ಶಿವಾನುಭವ ಎಂದರೆ ಸತ್ಯ, ಸೌಂದರ್ಯ, ಪ್ರಾಮಾಣಿಕತೆ : ಡಾ. ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಶಿವ ಎಂದರೆ ಕೇವಲ ದೇವರ ಅಸ್ತಿತ್ವದ ಪ್ರಶ್ನೆ ಅಲ್ಲ. ಅದು ಮಂಗಳಸ್ವರೂಪಿಯಾಗಿದ್ದು ಸರ್ವರನ್ನು ಸಮಭಾವದಿಂದ ಕಾಣುವ ಸತ್- ಚಿತ್-ಆನಂದದ ಗುಣಗಳನ್ನು ಹೊಂದಿರುವ ಮೂಲ ಸ್ವರೂಪವಾಗಿದೆ.

ಶಿವಾನುಭವ ಎಂದರೆ ಸತ್ಯ, ಸೌಂದರ್ಯ ಹಾಗೂ ಪ್ರಾಮಾಣಿಕತೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೧೦ನೆಯ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ೫೪ ವರ್ಷಗಳ ಹಿಂದೆ ತೋಂಟದಾರ್ಯ ಮಠದಲ್ಲಿ ಸಮಾನ ಮನಸ್ಸಿನ ಯುವಕರು ಸೇರಿ ಶಿವಾನುಭವ ಪ್ರಾರಂಭಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘ ಎಂಬ ಹೆಸರಡಿ ೫೪ ವರ್ಷಗಳಿಂದ ನಿರಂತರವಾಗಿ ಪ್ರತಿ ಸೋಮವಾರ ಶಿವಾನುಭವ ನಡೆಸುತ್ತಾ ಬಂದಿದೆ. ಈ ಶಿವಾನುಭವ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮತ್ತು ತೆರೆಮರೆಯಲ್ಲಿದ್ದ ಎಷ್ಟೋ ಜನ ಪ್ರತಿಭಾವಂತರನ್ನು ನಾಡಿಗೆ ಪರಿಚಯಿಸುವ ಕಾರ್ಯ ಮಾಡಿದೆ.

ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಗದುಗಿನ ಶ್ರೀ ತೋಂಟದಾರ್ಯ ಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡ ನಂತರದಲ್ಲಿ ‘ನಮ್ಮ ಮಠ’ ಎಂಬ ಭಾವ ಬರುವಂತೆ ಭಕ್ತರ ಭಾವ ಬದಲಾಯಿಸಿದರು. ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಿದರು.

ಅಂದಿನ ಗದಗ ಪರಿಸರದ ಯುವಕರಾದ ಪಂಚಾಕ್ಷರಯ್ಯ ಸಂಶಿಮಠ, ಅಜ್ಜಣ್ಣ ಮಾನ್ವಿ, ಸದಾಶಿವಯ್ಯ ಹಿರೇಮಠ, ವಿಶ್ವನಾಥ ಬುಳ್ಳಾ ಆದಿಯಾಗಿ ಅನೇಕ ಮಹನೀಯರು ಅತ್ಯಂತ ಭಕ್ತಿಭಾವದಿಂದ, ತನುಮನದಿಂದ ಶ್ರೀಮಠದ ಸೇವೆಗಳನ್ನು ಮಾಡಿದ್ದಾರೆ.

ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದ ಡಾ. ಅರ್ಜುನ ಗೊಳಸಂಗಿ ಕೆಸರಿನಲ್ಲಿ ಅರಳಿದ ಕಮಲ. ಅವರ ವಿಚಾರಧಾರೆಗಳು ಪ್ರಗತಿಪರವಾಗಿದ್ದು, ಸಾಹಿತ್ಯ, ಸಂಸ್ಕೃತಿ, ಸಂಘಟನೆ ಮೊದಲಾದ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಪರ ಕಾರ್ಯಗಳನ್ನು ಮಾಡುತ್ತಿರುವರು.

ಶ್ರೀಮಠದ ಪರಮಭಕ್ತರಾಗಿ ಸಾಹಿತ್ಯ ಕಾರ್ಯಗಳಲ್ಲಿ ನಿರಂತರವಾಗಿ ಶ್ರೀಮಠದೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

‘ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಪಟ್ಟಾಧಿಕಾರ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘ ಸ್ಥಾಪನೆ: ನೆನಪು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅಣ್ಣಿಗೇರಿಯ ನಿಂಗಮ್ಮ ಹೂಗಾರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಸ್. ಎಸ್. ಹರ್ಲಾಪುರ ಅವರು, ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪ್ರಗತಿಪರರಾಗಿದ್ದರು. ಜೀವಪರ ಕಾಳಜಿಯನ್ನು ಹೊಂದಿದ್ದರು. ಅವರಿವರನ್ನದೆ ಎಲ್ಲರನ್ನೂ ಇವನ ನಮ್ಮವ ಎಂಬ ಭಾವದಿಂದ ಅಪ್ಪಿಕೊಂಡು ಶ್ರೀಮಠದಲ್ಲಿ ಶಾಂತಿ, ಸೌಹಾರ್ದತೆಯನ್ನು ಬೆಳಗಿಸಿದರು. ಸಿದ್ಧಲಿಂಗ ಶ್ರೀಗಳು ಸದಾ ಸ್ಮರಣೀಯರು ಎಂದು ಮಾತನಾಡಿದರು.

ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಸಿದ್ದರಾಮಯ್ಯ ಪಂಚಾಕ್ಷರಯ್ಯ ಸಂಶಿಮಠ ಅವರು, ತಮ್ಮ ತಂದೆಯವರಾದ ಪಂಚಾಕ್ಷರಯ್ಯ ಸಂಶಿಮಠ ಅವರು ಶ್ರೀಮಠದೊಂದಿಗೆ ಹೊಂದಿದ್ದ ಅವಿನಾಭಾವ ಸಂಬಂಧದ ಕುರಿತು ಮಾತನಾಡಿದರು.

ನಿರಂಜನ ಬುಳ್ಳಾ ಅವರು, ನಮಗಿರುವುದು ಒಂದೇ ಮಠ, ಅದು ತೋಂಟದಾರ್ಯ ಮಠ. ನಮಗಿರುವವರು ಒಬ್ಬರೇ ಸ್ವಾಮೀಜಿ, ಅವರೇ ತೋಂಟದ ಸಿದ್ಧರಾಮ ಸ್ವಾಮೀಜಿ ಎಂದರು.

ಪ್ರಭುದೇವ ಹಿರೇಮಠ ಅವರು, ಅಂದಿನ ಕಾಲದ ಐತಿಹಾಸಿಕ ಘಟನೆಗಳನ್ನು ಸ್ಮರಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಅರ್ಜುನ ಗೋಳಸಂಗಿ ಅವರು, ನಾನು ಗದಗ ಪರಿಸರಕ್ಕೆ ಬರಲು ಹುಲಕೋಟಿಯ ಹಿರಿಯರಾದ ಎಚ್. ಕೆ. ಪಾಟೀಲ, ಡಿ.ಆರ್. ಪಾಟೀಲ ಹಾಗೂ ಧತ್ತಪ್ಪಗೌಡ ಓದುಗೌಡರ ಕಾರಣ ಎಂದರು.

ಶ್ರೀಮಠದೊಂದಿಗೆ ಒಡನಾಟ ಬೆಳೆದ ನಂತರದಲ್ಲಿ ನನ್ನ ವಿಚಾರಗಳಲ್ಲಿ ಅಪಾರ ಬದಲಾವಣೆಯಾಯಿತು. ನಾನು ಜೀವನ್ಮುಖಿಯಾದೆನು, ಅದಕ್ಕಾಗಿ ಶ್ರೀಮಠಕ್ಕೆ ಋಣಿಯಾಗಿದ್ದೇನೆ. ಮುಂದೆ ಪ್ರತಿಯೊಂದು ಕಾರ್ಯಗಳಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.

ವಚನ ಸಂಗೀತ ಅಕ್ಷತಾ ಹಿರೇಮಠ, ಧರ್ಮಗ್ರಂಥ ಪಠಣ ಮೇಘನಾ ಯರಗುಡಿ, ವಚನ ಚಿಂತನ ಶ್ವೇತಾ ಯರಗುಡಿ, ದಾಸೋಹ ಸೇವೆಯನ್ನು ಸುಷ್ಮಾ ಹಾಗೂ ಸಿದ್ದರಾಮೇಶ ಪಟ್ಟೇದ ಪರಿವಾರ ಹಾಗೂ ಲಿಂಗೈಕ್ಯ ಬಸಲಿಂಗಮ್ಮ ಮಲ್ಲನಗೌಡ ದೇಸಾಯಿ ಸಾ. ಸುಳ್ಳ ಸ್ಮರಣಾರ್ಥ ಅವರ ಮಕ್ಕಳು, ಲಿಂಗೈಕ್ಯ ಚಂದ್ರಶೇಖರಪ್ಪ ಈಶ್ವರಪ್ಪ ಮನವಳ್ಳಿ ಸ್ಮರಣಾರ್ಥ ಅವರ ಮಕ್ಕಳು ದಾಸೋಹ ಸೇವೆಯನ್ನು ನೆರವೇರಿಸಿದರು.

ಶಿವಾನುಭವದಲ್ಲಿ ಅನೇಕ ಹಿರಿಯರು, ಅನುಭಾವಿಗಳು ಭಾಗವಹಿಸಿದ್ದರು. ಸುಮಂಗಲ ಮತ್ತು ಬಸವರಾಜ ಬುಳ್ಳಾ, ಲೀಲಾ ಹಾಗೂ ಅಮೃತ ಬುಳ್ಳಾ, ನಿರ್ಮಲ ಮತ್ತು ಶಿವಲಿಂಗಪ್ಪ ಕಂಕಣಮೇಲೆ, ಪ್ರಕಾಶ ಅಸುಂಡಿ, ಅಶೋಕ ಬರಗುಂಡಿ, ಗಿರಿಜಕ್ಕ ಧರ್ಮರೆಡ್ಡಿ ಆದಿಯಾಗಿ ಅನೇಕ ಅನುಭಾವಿಗಳು ಶಿವಾನುಭವದಲ್ಲಿ ಭಾಗಿಗಳಾಗಿ ಮೆರಗು ತಂದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ವೀ. ಪುರದ ಸ್ವಾಗತವನ್ನು, ನಿರ್ವಹಣೆಯನ್ನು ಶಿವಾನುಭವ ಸಮಿತಿ ಚೇರ್ಮನರಾದ ಡಾ. ರಮೇಶ ಮ. ಕಲ್ಲನಗೌಡರ ಮಾಡಿದರು.

ಶಿವಾನುಭವದಲ್ಲಿ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *