ಬಸವ ಪಂಚಮಿ: ಹಸಿದ ಬಡಮಕ್ಕಳ ನಗುವಿನಲ್ಲಿ ದೇವರ ಕಾಣೋಣ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

ದೇವರನ್ನು ಹುತ್ತದಲ್ಲಿ ಹುಡುಕುವ ಬದಲು ಹಸಿದ ಬಡಮಕ್ಕಳ ಮುಖದ ನಗುವಿನಲ್ಲಿ ಕಾಣೋಣ. ನಾಗಪಂಚಮಿಯಂದು ಹಾಲನ್ನು ವ್ಯರ್ಥ ಮಾಡದಿರೋಣ.

“ಹುತ್ತಕ್ಕೆ ಸುರಿಯುವ ಹಾಲು ನೆಲದ ಪಾಲಾಗುವ ಬದಲು, ಬಡ ಮಗುವಿನ ಹೊಟ್ಟೆ ಸೇರಿದರೆ ಅದೇ ದೇವರಿಗೆ ಸಲ್ಲುವ ನಿಜವಾದ ನೈವೇದ್ಯ” ಎಂಬ ಕ್ರಾಂತಿಕಾರಿ ಚಿಂತನೆಗೆ ಸಾಕ್ಷಿಯಾಗುವಂತೆ ಇಲ್ಲಿನ ಅನುಭವ ಮಂಟಪ ಹಾಗೂ ರಾಷ್ಟ್ರೀಯ ಬಸವದಳದ ಸಹಯೋಗದಲ್ಲಿ ಬಸವ ಪಂಚಮಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪ್ರತಿವರ್ಷ ಬಸವ ಪಂಚಮಿಯ ದಿನದಂದು ಹುತ್ತಕ್ಕೆ ಲೀಟರ್‌ಗಟ್ಟಲೆ ಹಾಲು ಸುರಿದು ವ್ಯರ್ಥ ಮಾಡುವ ಮೌಢ್ಯ ಆಚರಣೆಗಳ ನಡುವೆ, ಪೂಜ್ಯ ಶಿವಾನಂದ ದೇವರ ನೇತೃತ್ವದಲ್ಲಿ, ಹಬ್ಬದ ನಿಮಿತ್ತ ಸಮಾಜದ ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಹಾಲು ಮತ್ತು ಹಣ್ಣುಗಳನ್ನು ವಿತರಿಸುವ ಮೂಲಕ ಹಸಿವು ನೀಗಿಸುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹಾಲು ಹಾವಿಗಲ್ಲ ಬಡಮಕ್ಕಳಿಗೆ, ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ರವೀಂದ್ರ ಕೋಳಕುರ ಮಾತನಾಡಿ ” ಎಲ್ಲಿಯವರೆಗೆ ಜನರಲ್ಲಿ ಮೌಢ್ಯ ಇರುತ್ತದೆಯೋ ಅಲ್ಲಿಯವರೆಗೆ ನಮ್ಮ ಜನಜಾಗೃತಿ ನಿರಂತರವಾಗಿ ಇರುತ್ತದೆ. ಬಸವಣ್ಣನವರ ಕಾಯಕ ಮತ್ತು ಪ್ರಸಾದ ತತ್ವಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಹುತ್ತಕ್ಕೆ ಹಾಲು ಸುರಿಯುವ ಬದಲು ಹಸಿದ ಮಕ್ಕಳ ಹೊಟ್ಟೆ ತುಂಬಿಸುವುದೇ ಬಸವ ತತ್ವದ ನಿಜವಾದ ಆಚರಣೆ” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶರಾದ ಸುಭಾಷಚಂದ್ರ ನಾಗರಾಳೆ, ಸಿದ್ದಣ್ಣ ಭೂಮಾ, ಅಶೋಕ ಕುಂಬಾರ, ಚಂದ್ರಪ್ಪ ಗುಂಗೆ, ಶಂಕರ ಮದುರಗೈ, ಗಂಗಾಧರ ರತೊಸ್, ಶ್ರೀಶೈಲ ಬಿರಾದರ, ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ನೂರಾರು ಮಕ್ಕಳಿಗೆ ಹಾಲು ಮತ್ತು ಬಾಳೆಹಣ್ಣುಗಳನ್ನು ವಿತರಿಸಿ ಹಬ್ಬದ ಸಂತೋಷವನ್ನು ಹಂಚಿಕೊಳ್ಳಲಾಯಿತು.

ಸಾಂಪ್ರದಾಯಿಕ ಮೂಢನಂಬಿಕೆಗಳನ್ನು ಬದಿಗಿಟ್ಟು ವೈಚಾರಿಕ ಮನೋಭಾವ, ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಲು ಕಾರ್ಯಕ್ರಮದ ಮೂಲಕ ಕರೆ ನೀಡಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *