ಮೈಸೂರು-ಚಾಮರಾಜನಗರ ವೀರಶೈವ-ಲಿಂಗಾಯತ ಮಠಾಧಿಪತಿಗಳ ಗೋಷ್ಠಿ
ಮಲೆ ಮಹದೇಶ್ವರ ಬೆಟ್ಟ
ಲಿಂಗಾಯತ ಕಾರ್ಯಕ್ರಮದಲ್ಲಿ ಸನಾತನ ಧರ್ಮದ ಬಗ್ಗೆ ಮಾತನಾಡಿದ ನ್ಯಾಯಾಧೀಶರಿಗೆ ವೇದಿಕೆಯಲ್ಲೇ ಪ್ರತ್ಯುತ್ತರ ಸಿಕ್ಕ ಗಮನ ಸೆಳೆಯುವಂತಹ ಘಟನೆ ನಡೆದಿದೆ.
ಹೈಕೋರ್ಟ್ ನ್ಯಾಯಧೀಶರಾದ ಇ.ಎಸ್.ಇಂದ್ರೇಶ್ ಸಾಲೂರು ಬೃಹನ್ಮಠದ ಆವರಣದಲ್ಲಿ ಮೈಸೂರು-ಚಾಮರಾಜನಗರ ವೀರಶೈವ-ಲಿಂಗಾಯತ ಮಠಾಧಿಪತಿಗಳ ಗೋಷ್ಠಿಯ ಉದ್ಘಾಟನೆಯನ್ನು ಆಗಸ್ಟ್ 2ರಂದು ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಭಾರತೀಯ ಧರ್ಮ ಸನಾತನ ಧರ್ಮವಾಗಿದೆ. ಮನುಷ್ಯತ್ವದ ಜೊತೆಗೆ ವಿಭಿನ್ನ ತತ್ವ ಪದ್ಧತಿಯನ್ನು ಒಳಗೊಂಡಿದೆ. ಎಲ್ಲರೂ ಸನ್ಮಾರ್ಗದಲ್ಲಿ ಸಾಗಲು ವೇದ, ಉಪನಿಷತ್, ಭಗವತ್ ಗೀತೆ ಹಾಗೂ ಪುರಾಣಗಳ ಸಾರ ಅಗತ್ಯ ಎಂದು ಹೇಳಿದರು, ಎಂದು ಮಾಧ್ಯಮ ವರದಿಗಳು ತಿಳಿಸಿವೆ.
‘ಒಂದು ಅವೈದಿಕ ಪರಂಪರೆಯ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳು ಸನಾತನದ ಬಗ್ಗೆ ಒತ್ತಿ ಮಾತನಾಡಿದ್ದು ಅನೇಕ ಸಾಮೀಜಿಗಳಿಗೆ ಮುಜುಗರ ತಂದಿತು,’ ಎಂದು ಗೋಷ್ಠಿಯಲ್ಲಿ ಭಾಗವಹಿಸಿದ್ದ ಒಬ್ಬರು ಪೂಜ್ಯರು ಹೇಳಿದರು.

ಕಾರ್ಯಕ್ರಮದ ಎರಡನೇ ದಿನ ಮಾತನಾಡಿದ ಮೈಸೂರಿನ ಪಂಚಗವಿ ಮಠದ ಪೂಜ್ಯ ಶ್ರೀಕಂಠ ಸ್ವಾಮೀಜಿ ನ್ಯಾಯಮೂರ್ತಿಗಳ ಮಾತಿಗೆ ಪ್ರತಿಕ್ರಿಯೆ ನೀಡಿದರು.
“ಭಾರತಕ್ಕೆ ದಿವ್ಯ ಪರಂಪರೆ ಇದೆ ಅಂತ ಎಲ್ಲರು ಹೇಳುತ್ತಾರೆ, ಅದನ್ನು ಒಪ್ಪಿಕೊಂಡಿದ್ದೇವೆ. ಈ ಪರಂಪರೆಯನ್ನು ಸನಾತನ ಪರಂಪರೆ ಎಂದು ಕರೆಯುತ್ತಾರೆ. ನೆನ್ನೆ ಉದ್ಘಾಟನೆ ಮಾಡಿದಂತಹ ನ್ಯಾಯಮೂರ್ತಿಗಳು ಅದರ ಪ್ರಸ್ತಾಪವನ್ನು ಮಾಡಿದರು,” ಹೇಳುತ್ತಾ ಶ್ರೀಕಂಠ ಸ್ವಾಮೀಜಿ ತಮ್ಮ ಉಪನ್ಯಾಸ ಶುರು ಮಾಡಿದರು.
ತಮ್ಮ ಮಾತನ್ನು ಮುಂದುವರೆಸಿ “ಸನಾತನ ಧರ್ಮ ಮನುಷ್ಯತ್ವದ ಜೊತೆಗೆ ವಿಭಿನ್ನ ತತ್ವ ಪದ್ಧತಿಯನ್ನು ಒಳಗೊಂಡಿದೆ,” ಎಂದು ಹೇಳಿದ್ದ ನ್ಯಾಯಮೂರ್ತಿಗಳ ಮಾತನ್ನು ವಿಮರ್ಶೆಗೆ ಒಳಪಡಿಸಿದರು.
“ಸನಾತನ ವ್ಯವಸ್ಥೆಯಲ್ಲಿ ಇಡೀ ಸಮಾಜವನ್ನು ಕಂಡುಕೊಳ್ಳಲು ಯಶಸ್ವಿಯಾಗಲಿಲ್ಲ ಎನ್ನುವ ನೋವಿದೆ. ಚಾತುರ್ವರ್ಣದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ಒಂದಾದರೆ, ಶೂದ್ರರೇ ಒಂದಾಗಿರುತ್ತಾರೆ.
ಚಾತುರ್ವರ್ಣದಿಂದ ಹೊರಗಾದ ಪಂಚಮ ವರ್ಣವನ್ನು ಬಹಳ ಕೀಳಾಗಿ ನಡೆಸಿಕೊಂಡಂತಹ ವ್ಯವಸ್ಥೆ ಅದು, ಎಂದು ವಿಷಾದದಿಂದ ಹೇಳಿದರು.
‘ಚಾತುರ್ವರ್ಣದ ಕರ್ಮ ಸಿದ್ಧಾಂತ ಕೆಲಸದ ಮೇಲೆ ಜಾತಿಯನ್ನು ನಿರ್ಧರಿಸುವಂತಹ ವ್ಯವಸ್ಥೆಯಾಗಿತ್ತು. 70ರಷ್ಟು ಜನರನ್ನು ಆ ವ್ಯವಸ್ಥೆ ಧರ್ಮ ವಂಚಿತರನ್ನಾಗಿ ಮಾಡಿತು.
ಶೂದ್ರರಲ್ಲಿ ಧರ್ಮ ಅನ್ನುವುದು ಇಲ್ಲವೇ ಇಲ್ಲ, ಅವರು ನಮ್ಮ ಸೇವಕರು ಅನ್ನುವಂತಹ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿತ್ತು. ಜೊತೆಗೆ ಸ್ತ್ರೀಯರಿಗೆ ಸಮಾನವಾದ ರೀತಿಯಲ್ಲಿ ಧರ್ಮವನ್ನು ಕೊಡಲಿಲ್ಲ. ಅಂತಹ ಶೋಷಣೆ ಇದ್ದಂತಹ ವ್ಯವಸ್ಥೆ ಅದು,’ ಎಂದು ಹೇಳಿದರು.
‘ಚಪ್ಪಲಿ ಹಾಕಿಕೊಳ್ತಾ ಇದ್ರು, ಚಪ್ಪಲಿಗೆ ಮೈಲಿಗೆ ಇರಲಿಲ್ಲ, ಆದರೆ ಅದನ್ನು ಹೊಲಿಯುವವರನ್ನು ಮುಟ್ಟಿದರೆ ಮೈಲಿಗೆಯಾಗುತ್ತಿತ್ತು.
ಮಡಕೆ ತಂದು ಅಡುಗೆ ಮಾಡ್ತಿದ್ರು, ಅದು ಮೈಲಿಗೆ ಆಗ್ತಾ ಇರಲಿಲ್ಲ, ಆದರೆ ಕುಂಬಾರ ಮೈಲಿಗೆ ಆಗ್ತಾ ಇದ್ದ.
ತೆಪ್ಪದಲ್ಲಿ ಕೂತು ನದಿ ದಾಟುತ್ತಾ ಇದ್ರು, ತೆಪ್ಪ ನದಿ ಮೈಲಿಗೆ ಆಗುತ್ತಿರಲಿಲ್ಲ, ಆದರೆ ಅಂಬಿಗ ಮೈಲಿಗೆ ಆದ. ಇಂತಹ ಕಾಯಕಗಳನ್ನು ಪಾಪದ ಫಲ ಅಂತ ಬಿಂಬಿಸಿದ್ದರು,’ ಎಂದು ಶ್ರೀಕಂಠ ಸ್ವಾಮೀಜಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
‘ಅಂತಹ ಸಂದರ್ಭದಲ್ಲಿ ಬಂದ ಬಸವಾದಿ ಪ್ರಮಥರು, ಧರ್ಮದ, ಸಮಾಜದ ಬೆಳವಣಿಗೆಗೆ ಎಲ್ಲರ ಅವಶ್ಯಕತೆಯಿದೆ. ಇವರು ಯಾರೂ ಅಸ್ಪ್ರಶ್ಯರಲ್ಲ, ಎಲ್ಲರು ಸ್ಪರ್ಶರು, ಎಲ್ಲರಲ್ಲೂ ಶಿವನಿದ್ದಾನೆ ಅಂತ ಪ್ರತ್ಯಕ್ಷವಾಗಿ ಪ್ರಾಮಾಣಿಸಿಕೊಟ್ಟರು.
ಚಪ್ಪಲಿ ಹೊಲಿಯುವವರ, ಮಡಕೆ ಮಾಡುವವರ, ದೋಣಿ ನಡೆಸುವವರ, ಹಗ್ಗ ನೇಯುವವರ ಕೈಯಲ್ಲಿ ವಚನ ಬರೆಸಿದರು. ಆ ತಾತ್ವಿಕ ಚಿಂತನೆಯ ವ್ಯವಸ್ಥೆಗೆ ಅವರನ್ನು ತಂದರು. ಆ ಹಿನ್ನಲೆಯ ಶರಣ ಪರಂಪರೆ 12ನೇ ಶತಮಾನದಿಂದ ಇಲ್ಲಿಯವರೆಗೆ ಉಳಿದುಕೊಂಡು ಬಂದಿರುವುದನ್ನು ನಾವು ನೋಡಬಹುದು.

ಆ ಪರಂಪರೆಯನ್ನು ಉಳಿಸಲು 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪನೆ ಮಾಡಿದರು. ಅದರ ಮೊದಲ ಪೀಠಾಧ್ಯಕ್ಷರು ಅಲ್ಲಮ ಪ್ರಭುಗಳು, ಅವರ ಪರಂಪತೆಯಲ್ಲಿ ಬಂದವರೇ ಮಹದೇಶ್ವರರು,” ಎಂದು ಹೇಳಿದರು.
ಮುಂದುವರೆದು ಸ್ವಾಮೀಜಿ ಮಹದೇಶ್ವರರು ಮತ್ತು ಅವರ ಸಮಕಾಲೀನರು ವಿಷಯದ ಮೇಲೆ ಉಪನ್ಯಾಸ ನೀಡಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಪವಾಡ ಬಸವಣ್ಣದೇವರ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ವಹಿಸಿದ್ದರು.

🙏🙏🙏
ಎಲ್ಲ ಸ್ವಾಮಿಜಿಗಳು ಇದೆ ತರಹ ವಿಷಯ ಮಂಡಿಸಬೇಕು ಜೊತೆಗೆ ಖಂಡಿಸಿ ಎಲ್ಲರೂ ಗಟ್ಟಿಯಾಗಿ ನಿಲ್ಲಬೇಕು. ಮತ್ತು ಬಾಲ ಬಿಚ್ಚಿದವರಿಗೆ ಬುದ್ದಿ ಕಲಿಸಬೇಕು.ಸ್ವಾಮಿಜಿಯವರ ನುಡಿ ಮೆಚ್ಚುವಂತದ್ದು.
ಶರಣು ಶರಣಾರ್ಥಿಗಳು
good jai basava darma
ಸ್ವಾಮೀಜಿಗಳು ತಕ್ಕ ಉತ್ತರ ನೀಡಿರುವುದು ಬಹಳ ಸಂತೋಷ. ಇವರಂತೆ ಎಲ್ಲರಿಗೂ ಈ ಮನೋಭಾವನೆ ಬರಬೇಕು. ಶ್ರೀ ಶ್ರೀಕಂಠಸ್ವಾಮೀಜಿಗಳಿಗೆ ಅನಂತ ಶರಣು 🙏
ಮೈಸೂರು-ಚಾಮರಾಜನಗರ. ವೀರಶೈವ ಲಿಂಗಾಯತ ಮಠಾಧೀಶರ ವಿಚಾರ ಗೋಷ್ಠಿಯಲ್ಲಿ ನ್ಯಾಯಾಧೀಶರು,ಸನಾತನ ಧರ್ಮದ ಬಗ್ಗೆ ವ್ಯಕ್ತ ಪಡಿಸಿದ ಅಭಿಪ್ರಾಯಕ್ಕೆ ಮಾರುತ್ತರ ನೀಡಿದ ಪಂಚ ಗಣಿ ಮಠದ ಪೂಜ್ಯ ಶ್ಶೀಕಂಠ ಸ್ವಾಮೀಜಿಯವರಿಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು.
ಶ್ರೀ ಶ್ರೀ ಕಂಟಸ್ವಾಮಿಗಳಿಗೆ ಅನಂತ ಶರಣು ಶರಣಾರ್ಥಿ
ಪರ ಧರ್ಮದ ಮೇಲೆ ಎಷ್ಟೇ ಪ್ರೀತಿ ಇರಲಿ, ಸ್ವಾಧರ್ಮದ ಮೇಲೆ ಅಷ್ಟೇ ಅಭಿಮಾನ, ಸ್ವಾಭಿಮಾನ ಇರಬೇಕು.
ಬಹುತೇಕ ಸನಾತನಿಗಳು ಯಾವುದೇ ವೇದಿಕೆಯಾಗಲಿ ಭಾರತ ದೇಶದ ಎಲ್ಲಾ ತತ್ವ,,ಸಿದ್ಧಾಂತ, ಪರಂಪರೆಗಳನ್ನು ತಮ್ಮ ಮಾತಿನ ಜಾಣತನದಿಂದ ಮತ್ತೆ ಸನಾತನಕ್ಕೆ ಲೇಪನ ಮಾಡುತ್ತಾರೆ.
ಅದೇ ರೀತಿ ನಮ್ಮ ಶ್ರೀ ಕಂಟೇಶ್ವರ ಸ್ವಾಮಿಗಳು ತಮ್ಮದೇ ಆದ ರೀತಿಯಲ್ಲಿ ಬಸವದಿ ಪ್ರಮಥರ ವಿಚಾರಧಾರೆಗಳನ್ನು ತುಂಬಾ ಅಭಿಮಾನದಿಂದ ಪ್ರಸ್ತಾಪ ಮಾಡುವ ಮೂಲಕ ವೈದಿಕ ಮತ್ತು ಅವೈದಿಕ ಪರಂಪರೆಗಳಿಗೆ ಇರುವ ಸೂಕ್ಷ್ಮತೆಯನ್ನು ತೆರೆದಿಡುವ ದಿಟ್ಟತೆಯನ್ನು ತೋರಿದ್ದಾರೆ.
ಗುರುಗಳ ಈ ದಿಟ್ಟ ನಡೆಯಂತೆ ಇನ್ನುಳಿದ ಮಠಾಧೀಶರು ಅನುಸರಿಸಬೇಕಿದೆ. ಶರಣು ಶರಣಾರ್ಥಿಗಳು 🙏
ಲಿಂಗಾಯತ ನಿಜ ಮಾತು ಎದೆಯಿಂದ ಆಡಿದ್ದು ಧನ್ಯವಾದಗಳು 👌🏻👌🏻👏🏻ಶರಣು 👏🏻