ಭಾಲ್ಕಿ ಸ್ವಾಮೀಜಿಯ ‘ಅಲ್ಲಮಪ್ರಭುವಿನ ವಚನ ದರ್ಶನ ಪ್ರವಚನ’ ಮಂಗಲ

ಬಸವ ಮೀಡಿಯಾ
ಬಸವ ಮೀಡಿಯಾ

ಮನಸ್ಸಿನ ಏಕಾಗ್ರತೆಯಿಂದ ಸುಖಿ ಜೀವನ

ಭಾಲ್ಕಿ:

ಶ್ರೀ ಚನ್ನಬಸವ ಆಶ್ರಮದಲ್ಲಿ ಶ್ರಾವಣ ನಿಮಿತ್ತ ತಿಂಗಳು ಪರ್ಯಂತ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಅವರಿಂದ ಸಾಗಿಬಂದ ‘ಅಲ್ಲಮಪ್ರಭುದೇವರು ವಚನ ದರ್ಶನ ಪ್ರವಚನ’ ಮಂಗಲ ಸಮಾರಂಭ ಗುರುವಾರ ನಡೆಯಿತು.

ಸಾನಿಧ್ಯ ವಹಿಸಿ, ‘ಉದಕದ ಕೈಕಾಲ ಮುರಿದು, ಅಗ್ನಿಯ ಕಿವಿಮೂಗನರಿದು, ವಾಯುವ ತಲೆಯ ಕೊಯ್ದು, ಆಕಾಶವ ಶೂಲದಲ್ಲಿಕ್ಕಿದ ಬಲ್ಲದ ತಳವಾರನೀತರನು! ಅರಸು ಪ್ರಧಾನಮಂತ್ರಿ ಮೂವರ ಮುಂದುಗೆಡಿಸಿದ ಬಲ್ಲದ ತಳವಾರನೀತನು! ಒಂಬತ್ತು ಬಾಗಿಲ ಕದವನಿಕ್ಕಿ ಬಂದು ಬಿಯ್ಯಗವ ಹೂಡಿ ನವಸಾಸಿರ ಮಂದಿಯ ಕೊಂದುಳಿದನು ಗುಹೇಶ್ವರ’ ಈ ವಚನದ ನಿರ್ವಚನ ಮಾಡಿದರು.

ಉದಕವೆಂದರೆ, ಮನಸ್ಸು ಎಂದರ್ಥ. ಮನಸ್ಸು ಚಂಚಲವಾಗಿರುವುದಕ್ಕೆ ಇಲ್ಲಿ ಅದರ ಕೈಕಾಲು ಮುರಿಯಬೇಕು ಎಂದು ಹೇಳುತ್ತಾರೆ. ಅಂದರೆ ಮನಸ್ಸು ಏಕಾಗ್ರಗೊಳಿಸಬೇಕು. ಮನಸ್ಸು ಏಕಾಗ್ರಗೊಳಿಸುವ ಅತ್ಯಂತ ಸಹಜ ಮತ್ತು ಸುಲಭ ವಿಧಾನವೆಂದರೆ, ಇಷ್ಟಲಿಂಗಯೋಗ, ನಿರಂತರ ಇಷ್ಟಲಿಂಗಯೋಗ ಮಾಡುವ ಮೂಲಕ ನಮ್ಮ ಮನಸ್ಸನ್ನು ನಿಯಂತ್ರಿಸಬಹುದು.

ಸಕಲ ಇಂದ್ರಿಯಗಳಲ್ಲಿ ಮನಸ್ಸು ಪ್ರಧಾನವಾಗಿರುತ್ತದೆ. ವಾಹಕನಾದ ಮನಸ್ಸಿಗೆ ಸರಿಯಾದ ಸಂಸ್ಕಾರ ನೀಡಿದರೆ ನಮ್ಮ ದೇಹವೆಂಬ ವಾಹನ ಸುರಳಿತವಾಗಿ ಸುಮಾರ್ಗದಿಂದ ಸಾಗುತ್ತದೆ. ತಾವೆಲ್ಲರೂ ಒಂದು ತಿಂಗಳ ಪರ್ಯಂತ ಆಲಿಸಿದ ಅಲ್ಲಮರ ವಚನ ದರ್ಶನ ಪ್ರವಚನವನ್ನು ದಿನಾಲೂ ಮೆಲುಕು ಹಾಕುತ್ತಾ ಇರಬೇಕು. ಸಾಧ್ಯವಾದಷ್ಟು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡಾಗ ನಮ್ಮ ಜೀವನ ಸುಖಿ ಜೀವನವಾಗುತ್ತದೆ ಎಂದು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಬೀದರ ಸಂಸದರಾದ ಸಾಗರ ಖಂಡ್ರೆ ಅವರು, ಪೂಜ್ಯರ ಪ್ರವಚನವನ್ನು ಆಲಿಸಿ, ಆನಂದಪಟ್ಟರು. ಪೂಜ್ಯ ಗುರುಗಳು ನಮ್ಮೆಲ್ಲರಿಗೆ ಮಾರ್ಗದರ್ಶಕರಾಗಿ 40 ವರ್ಷಗಳಿಂದ ಶ್ರಾವಣ ಮಾಸದಲ್ಲಿ ಪ್ರವಚನ ಮಾಡುತ್ತ ಬಂದಿದ್ದಾರೆ.

ಪೂಜ್ಯರ ಪ್ರವಚನವೆಂದರೆ, ನಮ್ಮೆಲ್ಲರ ಮಾನಸಿಕ ಆರೋಗ್ಯ ಸರಿಪಡಿಸುವ ಔಷಧವಾಗಿವೆ. ಪೂಜ್ಯರು ಈ ಭಾಗದಲ್ಲಿ ಶೈಕ್ಷಣಿಕ ಸೇವೆ ಮಾಡುವ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಅನಾಥ ಮಕ್ಕಳ ರಕ್ಷಕರಾಗಿ ಅವರ ಬಾಳಿಗೆ ಬೆಳಕಾಗಿದ್ದಾರೆ. ಪೂಜ್ಯರ ನಿಸ್ವಾರ್ಥ ಸೇವಾ ಕಾರ್ಯ ನಮ್ಮ ಭಾಗದ ಸರ್ವಾಂಗೀಣ ಬೆಳವಣಿಗೆಗೆ ಬಹುದೊಡ್ಡ ಶಕ್ತಿ ನೀಡುತ್ತಿದೆ ಎಂದು ನುಡಿದರು.

ಬೀದರ ಬ್ರಿಮ್ಸ್ ಆಸ್ಪತ್ರೆ ಮನೋರೋಗ ತಜ್ಞರಾದ ಡಾ. ರಾಘವೇಂದ್ರ ವಾಗೋಲೆ ಅವರಿಗೆ ಪೂಜ್ಯರಿಂದ ಸನ್ಮಾನಿಸಿ, ಆಶೀರ್ವದಿಸಲಾಯಿತು.

ಶ್ರಾವಣ ಮಾಸದ ಸೇವಾ ಸಮಿತಿಯ ಅಧ್ಯಕ್ಷರಾದ ಸ್ವರೂಪಾ ಬಂಡೆಪ್ಪ ಬಳತೆ ದಂಪತಿಗಳಿಗೆ ಪೂಜ್ಯರು ಆಶೀರ್ವದಿಸಿದರು. ಬಳತೆ ಪರಿವಾರದ ವತಿಯಿಂದ ಸದ್ಭಕ್ತರಿಗೆ ಪ್ರಸಾದ ವ್ಯವಸ್ಥೆ ನಡೆಯಿತು.

ದೀಪಕ ಠಮಕೆ ನಿರೂಪಿಸಿದರು. ಮಲ್ಲಮ್ಮ ನಾಗನಕೇರೆ ಶರಣು ಸಮರ್ಪಿಸಿದರು. ರಾಜು ಜುಬರೆ, ಸಂಗಮೇಶ ಡೋಣಗಾಪೂರೆ ವಚನ ಸಂಗೀತ ನಡೆಸಿಕೊಟ್ಟರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ವಿದ್ಯಾರ್ಥಿನಿ ರಾಮೇಶ್ವರಿ ನಾಗನಾಥ ನಿಜಭಕ್ತಿಯ ಕುರಿತು ಭಾಷಣ ಮಾಡಿದಳು. ಶ್ರಾವಣ ಮಾಸದಲ್ಲಿ ಸೇವೆ ಸಲ್ಲಿಸಿದ ಎಲ್ಲರಿಗೂ ಸನ್ಮಾನಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *