ದೇವರ ನಂಬದ ಗೌರಿಯ ಸೆಳೆದ ಬಸವಣ್ಣ  2

ಎಂ. ಎ. ಅರುಣ್
ಎಂ. ಎ. ಅರುಣ್

ಬೆಂಗಳೂರು 

ಲಿಂಗಾಯತ ಧರ್ಮದ ಹೋರಾಟದ ಬೆಂಬಲಕ್ಕೆ ಬಂದಿದ್ದರಿಂದ ಗೌರಿಯ ಹತ್ಯೆಯಾಯಿತು ಎಂದು ಆಪ್ತರು ಹೇಳುತ್ತಾರೆ. 

ಆದರೆ ಗೌರಿಗೆ ಮೊದಮೊದಲು ದೇವರು, ಧರ್ಮ, ಲಿಂಗಾಯತ, ಯಾವುದರ ಮೇಲೂ ನಂಬಿಕೆ, ಆಸಕ್ತಿಯೂ ಎರಡೂ ಇರಲಿಲ್ಲ. 

ಈಗ ಅಮೇರಿಕಾದಲ್ಲಿ ನೆಲೆಸಿರುವ ಪತ್ರಕರ್ತ ಚಿದಾನಂದ ರಾಜಘಟ್ಟ ಮತ್ತು ಗೌರಿ ಕಾಲೇಜಿನಲ್ಲಿ ಪ್ರೀತಿಸಿ ಬೇಗನೆ ಮದುವೆಯಾಗಿ, ಅದೇ ವೇಗದಲ್ಲಿ ವಿಚ್ಛೇದನ ಪಡೆದಿದ್ದರು. 

ಗೌರಿಯ ಹತ್ಯೆಯ ನಂತರ ರಾಜಘಟ್ಟ ಅವರ ನೆನಪಿನಲ್ಲಿ ಒಂದು ಪುಸ್ತಕ ಬರೆದರು. 

‘ನಾವಿಬ್ಬರೂ ಲಿಂಗಾಯತರಾಗಿದ್ದು ಕಾಕತಾಳೀಯವಷ್ಟೇ. ಇಬ್ಬರಿಗೂ ಜಾತಿ, ಧರ್ಮ, ಲಿಂಗಾಯತರು, ವೀರಶೈವರ ಬಗ್ಗೆ ಏನೂ ಗೊತ್ತಿರಲಿಲ್ಲ, ಜೊತೆಗೆ ತಿಳಿದುಕೊಳ್ಳುವ ಆಸಕ್ತಿಯೂ ಇರಲಿಲ್ಲ. ಎಡಪಂಥೀಯಳಾಗಿದ್ದ ಗೌರಿ ಇಂತ ವಿಷಯಗಳಿಂದ ಬಹಳ ದೂರವಿದ್ದಳು,’ ಎನ್ನುತ್ತಾರೆ ರಾಜಘಟ್ಟ. 

1990ರಲ್ಲಿ ಇಬ್ಬರೂ ಬೇರೆಯಾದ ನಂತರ ಗೌರಿ ಕೆಲಸಕ್ಕೆ ದೆಹಲಿಗೆ ಹೋದರು. ಮತ್ತೆ ಅವರು ಬೆಂಗಳೂರಿಗೆ ಬಂದು ನೆಲೆಸಿದ್ದು 2000ರಲ್ಲಿ, ಅವರ ತಂದೆ ಪಿ ಲಂಕೇಶ್ ಲಿಂಗೈಕ್ಯರಾದ ನಂತರ. 

ತಂದೆಯ ಸಾವಿನ ಸುದ್ದಿ ಕೇಳಿ ಬೆಂಗಳೂರಿಗೆ ಬಂದ ಗೌರಿ ತಂದೆಯ ಹಣೆಯ ಮೇಲೆ ವಿಭೂತಿ ಹಚ್ಚಿದ್ದನ್ನು ನೋಡಿ ಪ್ರತಿಭಟಿಸಿದರು. ಆಗಾಗ್ಗೆ ಬಸವಣ್ಣನವರ ಬಗ್ಗೆ, ಶರಣರ ಬಗ್ಗೆ ಬರೆದರೂ ಲಂಕೇಶ್ ದೇವರು, ಧರ್ಮಗಳಿಂದ ಅಂತರ ಕಾಯ್ದುಕೊಂಡಿದ್ದರು. 

ಅವರ ಬದುಕಿದ್ದಾಗ ಪಾಲಿಸದ ನಂಬಿಕೆ, ಆಚರಣೆಗಳನ್ನು ಅವರ ಸಾವಿನ ನಂತರ ಹೇರಬಾರದು ಎನ್ನುವುದು ಗೌರಿಯ ವಾದ. ರಾತ್ರಿ ಯಾರೂ ಬಂದು ಶವಕ್ಕೆ ಕದ್ದು ಲಿಂಗ ಕಟ್ಟಬಾರದೆಂದು ನಿದ್ದೆ ಮಾಡದೇ ಕಾವಲು ಕುಳಿತಿದ್ದರು. 

ಮರುದಿನ ಲಂಕೇಶ್ ಅವರಿಗೆ ಪ್ರಿಯವಾಗಿದ್ದ ಬ್ಲಾಕ್ ಲೇಬಲ್ ವಿಸ್ಕಿ, ಸಿಗರೇಟುಗಳ ಜೊತೆಗೆ ಶವವನ್ನು ಹೂತಿದ್ದರು. 

ತಂದೆಯ ನಂತರ ಲಂಕೇಶ್ ಪತ್ರಿಕೆ ನಡೆಸಲು ಬೆಂಗಳೂರಲ್ಲೇ ಉಳಿದ ಗೌರಿ ಕೆಲವೇ ಸಮಯದಲ್ಲಿ ಲಿಂಗಾಯತ ಧರ್ಮದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಹಾಗೆ ಕಾಣುತ್ತದೆ. 

ರಾಜ್ಯದಲ್ಲಿ ಆಗ ಜೋರಾಗಿ ಬೆಳೆಯುತ್ತಿದ್ದ ಕೋಮುವಾದವನ್ನು ಅಷ್ಟೇ ತೀವ್ರವಾಗಿ ವಿರೋಧಿಸುತ್ತಿದ್ದ ಗೌರಿಯನ್ನು ಎಲ್ಲರನ್ನು ಒಳಗೊಳ್ಳುವ, ಎಲ್ಲವನ್ನೂ ಪ್ರಶ್ನಿಸುವ ಲಿಂಗಾಯತ ಧರ್ಮ ಆಕರ್ಷಿಸಲಾರಂಭಿಸಿತ್ತು. 

2004ರಲ್ಲಿ ದಾವಣಗೆರೆಯ ಮಠವೊಂದು ಅವರನ್ನು ಉಪನ್ಯಾಸ ನೀಡಲು ಅಹ್ವಾನ ನೀಡಿತ್ತು. ಅದು ಕರ್ನಾಟಕದಲ್ಲಿ ರಾಮಮಂದಿರದ ಆರ್ಭಟ ಶುರುವಾಗಿದ್ದ ಕಾಲ. 

ಮಠದಲ್ಲಿ ಮಾತನಾಡುತ್ತ ಗೌರಿ ದೇಹವೇ ದೇಗುಲ ವಚನ ಹೇಳಿ, ಬಸವಣ್ಣ ದೇವಾಲಯಗಳನ್ನು ತಿರಸ್ಕರಿಸಿದ್ದರು. ಅವರ ಅನುಯಾಯಿಗಳಾದ ನೀವು ಯಾಕೆ ಯಾರೋ ಕಟ್ಟಬೇಕೆನ್ನುತ್ತಿರುವ ಮಂದಿರಕ್ಕೆ ಹೆಗಲುಕೊಡುತ್ತೀದ್ದೀರಿ ಎಂದು ಪ್ರಶ್ನಿಸಿದರು. 

ಅವರ ಮಾತುಗಳನ್ನು ಕೇಳಿ ಅಲ್ಲಿದ್ದ ಲಿಂಗಾಯತರು ಮತ್ತು ಅವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ವೀರಶೈವರು ರಂಪಾಟ ಮಾಡಿ ತಿರುಗುಬಿದ್ದಾಗ ಗೌರಿ ಪೋಲಿಸ್ ರಕ್ಷಣೆಯಲ್ಲಿ ತಾವಿದ್ದ ಹೋಟೆಲಿಗೆ ಮರಳಬೇಕಾಯಿತು.

ಆಕಸ್ಮಿಕವಾಗಿ ಅದೇ ದಿನ, ಅದೇ ಹೊಟೇಲಿನಲ್ಲಿ ಒಬ್ಬರು ಪ್ರಖ್ಯಾತ ಲಿಂಗಾಯತ ಧರ್ಮ, ಇತಿಹಾಸದ ಸಂಶೋಧಕರು ಉಳಿದುಕೊಡಿದ್ದರು. ಗಲಾಟೆಯ ವಿಚಾರ ತಿಳಿದು ಅವರು ಗೌರಿಯನ್ನು ಕರೆಸಿ ಸಮಾಧಾನಪಡಿಸಿದರು. 

‘ನೀನು ಸರಿಯಾಗಿಯೇ ಮಾತನಾಡಿದ್ದೀಯ’ ಎಂದು ಹೇಳಿ, ಶಾಸನಗಳನ್ನು, ಹಸ್ತಪ್ರತಿಗಳನ್ನು ಉಲ್ಲೇಖಿಸಿ, ಅವರು ಲಿಂಗಾಯತರು ಹಿಂದೂಗಳು ಅಲ್ಲ, ವೀರಶೈವರೂ ಅಲ್ಲ ಎಂದು ತಿಳಿಸಿದರು.

ಆ ವಿದ್ವಾಂಸರನ್ನು ಗೌರಿ ಭೇಟಿ ಮಾಡಿದ್ದು ಅದೇ ಮೊದಲು. ಮುಂದಿನ ದಿನಗಳಲ್ಲಿ ಅವರ ಸಂಶೋಧನೆ ಗೌರಿಯ ಮೇಲೆ ಅಪಾರ ಪ್ರಭಾವ ಬೀರಿ ಅವರನ್ನು ಮತ್ತಷ್ಟು ಲಿಂಗಾಯತ ಧರ್ಮದ ಹೋರಾಟದತ್ತ ಬರುವಂತೆ ಮಾಡಿದವು. 

ಆ ಸಂಶೋಧಕರು ಯಾರೆಂದು ನೀವು ಈಗಾಗಲೇ ಊಹಿಸಿರಬಹುದು. 

ಅವರೇ, ಗೌರಿಗಿಂತ ಎರಡು ವರ್ಷ ಮುಂಚೆ ಲಿಂಗಾಯತ ಧರ್ಮಕ್ಕೆ ಪ್ರಾಣತೆತ್ತ  ಎಂ ಎಂ ಕಲ್ಬುರ್ಗಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *