‘ಸ್ವಾಮಿಯಾದವರಿಗೆ ಪೂರ್ವಾಶ್ರಮದ ಸಂಬಂಧ ವಾಂತಿ ಮಾಡಿದ್ದನ್ನು ನೆಕ್ಕಿದಂತೆ’

ಅಣ್ಣಿಗೇರಿ:

ಅಪಘಾತಕ್ಕೀಡಾಗಿ ಒಂದು ತಿಂಗಳ ಪ್ರಜ್ಞಾಹೀನರಾಗಿದ್ದ ಸ್ಥಿತಿಯನ್ನು ಒಳಗೊಂಡಂತೆ ತಮ್ಮ ಬದುಕಿನಲ್ಲಿ ಒಂದೇ ಒಂದು ಸಲವೂ ತಮ್ಮ ಪೂರ್ವಾಶ್ರಮವನ್ನು ಗದಗ ತೋಂಟದ ಸಿದ್ದಲಿಂಗ ಶ್ರೀಗಳು ನೆನಪಿಸಿಕೊಳ್ಳಲಿಲ್ಲ ಎಂದು ಪ್ರೊ. ಎಸ್. ಎಸ್. ಹರ್ಲಾಪೂರ ಹೇಳಿದರು.

ಸ್ಥಳೀಯ ಬಸವಕೇಂದ್ರ ಹಾಗೂ ಅಣ್ಣಿಗೇರಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಆಶ್ರಯದಲ್ಲಿ ಪಟ್ಟಣದ ತೋಂಟದಾರ್ಯ ಮಠದಲ್ಲಿ ಜರಗಿದ ಶರಣ ಶ್ರಾವಣ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಸ್ವಾಮಿಗಳಾದವರು ಪೂರ್ವಾಶ್ರಮದ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು ವಾಂತಿ ಮಾಡಿದ್ದನ್ನು ಪುನಃ ನೆಕ್ಕಿದಂತೆ ಎನ್ನುವುದು ಅವರ ಸ್ಪಷ್ಟ ನಿಲುವಾಗಿತ್ತು. ಇದನ್ನು ಅವರೇ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದರು.

ಅವರು ತಮ್ಮ ಬದುಕಿದ್ದಕ್ಕೂ ಧರ್ಮ, ಶಿಕ್ಷಣ, ಪರಿಸರಕ್ಕಾಗಿ ಜನಮಾನಸವನ್ನು ಕಟ್ಟುವಲ್ಲಿ ಆಹರ್ನಿಶಿ ದುಡಿದ ಜೀವ ಎಂದು ಅವರನ್ನು ಸ್ಮರಿಸಿದರು.

ಶ್ರೀಗಳ ಹೋರಾಟ ಕುರಿತು ಉಪನ್ಯಾಸ ನೀಡಿದ ಮುಖ್ಯಾಧ್ಯಾಪಕ ಎನ್.ಎಸ್. ಮೇಲ್ಮರಿ, ಸಿದ್ದಲಿಂಗ ಶ್ರೀಗಳು ಜಗದ್ಗುರು ಪಟ್ಟಕ್ಕೆ ಬಂದ ಕ್ಷಣದಿಂದಲೇ ಮನುಷ್ಯ ಮನುಷ್ಯರನ್ನೇ ಹೊರುವುದು ಅಮಾನವೀಯ ಎಂದು ಅಡ್ಡಪಲ್ಲಕ್ಕಿಯನ್ನು ತಿರಸ್ಕರಿಸಿ ವೈಚಾರಿಕತೆಯ ದಿಕ್ಕು ತೋರಿಸಿದರು ಎಂದರು.

ಜಾತ್ರೆಗೆ ಹೊಸ ಸ್ವರೂಪ, ಪುಸ್ತಕ ಪ್ರಕಟಣೆ, ಕಪ್ಪತಗುಡ್ಡ ರಕ್ಷಣೆ, ಗೋಕಾಕ ವರದಿ ಮುಂತಾದ ಹೋರಾಟಗಳಲ್ಲಿ ಶ್ರೀಗಳು ಕ್ರಾಂತಿಯನ್ನೇ ಮಾಡಿದರು ಎಂದು ಹೇಳಿದರು.

ಸುಮಿತ್ರಾ ಹುಣಸಿಮರದ ನಿರ್ದೇಶನದ “ಉರಿಯ ಗದ್ದುಗೆ” ರೂಪಕದಲ್ಲಿ ನಿಂಗಮ್ಮ ಹೂಗಾರ ಶಾಲೆಯ ಮಕ್ಕಳು ಮನಮಿಡಿಯುವ ಅಭಿನಯ ನೀಡಿದರು.

ಅನ್ನಪೂರ್ಣಾ ಆಕಳವಾಡಿ ಪ್ರಸಾದ ದಾಸೋಹ ನೆರವೇರಿಸಿದರು. ರೇವತಿ ಕರವೀರಮಠ, ಸಾಕ್ಷಿ ಹರ್ಲಾಪೂರ ಸಂಗಡಿಗರು ವಚನ ಪಾರಾಯಣ, ಡಾ. ಶಾಂತಾ ಲಕ್ಷ್ಮೇಶ್ವರ ವಚನ ಮಂಗಲಗೈದರು. ಶರಣ ಶ್ರಾವಣದ ಮೂಲಕ ಶ್ರೀಗಳ ಬದುಕಿನ ವಿವಿಧ ಮಜಲುಗಳ ಮರುಸ್ಮರಿಸುವ ಕಾರ್ಯ ಮಾಡಿದ ಪ್ರೊ. ಎಸ್. ಎಸ್. ಹರ್ಲಾಪೂರ ದಂಪತಿಗಳನ್ನು ಸನ್ಮಾನಿಸಲಾಯಿತು.

ಶರಣ ಸಾಹಿತ್ಯ ಪರಿಷತ್ತು ಯುವ ಘಟಕದ ಅಧ್ಯಕ್ಷ ಕಿರಣ ಬೂದಿಹಾಳ, ಪುಸ್ತಕದಾನಿ ಮೀನಾಕ್ಷಿ ನವಲಗುಂದ ಉಪಸ್ಥಿತರಿದ್ದರು.

ಅಮೃತೇಶ್ವರ ದೇವಸ್ಥಾನದ ಪ್ರಧಾನ ಟ್ರಸ್ಟಿ ಲಿಂಗರಾಜ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸವಿತಾ ಡಬರಿ ನಿರೂಪಿಸಿ, ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *

ಪತ್ರಕರ್ತರು, ಅಣ್ಣಿಗೇರಿ