ವಿಜಯಪುರ:
ಎಂ.ಬಿ. ಪಾಟೀಲರು ಕೈಗಾರಿಕಾ ಸಚಿವರಾಗಿ ಕರ್ನಾಟಕಕ್ಕೆ ವಿದೇಶಿ ಬಂಡವಾಳವನ್ನು ಸೆಳೆಯುವ ಮೂಲಕ ರಾಜ್ಯವನ್ನು ದೇಶದ ಪ್ರಮುಖ ಹೂಡಿಕೆ ತಾಣವನ್ನಾಗಿಸಲು ಶ್ರಮಿಸುತ್ತಿದ್ದಾರೆ. ಅವರ ಜನಸೇವೆಯನ್ನು ಜನರು ಗುರುತಿಸಿ ಸದಾ ಬೆಂಬಲಿಸಿ, ಅವರ ಕೈ ಬಲಪಡಿಸಬೇಕೆಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಈಚೆಗೆ ಹಂಜಗಿ ಸಿದ್ದೇಶ್ವರ ಹಾಗೂ ಹಿರೋಡೇಶ್ವರ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಕನಕದಾಸ ವೃತ್ತ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಂ.ಬಿ. ಪಾಟೀಲ ಅವರು ಒಳ್ಳೆಯ ನಾಯಕರಾಗಿದ್ದು, ಜಲಸಂಪನ್ಮೂಲ ಸಚಿವರಾಗಿದ್ದಾಗ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಈ ಭಾಗದ ರೈತರ ಬದುಕಿಗೆ ಬೆಳಕು ಮೂಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಜನರು ನಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ನೀಡಿದ ಪ್ರೀತಿ, ಶಕ್ತಿ ಮತ್ತು ಬೆಂಬಲವನ್ನು ತಮ್ಮ ಮೇಲೂ ಮುಂದುವರಿಸಿ ಅಭಿವೃದ್ಧಿಗೆ ಕೈಜೋಡಿಸಬೇಕು. ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರದ ಪ್ರಯತ್ನದ ಜೊತೆಗೆ ಜನರ ಸಹಕಾರವೂ ತುಂಬಾ ಅಗತ್ಯ ಎಂದು ಮನವಿ ಮಾಡಿದರು.
ಕನಕದಾಸ ಅವರಂತಹ ಶ್ರೇಷ್ಠರ ಸಮಾಜಮುಖಿ ಚಿಂತನೆಗಳು ಇಂದಿಗೂ ನಮಗೆಲ್ಲರಿಗೂ ದಾರಿ ತೋರಿಸುತ್ತಿವೆ. ಎಲ್ಲ ವರ್ಗದ ಜನರನ್ನು ಒಟ್ಟಿಗೆ ಸೇರಿಸಿಕೊಂಡು ಅಭಿವೃದ್ಧಿಯ ಹಾದಿಯಲ್ಲಿ ಮುಂದೆ ಸಾಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕನಕ-ಬಸವ ಚಿಂತನೆಗಳು ಸಮಾಜಕ್ಕೆ ಸದಾ ದಾರಿದೀಪ ಎಂದು ಅವರು ತಿಳಿಸಿದರು.
ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮಾತನಾಡುತ್ತ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ತತ್ವಾದರ್ಶಗಳು ನಮಗೆಲ್ಲ ಮಾರ್ಗದರ್ಶನವಾಗಿವೆ. ಬಿಜ್ಜರಗಿ ಅವರ ಜನ್ಮಭೂಮಿಯಾಗಿದ್ದು, ಅವರು ಬದುಕಿನುದ್ದಕ್ಕೂ ನೀಡಿದ ಸಂದೇಶಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ.

ನಮ್ಮ ಮನಸ್ಸು, ಮನೆ, ಓಣಿ ಹಾಗೂ ಗ್ರಾಮ ಸ್ವಚ್ಛವಾಗಿರಬೇಕು ಎಂದು ಐದು ದಶಕಗಳ ಕಾಲ ಪ್ರವಚನಗಳ ಮೂಲಕ ಹೇಳಿದವರು ಸಿದ್ದೇಶ್ವರ ಸ್ವಾಮೀಜಿ, ಇದೇ ಆಶಯಗಳಂತೆ ಕೇಂದ್ರ ಸರ್ಕಾರ ‘ಸ್ವಚ್ಛ ಭಾರತ ಅಭಿಯಾನದ ಮೂಲಕ ಜಾರಿಗೆ ತಂದಿದೆ. ಬಸವ ಹಾಗೂ ಕನಕದಾಸರ ಚಿಂತನೆಗಳ ಪ್ರೇರಣೆಯಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜನಪರ ಯೋಜನೆಗಳನ್ನು ಜಾರಿಗೆ ತಂದರು ಎಂದು ಹೇಳಿದರು.
ತಾವು ಜಲಸಂಪನ್ಮೂಲ ಸಚಿವರಾಗಿದ್ದ ಈ ಭಾಗದಲ್ಲಿ ಜಲಕ್ರಾಂತಿ ಕೈಗೊಳ್ಳಲು ಕಾರಣವಾಗಿದ್ದು, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಸಂಪೂರ್ಣ ಸಹಕಾರದಿಂದ. ಸಿದ್ದರಾಮಯ್ಯ ಅವರು ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ಅವರ ಪುತ್ರ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.

ಶ್ರೀ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮೀಜಿ, ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ಶ್ರೀ ಮಾಳಿಂಗರಾಯ ಮಹಾರಾಜರು, ಶ್ರೀ ಸೋಮೇಶ್ವರ ಮಹಾರಾಜರು, ಡಾ. ಗಂಗಾಧರ ಸಂಬಣ್ಣ, ಸಿದ್ದು ಗೌಡನವರ, ಸೋಮನಾಥ ಬಾಗಲಕೋಟ, ಬಿ.ಡಿ. ಪಾಟೀಲ, ಭೀಮರಾಯ ಮಸಳಿ, ಎಂ.ಎಸ್. ಲೋಣಿ, ಆರ್.ಎಂ. ಮೆಂಡೇಗಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
