ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 15
ಕಲಬುರಗಿ:
ಕವಿ ಚಾಮರಸನಂತೆ ಆಧುನಿಕ ಕಾಲದ ಕವಿಗಳೂ ಬಸವಣ್ಣ ಹಾಗೂ ಅವರು ಕಟ್ಟಿದ ಸರ್ವ ಸಮಾನತೆಯ ಕಲ್ಯಾಣ ಸಾಮ್ರಾಜ್ಯದ ಬಗ್ಗೆ ಕಾವ್ಯ ಬರೆದಿದ್ದು, ಕವಿ ಸಿದ್ದಯ್ಯ ಪುರಾಣಿಕರು ‘ಬಸವನ ಬೆಳಕೆ ಎಲ್ಲಾಡಿ ಬಂದೆ’ ಎಂಬ ಕವಿತೆಯಲ್ಲಿ ಅವರ ಭೂಮ ವ್ಯಕ್ತಿತ್ವದ ಅಗಾಧತೆಯನ್ನು ಕೊಂಡಾಡಿದ್ದಾರೆ. ಮೇಲಾಗಿ ಬಸವಣ್ಣನನ್ನು ಬಿಟ್ಟರೆ ಲಿಂಗಾಯತಕೆ ಉಳಿಗಾಲವಿಲ್ಲ ಎಂದು ಹೇಳಿದ್ದಾರೆ.
ಮೈಸೂರಿನ ಕವಿ ಕೆ.ಶಿ. ಶಿವಪ್ಪನವರು ಕೂಡ ಬಸವಣ್ಣನೆಂದರೆ ಯಾರು? ಎಂಬುದನ್ನು ತಮ್ಮ ಚೌಪದಿಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಹೇಳಿದ್ದಾರೆ.
ಬಸವನೆಂದರೆ ಯಾರು?ಬಿಜ್ಜಳನ ಕರುಣಿಕನೆ?
ಅಲ್ಲಲ್ಲ ಬಿದ್ದವರನ್ನು ಎತ್ತಲು
ಬಂದ ಪರಮ ಶಿವಯೋಗಿ
ಅನುಭಾವದೆತ್ತರಕೆ ಕಾಯಕವ ತಂದಾತ
ತತ್ವವೆಂದರೆ ಬಸವ ಮುದ್ದುರಾಮ
ಬಸವನ ಬೆಳಕು ಭವಿಯಲಿ ಬೆಳಗಿತು. ಜಗದ ಕತ್ತಲೆ ಕಳೆಯಿತು ಎನ್ನುವಂತೆ ಅವರ ಹುಟ್ಟು, ನಾಮಕರಣ ಪ್ರಸಂಗದಲ್ಲಿ ನಡೆಯಿತೆನ್ನಲಾದ ಘಟನೆಗಳೆ ಸಾಕ್ಷಿಯಾಗಿವೆ. ಒಟ್ಟಂದದಲ್ಲಿ ಹೇಳುವುದಾದರೆ ಬಟ್ಟೆಗೆಟ್ಟವರಿಗೆ ದೊಂದಿ ದಿಕ್ಕಾಗಿ ಭುವಿಗೆ ಬಂದರು ಎಂಬುದನ್ನು ನಾಮಕರಣ ಸಮಾರಂಭ ಜರುಗಿದ ಕುರಿತು ಚಾಮರಸ ಕವಿ ಹೇಳುತ್ತಾನೆ.
ಅಗುವಾತಗೆ ನಾಮಕರಣಾದಿಯಾದ
ಸಮಸ್ತ ವಿಭವ ವಿನೋದವಾತಗೆ
ವೇದಶಾಸ್ತ್ರ ಪುರಾಣಾಗಮ ಆದಿಯಾಗಿಹ
ಕರ್ಮಕಳೆಗಳು ಭೇದಿಸಿದಮ್ಮಿಂಗೆ ಕೇಳೆಯೊ ಬವರಾಜಂಗೆ.
ಇಂಗಳೇಶ್ವರದಿಂದ ಬಾಗೇವಾಡಿಗೆ ತವರಿನ ತೊಟ್ಟಿಲು ಹೊತ್ತು ಮಾದಲಾಂಬಿಕೆ ಬರುತ್ತಾಳೆ. ಅಲ್ಲಿಯೇ ಮಗು ವೇದಾಗಮಶಾಸ್ತ್ರ ಕಲಿಯುತ್ತದೆ. ಶೂದ್ರ ವ್ಯಕ್ತಿಯ ಮಗ ಆಕಳ ಕರುವಿನ ಹಿಂದೆ ಓಡುತ್ತ ಬಿದ್ದಾಗ ಮೇಲಕ್ಕೆತ್ತಿದ ಬಸವಣ್ಣನ ಕ್ರಮ ಕಂಡು ಚಾಂಡಾಲರನ್ನು ಹಿಡಿದೆತ್ತಿ ಬಸವಣ್ಣ ಕುಲಗೆಡಿಸಿದ ಎಂದು ಊರೆಲ್ಲ ಗುಲ್ಲೇಳುತ್ತದೆ.
ಅಂತೆಯೇ ಅವರು ಮುಂದೆ ‘ಏನಯ್ಯ ವಿಪ್ರರು ನುಡಿದಂತೆ ನಡೆಯರು. ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ’ ಎಂದು ಖಾರವಾಗಿ ವಚನ ಬರೆದಿದ್ದಾರೆಂದೆನಿಸುತ್ತದೆ.
