ದೂರು ನೀಡಿದರು. ವಚನಕಾರರ ವಿರುದ್ಧ ದಂಗೆ ಎದ್ದು ಶರಣ ಕ್ರಾಂತಿ ಉಂಟಾಯಿತು. ಅನೇಕ ಶಿವಶರಣರು ತಮ್ಮ ವಚನಗಳನ್ನು ಸಂರಕ್ಷಿಸಲು ವಚನ ಕಟ್ಟುಗಳನ್ನು ತೆಗೆದುಕೊಂಡು ಕಲ್ಯಾಣ ತೊರೆಯಬೇಕಾಯಿತು. ಬಸವಣ್ಣನವರು ನೊಂದುಕೊಂಡು ಅಪ್ಪಣ್ಣನವರನ್ನು ಕರೆದುಕೊಂಡು ಕಪ್ಪಡಿಗೆ ಕಡೆಗೆ ತೆರಳಿದರು.

ಈ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ಪತ್ನಿ ನೀಲಾಂಬಿಕೆ ನೆನಪಾಯಿತು. ಹೀಗಾಗಿ ಅಪ್ಪಣ್ಣವರಿಗೆ ನೀಲಾಂಬಿಕೆಯವರನ್ನು ಕರೆತರಲು ಸೂಚಿಸುತ್ತಾರೆ. ಅಪ್ಪಣ್ಣನವರು ಕಲ್ಯಾಣಕ್ಕೆ ತೆರಳಿ ನೀಲಾಂಬಿಕೆಯವರನ್ನು ಕರೆದುಕೊಂಡು ಬರುತ್ತಿರಬೇಕಾದರೆ ಮಾರ್ಗ ಮಧ್ಯದಲ್ಲಿಯೇ ತಂಗಡಿಗೆಯ ಹತ್ತಿರ ಅಣ್ಣ ಬಸವಣ್ಣನವರು ನಿಧನರಾದ ಸುದ್ದಿ ತಿಳಿಯುತ್ತದೆ. ಇಬ್ಬರೂ ತೀವ್ರ ದುಃಖಕ್ಕೆ ಒಳಗಾಗುತ್ತಾರೆ. ಇಬ್ಬರೂ ಅಲ್ಲಿಯೇ ಕರದಲ್ಲಿ ಲಿಂಗವಿಟ್ಟುಕೊಂಡು ಧ್ಯಾನದಲ್ಲಿ ಕುಳಿತು ಅಂಗವನ್ನು ಲಿಂಗಕ್ಕೆ ಅರ್ಪಿಸಿ ಲಿಂಗದಲ್ಲಿ ಐಕ್ಯರಾಗುತ್ತಾರೆ. ಇಂದಿಗೂ ನೀಲಾಂಬಿಕೆಯವರ ಗದ್ದುಗೆ ತಂಗಡಿಯಲ್ಲಿ ಇದೆ.

ಹಾಗೇನೇ ಅಪ್ಪಣ್ಣನವರ ಗದ್ದುಗೆಯೂ ತಂಗಡಿಯಲ್ಲಿ ಉಂಟು. ತಂಗಡಗಿಯಲ್ಲಿ ಅಪ್ಪಣ್ಣನವರ ಹೆಸರಲ್ಲಿ ಮಠವೂ ಉಂಟು. ಹಡಪದ ಸಮಾಜದವರ ಮಠವಾಗಿ ಅದು ಗುರ್ತಿಸಿಕೊಂಡಿದೆ. ಕಲ್ಬುರ್ಗಿ ವಿಶ್ವವಿದ್ಯಾಲಯದಲ್ಲಿ ಹಡಪದ ಅಪ್ಪಣ್ಣನವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿತವಾಗಿದೆ. ಆದರೆ ಅಪ್ಪಣ್ಣ ಸಮಾಜದವರು ಕರ್ನಾಟಕ ವಿ.ವಿ. ಹಾಗೂ ಮೈಸೂರು ವಿ.ವಿ.ದಲ್ಲಿಯೂ  ಅಧ್ಯಯನ ಪೀಠ ತೆರೆಯಬೇಕೆಂದು ಆಶಿಸಿದ್ದಾರೆ.

ಇತ್ತೀಚಿಗೆ ಬಸವಕಲ್ಯಾಣದಲ್ಲಿಯ ಅರಿವಿನ ಮನೆಯಲ್ಲಿ ಬಸವಣ್ಣನವರ ಬದಿಗೆ ಇದ್ದ ಗುಹೆಯ ಮೇಲ್ಗಡೆ ಇದ್ದ ಅಪ್ಪಣ್ಣನವರ ಹೆಸರು ತೆಗೆದಿದ್ದು, ವಿವಾದವಾಗಿದ್ದು ಹಡಪದ ಸಮಾಜ ಸಹಿತ ಅನೇಕ ಮಠಾಧೀಶರಿಗೂ ನೋವನ್ನುಂಟು ಮಾಡಿದೆ. ಆದ್ದರಿಂದ ಆದಷ್ಟು ಬೇಗ ಈ ವಿವಾದಕ್ಕೆ ನ್ಯಾಯ ದೊರೆಯಬೇಕಾಗಿದೆ.

ಶ್ರಮಿಕ, ಶೋಷಿತ ಹಾಗೂ ಕಾಯಕ ವರ್ಗದ ಈ ಜನರು ಇನ್ನೂ ಮಧ್ಯಮ ವರ್ಗದವರು. ಆರ್ಥಿಕ ಹಾಗೂ ಸಾಮಾಜಿಕ ಮತ್ತು ರಾಜಕೀಯ ಸ್ಥಾನದಲ್ಲಿ ಇನ್ನೂ ಹಿಂದುಳಿದವರು. ಉತ್ತರ ಕರ್ನಾಟಕದಲ್ಲಿಯೇ ಹೆಚ್ಚು ಇರುವ ಈ ಜನಾಂಗ ಇಂದು ಸಮಸ್ತ ಕರ್ನಾಟಕದಲ್ಲಿಯೂ ಕಂಡು ಬರುತ್ತಾರೆ. ಸರಕಾರ ನಿಗಮ ಮಂಡಳಿ ಸ್ಥಾಪಿಸಿದ್ದು ಸಾಕಷ್ಟು ಧನ ಸಹಾಯ ನೀಡುವುದರ ಮೂಲಕ ಸಮಾಜದ ಆರ್ಥಿಕ ಹಾಗೂ ಸ್ವಾವಲಂಬಿ ಸಾಧನೆಗೆ ಅನುಕೂಲ ಕಲ್ಪಿಸಬೇಕಿದೆ.

ಅಲ್ಲಲ್ಲಿ ಆಗಾಗ ಈ ಜನಾಂಗಕ್ಕೆ ಜಾತಿ ನಿಂದನೆಯ ನುಡಿಗಳು ನೋವನ್ನುಂಟು ಮಾಡುತ್ತಿದ್ದು ಇದು ಮರುಕಳಿಸದಂತೆ ಸರಕಾರ ಹಾಗೂ ಆಡಳಿತ ನಡೆಸುವ ನಾಯಕರು ಈ ನಿಟ್ಟಿನಲ್ಲಿ ಸೂಕ್ತ ಶಿಸ್ತು ಕಾನೂನು ಕ್ರಮವನ್ನು ಘೋಷಿಸಬೇಕಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *