‘ಸಂವಿಧಾನದಲ್ಲಿ ಮನುಸ್ಮೃತಿ’: ಬಾಪುಗೌಡ ಮೇಟಿ ಮೇಲೆ ಕ್ರಮಕ್ಕೆ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

‘ಲಿಂಗಾಯತರ ಐಡೆಂಟಿಟಿ ನಾಶ ಮಾಡಲು ಸುಪಾರಿ ಪಡೆದಿರುವ ಕನ್ನೇರಿ ಸ್ವಾಮಿ’

ವಿಜಯಪುರ

ಸಂವಿಧಾನದಲ್ಲಿ ಮನುಸ್ಮೃತಿಯ ಆಶಯಗಳಿವೆ ಎಂದಿರುವ ಕನ್ನೇರಿ ಸ್ವಾಮಿ ಅಲಿಯಾಸ್ ಬಾಪುಗೌಡ ಮೇಟಿಯ ಮೇಲೆ ಕ್ರಮ ಕೈಗೊಳ್ಳಬೇಕು, ಎಂದು ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂವಿಧಾನಕ್ಕೆ ಅವಮಾನ ಮಾಡಿರುವ ಕನ್ನೇರಿ ಸ್ವಾಮಿ ಮೇಲೆ ಗೃಹ ಸಚಿವರು ಒಳಗೆ ಹಾಕಬೇಕು, ಎಂದು ಒತ್ತಾಯ ಮಾಡಿದರು.

ದಲಿತ ಮುಖಂಡ ಅಡಿವೆಪ್ಪ ಸಾಲಗಲ್ ಮಾತನಾಡಿ, ಸಂವಿಧಾನದಲ್ಲಿ ಮನುಸ್ಮೃತಿಯ ಯಾವ ಅಂಶಗಳಿವೆ ಎಂಬುದನ್ನು ಕನ್ನೇರಿ ಸ್ವಾಮಿ ಸ್ಪಷ್ಟಪಡಿಸಬೇಕು.

ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವರಿಗೆ ಜ್ಞಾನವಿಲ್ಲ. ಇನ್ನೊಮ್ಮೆ ಹಗುರವಾಗಿ ಮಾತನಾಡಿದರೆ ಕನ್ನೇರಿ ಮಠಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ
ನೀಡಿದರು.

ಚಿಂತಕ ಡಾ. ಜೆ.ಎಸ್‌. ಪಾಟೀಲ ಮಾತನಾಡಿ ಹಣೆಯ ಮೇಲೆ ಕುಂಕುಮ ಬಳಿದುಕೊಳ್ಳುವ ಈ ಬಾಪುಗೌಡರಿಗೆ ವಿಭೂತಿಯೂ ಗೊತ್ತಿಲ್ಲ, ರುದಾಕ್ಷಿಯೂ ಕೊರಳಲ್ಲಿಲ್ಲ. ಲಿಂಗಾಯತರ ಐಡೆಂಟಿಟಿ ನಾಶ ಮಾಡಲು ಸುಪಾರಿ ಪಡೆದಿದ್ದಾರೆ. ಇವರ ಆಟಾಟೋಪಕ್ಕೆ ಅಣ್ಣಾಸಾಹೇಬ ಜೊಲ್ಲೆ ಅಂಥವರು ಚುನಾವಣೆಯಲ್ಲಿ ಸೋತು ಹೋಗಬೇಕಾಯಿತು ಎಂದರು.

ಕಾಡಸಿದ್ದೇಶ್ವರ ಭಾವೈಕ್ಯತೆಯ ಮಠ, ಅಂತ ಮಠವನ್ನು ಮನುಸ್ಮೃತಿಯ ಮಠವಾಗಿ ಬದಲಿಸುವ ಹುನ್ನಾರ ಆರ್‌ಎಸ್‌ಎಸ್‌ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.

ಗೋಶಾಲೆ ಹೆಸರಲ್ಲಿ ದಂಧೆ ಮಾಡುತ್ತಾನೆ. ಈತನ ಗೋಶಾಲೆಯಲ್ಲಿ ಹಳಸಿದ ಅನ್ನ ತಿಂದು ನೂರಾರು ಗೋವು ಸಾವಿಗೀಡಾದರೂ ಸುದ್ದಿಯಾಗಲಿಲ್ಲ. ಸಮಗ್ರ ತನಿಖೆಯಾದರೆ, ಈತನ ಅಸಲಿಯತ್ತು ಬಯಲಾಗಲಿದೆ ಎಂದರು.

ಕನ್ನೇರಿ ಸ್ವಾಮಿಯಲ್ಲಿ ಪೂರ್ವಾಶ್ರಮದ ಉಢಾಳಗಿರಿ ಇನ್ನೂ ಹೋಗಿಲ್ಲದ ಕಾರಣ ಅವರನ್ನು ‘ಬಾಪುಗೌಟ ಮೇಟಿ’ ಎಂದೇ ಸಂಬೋಧಿಸುವುದಾಗಿ ತಿಳಿಸಿದರು.

ಈ ಬಾಪುಗೌಡರ ತಂದೆ ಮಹಾತ್ಮ ಗಾಂಧಿ ಅವರಿಂದ ಪ್ರೇರಿತರಾಗಿ ತಮ್ಮ ಪುತ್ರನಿಗೆ ಬಾಪು ಎಂದು ಹೆಸರಿಟ್ಟರೆ ಈತ ಗೋಡ್ಸೆಯಾದದ್ದು ದುರಂತ ಎಂದರು.

ಡಾ. ರವಿ ಬಿರಾದಾರ ಮಾತನಾಡಿ, ಲಿಂಗಾಯತ ಮಠಗಳು ಸಹ ಮನುಸ್ಮೃತಿ ಆಧಾರದ ಮೇಲೆಯೇ ನಡೆಯುವಂತೆ ಮಾಡುವ ಹುನ್ನಾರ ಈ ಬಾಪುಗೌಡರು ನಡೆಸಿದ್ದಾರೆಂದರು.

ಅಲ್ಪಸಂಖ್ಯಾತ ಮುಖಂಡ ಎಸ್‌.ಎಂ. ಪಾಟೀಲ ಗಣಿಹಾರ ಮಾತನಾಡಿ, ಈ ದೇಶದಲ್ಲಿ ಮನುವಾದ ಮರುಸ್ಥಾಪನೆ ಮಾಡುವ ಹುನ್ನಾರ ಸ್ವಾಮೀಜಿಗಳ ಮಾತಿನಿಂದ ವ್ಯಕ್ತವಾಗಿದೆ.

ಮನುವಾದದ ಆಶಯದ ಮೇಲೆ ಶ್ರೇಣೀಕೃತ ಜಾತಿವ್ಯವಸ್ಥೆ ಜಾರಿ ತರುವ ಹುನ್ನಾರ ನಡೆದಿದೆ ಎಂದರು.

ದಲಿತ ಮುಖಂಡ ಚೆನ್ನು ಕಟ್ಟಿಮನಿ ಮಾತನಾಡಿ, ಸಂವಿಧಾನದಲ್ಲಿ ಜಾತಿ ಪದ್ಧತಿ, ವರ್ಣಭೇದ, ಪದ್ಧತಿ ಇದೆಯಾ? ಅಂಬೇಡ್ಕರ್ ಅವರ ಜ್ಞಾನದ ಬಗ್ಗೆ ಹಗುರವಾಗಿ ಮಾತನಾಡಿದರೆ ಇನ್ನು ಮುಂದೆ ಸುಮ್ಮನರಿಲ್ಲ ಎಂದರು.

ಅಹಿಂದ ಮುಖಂಡ ಎಂ.ಎಸ್. ಪಾಟೀಲ ಗಣಿಹಾರ ಮಾತನಾಡಿ, ಸಂವಿಧಾನದಲ್ಲಿ ಮನುಸ್ಮೃತಿ ಇದೆ ಎಂದು ಹೇಳಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವ ಸ್ವಾಮೀಜಿ, ಈ ಬಗ್ಗೆ ಬಹಿರಂಗ ಚರ್ಚೆಗೆ ಬರಬೇಕು ಅಥವಾ ಕ್ಷಮೆಯಾಚಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ನಾಗರಾಜ ಲಂಬು, ರಾಜು ತೊರವಿ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
1 Comment
  • ಒಳ್ಳೆಯ ಸಂದೇಶ ರವಾನಿಸಿದ್ದಿರಿ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *