ಚಿತ್ರದುರ್ಗ:
ಶಿಕ್ಷಣ ಸಮಾಜದ ಪ್ರಗತಿಗೆ ಮೂಲಾಧಾರ ಎನ್ನುವುದನ್ನು ಮನಗಂಡು ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ಕಾಳಜಿಯಿಂದ ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಎಸ್.ಜೆ.ಎಂ. ವಿದ್ಯಾಪೀಠವನ್ನು ಸ್ಥಾಪಿಸುವ ಮೂಲಕ ನೂರಾರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಮಧ್ಯ ಕರ್ನಾಟಕದ ಬಯಲು ಸೀಮೆಗೆ ಶಿಕ್ಷಣ ಸಂಜೀವಿನಿಯಾಗಿ ತಂದರು ಎಂದು ಎಸ್.ಜೆ.ಎಂ. ಪಾಲಿಟೆಕ್ನಿಕ್ನ ಹಿರಿಯ ಅಧ್ಯಾಪಕ ಪಿ.ಎ. ರಘು ಸ್ಮರಿಸಿದರು.
ಅವರು ಇಲ್ಲಿನ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ನಲ್ಲಿ ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ೩೨ನೇ ಸ್ಮರಣೋತ್ಸವದಲ್ಲಿ ಶ್ರೀಗಳವರ ಸಮಾಜೋಧಾರ್ಮಿಕ ಕೊಡುಗೆಯನ್ನು ಸ್ಮರಿಸುತ್ತ, ಪ್ರಾಥಮಿಕ ಹಂತದಿಂದ ಉನ್ನತಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಇದರೊಂದಿಗೆ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ, ನೈತಿಕತೆ, ಶಿಸ್ತು, ದೇಶಪ್ರೇಮ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಉದ್ದೀಪಿಸಲು ನಿರಂತರ ಶ್ರಮ ಅವರಿಂದ ನಡೆದಿತ್ತು.

ಶ್ರೀ ಬೃಹನ್ಮಠಕ್ಕೆ ತನ್ನದೇ ಆದ ಸಾಂಸ್ಕೃತಿಕ ಧಾರ್ಮಿಕ ಸಾಮಾಜಿಕ ಸೇವೆಗಳ ಜವಾಬ್ದಾರಿ ಇತ್ತು. ಅದರೊಂದಿಗೆ ಶೈಕ್ಷಣಿಕವಾಗಿ ತೊಡಗಿಸಿಕೊಳ್ಳಲು ಶಿಕ್ಷಣಸಂಸ್ಥೆ ಹುಟ್ಟು ಹಾಕಿದರು. ಚಿತ್ರದುರ್ಗದಂತಹ ಹಿಂದುಳಿದ ಪ್ರದೇಶಕ್ಕೆ ಈ ಶಿಕ್ಷಣ ಸಂಸ್ಥೆಗಳಿಂದ ಅನೇಕ ಪ್ರತಿಭಾನ್ವಿತರಿಗೆ ಆಸರೆಯಾಯಿತು ಎಂದು ಸ್ವಾಮೀಜಿ ಅವರ ವಿವಿಧ ಸೇವಾ ಕಾರ್ಯಗಳನ್ನು ನೆನಪಿಸಿದರು.
ಸಮಾರಂಭದಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥ ಮೋಹನಕುಮಾರ ಮಾತನಾಡಿ, ಶ್ರೀಗಳವರ ದೂರದೃಷ್ಟಿಯ ಫಲವಾಗಿ ವೃತ್ತಿಪರ ಕೋರ್ಸುಗಳನ್ನು ಅಂದಿನ ಕಾಲದಲ್ಲೇ ಆರಂಭಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಿದ್ದು ಮನನೀಯ ಎಂದು ಹೇಳಿದರು.
ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಪಿ.ಬಿ. ರಾಜೇಶ್ ಮಾತನಾಡಿ, ಹಿಂದೆ ಚಿತ್ರದುರ್ಗದಿಂದ ಉನ್ನತ ವ್ಯಾಸಂಗಕ್ಕಾಗಿ ದೂರದ ನಗರಪ್ರದೇಶಗಳಿಗೆ ಹೋಗಬೇಕಾಗಿತ್ತು. ಅದು ಸ್ಥಿತವಂತರಿಗೆ ಮಾತ್ರ ಸಾಧ್ಯವಾಗಿದ್ದನ್ನು ಅರಿತ ಶ್ರೀಗಳು ಬಡ ಮಧ್ಯಮ ವರ್ಗದವರಿಗೂ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣ ಸೌಲಭ್ಯ ದೊರೆಯುವಂತಾಗಬೇಕೆಂಬ ಸದಾಶಯದಿಂದ ಎಸ್.ಜೆ.ಎಂ. ವಿದ್ಯಾಪೀಠ ಸ್ಥಾಪಿಸಿದ ಬಗ್ಗೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಎಸ್.ವಿ. ರವಿಶಂಕರ ಮಾತನಾಡಿ, ಸಮಾಜಕ್ಕೆ ಅನುಪಮ ಸೇವೆ ಸಲ್ಲಿಸಿದವರನ್ನು ಸ್ಮರಣೆ ಮಾಡುವುದು ನಾಗರಿಕ ಸಮಾಜದ ಲಕ್ಷಣ. ಶ್ರೀಗಳು ಉದಾತ್ತ ಆಲೋಚನೆಗಳನ್ನಿಟ್ಟುಕೊಂಡು ಸಾಮಾಜಿಕ ಕಾರ್ಯಗಳ ಜತೆಗೆ ಶೈಕ್ಷಣಿಕ ಕ್ಷೇತ್ರಕ್ಕೂ ಆದ್ಯತೆ ನೀಡಿದರು. ಕರ್ನಾಟಕದಲ್ಲಿ ಚಿತ್ರದುರ್ಗದ ಹೆಸರು ಮುಂಚೂಣಿಯಲ್ಲಿರಲು ಶ್ರೀಗಳ ಪರಿಶ್ರಮ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಗಣಕ ವಿಭಾಗದ ಮುಖ್ಯಸ್ಥೆ ನಳಿನಾಕ್ಷಿ, ಕಛೇರಿ ಅಧೀಕ್ಷಕ ಸಿ.ಎನ್. ಮೋಹನ್, ಗ್ರಂಥಪಾಲಕ ಎಂ. ವೀರಯ್ಯ ಸೇರಿದಂತೆ ಕಾಲೇಜಿನ ಬೋಧಕ – ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾರಂಭದಲ್ಲಿ ಶ್ರೀಗಳವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ನಮನಗಳನ್ನು ಸಲ್ಲಿಸಲಾಯಿತು. ಲಿಂಗರಾಜು ಪ್ರಾರ್ಥಿಸಿದರು.
ಸಹಬೋಧಕ ಕೆ. ಸುರೇಶ ಸ್ವಾಗತಿಸಿದರು. ಉಪನ್ಯಾಸಕಿ ಲತಾ ನಿರೂಪಿಸಿದರು. ಹಿರಿಯ ಉಪನ್ಯಾಸಕಿ ಜೆ. ಪ್ರತಿಮಾ ಅವರು ಶರಣು ಸಮರ್ಪಣೆ ಮಾಡಿದರು.
