ವೈದಿಕತೆ ಬಿಡದೆ ‘ನಾವು ಹಿಂದೂಗಳಲ್ಲ’ ಎನ್ನುವ ಲಿಂಗಾಯತರು (ಭಾಗ 5)

ವಿನಯ್ ಶಿರಹಟ್ಟಿಮಠ
ವಿನಯ್ ಶಿರಹಟ್ಟಿಮಠ

1904-1940: ಲಿಂಗಾಯತ ಇತಿಹಾಸ ಬದಲಿಸಿದ ಆ ಮೂವತ್ತಾರು ವರ್ಷಗಳು

ಬೆಂಗಳೂರು

ಹಿಂದಿನ ಭಾಗವನ್ನು ನಾನು 1940ರಲ್ಲಿ ನಿಲ್ಲಿಸಿದ್ದೆ. ಆ ವರ್ಷ ವೀರಶೈವ ಮಹಾಸಭೆ ತನ್ನ 1904ರ ನಿರ್ಣಯಗಳನ್ನು ರದ್ದುಗೊಳಿಸಿ, ಲಿಂಗಾಯತರು ಹಿಂದೂಗಳಲ್ಲ ಎಂಬ ನಿಲುವನ್ನು ತೆಗೆದುಕೊಂಡಿತು.

ಆ ನಿರ್ಣಯದ ನಂತರ ಏನಾಯಿತು, ವೀರಶೈವ ತನ್ನ 1940ರ ನಿರ್ಣಯಕ್ಕೆ ಬದ್ದವಾಗಿದೆಯೇ ಎಂಬ ಪ್ರಶ್ನೆ ನನ್ನನ್ನು ಕಾಡಲಾರಂಭಿಸಿತು.

ವಿವರಗಳಿಗಾಗಿ ಹುಡುಕಾಡಿದೆ, ಸಿಕ್ಕ ಉತ್ತರ ನನ್ನ ನಿರೀಕ್ಷೆಗೆ ವಿರುದ್ಧವಾಗಿತ್ತು.

ಮಹಾಸಭೆ ತನ್ನ 1940ರ ನಿಲುವನ್ನು ಎಂದೂ ಹಿಂಪಡೆದಿಲ್ಲ. ಎಂಟೂವರೆ ದಶಕಗಳಿಂದ ಅದೇ ನಿರ್ಣಯಕ್ಕೆ ಬದ್ಧವಾಗಿದೆ. ಇದು ಆ ಸಂಸ್ಥೆಗೆ ಸಲ್ಲಬೇಕಾದ ಶ್ರೇಯಸ್ಸು.

ಎಂಟೂವರೆ ದಶಕಗಳ ಸತತ ಬೇಡಿಕೆ

1940ರಲ್ಲಿ ಕೈಗೊಂಡ ನಿರ್ಣಯದ ಪ್ರಕಾರ ಮಹಾಸಭೆ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಗೆ ಮನವಿಯನ್ನು ಸಲ್ಲಿಸಿತು.

ಸ್ವಾತಂತ್ರ್ಯದ ನಂತರವೂ ಆ ಬೇಡಿಕೆ ಮುಂದುವರೆಯಿತು. 90ರ ದಶಕದಲ್ಲಿ ಭೀಮಣ್ಣ ಖಂಡ್ರೆಯವರ ನೇತೃತ್ವದಲ್ಲಿ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಅನೇಕ ರ್ಯಾಲಿಗಳು ನಡೆದವು.

90ರ ದಶಕದಲ್ಲಿ ಭೀಮಣ್ಣ ಖಂಡ್ರೆಯವರ ನೇತೃತ್ವದಲ್ಲಿ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಅನೇಕ ರ್ಯಾಲಿಗಳು ನಡೆದವು.

ಒಂದು ನಿಯೋಗ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಗೃಹ ಸಚಿವ ಎಲ್.ಕೆ. ಅಡ್ವಾಣಿಯವರನ್ನು ಭೇಟಿಯಾಗಿ ಇದೇ ಬೇಡಿಕೆಯನ್ನು ಮಂಡಿಸಿತು.

2011ರ ಜನಗಣತಿಗೆ ಮೊದಲು ಮಹಾಸಭೆ ಕೇಂದ್ರಕ್ಕೆ ಮನವಿ ಸಲ್ಲಿಸಿ ಪ್ರತ್ಯೇಕ ಧರ್ಮ ಸಂಕೇತವನ್ನು ಕೇಳಿತು. ಅದು ನಿರಾಕರಣೆಯಾದಾಗ ಸುಮ್ಮನಾಗಲಿಲ್ಲ.

ಜನಜಾಗೃತಿ ಜಾಥಾ ನಡೆಸಿ, ಸಮುದಾಯದ ಸದಸ್ಯರಿಗೆ ಹಿಂದೂ ಎಂದು ಗುರುತಿಸಿಕೊಳ್ಳುವ ಬದಲು “ಇತರೆ” ಕಾಲಂನಲ್ಲಿ ವೀರಶೈವ-ಲಿಂಗಾಯತ ಎಂದು ಬರೆಯುವಂತೆ ಸೂಚಿಸಿತು.

2013ರಲ್ಲಿ ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ಮಹಾಸಭೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಚಿವ ವೀರಪ್ಪ ಮೊಯ್ಲಿಯವರಿಗೆ ಮನವಿ ಸಲ್ಲಿಸಿತು. ಸೋನಿಯಾ ಗಾಂಧಿ ಅದನ್ನು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆಯವರಿಗೆ ರವಾನಿಸಿದರು.

ಆದರೆ ಯುಪಿಎ ಸರ್ಕಾರ ವೀರಶೈವ-ಲಿಂಗಾಯತರು ಹಿಂದೂಗಳ ಒಂದು ಪಂಗಡವೇ ಹೊರತು ಸ್ವತಂತ್ರ ಧರ್ಮವಲ್ಲ ಎಂದು ನಿರ್ಣಯಿಸಿತು.

2017ರ ಆಗಸ್ಟ್‌ನಲ್ಲಿ ಮಹಾಸಭೆ ಮತ್ತೊಮ್ಮೆ ಔಪಚಾರಿಕ ನಿರ್ಣಯವನ್ನು ಕೈಗೊಂಡಿತು. ವೀರಶೈವ ಲಿಂಗಾಯತರು ಹಿಂದೂ ಧರ್ಮದ ಭಾಗವಲ್ಲ ಎಂದು ಪ್ರತಿಪಾದಿಸಿ, ಪ್ರತ್ಯೇಕ ಧಾರ್ಮಿಕ ಮಾನ್ಯತೆಗಾಗಿ ದುಡಿಯುವ ಸಂಕಲ್ಪವನ್ನು ಮಾಡಿತು.

ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಹಿರಿಯ ಉಪಾಧ್ಯಕ್ಷ ಎನ್. ತಿಪ್ಪಣ್ಣ ಮತ್ತು ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆಯವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಕೊಟ್ಟ ಕಾರಣ ಗಮನಾರ್ಹ — ಷಟ್‌ಸ್ಥಲ, ಪಂಚಾಚಾರ ಮತ್ತು ಅಷ್ಟಾವರಣಗಳಂಥ ಆಚರಣೆಗಳು ಇತರ ಧರ್ಮಗಳಿಗಿಂತ ಭಿನ್ನ ಎಂಬುದು.

2023ರಲ್ಲಿ ದಾವಣಗೆರೆಯಲ್ಲಿ ನಡೆದ 28ನೇ ಅಧಿವೇಶನದಲ್ಲಿ ಎಂಟು ಅಂಶಗಳ ನಿರ್ಣಯ ಅಂಗೀಕಾರವಾಯಿತು.

ಅವುಗಳಲ್ಲಿ ಒಂದು — ಮುಂದಿನ ಜನಗಣತಿಯಲ್ಲಿ ಸಮುದಾಯದವರು ವೀರಶೈವ-ಲಿಂಗಾಯತರೆಂದೇ ದಾಖಲಾಗಬೇಕು, ಮತ್ತು ಧರ್ಮದ ಕಾಲಂನಲ್ಲಿ ಹಿಂದೂ ಎಂಬ ಪದವನ್ನು ಬಳಸಬಾರದು.

2025ರ ಸೆಪ್ಟೆಂಬರ್ 22ರಿಂದ ಕರ್ನಾಟಕದಲ್ಲಿ ನಡೆದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲೂ ಅದೇ ಸೂಚನೆ ಪುನರಾವರ್ತನೆಯಾಯಿತು. ಧರ್ಮವನ್ನು “ಇತರೆ” ಕಾಲಂನಲ್ಲಿ ನಮೂದಿಸಬೇಕೆಂದು ಮಹಾಸಭೆ ಹೇಳಿತು.

ಸನಾತನ ಹಿಂದೂ ಮತ್ತು ವೀರಶೈವ-ಲಿಂಗಾಯತ ಧರ್ಮಗಳ ನಡುವೆ ಯಾವ ಸಂಬಂಧವೂ ಇಲ್ಲ ಎಂದು ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆಯವರ ಸ್ಪಷ್ಟವಾಗಿ ಹೇಳಿದರು.

ಇದೇ ದಾವಣಗೆರೆ ಅಧಿವೇಶನದಲ್ಲಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಿಸಲು ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.

ಇದರನ್ವಯ ರಾಜ್ಯ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಈಗಾಗಲೇ ಘೋಷಿಸಿದೆ.

ಈ ಕಾಲರೇಖೆಯನ್ನು ಒಟ್ಟಿಗೆ ಇಟ್ಟು ನೋಡಿ. 1940, 90ರ ದಶಕ, 2011, 2013, 2017, 2023, 2025, ಮತ್ತು ಈಗ 2027ರ ಗಣತಿಯ ಸಿದ್ಧತೆ.

ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಬಂದವು ಹೋದವು. ಮನವಿಗಳು ಪದೇಪದೇ ತಿರಸ್ಕೃತವಾದವು. ಆದರೆ ಬೇಡಿಕೆ ಮಾತ್ರ ಬದಲಾಗಲಿಲ್ಲ.

ನಾವು ಹಿಂದೂಗಳಲ್ಲ ಎಂಬ ೧೯೪೦ರ ನಿಲುವನ್ನು ಮಹಾಸಭೆ ಎಂಟೂವರೆ ದಶಕಗಳ ಕಾಲ ಉಳಿಸಿಕೊಂಡಿದೆ. ಜನಗಣತಿಯಲ್ಲಿ ಹಿಂದೂ ಎಂದು ಬರೆಯಬೇಡಿ ಎಂದು ಸಮುದಾಯಕ್ಕೆ ಬಹಿರಂಗವಾಗಿ ಮತ್ತೆ ಮತ್ತೆ ಸೂಚಿಸಿದೆ.

ನಾವು ಹಿಂದೂಗಳಲ್ಲ ಎಂಬ ೧೯೪೦ರ ನಿಲುವನ್ನು ಮಹಾಸಭೆ ಎಂಟೂವರೆ ದಶಕಗಳ ಕಾಲ ಉಳಿಸಿಕೊಂಡಿದೆ.

ಇದನ್ನು ಒಪ್ಪಿಕೊಳ್ಳದೆ ಮಹಾಸಭೆಯನ್ನು ಟೀಕಿಸುವುದು ಅಪ್ರಾಮಾಣಿಕವಾಗುತ್ತದೆ. ಆದ್ದರಿಂದ ಸ್ಪಷ್ಟವಾಗಿ ಬರೆಯುತ್ತೇನೆ — ಈ ವಿಷಯದಲ್ಲಿ ಮಹಾಸಭೆ ತನ್ನ ಮಾತಿಗೆ ನಿಂತಿದೆ.

ಹಾಗಾದರೆ ಜಗಳ ಯಾವುದರ ಮೇಲೆ?

ಜಗಳ ಹಿಂದೂ ಅಥವಾ ಹಿಂದೂಯೇತರ ಎಂಬುದರ ಮೇಲಲ್ಲ. ಅದಿರುವುದು ಹೆಸರಿನ ಮೇಲೆ.

ಮಹಾಸಭೆ “ವೀರಶೈವ-ಲಿಂಗಾಯತ” ಎಂಬ ಹೆಸರಿನಲ್ಲಿ ಪ್ರತ್ಯೇಕ ಧರ್ಮದ ಮಾನ್ಯತೆ ಕೇಳುತ್ತಿದೆ. ವೀರಶೈವ ಮತ್ತು ಲಿಂಗಾಯತ ಎಂಬ ಎರಡು ಪದಗಳ ಅರ್ಥ ಒಂದೇ ಎಂಬುದು ಅದರ ನಿಲುವು.

ಇನ್ನೊಂದು ಕಡೆ ಜಾಗತಿಕ ಲಿಂಗಾಯತ ಮಹಾಸಭೆ ಕೇಳುತ್ತಿರುವುದು “ಲಿಂಗಾಯತ” ಎಂಬ ಹೆಸರಿನಲ್ಲಿ ಮಾತ್ರ. ಬಸವಣ್ಣನವರನ್ನು ಅನುಸರಿಸುವ ಲಿಂಗಾಯತರು ವೈದಿಕ ಆಚರಣೆಗಳನ್ನು ಪಾಲಿಸುವ ವೀರಶೈವರಿಂದ ಬೇರೆ ಎಂಬುದು ಅವರ ವಾದ.

ಈ ಒಂದು ಅಂಶ ಬಹಳ ಮುಖ್ಯ, ಏಕೆಂದರೆ ಇದು 1940ರ ನಿರ್ಣಯದ ಬಗ್ಗೆಯೇ ಒಂದು ಟೀಕೆಯನ್ನು ಒಳಗೊಂಡಿದೆ.

ಅಂದು ಮಹಾಸಭೆ ಪ್ರತ್ಯೇಕ ಧರ್ಮವನ್ನು ಕೇಳಿದ್ದೇನೋ ನಿಜ. ಆದರೆ ಅದು ವೀರಶೈವ ಎಂಬ ಹೆಸರಿನಲ್ಲಿ ಪ್ರತ್ಯೇಕ ಧರ್ಮ ಕೇಳಿತು.

ಶೈವ ಹಿಂದೂ ಧರ್ಮದ ಭಾಗವಾದ್ದರಿಂದ ಲಿಂಗಾಯತರನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಲಾಗದು ಎಂಬ ಕಾರಣ ನೀಡಿ ಕೇಂದ್ರ ಬೇಡಿಕೆ ತಿರಸ್ಕರಿಸಿದೆ.

ಶೈವ ಹಿಂದೂ ಧರ್ಮದ ಭಾಗವಾದ್ದರಿಂದ ಲಿಂಗಾಯತರನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಲಾಗದು ಎಂಬ ಕಾರಣ ನೀಡಿ ಕೇಂದ್ರ ಬೇಡಿಕೆ ತಿರಸ್ಕರಿಸಿದೆ.

ಅಂದರೆ 1904ರ ನೆರಳು 1940ರ ಮೇಲೂ ಬಿದ್ದಿತ್ತು. ಹಿಂದೂ ಅಲ್ಲ ಎಂದು ಹೇಳಿದೆವು, ಆದರೆ ಹಿಂದೂ ಚೌಕಟ್ಟಿನೊಳಗಿನ ಹೆಸರನ್ನೇ ಹಿಡಿದುಕೊಂಡು ಹೋದೆವು.

ಇದನ್ನು ಒಂದು ದೂರಾಗಿ ಹೇಳುತ್ತಿಲ್ಲ. ಒಂದು ಚಾರಿತ್ರಿಕ ಗಂಟಾಗಿ ಹೇಳುತ್ತಿದ್ದೇನೆ. ಎಂಟೂವರೆ ದಶಕಗಳಿಂದ ಆ ಗಂಟು ಬಿಚ್ಚಿಲ್ಲ.

2018 ಮತ್ತು ಒಡಕು

2017-18ರಲ್ಲಿ ಈ ಭಿನ್ನಾಭಿಪ್ರಾಯ ಸಾರ್ವಜನಿಕ ಒಡಕಾಗಿ ಮಾರ್ಪಟ್ಟಿತು. ರಾಜ್ಯ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿ, ಸಂಪುಟದಲ್ಲಿ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನದ ನಿರ್ಣಯವನ್ನು ಕೈಗೊಂಡಿತು.

ಮಹಾಸಭೆ ಆ ಸಂಪುಟ ನಿರ್ಣಯವನ್ನು ತಿರಸ್ಕರಿಸಿ, ಒಂಬತ್ತು ಅಂಶಗಳ ನಿರ್ಣಯವನ್ನು ಅಂಗೀಕರಿಸಿ, ವೀರಶೈವ-ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಬೇಕೆಂಬ ಬೇಡಿಕೆಯನ್ನು ಪುನರುಚ್ಚರಿಸಿತು.

ರಂಭಾಪುರಿ ಪೀಠದ ಸ್ವಾಮಿಗಳ ಮಾತು ಈ ನಿಲುವನ್ನು ಸಂಕ್ಷೇಪಿಸುತ್ತದೆ — ವೀರಶೈವ-ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡುವುದಕ್ಕೆ ತಮ್ಮ ಆಕ್ಷೇಪವಿಲ್ಲ, ಆದರೆ ಸಮುದಾಯವನ್ನು ಒಡೆದು ಲಿಂಗಾಯತರಿಗೆ ಮಾತ್ರ ಸ್ಥಾನಮಾನ ಕೊಡುವುದಕ್ಕೆ ವಿರೋಧವಿದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿತು. ಅದು ಕೊಟ್ಟ ಕಾರಣ ಗಮನಾರ್ಹ: ಲಿಂಗಾಯತ ಸಮುದಾಯದೊಳಗೆ ದಲಿತ ಮತ್ತು ಬುಡಕಟ್ಟು ವಿಭಾಗಗಳಿವೆ, ಪ್ರತ್ಯೇಕ ಧರ್ಮ ಸ್ಥಾನಮಾನ ಸಿಕ್ಕರೆ ಅವರು ಎಸ್‌ಸಿ-ಎಸ್‌ಟಿ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ ಎಂಬುದು.

ಇಂದಿನ ಸ್ಥಿತಿ

ಈಗ ಸಮುದಾಯದ ಮುಂದೆ ಇರುವ ಗೊಂದಲವನ್ನು ನೋಡಿ.

ಒಂದು ಕಡೆ ಮಹಾಸಭೆಯ ನಾಯಕತ್ವ ಹೇಳುತ್ತಿದೆ — ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಯಬೇಡಿ, “ಇತರೆ” ಎಂದು ಬರೆಯಿರಿ.

ಇನ್ನೊಂದು ಕಡೆ, ಪಂಚಪೀಠಾಧೀಶರು ಮತ್ತು ಕೆಲವು ವಿರಕ್ತ ಮಠಗಳ ಸ್ವಾಮಿಗಳು ಕೂಡ — ವೀರಶೈವ ಮತ್ತು ಲಿಂಗಾಯತ ಒಂದೇ, ಭಕ್ತರು ಧರ್ಮದ ಕಾಲಂನಲ್ಲಿ ಹಿಂದೂ ಎಂದೂ ಜಾತಿಯ ಕಾಲಂನಲ್ಲಿ ವೀರಶೈವ-ಲಿಂಗಾಯತ ಎಂದೂ ಬರೆಯಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ವರದಿಯಾಗಿದೆ.

ಮೂರನೆಯ ಕಡೆ, ವಿರಕ್ತ ಮಠಗಳ ಒಕ್ಕೂಟ — ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳ ಸಾಲಿನಲ್ಲಿ “ಲಿಂಗಾಯತ” ಧರ್ಮಕ್ಕೆ ಮಾನ್ಯತೆ ಬೇಕೆಂದು ನಿರ್ಣಯ ಕೈಗೊಂಡಿದೆ.

ಒಂದೇ ಸಮುದಾಯ. ಒಂದೇ ಜನಗಣತಿ. ಮೂರು ಬೇರೆ ಬೇರೆ ಸೂಚನೆಗಳು. ಸಾಮಾನ್ಯ ಭಕ್ತನೊಬ್ಬ ಗಣತಿ ಅಧಿಕಾರಿಯ ಮುಂದೆ ನಿಂತಾಗ ಏನು ಬರೆಸಬೇಕು?

ಈ ಎಲ್ಲದರ ಅರ್ಥವೇನು:

ಹಿಂದಿನ ಭಾಗಗಳಲ್ಲಿ ನಾನು ಒಂದು ಅಂತರದ ಬಗ್ಗೆ ಬರೆದಿದ್ದೆ — ಕಾಗದದ ಮೇಲಿನ ನಿರ್ಣಯ ಮತ್ತು ನೆಲದ ಮೇಲಿನ ಆಚರಣೆಯ ನಡುವಿನ ಅಂತರ. ಆ ಅಂತರದಿಂದಾಗಿರುವ ಸಮಸ್ಯೆ, ಗೊಂದಲ ನಾವು ಅರ್ಥಮಾಡಿಕೊಳ್ಳಬೇಕು.

ಎಂಟೂವರೆ ದಶಕಗಳಿಂದ ಒಂದು ಸಂಸ್ಥೆ ‘ನಾವು ಹಿಂದೂಗಳಲ್ಲ, ನಮ್ಮ ಆಚರಣೆಗಳು ಬೇರೆ – ಷಟ್‌ಸ್ಥಲ ಪಂಚಾಚಾರ, ಅಷ್ಟಾವರಣ,’ ಎಂದು ಹೇಳುತ್ತಿದೆ.

ಅದೇ ಎಂಟೂವರೆ ದಶಕಗಳಲ್ಲಿ ನಮ್ಮ ಮಠ ಮಂದಿರಗಳಲ್ಲಿ ರುದ್ರಾಭಿಷೇಕ, ಕಳಸಾರೋಹಣ ಮತ್ತು ಪ್ರಾಣಪ್ರತಿಷ್ಠೆ ನಡೆಯುತ್ತಲೇ ಇವೆ.

ಅದೇ ಎಂಟೂವರೆ ದಶಕಗಳಲ್ಲಿ ನಮ್ಮ ಮಠ ಮಂದಿರಗಳಲ್ಲಿ ರುದ್ರಾಭಿಷೇಕ, ಕಳಸಾರೋಹಣ ಮತ್ತು ಪ್ರಾಣಪ್ರತಿಷ್ಠೆ ನಡೆಯುತ್ತಲೇ ಇವೆ.

ಇಲ್ಲಿ ನಾನು ಯಾರನ್ನೂ ದೂಷಿಸುತ್ತಿಲ್ಲ. ಒಂದು ಸರಳ ಪ್ರಶ್ನೆಯನ್ನು ಮಾತ್ರ ಇಡುತ್ತಿದ್ದೇನೆ.

ಸರ್ಕಾರದ ಮುಂದೆ ನಾವು ಹಿಂದೂಗಳಲ್ಲ ಎಂದು ವಾದಿಸುತ್ತೇವೆ. ನಮ್ಮ ಗುಡಿಗಳಲ್ಲಿ ಹಿಂದೂ ಆಗಮ ವಿಧಿಗಳನ್ನು ಆಚರಿಸುತ್ತೇವೆ. ಈ ಎರಡರಲ್ಲಿ ಯಾವುದು ನಮ್ಮ ನಿಜವಾದ ನಿಲುವು?

ಪ್ರತ್ಯೇಕ ಧರ್ಮದ ಮಾನ್ಯತೆ ಎಂಟೂವರೆ ದಶಕಗಳಿಂದ ಸಿಗದಿರುವುದಕ್ಕೆ ಹೆಸರಿನ ಗೊಂದಲ ಒಂದು ಕಾರಣವಿರಬಹುದು. ಆದರೆ ಈ ಅಂತರವೂ ಒಂದು ಕಾರಣವಿರಬಹುದೇ ಎಂಬುದನ್ನು ನಾವು ಪ್ರಾಮಾಣಿಕವಾಗಿ ಕೇಳಿಕೊಳ್ಳಬೇಕು.

ಒಂದು ಸಮುದಾಯ ತಾನು ಬೇರೆ ಎಂದು ಹೇಳಿಕೊಳ್ಳುವಾಗ, ಆ ಬೇರೆತನ ಆಚರಣೆಯಲ್ಲೂ ಕಾಣಬೇಕಲ್ಲವೇ?

ನನ್ನಂತ ಲಕ್ಷಾಂತರ ಸಮುದಾಯದ ವ್ಯಕ್ತಿಗಳ ಪರವಾಗಿ ನನ್ನ ಮನವಿ:

2027ರ ಫೆಬ್ರವರಿಯಲ್ಲಿ ಜನಸಂಖ್ಯಾ ಗಣತಿ ನಡೆಯಲಿದೆ. ಆಗ ಪ್ರತಿಯೊಬ್ಬರೂ ಧರ್ಮದ ಕಾಲಂನಲ್ಲಿ ಏನೋ ಒಂದನ್ನು ಬರೆಸಲೇಬೇಕು.

ಅಷ್ಟರೊಳಗೆ ಮಹಾಸಭೆ, ಪಂಚಪೀಠಗಳು ಮತ್ತು ವಿರಕ್ತ ಮಠಗಳ ಒಕ್ಕೂಟ — ಈ ಮೂರೂ ಒಟ್ಟಿಗೆ ಕುಳಿತು ಸಮುದಾಯಕ್ಕೆ ಒಂದೇ ಸ್ಪಷ್ಟ ಸೂಚನೆಯನ್ನು ನೀಡಬೇಕು.

ಮೂರು ಬೇರೆ ಬೇರೆ ಸೂಚನೆಗಳಿಂದ ಯಾರಿಗೂ ಲಾಭವಿಲ್ಲ. ಗಣತಿ ಮುಗಿದ ಮೇಲೆ ಚರ್ಚಿಸಿ ಪ್ರಯೋಜನವಿಲ್ಲ.

ಆ ಅಂಕಿಅಂಶ ಮುಂದಿನ ಹತ್ತು ವರ್ಷ ನಮ್ಮ ಮೇಲೆ ನಿಲ್ಲುತ್ತದೆ.

1940ರಿಂದ ಇಂದಿನವರೆಗೆ ಮಹಾಸಭೆ ಸಲ್ಲಿಸಿದ ಎಲ್ಲ ಮನವಿಗಳನ್ನೂ ಮತ್ತು ಸರ್ಕಾರಗಳಿಂದ ಬಂದ ಎಲ್ಲ ಉತ್ತರಗಳನ್ನೂ ಸಂಗ್ರಹಿಸಿ ಒಂದೇ ಕಡತವಾಗಿ ಪ್ರಕಟಿಸಬೇಕು. ಆಗ ಬೇಡಿಕೆ ಎಲ್ಲಿ ಎಡವಿತು ಎಂಬುದು ಎಲ್ಲರಿಗೂ ಕಾಣುತ್ತದೆ; ಮುಂದಿನ ಬಾರಿ ಆ ತಪ್ಪನ್ನು ತಪ್ಪಿಸಬಹುದು.

ಈ ಲೇಖನ ಸ್ಮರಣೀಯ ಆಧಾರಗಳು

•ಡಾ. ಎಸ್.ಎಂ. ಜಾಮದಾರ, ಡಾ. ಚಿದಾನಂದ ಮೂರ್ತಿಯವರ ವಾದಕ್ಕೆ ಉತ್ತರ, ಬಸವಪಥ ಮಾಸಪತ್ರಿಕೆ

•ಮಾತೆ ಮಹಾದೇವಿ, ಲಿಂಗಾಯತ ಎಂಬ ಹೊಸ ಧರ್ಮ

•Edgar Thurston, Castes and Tribes of Southern India

•ಡಾ. ಡಿ.ಸಿ. ಪಾವಟೆ, ಇಂಡಿಯನ್ ಎಕ್ಸ್‌ಪ್ರೆಸ್, ೨೩-೧೨-೧೯೭೩

•ಹಿರೇಮಠ ಸಂಸ್ಥಾನ ಭಾಲ್ಕಿಯ ಪ್ರಕಟಣೆಗಳು — ಡಾ. ಚನ್ನಬಸವ ಪಟ್ಟದೇವರ ತರಬೇತಿ ಮತ್ತು ೧೯೨೪ರ ಪೀಠಾರೋಹಣ

•ಶ್ರೀಕಂಠ ಚೌಕಿಮಠರು ಒದಗಿಸಿದ ಮುದ್ರಿತ ಪುಟ — All India Veershaiwa Mahasabha, Kumbkonam, 26–28 May 1940

•ಶ್ರೀ ಬಸಯ್ಯ ಹಿರೇಮಠರು ಒದಗಿಸಿದ ಮಾಹಿತಿ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
2 Comments
  • ಆತ್ಮೀಯರೇ, ತಾವು ಲಿಂಗಾಯತ ಧರ್ಮಕ್ಕೆ ಲಿಂಗಾಯತ ರಾಗಿಯೇ,ಸತತಾ ಅನ್ಯಾಯ ಮಾಡತಿರುವ , ವೀರಶೈವ ಮಹಾಸಭೆ, ನಂತರ ವೀರಶೈವ ಲಿಂಗಾಯತ ಮಹಾಸಭೆ ಮಾಡಿಕೊಂಡು , ತಮ್ಮ ರಾಜಕೀಯ ಸ್ವಾರ್ಥಕ್ಕೆ ಲಿಂಗಾಯತ ಧರ್ಮ ಸ್ವಾತಂತ್ರ್ಯ ಧರ್ಮದ ಮಾನ್ಯತೆ ಸಿಗದಂತೆ ಮಾಡುತ್ತಿದ್ದು, ಇಂದಿನ 1904 ರಿಂದ ಇತಿಹಾಸ ಆಧಾರ ಮೇಲೆ ಎಲ್ಲಾ ವಿವರ ತಿಳಿಸಿದ್ದೀರಿ , ತಮ್ಮಗೆ ಅನಂತ ಶರಣು ಶರಣಾರ್ಥಿ ಗಳು
    ಮಲ್ಲಿಕಾರ್ಜುನ ನಾಗಶೆಟ್ಟಿ.
    ಅದ್ಯಕ್ಷರು.
    ರಾಷ್ಟೀಯ ಬಸವ ದಳ ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕು

  • ವೀರಶೈವ ಧರ್ಮ ಶೈವ ಧರ್ಮದ (ಹಿಂದೂ ಧರ್ಮದ) ಒಂದು ಶಾಖೆ, ಒಂದು ಭಾಗ ವಾಗಿದೆ.
    ವೀರಶೈವರು ತಮ್ಮ ಮೂಲ ಧರ್ಮ ಬಿಟ್ಟು ಲಿಂಗಾಯತ ಧರ್ಮವನ್ನು ಸೇರಿದ್ದಾರೆ. ಹೊಸ ಧರ್ಮದ ಹೆಸರಿನಲ್ಲಿ ವೀರಶೈವ ಇದ್ದರೆ ಸಹಜವಾಗಿಯೇ ಇದು ಹಿಂದೂ ಧರ್ಮದ ಒಂದು ಭಾಗ ಅನ್ನುತ್ತಾರೆ.
    ಕಾರಣ ಲಿಂಗಾಯತ ಧರ್ಮ ಅಂತ ಗುರುತಿಸಿ ಕೊಳ್ಳುವುದು ಒಳ್ಳೆಯದು.

    ವೀರಶೈವ ರನ್ನು ಲಿಂಗಾಯತರು ತಮ್ಮ ಲಿಂಗಾಯತ ಧರ್ಮದ ಭಾಗವಾಗಿ ಒಪ್ಪಿಕೊಂಡಿದ್ದಾರೆ. ಇದನ್ನು ಮನಗಂಡು ವೀರಶೈವರು ಲಿಂಗಾಯತ ಧರ್ಮಕ್ಕೆ ಕುತ್ತಾಗದೆ, ಲಿಂಗಾಯತ ಧರ್ಮದ ಒಂದು ಪಂಗಡವಾಗಿ ಉಳಿಯಲಿ.
    ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಗೆ ಬೆಂಬಲವಾಗಿ ಹೋರಾಟ ಮಾಡಲಿ.

Leave a Reply

Your email address will not be published. Required fields are marked *