ದಾವಣಗೆರೆ:
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ವಿದ್ಯಾಚೇತನ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಡಾ. ಜಿ. ಮಂಜುನಾಥಗೌಡ ಸ್ಮರಣಾರ್ಥ ದತ್ತಿ ಶರಣ ಚಿಂತನಾ ಗೋಷ್ಠಿ ಗುರುವಾರ ವಿದ್ಯಾ ಚೇತನ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ವಚನ ಗಾಯನದ ಮೂಲಕ ಆರಂಭಗೊಂಡ ಚಿಂತನಾಗೋಷ್ಠಿಯನ್ನು ಚೇತನ ಎಜುಕೇಶನ್ ಟ್ರಸ್ಟ್ ನಿರ್ದೇಶಕರಾದ ವಿ. ರಾಘವೇಂದ್ರ ಪ್ರಸಾದ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಕಿವಿಮಾತು ಹೇಳುತ್ತ, ಶರಣ ಸಾಹಿತ್ಯ ಪರಿಷತ್ತಿನ ಇಂತಹ ಮೌಲ್ಯಾಧಾರಿತ ಕಾರ್ಯಕ್ರಮಗಳು ಈಗ ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕ ಎಂದು ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಕೆ.ಬಿ. ಪರಮೇಶ್ವರಪ್ಪ ಅವರು ಪರಿಷತ್ತಿನ ಧ್ಯೇಯೋದ್ದೇಶಗಳ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕದಳಿ ವೇದಿಕೆಯ ಜಿಲ್ಲಾಧ್ಯಕ್ಷರಾದ ನಿರ್ಮಲ ಶಿವಕುಮಾರ ಅವರು ದತ್ತಿದಾನಿಗಳ ಪರಿಚಯ ಮಾಡಿಸಿದರು.
ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿತ ಎಚ್. ದೊಡ್ಡಗೌಡರ ಅವರು, ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ವಿಷಯ ಕುರಿತು ಅನುಭವ ನುಡಿಗಳನ್ನು ಆಡಿದರು.
12ನೇ ಶತಮಾನದ ವಚನ ಸಾಹಿತ್ಯ ನಿತ್ಯ ನೂತನ ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಇದು ಸಂಜೀವಿನಿ ಇದ್ದಂತೆ. ಈಗಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಈ ಮೌಲ್ಯಗಳ ಅಳವಡಿಕೆ ತುಂಬಾ ಅತ್ಯಗತ್ಯ. ಮೌಲ್ಯಗಳನ್ನು ಬೆಳೆಸುವಲ್ಲಿ ಕುಟುಂಬ, ಶಾಲೆ, ಶಿಕ್ಷಕ, ಪಠ್ಯವಸ್ತು ಹಾಗೂ ಮಾಧ್ಯಮಗಳು ತಮ್ಮದೇ ಆದ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ನಡೆಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಹೆಚ್. ಕೆ. ಲಿಂಗರಾಜ ವಹಿಸಿ, ತಮ್ಮ ನುಡಿಗಳಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಪರಿಚಯ ಅದರ ಕಾರ್ಯಕ್ರಮಗಳ ರೂಪರೇಷೆಗಳ ಬಗ್ಗೆ ತಿಳಿಸಿದರು.

ಚಿಂತನಾಗೋಷ್ಠಿಯ ಹಿನ್ನೆಲೆಯಲ್ಲಿ ಬಸವಣ್ಣನವರ ವಚನಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾ ಚೇತನ ಪಿಯು ಕಾಲೇಜಿನ ಡೀನ್ ಆದ ಶ್ರೀರಾಮ್ ಅವರು, ಪ್ರಾಚಾರ್ಯ ಎಸ್. ಕರಿಬಸಪ್ಪ ಅವರು, ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಮತ್ತು ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಬರಮಪ್ಪ ಮೈಸೂರ, ಸಾಂಸ್ಕೃತಿಕ ಕಾರ್ಯದರ್ಶಿ ಬಿ.ಟಿ. ಪ್ರಕಾಶ, ಖಜಾಂಚಿ ಎಸ್. ಸಿದ್ದೇಶಪ್ಪ, ಸಂಘದ ಕಾರ್ಯದರ್ಶಿ ಕೆ.ಎಂ. ಕುಮಾರಪ್ಪ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
