ಬೀದರ:
ಕ್ರಾಂತಿಕಾರಿ ಧೋರಣೆಗಳಿಂದ ಸಮಾಜ ತಿದ್ದುವ ಕಾರ್ಯ ಮಾಡುವುದರ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ಜಗತ್ತಿಗೆ ಸಾರಿದ ಕಾಯಕಯೋಗಿ ಶರಣ ಸಿದ್ಧಾರಾಮೇಶ್ವರರು ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ. ಗಂಗಾಂಬಿಕಾ ನುಡಿದರು.
ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಶರಣ ಉದ್ಯಾನದಲ್ಲಿ ಶ್ರಾವಣ ಮಾಸದ ನಿಮಿತ್ತ ತಿಂಗಳು ಕಾಲ ನಡೆಯುವ ಶಿವಯೋಗಿ ಸಿದ್ಧರಾಮೇಶ್ವರರು ಪ್ರವಚನ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿಕೊಂಡು ಮಾತನಾಡಿದರು.

ಅಲ್ಲಮಪ್ರಭುಗಳ ಮಾರ್ಗದರ್ಶನದಂತೆ ಕಲ್ಯಾಣದ ಅನುಭವ ಮಂಟಪ ಪ್ರವೇಶಿಸಿ ಚೆನ್ನಬಸವಣ್ಣನವರಿಂದ ಲಿಂಗದೀಕ್ಷೆ ಪಡೆದರು. ಇವರ ಯೋಗ ಸಾಧನೆಯು ನಂತರ ಶಿವಯೋಗವಾಗಿ ಮಾರ್ಪಟ್ಟಿತ್ತು. ಕಲ್ಯಾಣ ಕ್ರಾಂತಿಯ ಮಹತ್ತರ ಮತ್ತು ಕೇಂದ್ರಬಿಂದುವಾಗಿದ್ದ ಸಿದ್ಧರಾಮ ಶಿವಯೋಗಿಗಳು ವಚನಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇವರ ವಚನಗಳು ವ್ಯಕ್ತಿತ್ವದ ಶುದ್ಧಿಕರಣ, ಸಾಮಾಜಿಕ ಸಮಾನತೆ, ಸ್ತ್ರೀ ಶಕ್ತಿ, ಜಂಗಮ ಹಾಗೂ ಭಕ್ತಿಯ ಮಹತ್ವವನ್ನು ಸಾರುತ್ತವೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡಿದ್ದ ಬೇಲೂರು- ಬದಾಮಿ ಶ್ರೀ ಗುರುಬಸವೇಶ್ವರ ಮಠದ ಪೂಜ್ಯ ಡಾ. ಪ್ರಭುಮಹಾಂತ ಸ್ವಾಮಿಗಳು ಮಾತನಾಡಿ, ಮನುಷ್ಯ ತನ್ನ ದೇಹದ ಬಗ್ಗೆ ಅರಿಯದಿದ್ದರೆ ಆತ ದೇವರ ಬಗ್ಗೆ ಅರಿಯಲಾರ. ನಿತ್ಯ ಧ್ಯಾನ, ಪೂಜೆ, ಇಷ್ಟಲಿಂಗ ಸಂಧಾನವನ್ನು ಮಾಡುವ ಮೂಲಕ ದೇಹವೇ ದೇವಾಲಯವಾಗಿಸಿಕೊಳ್ಳಬೇಕು. ಸಿದ್ಧರಾಮರ ಯೋಗ ಸಾಧನೆ ಕೇವಲ ತಪಸ್ಸಿಗೆ ಸೀಮಿತವಾಗದೆ ಸಮಾಜದ ಹಿತಕ್ಕಾಗಿ ದುಡಿದ ಮಹಾನ್ ಯೋಗಿ ಎಂದು ನುಡಿದರು.

ಕಾರ್ಯಕ್ರಮವನ್ನು ಪ್ರಾಧ್ಯಾಪಕಿ ಡಾ. ಸವಿತಾ ಪಾಟೀಲ ಉದ್ಘಾಟಿಸಿ ಮಾತನಾಡಿದರು. ಬಸವಸೇವಾ ಪ್ರತಿಷ್ಠಾನದ ಗುಂಡಪ್ಪ ಬಳತೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಅಕ್ಕನವರು ತಮ್ಮ ಕಾರ್ಯಗಳ ಒತ್ತಡದಲ್ಲಿಯೂ ಒಂದು ತಿಂಗಳ ಪರ್ಯಂತ ಪ್ರವಚನ ಮಾಡುವ ಮೂಲಕ ನಮ್ಮ ಬಾಳು ಬೆಳಗಿಸುತ್ತಿದ್ದಾರೆ.
ಪ್ರವಚನ ಪ್ರತಿನಿತ್ಯ ಆಲಿಸಿ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮೆಲ್ಲರ ಜೀವನ ಸಾರ್ಥಕವಾಗುತ್ತದೆ ಎಂದರು.

ಬಸವಕಲ್ಯಾಣದ ಡಾ. ಜಯದೇವಿ ಲಿಗಾಡೆ ಟ್ರಸ್ಟ್ ಕಾರ್ಯದರ್ಶಿ ಚೇತನಾ ಪಾಟೀಲ ಧ್ವಜಾರೋಹಣ ಮಾಡಿದರು. ಶ್ರಾವಣ ಮಾಸ ಪ್ರವಚನ ಸೇವಾ ಸಮಿತಿ ಅಧ್ಯಕ್ಷರಾದ ವಿಜಯಲಕ್ಷ್ಮೀ ಸುಲೇಪೇಟ ಸ್ವಾಗತಿಸಿದರು, ಕಾರ್ಯದರ್ಶಿ ಗೀತಾ ಬಿರಾದಾರ ವಚನ ಪಠಣ ಮಾಡಿದರು. ಸಾವಿತ್ರಿ ಮಹಾಜನ ನಿರೂಪಿಸಿದರು. ಶಿವಕುಮಾರ ಪಂಚಾಳ ಮತ್ತು ಸಂಗಡಿಗರಿಂದ ವಚನ ಸಂಗೀತ ನಡೆಯಿತು.

ನೌಬಾದ ನೀಲಮ್ಮನ ಬಳಗದ ಶರಣೆಯರು ವಚನ ಪ್ರಾರ್ಥನೆ ನಡೆಸಿಕೊಟ್ಟರು.
