ಹೊಳಲ್ಕೆರೆ:
ಒಂಟಿಕಂಬದ ಮುರುಘಾಮಠದಲ್ಲಿ ಲಿಂಗೈಕ್ಯ ಜಗದ್ಗುರು ಪೂಜ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸ್ಮರಣೋತ್ಸವದ ಅಂಗವಾಗಿ ನಡೆದ ಶರಣತತ್ವ ಶಿಕ್ಷಣ ಶಿಬಿರದ ಎರಡನೇ ದಿನದ ಕಾರ್ಯಕ್ರಮದಲ್ಲಿ ಹೊಸದುರ್ಗದ ಬಸವಾಶ್ರಮದ ಪೂಜ್ಯ ಅಕ್ಕಮಹಾದೇವಿ ಮಾತಾಜಿಯವರು ಉಪನ್ಯಾಸ ನೀಡಿದರು.
“ಐಕ್ಯಸ್ಥಳವನ್ನು ಸಾಧಿಸುವ ಮೊದಲನೆಯ ಮೆಟ್ಟಿಲೇ ಭಕ್ತಸ್ಥಳ. ಭಕ್ತಿ, ಸೇವೆ, ಶಿವಸ್ಮರಣೆ ಮತ್ತು ಶರಣಧರ್ಮದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಆತ್ಮೋನ್ನತಿ ಸಾಧ್ಯವಾಗುತ್ತದೆ”ಎಂದು ಅವರು ಹೇಳಿದರು. ಭಕ್ತ ಮಹೇಶ್ವರ ತತ್ವ, ಶಿವಭಕ್ತಿ ಮತ್ತು ಸೇವಾಭಾವದ ಮಹತ್ವವನ್ನು ವಿವರಿಸಿ, ಶರಣರ ಆದರ್ಶಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶಕವಾಗಿವೆ ಎಂದು ತಿಳಿಸಿದರು.

ಚಿತ್ರದುರ್ಗದ ಛಲವಾದಿ ಗುರುಪೀಠದ ಪೂಜ್ಯ ಬಸವನಾಗಿದೇವ ಮಹಾಸ್ವಾಮಿಗಳು, ಪ್ರಸಾದಿ ಮತ್ತು ಪ್ರಾಣಲಿಂಗಿ ಸ್ಥಳಗಳ ತತ್ವವನ್ನು ವಿದ್ಯಾರ್ಥಿಗಳಿಗೆ ಸರಳವಾಗಿ ಪರಿಚಯಿಸಿದರು. ಶರಣರ ಆಚಾರ-ವಿಚಾರಗಳು ಕೇವಲ ಧಾರ್ಮಿಕ ತತ್ವಗಳಲ್ಲ, ಅವು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಮಾರ್ಗದರ್ಶಕಗಳಾಗಿವೆ ಎಂದು ಅವರು ತಿಳಿಸಿದರು.
“ಶರಣರ ಸತ್ಯನಿಷ್ಠೆ, ಸೇವಾಭಾವ, ಕಾಯಕ, ದಾಸೋಹ ಮತ್ತು ಶಿಸ್ತುಬದ್ಧ ಜೀವನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆಗ ಶಿಕ್ಷಣದ ಜೊತೆಗೆ ಉತ್ತಮ ಮಾನವೀಯ ಮೌಲ್ಯಗಳೂ ಬೆಳೆಯುತ್ತವೆ”ಎಂದು ಸ್ವಾಮಿಗಳು ಹೇಳಿದರು. ವಿದ್ಯಾರ್ಥಿಗಳಿಗೆ ಉಪಯೋಗವಾಗುವ ರೀತಿಯಲ್ಲಿ ಶರಣಧರ್ಮದ ತತ್ವಗಳನ್ನು ಅವರು ಅರ್ಥಗರ್ಭಿತವಾಗಿ ವಿವರಿಸಿದರು.
ಶರಣ ಮತ್ತು ಐಕ್ಯಸ್ಥಳದ ಮಹತ್ವ ವಿವರಿಸಿದ ಬಸವಲಿಂಗ ಮೂರ್ತಿ ಸ್ವಾಮಿಗಳು.

ಉಳವಿಯ ಮುರುಘಾಮಠದ ಪೂಜ್ಯ ಬಸವಲಿಂಗ ಮೂರ್ತಿ ಸ್ವಾಮಿಗಳು ಶರಣಸ್ಥಳ ಮತ್ತು ಐಕ್ಯಸ್ಥಳದ ತಾತ್ವಿಕ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಶರಣಸ್ಥಳದಲ್ಲಿ ಭಕ್ತನು ತನ್ನ ಅಹಂಕಾರ ಮತ್ತು ಸ್ವಾರ್ಥಗಳನ್ನು ತ್ಯಜಿಸಿ ಶಿವನ ಇಚ್ಛೆಯಂತೆ ಬದುಕುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಶರಣರ ಆಚಾರ, ವಿಚಾರ ಮತ್ತು ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಹಂತವೇ ಶರಣಸ್ಥಳವಾಗಿದೆ ಎಂದು ಅವರು ತಿಳಿಸಿದರು.
ಐಕ್ಯಸ್ಥಳವು ಕೇವಲ ದೇಹದ ಅಂತ್ಯವಲ್ಲ, ಬದುಕಿರುವಾಗಲೇ ಶಿವನೊಂದಿಗೆ ಏಕತ್ವದ ಅನುಭವವನ್ನು ಪಡೆಯುವ ಪರಮ ಆಧ್ಯಾತ್ಮಿಕ ಸ್ಥಿತಿಯಾಗಿದೆ. ಅಹಂಕಾರ, ಆಸೆ ಮತ್ತು ದ್ವೇಷಗಳನ್ನು ಮೀರಿ ಪರಮ ಶಾಂತಿ ಹಾಗೂ ಶಿವಾನುಭವದ ಸ್ಥಿತಿಯನ್ನು ಸಾಧಿಸುವುದೇ ಐಕ್ಯಸ್ಥಳದ ಉದ್ದೇಶವಾಗಿದೆ ಎಂದು ಪೂಜ್ಯರು ವಿವರಿಸಿದರು.
ದಾವಣಗೆರೆ ಜಾಗತಿಕ ಲಿಂಗಾಯತ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷ ಮತ್ತು ಪರಿಸರವಾದಿ ಶರಣ ಅವರಗೆರೆ ರುದ್ರಮುನಿಯವರು ಪರಿಸರ ಗೀತೆಯನ್ನು ಹೇಳಿದರು.

ಶಿಬಿರದ ಉಸ್ತುವಾರಿ ಹೊತ್ತಿರುವ ಒಂಟಿಕಲ್ಲು ಮಠದ ಪೂಜ್ಯ ತಿಪ್ಪೇರುದ್ರಸ್ವಾಮಿಗಳು ಕಾರ್ಯಕ್ರಮದ ನಿರೂಪಣೆಯನ್ನು ಯಶಸ್ವಿಯಾಗಿ ನೆರವೇರಿಸಿ, ಶಿಬಿರದ ಸುಸೂತ್ರ ನಿರ್ವಹಣೆಗೆ ಸಹಕರಿಸಿದರು.

ಹೊಳಲ್ಕೆರೆಯ ಶರಣ ತತ್ವ ಚಿಂತಕರು ಹಾಗೂ ಕೊಟ್ರೆ ನಂಜಪ್ಪ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಡಾ. ಜಿ.ವಿ. ಮಂಜುನಾಥ ಅವರು ಶಿಬಿರದ ಸಮಗ್ರ ಕಾರ್ಯಕ್ರಮದ ಯೋಜನೆ, ಸಂಯೋಜನೆ ಹಾಗೂ ನಿರ್ವಹಣೆಯನ್ನು ವಹಿಸಿಕೊಂಡರು.

ಶಿಕಾರಿಪುರದ ಬಸವಾಶ್ರಮದ ಶರಣಾಂಬಿಕೆ ಮಾತಾಜಿ, ಧಾರವಾಡದ ಅಕ್ಕಮಹಾದೇವಿ ಆಶ್ರಮದ ಶರಣಿ ಶಾಂತಾದೇವಿ ಮಾತಾಜಿಯವರು, ತುರುವೇಕೆರೆ ಡಿ ಕಲ್ಕೆರೆಯ ಪೂರ್ಣಾನಂದ ಸ್ವಾಮಿಗಳವರು, ಹೊಳಲ್ಕೆರೆ ಪಟ್ಟಣದ ಎಸ್.ಜೆ.ಎಂ. ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಶರಣತತ್ವ ಚಿಂತಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಂವಾದಗಳನ್ನು ನಡೆಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
