ಸಾಣೇಹಳ್ಳಿ :
ಜೀವನದಲ್ಲಿ ಸಾಧನೆ ಮಾಡಬೇಕೆಂಬ ಸಂಕಲ್ಪಕ್ಕೆ ಕಾಲಕ್ಕೆ ಅಂದರೆ ಸಮಯಪ್ರಜ್ಞೆಗೆ ಮಹತ್ವ ಕೊಟ್ಟರೆ ಸಿದ್ಧಿ ಸಾಧ್ಯ ಎಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಲಹೆ ನೀಡಿದರು.
ಇಲ್ಲಿ ನಡೆಯುತ್ತಿರುವ ನಾಟಕೋತ್ಸವ ಅಂಗವಾಗಿ ಗುರುವಾರ ಮುಂಜಾನೆ ಏರ್ಪಡಿಸಿದ್ದ ಚಿಂತನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
‘ಹೊತ್ತು ಹೋಗುವ ಮುನ್ನ ತೊತ್ತು ಕೆಲಸವ ಮಾಡು’ ಎನ್ನುವುದು ಬಸವಣ್ಣನವರ ವಚನದ ಸಾಲು. ಹೊತ್ತು ಎಂದರೆ ವೇಳೆ, ಸಮಯ, ಕಾಲ ಎಂದಾಗುತ್ತದೆ ಜೊತೆಗೆ ಯಮ ಅಂದರೆ ನಾಲ್ಕು ಜನರು ಹೊತ್ತುಕೊಂಡು ಹೋಗುವ ಮೊದಲೇ ಸಮಯಪ್ರಜ್ಞೆಗೆ ಮಹತ್ವ ಕೊಡಬೇಕು ಎನ್ನುವುದು ಬಸವಣ್ಣನವರ ವಚನದ ಸಾರ ಮತ್ತು ಸಂದೇಶ.
ಅವರು ಇನ್ನೊಂದು ವಚನದಲ್ಲಿ ‘ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕಳಿವಿಲ್ಲ’ ಎಂದಿದ್ದಾರೆ. ಜಂಗಮ ಎಂದರೆ ಕ್ರಿಯಾಶೀಲ. ಜಂಗಮಶೀಲತ್ವ ಬೆಳೆಸಿಕೊಂಡರೆ ಸಮಯದ ಸದ್ವಿನಿಯೋಗ ಸಾಧ್ಯ ಎಂದು ಹೇಳಿದರು.

‘ಮುತ್ತಿಗಿಂತ ಹೊತ್ತು ಶ್ರೇಷ್ಠ’ ಎನ್ನುವ ಗಾದೆ ಮಾತು ಇದ್ದು, ಕಳೆದುಹೋದ ಕಾಲವು ಮತ್ತೆ ಸಿಗುವುದಿಲ್ಲ, ಗಳಿಸಲೂ ಸಾಧ್ಯವಿಲ್ಲ. ಹೀಗಾಗಿ ಸೋಮಾರಿಯಾದರೆ ಸಾಧನೆ ಅಸಾಧ್ಯ. ಜೀವನೋತ್ಸಾಹ ಹೇಗಿರಬೇಕು ಎಂದರೆ ಸಾವೇ ಇಲ್ಲವೆಂದು ತಿಳಿದು ಸತ್ಕಾರ್ಯ ಮಾಡಬೇಕು. ಹಾಗೆಯೇ ಸಾವು ಬೆನ್ನ ಹಿಂದೆ ಇದೆಯೆಂದು ತಿಳಿದು ನಿರಂತರವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿವಳಿಕೆ ಹೇಳಿದರು.
ಇದಕ್ಕೂ ಮೊದಲು ‘ಸಮಯಪ್ರಜ್ಞೆ’ ಕುರಿತು ತಾಳಿಕಟ್ಟೆ ಶಿಕ್ಷಕಿ ನೇತ್ರಮ್ಮ ಮಾತನಾಡಿ, ಕೋಟಿ ಸುವರ್ಣ ಕೊಟ್ಟರೂ ಒಂದು ಕ್ಷಣವನ್ನೂ ಕೊಂಡುಕೊಳ್ಳಲಾಗದು. ಸಮಯಪ್ರಜ್ಞೆಗೆ ಸಾಣೇಹಳ್ಳೀ ಶ್ರೀಗಳ ದೈನಂದಿನ ಕಾರ್ಯವೈಖರಿ ಮಾದರಿ ಎಂದರು.
ಸೂಕ್ತ ಸಮಯಕ್ಕಾಗಿ ಕಾಯದೆ ಈಗಿರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಾಳೆ ಎನ್ನುವುದೇ ಶತ್ರು. ನಾಳೆ ಎಂಬ ಮುಖವಾಡ ಧರಿಸಿ ನಮ್ಮೊಳಗೆ ಅಡಗಿಕೊಂಡಿದೆ. ಇದಕ್ಕಾಗಿ ನಾಳೆ ಮಾಡುವ ಕೆಲಸವನ್ನು ಇಂದೇ ಮಾಡಬೇಕು. ಕಾಲದ ಕಠೋರತೆಯನ್ನು ಅರಿಯಬೇಕು ಎಂದು ಹೇಳಿದರು.
ಶಿವಸಂಚಾರ ಕಲಾವಿದರಿಂದ ವಚನ ಗಾಯನ ನಡೆಯಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
