ಮುರುಘಾ ಮಠದಲ್ಲಿ 10,000 ಜನರ ವಚನ ಝೇಂಕಾರ

ಬಸವ ಮೀಡಿಯಾ
ಬಸವ ಮೀಡಿಯಾ

ಅಕ್ಟೋಬರ್ ೧೩ರಿಂದ ೨೧ರವರೆಗೆ ಶರಣಸಂಸ್ಕೃತಿ ಉತ್ಸವ

ಚಿತ್ರದುರ್ಗ

ನಗರದಲ್ಲಿ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿವರ್ಷ ನಡೆಯುವ ಶರಣಸಂಸ್ಕೃತಿವನ್ನು ಈ ಬಾರಿ ಅಕ್ಟೋಬರ್ ೧೩ ರಿಂದ ೨೧ರವರೆಗೆ ಆಚರಿಸಲು ಶ್ರೀಮಠದಲ್ಲಿಂದು ನಡೆದ ಶರಣಸಂಸ್ಕೃತಿ ಉತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಉತ್ಸವದಲ್ಲಿ ೧೦ ಸಾವಿರ ಜನರಿಂದ ವಚನ ಝೇಂಕಾರ ನಡೆಯಲಿದೆ ಎಂದು ಹೇಳಿದರು.

ಜೊತೆಗೆ ಕ್ರೀಡೆ, ಕೃಷಿ, ಮಹಿಳಾ, ಮಕ್ಕಳ ಗೋಷ್ಠಿಗಳು, ಜಯದೇವ ಜಂಗೀಕುಸ್ತಿ, ಯುವಜನರಲ್ಲಿ ಅರಿವು ಮೂಡಿಸಲು ನಶೆಮುಕ್ತ ಭಾರತ ಜಾಥಾ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಯವಿಭವ ಜಗದ್ಗುರುಗಳವರ ಕುರಿತು ಚಿನ್ಮೂಲಾದ್ರಿ ಚಿದ್ರೂಪ, ಶಾಂತವೀರ ಜಗದ್ಗುರುಗಳ ಕುರಿತ ಬೃಹತ್ ಗ್ರಂಥ, ಜಯದೇವ ಜಗದ್ಗುರುಗಳ ಕುರಿತು ಕಾದಂಬರಿ ಬಿಡುಗಡೆ ಮಾಡಲಾಗುವುದು.

ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಚಿಕ್ಕದಾಗಿ ಪ್ರಾರಂಭವಾದ ಈ ಉತ್ಸವವು ಈಗ ದೊಡ್ಡದಾಗಿ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜ್ಞಾನದಾಸೋಹ, ಅನ್ನದಾಸೋಹ ಕಾರ್ಯಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದರು.

ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಮಠದ ಪರಂಪರೆಯಂತೆ ಶರಣಸಂಸ್ಕೃತಿ ಉತ್ಸವವು ನಿರಂತರವಾಗಿ ನಡೆದುಕೊಂಡು ಬಂದಿದೆ. ಉತ್ಸವದ ಯಶಸ್ಸಿಗಾಗಿ ಶ್ರೀಮಠವು ವಹಿಸುವ ಜವಾಬ್ದಾರಿಯನ್ನು ನಿರ್ವಹಿಸಲಾಗುವುದು ಎಂದು ಹೇಳಿದರು.

ಹೊಸದುರ್ಗದ ಕೆ.ಎಸ್. ಕಲ್ಮಠ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಕುರಿತು ಜನಪ್ರತಿನಿಧಿಗಳು ಅಧಿಕಾರಿಗಳ ಗೋಷ್ಠಿ, ಮಾನವೀಯ ಸಂಬಂಧಗಳು ಕಡಿಮೆಯಾಗಿ ಸಂಘರ್ಷಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ, ಯುವಸಮೂಹವು ಮೊಬೈಲ್‌ಗಳು ಮತ್ತು ಮಾದಕ ವ್ಯಸನಿಗಳಾಗುತ್ತಿದ್ದು, ನಶೆಮುಕ್ತ ಭಾರತ ಕಾರ್ಯಕ್ರಮವನ್ನು ರೂಪಕದೊಂದಿಗೆ ಉತ್ಸವದ ವೇದಿಕೆಯಲ್ಲಿ ಆಯೋಜಿಸಲು ಅವಕಾಶ ಮಾಡಿಕೊಡುವಂತೆ ಕೋರಿದರು.

ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ. ಗುಡಸಿ, ಕೆಇಬಿ ಷಣ್ಮುಖಪ್ಪ, ಕಾಂಗ್ರೆಸ್ ಮುಖಂಡ ಎಂ.ಕೆ. ತಾಜಪೀರ್, ಪಟೇಲ್ ಶಿವಕುಮಾರ್, ಸೈಟ್ ಬಾಬಣ್ಣ, ಕೆ.ಟಿ. ನಂದೀಶ್, ಮಾಜಿ ನಗರಸಭಾಧ್ಯಕ್ಷೆ ಶ್ರೀಮತಿ ದೇವಿಕುಮಾರಿ ವಿಶ್ವನಾಥ್, ಬಾಪೂಜಿ ವಿದ್ಯಾಸಂಸ್ಥೆಯ ಕೆ.ಎಂ.ವೀರೇಶ್, ಕಮ್ಮಾರ ಸಮಾಜದ ಸಿ. ಹನುಮಂತಪ್ಪ, ರಡ್ಡಿ ಸಮಾಜದ ಡಾ. ಪಾಲಾಕ್ಷಪ್ಪ, ವೀರಶೈವ ಸಮಾಜದ ಕರ‍್ಯದರ್ಶಿ ಪಿ.ವೀರೇಂದ್ರಕುಮಾರ್, ಯುವಮುಖಂಡ ತುಮಕೂರಿನ ಶಶಿ ಹುಲಿಕುಂಟೆ, ಟಿಪ್ಪು ಸುಲ್ತಾನ್ ವೇದಿಕೆಯ ಖಾಸಿಂ ಅಲಿ, ಬಂಜಾರ ಸಮಾಜದ ರಾಜಾನಾಯ್ಕ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಹಿರಿಯೂರಿನ ಜೆಡಿಎಸ್ ಮುಖಂಡ ಜಯರಾಮ್ ಮೊದಲಾದವರು ಮಾತನಾಡಿ, ಈ ಬಾರಿಯ ಉತ್ಸವದ ಕಾರ್ಯಕ್ರಮಗಳಿಗೆ ನಮ್ಮೆಲ್ಲರ ಸಂಪೂರ್ಣ ಸಹಕಾರವಿದ್ದು ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಕ್ರಮ, ಎಸ್.ನಿಜಲಿಂಗಪ್ಪನವರ ಸ್ಮಾರಕದ ಬಳಿ ಒಂದು ಗೋಷ್ಠಿ ಸೇರಿದಂತೆ ಉತ್ಸವದ ಸಂದರ್ಭದಲ್ಲಿ ಸಮಾಜಮುಖಿ, ಸಂಸ್ಕಾರ ನೀಡುವ ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆಗಳನ್ನು ನೀಡಿದರು.

ಬಸವಹರಳಯ್ಯ ಸ್ವಾಮೀಜಿ, ಮೇದಾರ ಕೇತೇಶ್ವರ ಸ್ವಾಮಿಗಳು, ತಿಪ್ಪೇರುದ್ರ ಸ್ವಾಮಿಗಳು, ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಸಚಿವ ಗಣಾಚಾರಿ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ರಾಜೇಶ್, ಹಡಪದ ನಾಗರಾಜ್, ಶ್ರೀಮತಿ ಗಾಯತ್ರಿ ಶಿವರಾಂ, ಮಂಜಣ್ಣ, ಶ್ರೀಮತಿ ಇಂದಿರಾ ಜಯದೇವಮೂರ್ತಿ ವೇದಿಕೆಯಲ್ಲಿದ್ದರು.

ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಚಿತ್ರದುರ್ಗ ನಗರದ ವಿವಿಧ ಸಮಾಜ, ಸಂಘ-ಸಂಸ್ಥೆಗಳ ಮುಖಂಡರು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಕೆ.ಎಂ. ವೀರೇಶ್ ಸ್ವಾಗಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *