“ಜನರ ಸಂಕಷ್ಟ ನಿವಾರಿಸುವ ಬಸವ ಪರುಷಕಟ್ಟೆ”

ಚಿಮ್ಮನಚೋಡದಲ್ಲಿ ಶ್ರಾವಣ ಮಾಸದ ವಚನ ಚಿಂತನ ಗೋಷ್ಠಿ

ಚಿಂಚೋಳಿ:

ತಾಲೂಕಿನ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷಕಟ್ಟೆ ಸಮಿತಿ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ರವಿವಾರ ಹಮ್ಮಿಕೊಂಡಿರುವ ವಚನ ಚಿಂತನ ಗೋಷ್ಠಿ ಕಾರ್ಯಕ್ರಮವು ಭಕ್ತಿಭಾವ ಹಾಗೂ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೀದರನ ಖ್ಯಾತ ವೈದ್ಯ ಡಾ. ಸಿ.ಎಸ್. ರಗಟೆ, “ಜನರ ಬದುಕಿನ ದುಃಖ, ಸಂಕಷ್ಟಗಳನ್ನು ನಿವಾರಿಸುವ ಉದ್ದೇಶದಿಂದ ಪರುಷಕಟ್ಟೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಬಂದು ಧ್ಯಾನ ಮಾಡುವುದರ ಮೂಲಕ ಮನಸ್ಸಿನ ನೋವು ಹಾಗೂ ಸಂಕಷ್ಟಗಳನ್ನು ತೊಡೆದುಹಾಕಿಕೊಳ್ಳಬಹುದು. ಕಲ್ಯಾಣದಲ್ಲಿ ಬಸವಣ್ಣನವರು ಪರುಷ ಕಟ್ಟೆಯ ಮೇಲೆ ಕುಳಿತು ಜನರ ಸಂಕಷ್ಟಗಳನ್ನು ಪರಿಹರಿಸುತ್ತಿದ್ದರು ಎಂಬ ನಂಬಿಕೆಯೇ ಶ್ರೀ ಬಸವ ಪರುಷಕಟ್ಟೆಗೆ ಮೂಲ ಆಧಾರವಾಗಿದೆ”ಎಂದರು.

“ಈ ಸ್ಥಳವನ್ನು ಐತಿಹಾಸಿಕವಾಗಿ ಕಾರಣಿಕ ಕಟ್ಟೆ ಎಂದು ಕರೆಯಲಾಗುತ್ತದೆ. ಕಾರಣಿಕ ಪುರುಷ ಬಸವಣ್ಣನವರು ಬಂದು ಕುಳಿತ ಸ್ಥಳ ಎಂಬ ನಂಬಿಕೆ ಹಲವರಲ್ಲಿದೆ”ಎಂದು ಅವರು ತಿಳಿಸಿದರು.

ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಚಿಂಚೋಳಿ ಅಗ್ನಿಶಾಮಕ ಠಾಣೆಯ ಅಧಿಕಾರಿ ಶೇಖ್ ಹಸನ್ ಮಾತನಾಡಿ, “ಮೊಬೈಲ್ ಹಾಗೂ ಟಿವಿಗಳ ಬಳಕೆಗೆ ಹೆಚ್ಚಿನ ಸಮಯ ನೀಡುವ ಬದಲು ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಶರಣರ ವಚನಗಳನ್ನು ಓದಬೇಕು. ಬಸವೇಶ್ವರರ ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕುಟುಂಬಗಳು ಸುಖಿ ಕುಟುಂಬಗಳಾಗಬೇಕು”ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಾಲೆಬೀರನಳ್ಳಿ, ಹಸರಗುಂಡಗಿ ಹಾಗೂ ಮರಪಳ್ಳಿ ಗ್ರಾಮಗಳ ಲಿಂಗಾಯತ ಸಮುದಾಯದ ಅಧ್ಯಕ್ಷರಾದ ಚಂದ್ರಶೇಖರ ಸೋಮ, ಅಶೋಕ ಕೋರಿ ಹಾಗೂ ಕಲ್ಯಾಣರಾವ ಶಂಕರ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಮುಖಂಡ ಪ್ರಭುಲಿಂಗ ಲೇವಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಬಸವ ಪರುಷಕಟ್ಟೆ ಸಮಿತಿ ಅಧ್ಯಕ್ಷ ಆನಂದ ಬೆಡಸುರು, ಉಪಾಧ್ಯಕ್ಷ ಶಿವಮೂರ್ತಿ ಜಾಡರ, ವೀರಸಂಗಯ್ಯ ಮದರಗಿಮಠ, ವೀರಶೆಟ್ಟಿ ದುಬಲಗುಂಡಿ, ಅಣಿ ವೀರಯ್ಯ ಮದರಗಿಮಠ, ದಿಲೀಪ ಬೆಡಸುರು, ಮಹೇಶಕುಮಾರ ಕೊಡಂಗಲ, ಶಿವಶರಣ ಕೊಡಂಗಲ, ಶಾಂತಕುಮಾರ ಸೀತಾಳಗೆರೆ, ಅರುಣ ವರ್ಧನ ಮರಪಳ್ಳಿ, ಬಸವರಾಜ ಬುರುಕಪಳ್ಳಿ, ರಾಜಶೇಖರ ನಿಪ್ಪಾಣಿ, ಮಂಜುನಾಥ ಲೇವಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿದ್ಯಾವತಿ ಮದರಗಿಮಠ ಪ್ರಾರ್ಥನೆ ನೆರವೇರಿಸಿದರು. ಮಡಿವಾಳಪ್ಪ ರಗಟೆ ವಚನ ಸಂಗೀತ ನಡೆಸಿಕೊಟ್ಟರು. ವಿಶಾಲಾಕ್ಷಿ ಮದರಗಿಮಠ ಸ್ವಾಗತಿಸಿದರು. ರಾಧಿಕಾ ಹಿರೇಮಠ ನಿರೂಪಿಸಿದರು. ರಾಧಿಕಾ ಸಂಗೊಂಡ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *