ಬೆಳಗಾವಿ
ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪವನ್ನು ಸರ್ಕಾರವು ತನ್ನ ಅಧೀನದಲ್ಲಿಯೇ ಇರಿಸಿಕೊಳ್ಳಬೇಕು. ಯಾವುದೇ ಖಾಸಗಿ ಸಂಸ್ಥೆ ಅಥವಾ ಮಠಕ್ಕೆ ನೀಡಬಾರದು, ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಬುಧವಾರ ಹೇಳಿದರು.
ನಗರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಅನುಭವ ಮಂಟಪದ ದೈನಂದಿನ ನಿರ್ವಹಣೆ ಹಾಗೂ ವಿಶೇಷ ಕಾರ್ಯಕ್ರಮಗಳ ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಲು ಸರ್ಕಾರದ ಮತ್ತು ಕೆಲವು ಲಿಂಗಾಯತ ಮಠಗಳ ಹಾಗೂ ಲಿಂಗಾಯತ ಸಂಸ್ಥೆಗಳ ಪ್ರತಿನಿಧಿಗಳುಳ್ಳ ಒಂದು ವಿಶೇಷ ಸಮಿತಿಯನ್ನು ರಚಿಸುವುದು ಸೂಕ್ತ.
ಆ ಸಮಿತಿಯ ಮೂಲಕ ಅಲ್ಲಿಗೆ ಬರುವ ಹತ್ತಾರು ಸಾವಿರ ಜನರಿಗೆ ನಿತ್ಯ ದಾಸೋಹ ಸೇವೆ, ವಚನ ಅಧ್ಯಯನ ಶಿಬಿರಗಳು, ಪ್ರಜಾತಾಂತ್ರಿಕ ಶಿಕ್ಷಣ, ಕಾರ್ಯಾಗಾರ, ಕಾಯಕ ತತ್ವ, ಸ್ತ್ರೀ ಸಮಾನತೆ ಕಾರ್ಯಕ್ರಮಗಳು, ಪ್ರವಾಸಿ ಮಾರ್ಗದರ್ಶಕರಿಗೆ (ಟೂರಿಸ್ಟ ಗೈಡ್) ತರಬೇತಿ, ಇತ್ಯಾದಿ ಜವಾಬ್ದಾರಿಗಳನ್ನು ನಿರ್ವಹಿಸಬಹುದೆಂದು ತಿಳಿಸಿದರು.
ಈಗ ನಿರ್ಮಾಣವಾಗುತ್ತಿರುವ ಅನುಭವ ಮಂಟಪದ ಕಟ್ಟಡವನ್ನು 2027ರ ಮಾರ್ಚ ತಿಂಗಳಲ್ಲಿ ಉದ್ಘಾಟಿಸುವುದಾಗಿ ರಾಜ್ಯದ ಸಚಿವ ಈಶ್ವರ ಖಂಡ್ರೆಯವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಆದರೆ ಆ ಸಮಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲದಿರುವುದರಿಂದ ರಾಜಕೀಯ ಉದ್ದೇಶಗಳಿಗಾಗಿ ಅರ್ಧ ಮರ್ಧ ಕೆಲಸ ಮಾಡಿ ಉದ್ಘಾಟನೆ ಮಾಡುವುದು ಸರಿಯಲ್ಲ. ಆದ್ದರಿಂದ ಅನುಭವ ಮಂಟಪದ ಉದ್ಘಾಟನೆಯನ್ನು ಜನೆವರಿ 2028ರ ವರೆಗೆ ಮುನ್ನೂಡುವಂತೆ ವಿನಂತಿಸಿದರು.

ಇಲ್ಲಿಯವರೆಗೆ ಕಟ್ಟಡದ ವೆಚ್ಚ 640 ಕೋಟಿ ರೂಪಾಯಿಗಳಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ನೀಡಿದ 200 ಕೋಟಿ ಅನುದಾನ ಮತ್ತು ಕಳೆದ ಎರಡೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಈ ವರೆಗೆ ನೀಡಿದ 250 ಕೋಟಿ ರೂಪಾಯಿ ಸೇರಿಸಿ ಒಟ್ಟು ಹಣ 450 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ.
ಮೂಲ ಕೆಲಸಗಳನ್ನು ಮುಗಿಸಲು ಒಟ್ಟು 450 ಕೋಟಿ ಸಂದಾಯವಾಗಬೇಕಿದೆ. ಪ್ರಮುಖವಾದ ದಾಸೋಹ ಭವನ, ಯಾತ್ರಿ ನಿವಾಸ, ಪಾರ್ಕಿಂಗ್ ಪ್ರದೇಶ ಕೆಲಸಗಳನ್ನು ಈ ವರೆಗೂ ಅನುಮೋದಿಸಿಲ್ಲ. ಟೆಂಡರ ಕರೆದಿಲ್ಲ. ಆ ಕೆಲಸಗಳು ಪ್ರಾರಂಭವಾಗಲು ಇನ್ನೂ ಮೂರು ನಾಲ್ಕು ತಿಂಗಳಾದರೂ ಬೇಕು. ಅವುಗಳಿಗೆ 100 ಕೋಟಿ ರೂಪಾಯಿ ಬೇಕೆಂದು ಅಂದಾಜಿಸಲಾಗಿದೆ. ಇದೂ ಸೇರಿದರೆ ಒಟ್ಟು ಬೇಕಾದ ಹಣ 550 ಕೋಟಿ ಆಗುತ್ತದೆ.
ಈ ಮಧ್ಯದಲ್ಲಿ ಈಗಿರುವ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಒಟ್ಟಾರೆ ಉಳಿದ 550 ಕೋಟಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಅನುಭವ ಮಂಟಪಕ್ಕೆ ಮುಖ್ಯ ಸಂಪರ್ಕ ರಸ್ತೆ ಕೆಲಸ ನಿಂತುಹೋಗಿದೆ. ಅದಕ್ಕೆ ಬೇಕಾದ ಜಮೀನಿನ ಅಕ್ವಿಜಿಶನ್ ಕಾರ್ಯಕ್ಕೆ ಹೈಕೊರ್ಟಿನ ತಡೆಯಾಜ್ಞೆ ಬಂದು ಎರಡು ವರ್ಷವಾಗಿದೆ. ಸೂಕ್ತ ಮಾಹಿತಿ ನೀಡಿದ್ದರೂ ಸಂಬಂಧಿಸಿದ ಸರ್ಕಾರಿ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿಲ್ಲ. ಪ್ರತಿವಾದಿಗಳೊಂದಿಗೆ ಶಾಮೀಲಾಗಿದ್ದಾರೆಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕಾಗಿದೆ, ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೆಪ್ಟೆಂಬರ್ 19, 20 ನಡೆದ ರಾಷ್ಟ್ರೀಯ ವಾರ್ಷಿಕ ಸರ್ವಸಾಮಾನ್ಯ ಸದಸ್ಯರ ಸಭೆಯ ನಿರ್ಣಯಗಳನ್ನು ವಿವರಿಸಲಾಯಿತು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ. ಜಾಮದಾರ ಜೊತೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಕಾರ್ಯದರ್ಶಿ ಅಶೋಕ ಮಳಗಲಿ, ಪ್ರವೀಣಕುಮಾರ ಚಿಕಲಿ ಹಾಗೂ ಮುರಿಗೆಪ್ಪ ಬಾಳಿ ಅವರು ಉಪಸ್ಥಿತರಿದ್ದರು.

ಒಳ್ಳೆಯ ವಿಚಾರ ಜೈ ಬಸವ