ಬಸವಕಲ್ಯಾಣ:
ಆರನೆಯ ಶರಣ ಸಂಗಮ ಕಾರ್ಯಕ್ರಮ 108 ಅಡಿ ಎತ್ತರದ ಬಸವ ಪುತ್ಥಳಿ ಆವರಣದಲ್ಲಿ ನಡೆಯಿತು.
ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಎಸ್. ಕಾಂಗೆ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಅಕ್ಕಮಹಾದೇವಿ ಕನ್ಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶಿವಕಾಂತ ನೀಲ್ಮಠ ಮುಖ್ಯ ಅತಿಥಿಗಳಾಗಿ, ಪೂಜ್ಯ ಸಿದ್ದರಾಮೇಶ್ವರ ಸ್ವಾಮೀಜಿ ಮತ್ತು ಪೂಜ್ಯ ಬಸವರತ್ನಾ ಮಾತಾಜಿ ಸಾನಿಧ್ಯ ಮತ್ತು ಅದ್ಯಕ್ಷತೆ ವಹಿಸಿದ್ದರು.

ಶರಣ ಸಂಗಮದ ವಿಶೇಷ ವಚನ ಅನುಭಾವ ನೀಡಿದ ಡಾ. ಸವಿತಾ ವೀರಸೆಟ್ಟಿ ಯರನಳ್ಳೆ ಅವರು, ಹನ್ನೆರಡನೆ ಶತಮಾನದ ಶರಣರ ವಚನ ಸಾಹಿತ್ಯ, ಕೇವಲ ಸಾಹಿತ್ಯ ಸೃಷ್ಟಿಸುವ ಸಲುವಾಗಿ ಬರೆದ ಸಾಹಿತ್ಯವಾಗಿರಲಿಲ್ಲ. ಬದಲಾಗಿ ಶರಣರು ತಮ್ಮ ನಿಜ ಜೀವನದಲ್ಲಿ ಮೌಲ್ಯಾಧಾರಿತ ಬಾಳುವೆ ಮಾಡಿ, ನಡೆದು ಆಚರಿಸಿದಾಗ ಹೊರಹೊಮ್ಮಿದ, ನಡೆ ನುಡಿ ಒಂದಾದ ಹೃದಯಾಂತರಾಳದ ಅನುಭವದ ನುಡಿ ವಚನ ಸಾಹಿತ್ಯವಾಗಿದೆ.

ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಲೆಂದು ಕೊಟ್ಟು ಹೋದ ವಚನ ಸಾಹಿತ್ಯ. ಇಂದಿನ ಕೆಲವರು ಕೇವಲ ಸಾಹಿತ್ಯ ಸೃಷ್ಟಿಗಾಗಿ ರಚಿಸಿದ ಕೃತಕ ಸಾಹಿತ್ಯದಂತಲ್ಲ. ಇದು ಮಾನವನ ಜೀವನವನ್ನು ಧಿವ್ಯವಾಗಿಸುವ ಸಾಹಿತ್ಯ. ಇದನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಬೇಕು.

ಬಹಿರಂಗದ ಶುದ್ದಿಗೆ ಬೇಕಾದಷ್ಟು ಪರಿಕರ ಸಾಧನಗಳು ಇವೆ. ಆದರೆ ಅಂತರಂಗದ ಅಭೌತಿಕ ಸೂಕ್ಷಾತಿಸೂಕ್ಷ ಮನಶುದ್ದಿಗೆ ಶರಣರ ಅನುಭಾವವಾದ ವಚನ ಸಾಹಿತ್ಯ ಧಿವ್ಯ ಔಷಧಿ ಎಂದು ನುಡಿದರು.

ಲಾವಣ್ಯ ಮಾತಾಜಿ ಅವರು ಮಾತನಾಡಿ, ಆಗಸ್ಟ್ 15 ರಂದು ಪ್ರತಿಯೊಬ್ಬರೂ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಬೇಕು ಮತ್ತು ಬರುವ ಅಕ್ಟೋಬರ್ 24 ರಿಂದ 26ರವರೆಗೆ ನಡೆಯಲಿರುವ 25 ನೆಯ ಕಲ್ಯಾಣಪರ್ವ ರಜತ ಮಹೋತ್ಸವಕ್ಕೆ ಸಿದ್ದತೆ ಮಾಡಿಕೊಳ್ಳಬೇಕಿರುವುದರ ಬಗ್ಗೆ ಹೇಳಿದರು.
ಶಿವರಾಜ ನೀಲಕಂಠೆ ಮುಖ್ಯಶಿಕ್ಷಕರು ಸ್ವಾಗತಿಸಿದರು. ಮಮತ ಶರಣಪ್ಪ ಬುಸೆ ವಚನಗಾಯನ ಮಾಡಿದರು. ರಾಣಿ ವೀರಭದ್ರಪ್ಪ ವಡ್ಡೆ ನಿರೂಪಣೆಯ ಮಾಡಿದರು.
