ಮೌಡ್ಯದಿಂದ ವೈಚಾರಿಕತೆಯ ಕಡೆಗೆ ನಡೆದ ಶರಣರ ಹೆಜ್ಜೆ

ಬಸವ ಮೀಡಿಯಾ
ಬಸವ ಮೀಡಿಯಾ

ಗುಳೇದಗುಡ್ಡ:

ಬಸವ ಕೇಂದ್ರದ ವತಿಯಿಂದ ಶನಿವಾರ ಶರಣರಾದ ಶಿವಯೋಗೆಪ್ಪ ನಾಗಪ್ಪ ಕೊಣ್ಣೂರ ಅವರ ಮನೆಯಲ್ಲಿ ‘ಮನೆಯಲ್ಲಿ ಮಹಾಮನೆ ಕಾರ್ಯಕ್ರಮ’ ನಡೆಯಿತು.

ಅಂದು ಚಿಂತನೆಗಾಗಿ ಈ ಕೆಳಗಿನ ವಚನವನ್ನು ಆಯ್ದುಕೊಳ್ಳಲಾಗಿತ್ತು.

ಸತ್ಯವಿಲ್ಲದ ಭಕ್ತಿಯ ಸಾವಿರ ವರುಷ ಮಾಡಿದರೇನು? ನಿಷ್ಠೆ ಇಲ್ಲದ ಪೂಜೆಯನ್ನು ಏಸುಕಾಲ ಮಾಡಿದರೇನು? ಭಾವನೆ ನೆಲಗೊಳ್ಳದ ಪ್ರಸಾದವನೇಸುಕಾಲ ಕೊಂಡಲ್ಲಿ ಫಲವೇನು ?

ಅಭ್ಯಾಸವಾಯಿತ್ತಲ್ಲದೆ,

ಒಬ್ಬರೊಬ್ಬರ ಕಂಡು ಮಾಡುವವರಲ್ಲದೆˌ

 ಸಹಜವಿಲ್ಲ ಸಮ್ಯಕಿಲ್ಲˌ ನಿಜವಿಲ್ಲ.

ಇದು ಕಾರಣ ಇಂತಪ್ಪವರ ಭಕ್ತರೆಂದೆನಲಾಗದು. ಕೂಡಲ ಚನ್ನಸಂಗಯ್ಯ ˌ

ನೀ ಸಾಕ್ಷಿಯಾಗಿ ಛೀ! ಎಂಬೆನು .

ಅರ್ಥಶಾಸ್ತ್ರ ಪ್ರಾಧ್ಯಾಪಕ ಶ್ರೀಕಾಂತ ಗಡೇದವರು, ಈ ವಚನವನ್ನು ಚೆನ್ನಬಸವಣ್ಣನವರು ರಚಿಸಿದ್ದುˌ, ತಾತ್ವಿಕ ವಿಚಾರಗಳಿಂದ ಕೂಡಿದೆ. ಭಕ್ತಿ ಮತ್ತು ಪೂಜೆ ಎಂಬ ಶಬ್ದಗಳನ್ನು ಭಾರತದಲ್ಲಿ ಬಹಳ ಹಿಂದಿನಿಂದ ಬಳಸುತ್ತ ಬರಲಾಗಿದೆ. ಆದರೂ ಅದಕ್ಕೆ ಹೊಸ ಅರ್ಥ ಹಾಗೂ ಆಚರಣೆಗಳನ್ನು ಕಲ್ಪಿಸಿದವರು ಶರಣರು.

ಮೌಡ್ಯದಿಂದ ವೈಚಾರಿಕತೆಯ ಕಡೆಗೆ ಶರಣರು ಹೆಜ್ಜೆ ಹಾಕಿದಾಗˌ ಹೊಸ ಆಚರಣೆಗಳು ಜಾರಿಗೆ ಬಂದವು. ಈವರೆಗೆ ಕೇವಲ ತೋರಿಕೆಗಾಗಿ, ಅನುಕರಣೆ ಮಾತ್ರಕ್ಕಾಗಿ ಆಚರಿಸುತ್ತಲಿದ್ದ ಭಕ್ತಿ ಮತ್ತು ಪೂಜೆಗಳನ್ನು ˌ ಅಂತರಂಗಕ್ಕೆ ಇಳಿಸಿ ನಡೆ-ನುಡಿಗಳನ್ನು ಒಂದಾಗಿಸಿದರು. ಮಾನಸಿಕವಾದ ಬದಲಾವಣೆ ಇಲ್ಲದೆ, ಮನಶುದ್ದಿ ಇಲ್ಲದೆ ಮಾಡುವ ಪೂಜೆಯನ್ನು ಎಷ್ಟು ಕಾಲ ಮಾಡಿದರು ವ್ಯರ್ಥವೇ.

ತನು ಮನದ ಶುದ್ದಿಯಿಲ್ಲದ ಪೂಜೆ, ಶರಣರ ದೃಷ್ಟಿಯಲ್ಲಿ ನಿರರ್ಥಕ. ಅಷ್ಟೇ ಅಲ್ಲ ಇಂಥವರನ್ನು ಹೀಯಾಳಿಸಿ ಶರಣರು ದೂರಿಕರಿಸಿದ್ದರು ಎಂಬುದಕ್ಕೆ ಚನ್ನಬಸವಣ್ಣನವರ ಈ ವಚನವು ಸಾಕ್ಷಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜವಳಿ ವ್ಯಾಪಾರಿಗಳಾದ ಅನುಭಾವಿ ಶರಣ ಮಹಾಂತೇಶ ಸಿಂದಗಿ ಅವರು ಮಾತನಾಡುತ್ತಾ, ದೇವರನ್ನು ತನ್ನಿಂದ ಹೊರಗಿಟ್ಟು ಮಾಡುವ ಪೂಜೆ ಪುನಸ್ಕಾರಗಳನ್ನು ಶರಣರು ಎಂದೂ ಒಪ್ಪಲಿಲ್ಲ. ಮಹಾಲಿಂಗದ ಇರವೇ ಆದ ದೇವರು ತನ್ನಲ್ಲಿಯೇ ಇರುವಾಗ, ಅನ್ಯ ದೈವದಲ್ಲಿನ ಭಕ್ತಿ ಹಾಗೂ ಪೂಜೆಗಳನ್ನು ಒಪ್ಪಲು ಅರ್ಹವಲ್ಲ.  ಶರಣರು ಪೂಜೆಯನ್ನು ಮಾಡುವುದಿಲ್ಲˌ ಮಾಡಿಕೊಳ್ಳುತ್ತಾರೆ. ಹಾಗೂ ಇತರರಿಂದಲೂ ಮಾಡಿಸುವುದಿಲ್ಲ.

ತಾನು ಮಾಡಬೇಕಾಗಿರುವ ತನ್ನಂಗದ ಮೇಲಿರುವ ಲಿಂಗವನ್ನು ತಾನೇ ಪೂಜಿಸಬೇಕು. ಇಲ್ಲಿ ಲಿಂಗದ ಪೂಜೆ ಎಂದರೆ ಲಿಂಗಗುಣಗಳನ್ನು ಅಳವಡಿಸಿಕೊಳ್ಳುವುದು. ಹಾಗೆಯೇ ಪ್ರಸಾದವೆಂದರೆ ಕೇವಲ ನಾಲಿಗೆಯ ರುಚಿಯಲ್ಲˌˌ ಅದು ಪ್ರಸನ್ನತೆ ಯನ್ನುಂಟು ಮಾಡಬೇಕು, ಮುಂದಿರುವ ಪದಾರ್ಥ ಲಿಂಗಕ್ಕೆ ಅರ್ಪಿತವಾಗಿ ಪ್ರಸಾದವಾಗಬೇಕು. ಹೀಗಾಗಿ ನಿಜವಾದ ಅರ್ಥವಿಲ್ಲದೆ ಮಾಡುವ ಭಕ್ತಿˌ, ತನು ಮನ ಶುದ್ಧವಾಗದ ಪೂಜೆ ಮತ್ತು ಭಾವಶುದ್ಧಿ ಇಲ್ಲದ ಪ್ರಸಾದ ಇವೆಲ್ಲ ಶರಣರಿಗೆ ಹೊಲ್ಲ. ಇಷ್ಟೇ ಅಲ್ಲ ಇಂಥ ಅಲ್ಪಮತಿಗಳನ್ನು ಶರಣರು ಪುರಸ್ಕರಿಸದೆ ಛೀ!ಎನ್ನುತ್ತಾರೆ ” ಎಂದು ವಿವರಿಸಿದರು.

ಅನುಭಾವಿ ಸಿದ್ದಲಿಂಗಪ್ಪ ಬರಗುಂಡಿಯವರು ಇದೇ ವಚನವನ್ನು ಇನ್ನಷ್ಟು ವಿವರಿಸುತ್ತಾ,  ಅವಿರಳಜ್ಞಾನಿ ಚನ್ನಬಸವಣ್ಣನವರು ಈ ವಚನದಲ್ಲಿ ಲಿಂಗಾಯತ ಧರ್ಮದ ಆತ್ಮದಂತಿರುವ ಷಟಸ್ಥಲದ ವಿಷಯವನ್ನು ಸೂಕ್ಷ್ಮವಾಗಿ ಬಿಡಿಸಿ ಇಟ್ಟಿದ್ದಾರೆ.

ಷಟಸ್ಥಲಗಳೆಂದರೆ ಅನುಭಾವದ ನೆಲೆಗಳು. ಹಾಗೂ ಮನುಷ್ಯನು (ಅಂಗನು) ತನ್ನ ಆಂತರಿಕ ಜೀವನವು ನಿಧಾನವಾಗಿ ವಿಕಶಿಸುತ್ತಾ ಮಹಾದೇವ (ಲಿಂಗ)ನಾಗುವ ಪಯಣವಾಗಿದೆ. ಆದುದರಿಂದ ಭಕ್ತನೆಂದರೆ ತನ್ನಿಂದ ಭಿನ್ನವಾದ ಸ್ಥಾವರಕ್ಕೆ ಹಣ್ಣು ಕಾಯಿ ಫಲ ಪುಷ್ಪ ಹಾಗೂ ಬೇಡಿಕೆಗಳ ಪಟ್ಟಿಯನ್ನು ನೀಡುವುದಲ್ಲ, ನೂರಾರು ದೇವರನ್ನು ಬೆನ್ನು ಹತ್ತುವುದಲ್ಲ. ಹೀಗೆ ಸಾವಿರ ವರ್ಷ ಮಾಡಿದರೂ  ಆತ ಭಕ್ತನೆನಿಸುವುದಿಲ್ಲ. ಹಾಗೂ ಆತನ ಕ್ರಿಯೆಗಳು ಭಕ್ತಿ ಎನಿಸಿಕೊಳ್ಳುವುದಿಲ್ಲ.

ಭಕ್ತನಾದಾತ ತನ್ನ ಅರುಹಿನ ಕುರುಹಾದ ಇಷ್ಟಲಿಂಗದ ಮೇಲೆ ವಿಶ್ವಾಸ ಅಥವಾ ಭಕ್ತಿ ಶ್ರದ್ಧೆಯನ್ನಿಡಬೇಕು. ತನ್ನ ನಡೆ-ನುಡಿಗಳನ್ನು ಆಚಾರವಾಗಿಸಬೇಕು. ಅದು ಆಚಾರ ಲಿಂಗವಾಗುತ್ತದೆ. ಇಂಥ ತನು ಹಾಗೂ ಮನದ ಶುದ್ಧಿಗಾಗಿ ಅನುಸರಿಸುವ ಮಾರ್ಗ ಪೂಜೆ ಎನಿಸುತ್ತದೆ. ಕೇವಲ ಧೂಪ ದೀಪ ಆರತಿಗಳು ಪೂಜೆಯಲ್ಲ ಭಕ್ತ ಸ್ಥಲದ ವಿಶ್ವಾಸ ಇಲ್ಲಿ ನಿಷ್ಠೆಗೊಂಡು ತನ್ನ ಇಂದ್ರಿಯಗಳ ಕಾಮನೆ ಮದಗಳನ್ನು  ಅಂಕಿತದಲ್ಲಿಟ್ಟುಕೊಂಡು ಸಾಗಬೇಕು. ಆಗ ಮಹೇಶ್ವರನಾಗುತ್ತಾನೆ.

ಇಂತಹ ಲಿಂಗವೆಂಬ ಅರಿವಿನ ಮೇಲಿನ ನಿಷ್ಠೆ ತಾನು ಭೋಗಿಸುವುದೆಲ್ಲವೂ ಆ ಪರಶಿವನದೇ ಎಂದು ನಂಬಿ ಸ್ವೀಕರಿಸುವುದು ಪ್ರಸಾದವೆನಿಸುತ್ತದೆ . ನನ್ನದು  ನಾನು ಗಳಿಸಿದ್ದು ಎನ್ನದೆ ಕೇವಲ ನಾಲಿಗೆಯಿಂದ ಮಾತ್ರವಲ್ಲ ಸಕಲ ಇಂದ್ರಿಯಗಳ ಮೂಲಕ ಸ್ವೀಕರಿಸುವ ಪದಾರ್ಥಗಳು ಪ್ರಸಾದವಾಗಬೇಕು. ಹಾಗೆಯೇ ಪ್ರಾಣ ಲಿಂಗಿಸ್ಥಲದ ‘ಸಹಜ’ ಶರಣಸ್ಥಲದ ‘ಸಮ್ಯಕತ್ವ ‘ ಮತ್ತು ಐಕ್ಯ ಸ್ಥಲದ ‘ನಿಜ ‘ ನಮ್ಮಲ್ಲಿ ಒಳಹೊರಗೆ  ಅಳವಡದಿದ್ದರೆ ಏನೂ ಉಪಯೋಗವಿಲ್ಲ. ಇವು ಅನುಕರಣೆ ಅಥವಾ ರೂಢಿಯಿಂದ ಬರುವುದಲ್ಲˌ ˌ ಇವನ್ನು ತನ್ನ ಅರಿವಿನ ಹಿನ್ನೆಲೆಯಲ್ಲಿ ಗಳಿಸಬೇಕು. ಇಂಥವರೇ ನಿಜವಾದ ಭಕ್ತರು. ಹಾಗಿಲ್ಲದೆ ಹೋದರೆ ಅಂಥವರು ವೇಷಢಂಬಕರು ಎಂದು ಶರಣರು ಭಾವಿಸುತ್ತಾರೆ.

ಇಂತಹ ಅಂತರಂಗ ಬಹಿರಂಗ ಕಲುಷಿತರನ್ನು ಅವಿರಳಜ್ಞಾನಿ ಚನ್ನಬಸವಣ್ಣನವರು ಯಾವ ಹಿಂದು ಮುಂದು ನೋಡದೆ  ಛೀ ಎನ್ನುತ್ತಾರೆ. ಎಂದು ಬರಗುಂಡಿ ಅವರು ಹೇಳಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಜಯಶ್ರೀ ಬರಗುಂಡಿ, ಶ್ರೀದೇವಿ ಶೇಖಾ ಹಾಗೂ ವಿಶಾಲಾಕ್ಷಿ ಗಾಳಿ ಅವರು ವಚನ ಪ್ರಾರ್ಥನೆ ಮಾಡಿದರು. ಕಳ್ಳಿಗುಡ್ಡ ಗ್ರಾಮದ ನಿವೃತ್ತ ಶಿಕ್ಷಕರಾದ ಮೆಣಸಿನಕಾಯಿ ಅವರು ಹಾಗೂ ದಾನಮ್ಮ ಕುಂದರಗಿಯವರು ವಚನಗಳನ್ನು ಹಾಡಿದರು. ಮುರುಘೇಶ ಶೇಖಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಬಸಲಿಂಗಯ್ಯ ಕಂಬಾಳಿಮಠ, ದಾನಪ್ಪ ಬಂಡಿ, ಪಾಂಡಪ್ಪ ಕಳಸ, ಪುತ್ರಪ್ಪ ಬೀಳಗಿ, ರಾಚಣ್ಣ ಕೆರೂರ, ಬಸವರಾಜ ಖಂಡಿ,  ಕೃಷ್ಣಪ್ಪ ಶಿರೂರ, ಗಿರೀಶ ನೀಲಕಂಠಮಠ, ಚನ್ನಮಲ್ಲಪ್ಪ ಮಂಗಳೂರು, ಸಿದ್ದಪ್ಪ ಕಂಗಳ, ಶಾಂತಕ್ಕ ಕೊಣ್ಣೂರ, ಶಾಂತಾಬಾಯಿ ಪತ್ತಾರ, ಶಿವಮ್ಮ ಕುಂದರಗಿ ಮೊದಲಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *