‘ವಿಶ್ವ ಶಾಂತಿಗೆ ಬಸವತತ್ವವೇ ದಾರಿದೀಪ’

ಸಿ.ಎಂ. ಬೂದಿಹಾಳ
ಸಿ.ಎಂ. ಬೂದಿಹಾಳ

ಬೆಳಗಾವಿ :

ಜಗತ್ತು ತಂತ್ರಜ್ಞಾನದಲ್ಲಿಂದು ಎಷ್ಟೇ ಮುನ್ನಡೆದಿದ್ದರೂ, ಮತ್ತೊಂದೆಡೆ ಯುದ್ಧ, ಜನಾಂಗೀಯ ದ್ವೇಷ, ಅಸಮಾನತೆ, ಶೋಷಣೆ ಮತ್ತು ಆರ್ಥಿಕ ಏರುಪೇರುಗಳಂತಹ ತೀವ್ರ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವ ಕುಲಕ್ಕೆ ಶಾಂತಿ, ಸಮಾನತೆ, ಪ್ರಗತಿ ಮತ್ತು ನೆಮ್ಮದಿಯ ದಾರಿ ತೋರಿಸಲು ಬಸವಣ್ಣನವರ ಜೀವನ ಹಾಗೂ ಶರಣರ ವಚನ ಸಾಹಿತ್ಯ ಅತ್ಯಂತ ಪ್ರಸ್ತುತವಾಗಿವೆ ಎಂದು ನಿವೃತ್ತ ಪ್ರಾಧ್ಯಾಪಕಿ ರಾಜನಂದಾ ಗಾರ್ಗಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಶುಕ್ರವಾರ ಜರುಗಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ‘ಅಂತರಾಷ್ಟ್ರೀಯ ಮಟ್ಟದಲ್ಲಿ ಬಸವಣ್ಣನವರ ತತ್ವ, ಸಿದ್ಧಾಂತಗಳ ಪ್ರಸ್ತುತತೆ’ ಎಂಬ ವಿಷಯ ಕುರಿತು ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡುತ್ತ, ಬಸವಣ್ಣನವರು ಪ್ರತಿಪಾದಿಸಿದ ಅಹಿಂಸೆ, ಕಾಯಕ, ದಾಸೋಹ ಹಾಗೂ ಸಾಮಾಜಿಕ ನ್ಯಾಯದ ಸಿದ್ಧಾಂತಗಳು ಕೇವಲ ಒಂದು ನಾಡು ಅಥವಾ ದೇಶಕ್ಕೆ ಸೀಮಿತವಾಗಿರದೆ, ಇಡೀ ವಿಶ್ವದ ಶಾಂತಿ ಮತ್ತು ಸಮಾನತೆಯ ಸಾಧನೆಗೆ ದಾರಿದೀಪವಾಗಿವೆ ಎಂದರು.

ಆಧುನಿಕ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಪರಿಕಲ್ಪನೆಗೆ ಎಂಟುನೂರು ವರ್ಷಗಳ ಹಿಂದೆಯೇ ‘ಅನುಭವ ಮಂಟಪ”ದ ಮೂಲಕ ಮುಕ್ತ ಚಿಂತನೆಯ ಮಾರ್ಗವನ್ನು ತೋರಿಸಿದ ಮಹಾನ್ ಚಿಂತಕರು ಬಸವಾದಿ ಶರಣರು. ಬಸವಣ್ಣನವರ ಚಿಂತನೆಯ ಕೇಂದ್ರ ಬಿಂದು ಮನುಷ್ಯನ ಮೌಲ್ಯವು ಅವನ ಜನ್ಮದಿಂದಲ್ಲ, ಅವನ ಗುಣ ಮತ್ತು ಕಾಯಕದಿಂದ ಎಂಬುದನ್ನು ತೋರಿಸಿದ್ದಾರೆ.

ಜಾತಿ, ವರ್ಣ, ಸಾಮಾಜಿಕ ಸ್ಥಾನಮಾನಗಳ ಆಧಾರದ ಮೇಲೆ ಮನುಷ್ಯನನ್ನು ಮೇಲಿನವನು – ಕೆಳಗಿನವನು ಎಂದು ವಿಭಜಿಸುವುದನ್ನು ಅವರು ವಿರೋಧಿಸಿದರು. ಅನುಭವ ಮಂಟಪದಲ್ಲಿ ವಿವಿಧ ಸಾಮಾಜಿಕ ಹಿನ್ನಲೆಯ ಜನರಿಗೆ ವಿಚಾರ ವಿನಿಮಯದ ಅವಕಾಶ ದೊರೆಯಿತು. ಇಂದು ಜಗತ್ತಿನ ಅನೇಕ ಭಾಗಗಳಲ್ಲಿ ವರ್ಣಭೇದ, ಜನಾಂಗೀಯ ತಾರತಮ್ಯ, ವಲಸಿಗರ ವಿರುದ್ಧದ ದ್ವೇಷ ಮತ್ತು ಸಾಮಾಜಿಕ ಹೊರಗಿಡುವಿಕೆ ಸಮಸ್ಯೆಗಳಿವೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರ ಸಮಾನತೆಯ ಸಂದೇಶ ಅತ್ಯಂತ ಪ್ರಸ್ತುತ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ.ಎಲ್.ಎಂ. ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ ಅವರು ಮಾತನಾಡುತ್ತ, ಲಿಂಗಾಯತ ಸಂಸ್ಕೃತಿಯ ಬಗ್ಗೆ ಹಾಗೂ ಬಸವಾದಿ ಶರಣರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡುವ ಜನ ಹೆಚ್ಚಾಗಿದ್ದಾರೆ. ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳು ಒಗ್ಗೂಡಿ ಲಿಂಗಾಯತ ಧರ್ಮ ಹಾಗೂ ಬಸವ ವಿರೋಧಿಗಳ ವಿರುದ್ಧ ಪ್ರತಿಭಟಿಸುವ ಕಾರ್ಯ ಮಾಡಬೇಕಾಗಿದೆ.

ಇದೇ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಪ್ರಾರಂಭದಲ್ಲಿ ಮಹಾಸಭಾದ ಮಹಿಳಾ ಪದಾಧಿಕಾರಿಗಳು ವಚನ ಪ್ರಾರ್ಥನೆ ಮಾಡಿದರು. ಪ್ರಸಾದ ದಾಸೋಹಿಗಳು ಹಾಗೂ ಮಹಾಸಭಾದ ಬೆಳಗಾವಿ ಮಹಾನಗರ ಘಟಕದ ಅಧ್ಯಕ್ಷ ಎಸ್.ಜಿ. ಸಿದ್ನಾಳ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಶ್ರೀ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷೆ ಸರಳಾ ಹೇರೇಕರ ವೇದಿಕೆಯ ಮೇಲಿದ್ದರು.

ಡಾ. ಅಡಿವೆಪ್ಪ ಇಟಗಿ ಸ್ವಾಗತಿಸಿದರು. ಕಾವೇರಿ ಖಿಲಾರಿ ಪರಿಚಯಿಸಿದರು. ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೂದಿಹಾಳ ಕಾರ್ಯಕ್ರಮ ನಿರೂಪಿಸಿದರು. ಭಾಗ್ಯಶೀ ಬೆಣಚನಮರಡಿ ಶರಣು ಸಮರ್ಪಣೆ ಮಾಡಿದರು.

ಮುರಿಗೆಪ್ಪ ಬಾಳಿ, ಈರಣ್ಣ ಚಿನಗುಡಿ, ಬಸವರಾಜ ಮಿಂಡೊಳ್ಳಿ, ಪ್ರವೀಣಕುಮಾರ ಚಿಕಲಿ, ಸುರೇಶ ನರಗುಂದ, ಎಫ್.ಆರ್. ಪಾಟೀಲ, ಮಹಾದೇವ ಕೋರಿ, ಅಶೋಕ ಹಾದಿಮನಿ, ಕೆಂಪಣ್ಣ ರಾಮಾಪುರಿ, ರತ್ನಾ ಬೆಣಚನಮರಡಿ, ಶೋಭಾ ಶಿವಳ್ಳಿ, ತ್ರಿವೇಣಿ ಪಾಟೀಲ, ಸರೋಜಿನಿ ನಡುವಿನಮನಿ, ಶ್ರೀದೇವಿ ನರಗುಂದ ಹಾಗೂ ನೂರಾರು ಬಸವಭಕ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *