ಬಸವನಬಾಗೇವಾಡಿ:
ಜಗತ್ತಿನ ಇತಿಹಾಸದಲ್ಲಿ ಧ್ವನಿ ಇಲ್ಲದವರಿಗೆ ದ್ವನಿ ನೀಡಿದ, ಬಿದ್ದವರನ್ನು ಮೇಲೆತ್ತಿದ, ಕಾಯಕ ಸಿದ್ಧಾಂತವನ್ನು ಕಲಿಸಿದ ಬಸವಣ್ಣವರ ಮಾರ್ಗದಲ್ಲಿ ಸಾಗಿದ ಮಹಾನ್ ಶರಣ ಹಡಪದ ಅಪ್ಪಣ್ಣನವರಾಗಿದ್ದರು ಎಂದು ಶಿಕ್ಷಕ ಸಂಗಮೇಶ ಮಂಟೂರ ಹೇಳಿದರು.
ಅವರು ಸ್ಥಳೀಯ ವಿರಕ್ತ ಮಠದಲ್ಲಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಹಾಗೂ ಕುಂಬಾರ ಗುಂಡಯ್ಯ ಜಯಂತಿ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ, ಬಸವಣ್ಣನವರ ಪ್ರತಿಯೊಂದು ಆಗುಹೋಗುಗಳನ್ನು ನೋಡಿಕೊಳ್ಳುವುದರ ಜೊತೆಗೆ ಶರಣ ಪರಂಪರೆಗೆ ಹೊಸದಿಕ್ಕನ್ನು ತೋರಿಸಿದವರು ಅಪ್ಪಣ್ಣನವರು.
12ನೇ ಶತಮಾನದಲ್ಲಿ ಜಾತಿರಹಿತ ಸಮಾಜವನ್ನು ನಿರ್ಮಿಸಲು ಹೋರಾಟ ಮಾಡಿದ ಬಸವಣ್ಣನವರ ಹಾಗೂ ಶರಣರ ದಾರಿಯಲ್ಲಿ ನಾವೆಲ್ಲ ನಡೆಯಬೇಕಾಗಿದೆ ಎಂದು ಹೇಳಿದರು.
ಶಿಕ್ಷಕ ಕೊಟ್ರೇಶ ಹೆಗಡ್ಯಾಳ ಶರಣ ಕುಂಬಾರ ಗುಂಡಯ್ಯನವರ ಕುರಿತು ಮಾತನಾಡಿ, ಕಾಯಕ ಹೇಗಿರಬೇಕು ಎನ್ನುವುದನ್ನು ಗುಂಡಯ್ಯನವರು ಸರಿಯಾಗಿ ತೋರಿಸಿಕೊಟ್ಟವರಾಗಿದ್ದರು ಎಂದು ಹೇಳಿದರು. ಕುಂಬಾರ ಗುಂಡಯ್ಯನವರ ಚರಿತ್ರೆಯನ್ನು ತಿಳಿಯಬೇಕಾದರೆ ಜಾನಪದ ಸಾಹಿತ್ಯವನ್ನು ಓದಬೇಕಾಗುತ್ತದೆ ಎಂದು ಹೇಳಿದರು.
ಕಾಯಕದಲ್ಲಿ ನಿರತನಾದರೆ ಗುರುಲಿಂಗ ಜಂಗಮ ಮರೆಯಬೇಕು ಎಂದು ಹೇಳಿದ ಬಸವಣ್ಣನವರ ವಿಚಾರಕ್ಕೆ ಕಿಂಚಿತ್ತು ಧಕ್ಕೆ ತರದ ರೀತಿ ಬದುಕಿದವರು ಕುಂಬಾರ ಗುಂಡಯ್ಯನವರು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮಿಗಳು ಮಾತನಾಡಿ, ಶರಣರ ನಡೆ ನುಡಿಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಬದುಕಿದರೆ ನಮ್ಮ ಬದುಕು ಸ್ವಾರ್ಥಕವಾಗುತ್ತದೆ ಎಂದು ಹೇಳಿದರು.
ಬಸವಣ್ಣನವರ ಕಾಯಕ ಸಿದ್ದಾಂತವನ್ನು ಪ್ರಾಮಾಣಿಕವಾಗಿ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದು ಹೇಳಿದರು.
ಇಷ್ಟಲಿಂಗದ ಕಲ್ಪನೆಯನ್ನು ಕೊಟ್ಟ ಬಸವಣ್ಣನವರನ್ನು ನಾವೆಂದಿಗೂ ಮರೆಯಬಾರದು. ಇಷ್ಟಲಿಂಗ ಜಾತಿಯ ಸಂಕೇತವಲ್ಲ ಅದು ದೇವರನ್ನು ಕಾಣುವ ಮಾರ್ಗ ಎಂದು ಹೇಳಿ ಎಲ್ಲರೂ ಇಷ್ಟಲಿಂಗ ದಾರಿಗಳಾಗಬೇಕೆಂದು ಹೇಳಿದರು.
ನಿವೃತ್ತ ಪ್ರಾಚಾರ್ಯರಾದ ಕೆ. ಬಿ. ಕಡೆಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರ ಕುರಿತು ಕಾರ್ಯಕ್ರಮಗಳು ಮಾಡುವ ಮೂಲಕ ಸಮಾಜದ ಋಣವನ್ನು ನಾವು ತೀರಿಸಬೇಕಾಗಿದೆ. ಶರಣರು ಯಾವುದೇ ಜಾತಿಗೆ ಸೀಮಿತರಾಗಿರದೇ ಇಡೀ ಮನುಕುಲಕ್ಕೆ ಸೀಮಿತವಾಗಿದ್ದಾರೆ. ಸಾಧ್ಯವಾದಷ್ಟು ನಾವು ಅವರ ದಾರಿಯಲ್ಲಿ ನಡೆಯುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಿಳಾ ಘಟಕದ ಅಧ್ಯಕ್ಷರಾದ ಮಹಾದೇವಿ ಬಿರಾದರ, ಮಹಾಂತೇಶ ಹಡಪದ, ಮಲ್ಲೇಶ ಕಡಕೋಳ, ವೀರಣ್ಣ ಮರ್ತುರ, ಅನುಸೂಯ ಹಡಪದ, ಸಾವಿತ್ರಿ ಕಲ್ಯಾಣಶೆಟ್ಟಿ, ಜಗದೇವಿ ಗುಂಡಳ್ಳಿ, ಶಾಂತಾ ಕುಂಬಾರ, ಲಲಿತಾ ಗಬ್ಬುರ, ತಾರಾ ಮಡಕೊಂಡ, ಪುಷ್ಪಾ ಹೂಗಾರ, ಲಕ್ಷ್ಮಿಬಾಯಿ ಹಡಪದ, ಅನಿತಾ ಬಾಗೇವಾಡಿ ಮೊದಲಾದವರು ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಎಂ.ಜಿ. ಆದಿಗೊಂಡ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿದರು. ರವಿ ಚಿಕ್ಕೊಂಡ ಸ್ವಾಗತಿಸಿದರು. ಬಸವರಾಜ ಹೆಗಡ್ಯಾಳ ಸ್ವಾಗತ ಗೀತೆ ಹಾಡಿದರು. ಶ್ರೀಶೈಲ ಶಿರಗುಪ್ಪಿ ವಂದಿಸಿದರು.
