ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 19
ಕಲಬುರಗಿ:
ತೊಡೆಯ ಮೇಲೆ ಅಜಗಣ್ಣನ ಅರಳ್ದ ತಲೆಯನು ಹಿಡಿದು ಕುಳಿತ ಮುಕ್ತಾಯಕ್ಕನಿಗೆ ಪ್ರಾಕೃತಿಕ ಧರ್ಮದ ಸತ್ಯವನ್ನರುಹಿದ ಅಲ್ಲಮರು ಹೀಗೆ ಲೋಕ ಪರ್ಯಟನ ಮಾಡುತ್ತ, ಅಲ್ಲಲ್ಲಿ ಅನುಷ್ಠಾನ ಮಾಡುತ್ತ, ಬದುಕಿನ ಶರೀರ ಕರಗುವ ಮುನ್ನ ಗುಹೇಶ್ವರನ್ನು ಪೂಜಿಸುವಂತೆ ಜನರಿಗೆ ತಿಳಿ ಹೇಳಿ ಬೆಳಗಾವಿಯಿಂದ ಅಖಂಡ ಕರ್ನಾಟಕದ ಗಡಿಭಾಗವಾಗಿರುವ ಈಗಿನ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಬಂದು ನಿಂತರು.
“ಹಲವು ದೆಸೆಯಲಿ ಚಿತ್ರ ಪತ್ರದ ಚಲುವನಾಗಿರೆ ಪರಿಪರಿಯ ದೇಗುಲವ ಮಾಡಿಸುತ್ತಿಪ್ಪ ಗುಡ್ಡಗಲೆಕ್ಕವಿಂಡುಗಳ ನೆಲನೆ ಬೆಸಲಾದಂತೆಮಿಗೆ ಮಣ್ಗೆಲಸ ದೊಡ್ಡದು ಬಂಡಿಗಾರರು ಕುಲುಕುಟಿಗರಿದ್ದೆಡೆಯ ಸೊನ್ನಾಲಾಪುರಕ್ಕೆ ಪ್ರಭು ಬಂದ” ಎಂಬುದನ್ನು ಚಾಮರಸರು ಮೇಲಿನ ನುಡಿಯಲ್ಲಿ ತಿಳಿಸುತ್ತಾರೆ ಅಲ್ಲಮರು.
ಸೊಲ್ಲಾಪುರದ ಹೊರ ವಲಯದಲ್ಲಿ ಕೆರೆ, ಕಟ್ಟೆ, ಬಾವಿ ಕಟ್ಟುವ ಕೆಲಸದಲ್ಲಿ ತೊಡಗಿದವರನ್ನು ಕಾಣುತ್ತಾರೆ. ‘ಧರೆಯ ಮೇಲೊಂದು ಪಿರದಪ್ಪ ಸಂತೆಯ ನೆರವಿಗೆ ಬಂದವರನೇನೆಂಬೆ?’ ದೇವರಿಗೆ ಸಹಜ ಭಾವ, ಸದ್ಭಕ್ತಿ ಮಾತ್ರ ಪ್ರೀತಿ. ನಾವೆಲ್ಲ ಈ ಸಂತೆಯಲ್ಲಿ ವ್ಯಾಪಾರ ಮಾಡಲು ಬಂದವರು. ಆ ದೇವರು ಕೊಡದಿದ್ದರೆ ನಮ್ಮ ಯಾವ ವ್ಯವಹಾರವೂ ನಡೆಯುವುದಿಲ್ಲ ಇಲ್ಲಿ. ನಾವೆಲ್ಲ ವ್ರತಾ ವಿಳಾಸವಾದರೆ ಹೇಗೆ? ಅರೆ ಮರುಳನಾದ ಶಿವನನ್ನು ಹೀಗೆ ಪೂಜಿಸಬಹುದೆ? ಎಂದು ಎಚ್ಚರಿಸುತ್ತಾನೆ.
ಸತ್ತ ಬಳಿಕ ಮುಕ್ತಿ ಕಾಣುವದಾದರೆ ಅದನ್ನು ಪಡೆದುಕೊಂಡು ನಾವೇನು ಮಾಡಬೇಕಿದೆ. ಇರುವಾಗಲೇ ಮುಕ್ತಿ ಪದವಿ ಪಡೆಯಬೇಕಾದರೆ ಶಿವಪಥ ಅರಿಯಬೇಕು. ನೀವು ಕಟ್ಟುತ್ತಿರುವ ಕೆರೆ, ದೇವಸ್ಥಾನಗಳು ಅದು ಕೇವಲ ಭೌತಿಕವಾದವುಗಳು. ಏ ಹೆಡ್ಡರೆ ಎಲ್ಲಿ ನಿಮ್ಮ ವಡ್ಡ ಸಿದ್ಧರಾಮ ಎಂದು ಕೇಳುತ್ತಾರೆ.
ಸಿದ್ಧರಾಮ ಅಲ್ಲಿಗೆ ಬಂದಾಗ “ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ ಬಲಿದು ಷಡ್ವಿಧಭಕ್ತಿಯೆಂಬ ಸೋಪಾನದಿಂದ ಪರಮಾನಂದವೆಂಬ ಜಲವ ತುಂಬಿ ಕೆರೆಯ ಕಟ್ಟಬಲ್ಲವರನಾರನೂ ಕಾಣೆ! ನಾನು ಕಟ್ಟಿದ ಕೆರೆ ಸ್ಥಿರವಾಯಿತ್ತು ಗುಹೇಶ್ವರಾ ನಿಮ್ಮಾಣೆ” ಎಂದು ತಿಳಿಸುತ್ತಾರೆ.
ಈ ವಿಷಯದಲ್ಲಿ ಸಿದ್ಧರಾಮ ಮತ್ತು ಅಲ್ಲಮರ ನಡುವೆ ಮಾತಿನ ಮಂಥನ ನಡೆಯುತ್ತದೆ. ಅಲ್ಲಮರ ಅಧ್ಯಾತ್ಮದ ಮೇರು ವ್ಯಕ್ತಿತ್ವ ಕಂಡ ಸಿದ್ಧರಾಮರು ‘ನಿಮ್ಮನ್ನು ಕಂಡು ಎನ್ನಂತರಂಗದ ಬೆಳಗಾಯಿತು. ಎನಗೆ ಲಿಂಗಸುಖದ ಮಹಾ ಸತ್ಯದ ಅರಿವಾಯಿತು. ನನ್ನನ್ನು ಅರಿವಿನ ಮಾರ್ಗಕ್ಕೆ ಕರೆದುಕೊಂಡು ಹೋಗಿರಿ ಎಂದು ಪ್ರಾರ್ಥಿಸುತ್ತಾನೆ. ನಾವೆಲ್ಲರೂ ಬಸವಣ್ಣನವರು ಇರುವ ಕಲ್ಯಾಣಕ್ಕೆ, ಕಲ್ಯಾಣದ ಮಾರ್ಗಕ್ಕೆ ಹೋಗಬೇಕಿದೆ ಎಂದು ಅಲ್ಲಮರು ಹೇಳುತ್ತಾರೆ.
