‘ಆರೋಪಗಳು ನಮ್ಮ ಜೀವಂತಿಕೆಯ ಲಕ್ಷಣ.’
ದಾವಣಗೆರೆ :
ಕನ್ನಡ ಭವನ, ಕನ್ನಡ ಸಾಹಿತ್ಯ ಪರಿಷತ್ ನ ಎಸ್. ಬಿ. ರಂಗನಾಥ ವೇದಿಕೆಯಲ್ಲಿ ಅರಿವು ಬಳಗದವರು ಆಯೋಜಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಅರಿವಿನ ಪರಿಧಿ ಭಾಗ -1, 2, 3, 4 ಕೃತಿಗಳ ಲೋಕಾರ್ಪಣೆ ಸಮಾರಂಭ ಗುರುವಾರ ನಡೆಯಿತು.
ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು; ಸಾಹಿತ್ಯ, ಸಂಗೀತ ಮತ್ತು ಕಲೆಗೆ ಒಲಿಯುವುದರಿಂದ ಮನುಷ್ಯ ತನ್ನಲ್ಲಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ.

“ನಾವು ಯಾವುದೇ ತಪ್ಪು ದಾರಿ ತುಳಿಯದೆ ಸರಿಯಾದ ಮಾರ್ಗದಲ್ಲಿ ಸಾಗಲು ನಮ್ಮ ಪೂಜ್ಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಕೃಪಾಶೀರ್ವಾದವೇ ಕಾರಣ. ಅವರ ಅಭಯ ಹಾಗೂ ಭಕ್ತರ ಪ್ರೋತ್ಸಾಹದಿಂದಾಗಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆ.
“ಬಸವಲಿಂಗಪ್ಪನವರು ಹಾಗೂ ಮಲ್ಲೇಶ ಅವರ ಒತ್ತಾಯ ಮತ್ತು ಶ್ರದ್ಧೆಯಿಂದಾಗಿ ಈ ಲೇಖನಗಳು ಬೆಳಕು ಕಂಡವು. ಪತ್ರಿಕೆಗಳಲ್ಲಿ ನಾವು ಬರೆಯುವಾಗ ಸತ್ಯ ಹಾಗೂ ಖಾರವಾದ ವಿಚಾರಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದೆವು. ಕೆಲವು ಪತ್ರಿಕೆಗಳು ಒತ್ತಡಗಳಿಗೆ ಮಣಿದು ಅಂಕಣಗಳನ್ನು ನಿಲ್ಲಿಸಿದರೂ, ಮಲ್ಲೇಶ ಅವರು ಪತ್ರಿಕೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಪ್ರಕಟಿಸಿದರು.
ಲೇಖನಗಳ ತಿದ್ದುಪಡಿಯಲ್ಲಿ ಎಸ್. ಬಸವರಾಜ, ಲೋಕೇಶ ಒಡೆಯರ್, ದ್ಯಾಮೇಶ, ಹಾಗೂ ಮರುಳಸಿದ್ದಯ್ಯ, ಶಿವಕುಮಾರ ಅವರ ಸಹಕಾರ ದೊಡ್ಡದಿದೆ” ಎಂದರು.
“ಸಮಾಜದಲ್ಲಿ ಸದಾ ಕ್ರಿಯಾಶೀಲರಾಗಿ ಕೆಲಸ ಮಾಡುವವರ ಬಗ್ಗೆ ಟೀಕೆ-ಟಿಪ್ಪಣಿಗಳು ಬರುವುದು ಸಹಜ. ಇತ್ತೀಚೆಗೆ ಭದ್ರಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ನಾವು ಆಡಿದ ಮಾತುಗಳನ್ನು ಮಾಧ್ಯಮವೊಂದು ಅಪಾರ್ಥ ಮಾಡಿಕೊಂಡಿ ಅನೇಕ ಆರೋಪಗಳನ್ನು ಮಾಡಿದೆ. ‘ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ-ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’ ಎಂಬ ಅಕ್ಕಮಹಾದೇವಿಯವರ ವಚನದಂತೆ ನಾವು ಸಮಾಧಾನ ತಳೆದಿದ್ದೇವೆ. ಆರೋಪಗಳು ನಮ್ಮ ಜೀವಂತಿಕೆಯ ಲಕ್ಷಣ.

ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಕರೆತರಬೇಕು. ಮಕ್ಕಳು ಇಂತಹ ವಿಚಾರಗಳನ್ನು ಕೇಳಿದಾಗ ಅವರ ಮನಸ್ಸು ವಿಕಾರಗೊಳ್ಳದೆ ವಿಕಾಸಗೊಳ್ಳುತ್ತದೆ. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಕರೆತರಬೇಕು.
ದಾವಣಗೆರೆಯಲ್ಲಿ ‘ವಚನ ನಾದ ಲೋಕ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ-ಕಾಲೇಜುಗಳ ಸುಮಾರು 1,000 ದಿಂದ 2,000 ವಿದ್ಯಾರ್ಥಿಗಳು ಒಂದೆಡೆ ಸೇರಿ ವಚನಗಳನ್ನು ಗಾಯನ ಮಾಡಲಿದ್ದು, ಸೆಪ್ಟೆಂಬರ್ 30 ರಂದು ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಬೃಹತ್ ಪ್ರದರ್ಶನ ನಡೆಯಲಿದೆ ಎಂದು ಶ್ರೀಗಳು ಮಾಹಿತಿ ನೀಡಿದರು.
*ಅರಿವಿನ ಪರಿಧಿ ಭಾಗ -1* ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಬೆಂಗಳೂರಿನ ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ; ಅಂಕಣ ರೂಪದಲ್ಲಿದ್ದ ‘ಮರೆವು ಅರಿವು’ ಶೀರ್ಷಿಕೆಯು ನಗರವಾಣಿ ಪತ್ರಿಕೆಯ ಲೇಖನಗಳು ಕೃತಿ ರೂಪದಲ್ಲಿ ‘ಅರಿವಿನ ಪರಿಧಿ’ಯಾಗಿ ಮೂಡಿಬಂದಿದೆ. ಯಾವುದು ಮರೆಯಬೇಕಾದದ್ದು ಮತ್ತು ಯಾವುದು ಅರಿಯಬೇಕಾದದ್ದು ಎಂಬ ವಿವೇಕವೇ ಈ ಬರಹಗಳ ಆಶಯವಾಗಿದೆ.
ಅಲ್ಲಮಪ್ರಭುಗಳ “ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯ ನಡೆಯಲಾಗದು” ಎಂಬ ವಚನದಂತೆ, ಇತಿಹಾಸದ (ಭೂತಕಾಲ) ವಿವೇಕದಿಂದ ವರ್ತಮಾನವನ್ನು ಅರ್ಥೈಸಿ, ಭವಿಷ್ಯವನ್ನು ಕಟ್ಟುವ ತ್ರಿಕಾಲ ಪ್ರಜ್ಞೆಯನ್ನು ಈ ಕೃತಿಯು ಒಳಗೊಂಡಿದೆ.
೨೦೨೦ ರಿಂದ ೨೦೨೨ ರವರೆಗಿನ ೭೫ ವಾರಗಳ ಅಂಕಣ ಬರಹಗಳು ಇದರಲ್ಲಿ ಸೇರ್ಪಡೆಯಾಗಿವೆ. ಕೊರೊನಾ ಸಂಕಷ್ಟ, ಜಾಗತಿಕ ಯುದ್ಧಗಳು, ಕೃಷಿ, ರಂಗಭೂಮಿ, ಸಾಹಿತ್ಯ, ಶಿಕ್ಷಣ, ಮಹಿಳಾ-ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಜಿ.ಎಸ್. ಶಿವರುದ್ರಪ್ಪ ಮತ್ತು ಸಿದ್ದಲಿಂಗಯ್ಯನವರಂತಹ ಮಹನೀಯರ ಸ್ಮರಣೆ ಸೇರಿದಂತೆ ಹಲವು ಸಮಕಾಲೀನ ಸಂಗತಿಗಳನ್ನು ವಚನ ಪರಂಪರೆಯ ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಿಸಲಾಗಿದೆ.

ಆದಿಕವಿ ಪಂಪನ ನುಡಿಯಂತೆ, ನಮ್ಮ ತಿಳುವಳಿಕೆ ಮತ್ತು ವಿವೇಕವನ್ನು ನಿರಂತರವಾಗಿ ಹೊಸತುಗೊಳಿಸುವುದೇ ನಿಜವಾದ ಧರ್ಮ. ಪೂಜ್ಯರ ಬರಹಗಳು ಪ್ರತಿಯೊಬ್ಬ ಓದುಗನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಾ ಪ್ರಶ್ನಿಸುವ ಮನೋಭಾವವನ್ನು ಬೆಳೆಸುತ್ತವೆ ಎಂದರು.
*ಅರಿವಿನ ಪರಿಧಿ ಭಾಗ -2* ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಬೆಂಗಳೂರಿನ ವಿಶ್ರಾಂತ ಪ್ರಾಚಾರ್ಯ ಡಾ. ಪ್ರಸಾದಸ್ವಾಮಿ ಮಾತನಾಡಿ; ಸುಮಾರು ೧೬೦೦ ಪುಟಗಳ, ನಾಲ್ಕು ಸಂಪುಟಗಳ ಬೃಹತ್ ವ್ಯಾಪ್ತಿಯನ್ನು ಹೊಂದಿರುವ ಈ ಸರಣಿಯಲ್ಲಿ ‘ಅರಿವಿನ ಪರಿಧಿ ಭಾಗ-೨’ ಲೇಖನಗಳು ಲೌಕಿಕ ಮತ್ತು ಅಲೌಕಿಕ ಚಿಂತನೆಗಳನ್ನು ಸಮರ್ಥವಾಗಿ ಬೆಸೆಯುತ್ತವೆ. ಅಂಕಣ ಬರಹಗಳ ಸಾಲಿನಲ್ಲಿ ಹಾ.ಮಾ. ನಾಯಕ ಹಾಗೂ ಲಂಕೇಶರ ‘ಟೀಕೆ-ಟಿಪ್ಪಣಿ’ ಮಾದರಿಯಂತೆಯೇ ಈ ಬರಹಗಳೂ ಜನಪ್ರಿಯತೆ, ಪ್ರಬುದ್ಧತೆ ಮತ್ತು ಸಾಂಸ್ಕೃತಿಕ ಒಳನೋಟಗಳನ್ನು ಹೊಂದಿವೆ.
ಪತ್ರಕರ್ತ ಮತ್ತು ಲೇಖಕರು ಸಮಾಜದ ಕಣ್ಣಾಗಬೇಕು, ಸಮಾಜ ತಪ್ಪಾದಾಗ ಎಚ್ಚರಿಸುವ ಗಂಟೆಯಾಗಬೇಕು. ಈ ಪರಂಪರೆಯನ್ನು ಗುರುಗಳು ತಮ್ಮ ತಾರ್ಕಿಕ ಬರಹಗಳ ಮೂಲಕ ಕಾಯ್ದುಕೊಂಡು ಬಂದಿದ್ದಾರೆ.
೭೫ ಲೇಖನಗಳನ್ನೊಳಗೊಂಡ ಈ ಸಂಪುಟದಲ್ಲಿ ರಾಜಕಾರಣ, ಶಿಕ್ಷಣ, ಕೃಷಿ, ಪರಿಸರ ಹಾಗೂ ಸಾಹಿತ್ಯ ಕ್ಷೇತ್ರಗಳ ಪ್ರಸ್ತುತ ವಿದ್ಯಮಾನಗಳನ್ನು ಕಟುವಾಗಿ ಮತ್ತು ಪಾರದರ್ಶಕವಾಗಿ ವಿಮರ್ಶಿಸಲಾಗಿದೆ. ಪಕ್ಷಾಂತರ ರಾಜಕಾರಣವನ್ನು ‘ಕೋತಿಯಾಟ’ಕ್ಕೆ ಹೋಲಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲಾಗಿದೆ.
ಯಾವುದೇ ಪಂಥಕ್ಕೆ ಕಟ್ಟುಬೀಳದೆ, ಬುದ್ಧ ಮತ್ತು ಬಸವಣ್ಣನವರ ಚಿಂತನೆಗಳ ತೌಲನಿಕ ಅಧ್ಯಯನ, ಮಾನವೀಯತೆ ಹಾಗೂ ಸಾಂಸ್ಕೃತಿಕ ವಿವೇಕವನ್ನು ಜಾಗೃತಗೊಳಿಸುತ್ತದೆ.
ಸಂಸ್ಕೃತ, ಇಂಗ್ಲಿಷ್ ಹಾಗೂ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯಂತಹ ಒತ್ತಡಗಳಿಂದ ಕನ್ನಡ ಭಾಷೆಯನ್ನು ರಕ್ಷಿಸಿಕೊಳ್ಳುವ ಮುನ್ಸೂಚನೆಗಳನ್ನು ಈ ಲೇಖನಗಳು ನೀಡುತ್ತವೆ. ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವ, ಸಂಸ್ಕೃತಿ ಮತ್ತು ವೈಚಾರಿಕ ಅರಿವಿನ ತಳಹದಿಯನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ.
ಲೇಖನಗಳ ಒಳನೋಟ ಹೆಚ್ಚಿಸಲು ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಉರಿಲಿಂಗಪೆದ್ದಿ ಮತ್ತು ಮಾದಾರ ಚೆನ್ನಯ್ಯನವರ ವಚನಗಳನ್ನು ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಧ್ವನಿಸಲಾಗಿದೆ.
‘ವಿಕೃತಿಯಿಂದ ಪ್ರಕೃತಿಯೆಡೆಗೆ, ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ’ ಸಾಗುವ ಭರವಸೆಯನ್ನು ನೀಡುವ ಈ ಕೃತಿ, ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿದೆ. ‘ಮತ್ತೆ ಕಲ್ಯಾಣ’ದ ಆಶಯವನ್ನು ಬಿತ್ತರಿಸುವ ಈ ಲೇಖನಗಳು ಕೇವಲ ಉಪದೇಶವಲ್ಲದೆ, ವಿಚಾರಾತ್ಮಕ ನಿವೇದನೆಯಾಗಿವೆ ಎಂದರು.
*ಅರಿವಿನ ಪರಿಧಿ ಭಾಗ -3* ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರಾಧ್ಯಾಪಕಿ ಡಾ. ಆರ್. ತಾರಿಣಿ ಶುಭದಾಯಿನಿ ಮಾತನಾಡಿ; ವೀರಶೈವವು ವೈದಿಕ ಪರಂಪರೆ ಹಾಗೂ ಸಂಸ್ಕೃತ ಪಠ್ಯಗಳ ಚೌಕಟ್ಟಿನಲ್ಲಿದ್ದರೆ, ‘ಲಿಂಗಾಯತ’ ಎಂಬುದು ತನ್ನದೇ ಆದ ಸ್ವತಂತ್ರ ಮನೋಧರ್ಮ ಹಾಗೂ ಧಾರ್ಮಿಕ ಚೌಕಟ್ಟನ್ನು ಹೊಂದಿರುವ ಧರ್ಮವಾಗಿದೆ. ಬಸವಣ್ಣನವರ ತತ್ತ್ವಗಳನ್ನು ಎತ್ತಿಹಿಡಿಯುತ್ತಾ, ಯಾವುದೇ ಎಡಬಿಡಂಗಿತನವಿಲ್ಲದೆ “ನನ್ನದು ಲಿಂಗಾಯತ ಧರ್ಮ” ಎಂದು ನೇರವಾಗಿ ಘೋಷಿಸಿದ ಗುರುಗಳ ಬಸವ ಮಾರ್ಗದ ಧೈರ್ಯ ಹಾಗೂ ಸ್ಪಷ್ಟತೆಯನ್ನು ತಿಳಿಸಿದ ಏಕೈಕ್ಯ ಮಠಾಧೀಶರು ಪಂಡಿತಾರಾಧ್ಯ ಶ್ರೀಗಳು.
ಸನಾತನ ಧರ್ಮದತ್ತ ಮತ್ತೆ ಮರಳುತ್ತಿರುವ ಪ್ರಸ್ತುತ ಕಾಲಘಟ್ಟ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು ಕಲ್ಪನೆಗಳ ನಡುವೆ ಸತ್ಯದ ಪರವಾಗಿ ನಿಲ್ಲುವುದು ಸವಾಲಿನ ಕೆಲಸ. ಈ ಹಾದಿಯಲ್ಲಿ ಬರುವ ಟೀಕೆ, ಟ್ರೋಲ್ ಹಾಗೂ ವಿರೋಧಗಳಿಗೆ ಗುರುಗಳು ತಮ್ಮ ಲೇಖನಗಳ ಮೂಲಕ ಸತ್ಯನಿಷ್ಠೆಯಿಂದ ಉತ್ತರಿಸಿದ್ದಾರೆ.
ಬಸವಣ್ಣನವರಂತೆ ತೀವ್ರ ಆತ್ಮನಿರೀಕ್ಷಣೆ ಮಾಡಿಕೊಳ್ಳುವುದು ಒಬ್ಬ ಸತ್ಯಸಂಧ ವಿಚಾರವಂತನಿಗೆ ಅತ್ಯಗತ್ಯ. ಗುರುಗಳು ತಮ್ಮ ಮಾತಿನಲ್ಲಿ ಜಡತ್ವ ಬಾರದಂತೆ, ಧ್ಯಾನ ಹಾಗೂ ನಿರಂತರ ಜ್ಞಾನಶೋಧನೆಯ ಮೂಲಕ ಸಮಾಜಮುಖಿ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದಾರೆ.
ಮದ್ಯಪಾನ ವಿರೋಧಿ ಪಾದಯಾತ್ರೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಗುರುಗಳು ಕೇವಲ ಸದ್ಧರ್ಮ ಬೋಧನೆಗಷ್ಟೇ ಸೀಮಿತವಾಗದೆ, ಅನಾಚಾರ ಹಾಗೂ ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕುವಲ್ಲಿ ಪ್ರತ್ಯಕ್ಷವಾಗಿ ಕಾರ್ಯಾಚರಿಸುತ್ತಿದ್ದಾರೆ.
ಗುರುಗಳ ನಡೆ-ನುಡಿಗಳ ಸ್ಪಟಿಕದಂತಹ ಪಾರದರ್ಶಕತೆ ಹಾಗೂ ಅವರ ‘ನನ್ನ ಬದುಕೇ ನನ್ಮಸಂದೇಶ’ ಎಂಬ ಧೋರಣೆಯು ಈ ಮೂರನೇ ಸಂಪುಟದ ಲೇಖನಗಳಲ್ಲಿ ಎದ್ದುಕಾಣುತ್ತದೆ ಎಂದರು.
*ಅರಿವಿನ ಪರಿಧಿ ಭಾಗ -4* ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರಶಾಂತ ನಾಯಕ ಮಾತನಾಡಿ; ಪಂಡಿತಾರಾಧ್ಯ ಶ್ರೀಗಳ ‘ನಗರವಾಣಿ’ ಅಂಕಣ ಬರಹಗಳ ಗುಚ್ಚ ನಾಲ್ಕು ಸಂಪುಟಗಳು ಕೇವಲ ಸಾಹಿತ್ಯಿಕ ಬರಹಗಳಲ್ಲ, ಅವು ಸಮಾಜವನ್ನು ಜಾಗೃತಗೊಳಿಸುವ ಸಾತ್ವಿಕ ಎಚ್ಚರ ಮತ್ತು ಸಾರ್ವಕಾಲಿಕ ದಾಖಲೆಗಳಾಗಿವೆ. ಕೃತಿಯಲ್ಲಿ ಮೂಡಿಬಂದಿರುವ ಪ್ರತಿಯೊಂದು ಮಾತುಗಳೂ ‘ಮಾತು ಜ್ಯೋತಿರ್ಲಿಂಗವಾಗುವ’ ನಿಲುವಿಗೆ ಸಾಕ್ಷಿಯಾಗಿವೆ.
ಇಂದಿನ ಧಾರ್ಮಿಕ ಸಂಸ್ಥೆಗಳು ಮತ್ತು ಮಠಮಾನ್ಯಗಳು ಆಸ್ತಿ-ಅಧಿಕಾರಕ್ಕಾಗಿ ತತ್ತರಿಸುತ್ತಿರುವ ಸಂದರ್ಭದಲ್ಲಿ, ಸಾಣೇಹಳ್ಳಿ ಶ್ರೀಗಳು ಭರವಸೆಯ ಬೆಳಕಾಗಿ ನಿಂತಿದ್ದಾರೆ. ದ್ರೋಣಾಚಾರ್ಯ ಏಕಲವ್ಯನ ಹೆಬ್ಬೆರಳನ್ನು ಕೇಳಿದ್ದನ್ನು “ಶಿಷ್ಯ ದ್ರೋಹ” ಎಂದು ಗಂಟಾಘೋಷವಾಗಿ ಸಾರುವಂತಹ ಎದೆಗಾರಿಕೆ ಮತ್ತು ವೈಚಾರಿಕ ಸ್ಪಷ್ಟತೆ ಶ್ರೀಗಳ ಬರಹಗಳಲ್ಲಿದೆ.
ಸಂವಿಧಾನದ ಆಶಯಗಳು ಹಾಗೂ 12ನೇ ಶತಮಾನದ ವಚನಕಾರರ ತತ್ವಗಳನ್ನು ಶ್ರೀಗಳು ವರ್ತಮಾನದ ಸನ್ನಿವೇಶಕ್ಕೆ ಅಳವಡಿಸಿ ವಿಶ್ಲೇಷಿಸಿದ್ದಾರೆ. ಧರ್ಮ, ಶಿಕ್ಷಣ ಹಾಗೂ ರಾಜಕಾರಣದಲ್ಲಿ ನಡೆಯುತ್ತಿರುವ ಭ್ರಷ್ಟತೆಯನ್ನು ಕೃತಿಯಲ್ಲಿ ಮುಕ್ತವಾಗಿ ಪ್ರಶ್ನಿಸಲಾಗಿದೆ.
ಕೇವಲ ಉಪದೇಶ ನೀಡುವುದಕ್ಕೆ ಸೀಮಿತವಾಗದೆ, ಸಮಾಜವನ್ನು ತಿದ್ದುಪಡಿ ಮಾಡುವ ಕೆಲಸ ಮಠದಿಂದಲೇ ಆರಂಭವಾಗಬೇಕು ಎಂದು ಶ್ರೀಗಳು ತೋರಿಸಿಕೊಟ್ಟಿದ್ದಾರೆ. ಸಮಾಜಾವಲೋಕನ ಮತ್ತು ಜೀವನ ಪ್ರೀತಿಯೇ ಈ ಕೃತಿಗಳ ಮೂಲ ಶಕ್ತಿಯಾಗಿದೆ ಎಂದರು.
ಪ್ರಾಸ್ತಾಪಿಕವಾಗಿ ಮಾತನಾಡಿದ ‘ನಗರವಾಣಿ’ ದಿನಪತ್ರಿಕೆಯ ಉಪಸಂಪಾದಕ ಬಿ. ಎನ್. ಮಲ್ಲೇಶ ಮಾತನಾಡಿ; ಸುದ್ದಿ ಮತ್ತು ರೋಚಕ ವಿದ್ಯಮಾನಗಳನ್ನು ತಲುಪಿಸುವುದು ಅಷ್ಟೇ ಪತ್ರಿಕೆಯ ಕೆಲಸವಲ್ಲ; ಓದುಗರನ್ನು ವೈಚಾರಿಕವಾಗಿ ಪ್ರಚೋದಿಸಿ, ಸರಿ ದಾರಿಯಲ್ಲಿ ನಡೆಸುವ ಜವಾಬ್ದಾರಿಯೂ ಪತ್ರಿಕೆಗಳ ಮೇಲಿದೆ ಎಂದು
ನಗರದಲ್ಲಿ ‘ಅರಿವು ಬಳಗ’ದ ವತಿಯಿಂದ ಆಯೋಜಿಸಲಾಗಿದ್ದ ‘ಅರಿವಿನ ಹಾದಿ’ ಕಾರ್ಯಕ್ರಮದಲ್ಲಿ, ಸಾಣೇಹಳ್ಳಿಯ ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ನಗರವಾಣಿ ಪತ್ರಿಕೆಯಲ್ಲಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಬರೆದ ‘ಅರಿವು-ಮರೆವು’ ಅಂಕಣ ಬರಹಗಳ ನಾಲ್ಕು ಸಂಪುಟಗಳನ್ನು ಬಿಡುಗಡೆಗೊಳಿಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಸ್ತಾವಿಕ ನುಡಿಗಳ ಪ್ರಮುಖ ಮುಖ್ಯಾಂಶಗಳು:
ಈ ಹಿಂದೆ ಬಿಡುಗಡೆಯಾಗಿದ್ದ ಮೊದಲ ಸಂಪುಟ ಸೇರಿದಂತೆ, ಪ್ರಸ್ತುತ ಬಿಡುಗಡೆಯಾದ ನಾಲ್ಕು ಸಂಪುಟಗಳೊಂದಿಗೆ ಒಟ್ಟು ಐದು ಸಂಪುಟಗಳಲ್ಲಿ ಪೂಜ್ಯರ ಅಂಕಣ ಬರಹಗಳು ಓದುಗರಿಗೆ ಲಭ್ಯವಾಗಿವೆ.
ವೈಚಾರಿಕತೆಯ ಬೆಸುಗೆ:
ಆಧ್ಯಾತ್ಮಿಕ ವಿಷಯಗಳಿಗಿಂತ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಪೂಜ್ಯರು ಐದು ವರ್ಷಗಳಿಂದ ಒಂದು ವಾರವೂ ತಪ್ಪದೇ ನಿರಂತರವಾಗಿ ಈ ಅಂಕಣ ಬರೆದಿದ್ದಾರೆ.
ಡಿಜಿಟಲ್ ಜಗತ್ತಿನಲ್ಲಿ ಅಪಾರ ಓದುಗರು:
ಪತ್ರಿಕೆಯ ಮುದ್ರಿತ ಪ್ರತಿಯಷ್ಟೇ ಅಲ್ಲದೆ, ದೇಶ-ವಿದೇಶಗಳಲ್ಲಿ ಡಿಜಿಟಲ್ ರೂಪದಲ್ಲೂ ಈ ಅಂಕಣಕ್ಕೆ ಅಪಾರ ಓದುಗರ ಬಳಗ ಸೃಷ್ಟಿಯಾಗಿದೆ.
ನಿಷ್ಠುರ ಹಾಗೂ ನೇರ ನಡೆ:
ಪೂಜ್ಯರು ಯಾವುದೇ ಹೊಗಳಿಕೆಗೆ ಬಗ್ಗದೆ, ಒಳಗೊಂದು-ಹೊರಗೊಂದು ಮಾಡದೆ ಬಸವಣ್ಣನವರ ತತ್ವದಂತೆ ನಿಷ್ಠುರವಾಗಿ ತಮ್ಮ ವಿಚಾರಗಳನ್ನು ಸಮಾಜದ ಮುಂದಿಟ್ಟಿದ್ದಾರೆ.
ಮೌಢ್ಯ ವಿರೋಧಿ ನಿಲುವು:
ಇಷ್ಟಲಿಂಗ ಪೂಜೆಯ ಮಹತ್ವ, ಆಡಂಬರದ ಪೂಜೆಗಳ ಅನಗತ್ಯತೆ ಹಾಗೂ ಸಮಾಜದಲ್ಲಿ ಕಂಡುಬರುವ ನುಡಿ-ನಡೆಯ ವೈರುಧ್ಯಗಳನ್ನು ತಮ್ಮ ಅಂಕಣಗಳ ಮೂಲಕ ತೀವ್ರವಾಗಿ ಪ್ರಶ್ನಿಸಿದ್ದಾರೆ.
ರಂಗಕಲೆ ಮತ್ತು ಸಂಸ್ಕಾರ:
ಎಲ್ಲಿ ಸಾಹಿತ್ಯ, ಸಂಗೀತ ಹಾಗೂ ರಂಗಕಲೆಯ ಚಟುವಟಿಕೆಗಳು ಹೆಚ್ಚಿರುತ್ತವೆಯೋ ಅಲ್ಲಿ ರಕ್ತದ ಕಲೆಗಳು ಮತ್ತು ದುರ್ಗುಣಗಳು ಕಡಿಮೆಯಾಗುತ್ತವೆ ಎಂಬುದನ್ನು ಗುರುಗಳು ನಿರಂತರವಾಗಿ ಪ್ರತಿಪಾದಿಸಿದ್ದಾರೆ.
ಈ ಅಂಕಣ ಬರಹಗಳ ಓದಿನಿಂದ ಒಬ್ಬ ವ್ಯಕ್ತಿ ಪರಿವರ್ತನೆಗೊಂಡರೂ ಬರಹ ಸಾರ್ಥಕ ಎಂಬ ಆಶಯ ಪೂಜ್ಯರದ್ದಾಗಿದೆ. ಈ ದಿಸೆಯಲ್ಲಿ ದಾವಣಗೆರೆಯ ‘ಅರಿವು ಬಳಗ’ವು ಈ ಸಂಪುಟಗಳನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಶಿವಸಂಚಾರ ಕಲಾವಿದರಾದ ದಾಕ್ಷಾಯಣಿ, ನಾಗರಾಜ, ತಬಲ ಸಾಥಿ ಶರಣ್ ವಚನಗೀತೆಗಳನ್ನು ಹಾಡಿದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ ಸ್ವಾಗತಿಸಿದರೆ ಅಧ್ಯಾಪಕ ದ್ಯಾಮೇಶ ನಿರೂಪಿಸಿದರು.
‘ಅರಿವು ಬಳಗ’ದ ಸದಸ್ಯರು, ಸಾಹಿತ್ಯಾಭಿಮಾನಿಗಳು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು ಭಾಗವಹಿಸಿದ್ದರು.
