ಬಸವಣ್ಣನವರ ಹೆಸರಿಗೆ ಕಳಂಕ ತರುವವರನ್ನು ಸುಮ್ಮನೆ ಬಿಡುವುದು ಶರಣರ ಲಕ್ಷಣವಲ್ಲ
ಬೆಂಗಳೂರು
ಬಸವ ತತ್ವದ ಹೆಸರಿನಲ್ಲಿ ಬದುಕು ಕಟ್ಟಿಕೊಂಡಿರುವ ಅಸಂಖ್ಯಾತ ಅನುಯಾಯಿಗಳೇ, ವಚನಗಳ ಬೆಳಕಿನಲ್ಲಿ ನಡೆಯುತ್ತಿರುವ ಶರಣ ಬಂಧುಗಳೇ,ಪಡುವಾರಹಳ್ಳಿಯ ದಂಡುಪಿಂಡಗಳ ಪಡ್ಡೆ ನಾಯಕ್ ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಪಿಎಚ್ಡಿ ಮಾಡಿದ ಈತ, ಈಗ ನಮ್ಮ ಬಸವಣ್ಣನವರ ಮೇಲೆ, ನಮ್ಮ ಪರಂಪರೆಯ ಮೇಲೆ ಕೆಸರೆರಚಲು ಶುರುಮಾಡಿದ್ದಾನೆ.
ಈ ಪಡ್ಡೆ ನಾಯಕನ ಅತ್ಯಂತ ದೊಡ್ಡ “ಸಂಶೋಧನೆ” ಏನೆಂದರೆ, ಭಾರತದಲ್ಲಿ ಜಾತಿ ಪದ್ಧತಿ ಬಂದಿದ್ದೇ ಹತ್ತನೇ ಶತಮಾನದ ಇಸ್ಲಾಮಿಕ್ ದಾಳಿಯ ನಂತರವಂತೆ!
ಅಂದರೆ, ಹತ್ತನೇ ಶತಮಾನಕ್ಕೂ ಮುನ್ನ ಇಲ್ಲಿ ಜಾತಿಯೇ ಇರಲಿಲ್ಲವಂತೆ. ಇವನ ಪ್ರಕಾರ, ಇಸ್ಲಾಮಿಕ್ ದಾಳಿಕೋರರು ಬಂದು ಬೌದ್ಧ ಭಿಕ್ಷುಗಳನ್ನು, ಹಿಂದೂ ಪೂಜಾರಿಗಳನ್ನು ಕೊಂದಾಗ, ಪೂಜಾರಿಯ ಮಗನಿಗೆ ಮಾತ್ರ ಪೂಜಾ ವಿಧಿವಿಧಾನಗಳು ಗೊತ್ತಿರುತ್ತಿದ್ದರಿಂದ ಅವನೇ ಪೂಜಾರಿಯಾದನಂತೆ! ಇದು ಜಾತಿ ಪದ್ಧತಿಯ ಉಗಮದ ಕಥೆ ಎನ್ನುತ್ತಾನೆ ಈತ.
ಎಂಥಾ ಹಾಸ್ಯಾಸ್ಪದ ವಾದವಿದು!
ರಾಮಾಯಣದಲ್ಲಿ ಶೂದ್ರನೆಂಬ ಕಾರಣಕ್ಕೆ ಶಂಬೂಕನ ತಲೆ ಕಡಿದದ್ದು ಇಸ್ಲಾಮಿಕ್ ದಾಳಿಯ ನಂತರವೇ? ಏಕಲವ್ಯನ ಹೆಬ್ಬೆರಳು ಕೇಳಿದ್ದು, ಕರ್ಣನಿಗೆ ಸೂತಪುತ್ರನೆಂದು ಹೀಯಾಳಿಸಿದ್ದು ಇದೆಲ್ಲವೂ ನಡೆದದ್ದು ಮುಸ್ಲಿಂ ದಾಳಿಯ ಬಳಿಕವೇ?
ಸಾವಿರಾರು ವರ್ಷಗಳ ಹಿಂದೆಯೇ ಮನುಸ್ಮೃತಿಯಲ್ಲಿ ಬರೆದಿಟ್ಟಿರುವ ವರ್ಣಾಶ್ರಮ ಧರ್ಮದ ಕಟ್ಟುಪಾಡುಗಳು ಹುಟ್ಟಿದ್ದು ಹತ್ತನೇ ಶತಮಾನದಲ್ಲಿಯೇ? ಕನಿಷ್ಠ ಪಂಪ, ರನ್ನ, ಪೊನ್ನನ ಕಾವ್ಯಗಳನ್ನು ಓದಿದ್ದರೂ, ಶಾಸನಗಳನ್ನು ಒಮ್ಮೆ ಕಣ್ಣಾಡಿಸಿದ್ದರೂ ಇವನಿಗೆ ಸತ್ಯ ತಿಳಿಯುತ್ತಿತ್ತು.
ನಾ ಅವರ ಸ್ವಂತ ಸಾಕ್ಷಿಗಳನ್ನ ಒಬ್ಬೊಬ್ಬರನ್ನಾಗಿ ನಿಮ್ಮ ಮುಂದ ಕರಿಸ್ತಿನಿ.
ಮೊದಲ ಕಥಿ ಕೇಳ್ರಿ, ಪಡ್ಡೆ ಸಾಹೇಬರ ಬಾಯಿಂದನ.
ಹತ್ತನೇ ಶತಮಾನದಾಗ ಉತ್ತರ ಭಾರತಕ್ಕ ಇಸ್ಲಾಮಿಕ್ ದಾಳಿ ಬಂತು. ಪೂಜಾರಿಗಳನ್ನ ಕೊಂದರು. ಹಿಂದೂಗಳೆಲ್ಲ ಮೀಟಿಂಗ್ ಕೂಡಿ, ಸತ್ತ ಪೂಜಾರಿಯ ಪೂಜಾ ವಿಧಿ ಅವನ ಮಗಗ ಗೊತ್ತಿರತದ, ಅವನ್ನ ಪೂಜಾರಿ ಮಾಡೋಣ ಅಂದ್ರು. ಅಲ್ಲಿಂದ ಹುಟ್ಟಿನಿಂದ ಜಾತಿ ಶುರು.
ಹನ್ನೆರಡನೇ ಶತಮಾನಕ್ಕ ಈ “ಅಮೆಂಡ್ಮೆಂಟ್” ದಕ್ಷಿಣಕ್ಕ ಬಂತು. ಅಷ್ಟೊತ್ತಿಗೆ ಬಸವಣ್ಣ ಅರ್ಧ ಆಯುಷ್ಯ ವೀರಶೈವ ಮತ ಪ್ರಚಾರದಾಗ ಕಳದಿದ್ದನಂತ. ಹೊಸ ರೂಲ್ ಬಂದದ್ದಕ್ಕ “ಬಸವಣ್ಣ ಅಂಡ್ ಕಂಪನಿ” ಬೆಲೆ ಏರಿಕೆ ವಿರುದ್ಧ ಸ್ಟ್ರೈಕ್ ಮಾಡಿದಂಗ ಕ್ರಾಂತಿ ಮಾಡಿತಂತ. ಬಸವಣ್ಣ ಸನಾತನ ಪದ್ಧತಿಯನ್ನ ಎಂದೂ ವಿರೋಧಿಸಲಿಲ್ಲಂತ.
ಕಥಿ ಚಂದ ಆಯಿತಿಲ್ಲರಿ . ಈಗ ಸಾಕ್ಷಿ ಕರಿಯುನ ಬರ್ರಿ.
ಕೋರ್ಟಿನ ಜವಾನ ಮೂರು ಸಲ ಕೂಗ್ತಾನ. “ಹ್ಯೂಯೆನ್ತ್ಸಾಂಗ್… ಹ್ಯೂಯೆನ್ತ್ಸಾಂಗ್… ಹ್ಯೂಯೆನ್ತ್ಸಾಂಗ್ ಹಾಜರ್ ಆಗಬೇಕು!” ಇವನು ಪಡ್ಡೆ ಸಾಹೇಬರ ಸ್ವಂತ ಹೀರೋ.
ಏಳನೇ ಶತಮಾನದಲ್ಲಿ ಭಾರತಕ್ಕೆ ಬಂದ ಈ ಚೀನಿ ಯಾತ್ರಿಕ, ಆಗಲೇ ಭಾರತದಲ್ಲಿ ಜಾತಿ ಪದ್ಧತಿ ಇತ್ತು, ಚಂಡಾಲರನ್ನು ಊರ ಹೊರಗೆ ಇಡಲಾಗಿತ್ತು ಎಂದು ಸ್ಪಷ್ಟವಾಗಿ ಬರೆದಿದ್ದಾನೆ. ಇವನೇನೋ ಇವನ ಪುಸ್ತಕ ಬರೆದಾನಲ್ಲ “ಹ್ಯುಯೆನ್ ತ್ಸಾಂಗ್ ನ ಮಹಾಪಯಣ” ಅಂತ, ಅದರಲ್ಲೇ ಇದೆ!
ಸಂದರ್ಶನದಾಗ ಇವನನ್ನ “ಅತ್ಯಂತ ವಾಸ್ತವಿಕ ವ್ಯಕ್ತಿ, ನನ್ನಂಗ.” ಅಂದರೆ ಇವನ ಹೀರೋನೇ ಇವನ ಸುಳ್ಳನ್ನು ಬೆತ್ತಲೆ ಮಾಡಿದ್ದಾನೆ. “ನನ್ನಂಗ ವಾಸ್ತವಿಕ” ಅಂದ ಸಾಕ್ಷಿನ ಮೊದಲ ಕೈಕೊಟ್ಟ.
ಎರಡನೇ ಸಾಕ್ಷಿ ಮಾತಾಡಂಗಿಲ್ಲ, ಗ್ವಾಡಿ ಮ್ಯಾಲೆ ತೂಗತದ. ಕ್ಯಾಲೆಂಡರ್. ನರ್ಮದೆ ದಾಟಿ ದಕ್ಷಿಣಕ್ಕ ಮೊದಲ ಮುಸ್ಲಿಂ ಸೈನ್ಯ ಬಂದದ್ದು 1296ರಾಗ, ಅಲ್ಲಾವುದ್ದೀನ್ ಖಿಲ್ಜಿ ದೇವಗಿರಿ ಮ್ಯಾಲೆ ಏರಿ ಬಂದಾಗ. ಬಸವಣ್ಣ ಬದುಕಿದ್ದು ಹನ್ನೆರಡನೇ ಶತಮಾನದಾಗ. ದಾಳಿ ಬರೋದಕ್ಕ ನೂರು ವರ್ಷಕ್ಕೂ ಮೊದಲ ಅದರ “ಅಮೆಂಡ್ಮೆಂಟ್” ವಿರುದ್ಧ ಸ್ಟ್ರೈಕ್!
ಮಳಿ ಬರೋದಕ್ಕ ನೂರು ವರ್ಷ ಮೊದಲ ಕೊಡಿ ಹಿಡಕೊಂಡು ನಿಂತಿದ್ದನೇನು ನಮ್ಮಪ್ಪ?
ಮೂರನೇ ಸಾಕ್ಷಿ ನಮ್ಮ ಕರ್ನಾಟಕದ ಕಲ್ಲು. ಬಸವಣ್ಣನ ಕಾಲಕ್ಕೂ ಮೊದಲ, ಬಳ್ಳಿಗಾವೆಯ ದಕ್ಷಿಣ ಕೇದಾರೇಶ್ವರ ಗುಡಿಯ ಶಾಸನಗಳು ಅಲ್ಲಿಯ ಕಾಳಾಮುಖ ಪೂಜಾರಿಗಳನ್ನ ವಂಶಪಾರಂಪರ್ಯ ಪೂಜಾರಿಗಳು ಅಂತ ಹೇಳ್ತಾವ.
ನಾಲ್ಕನೇ ಸಾಕ್ಷಿ ಬಾಬಾಸಾಹೇಬ್. “ನಾನಲ್ಲ, ಅಂಬೇಡ್ಕರ್ ಅವರೇ ಬರದಾರ” ಅಂತ ಪಡ್ಡೆ ಸಾಹೇಬರು ಎರಡು ಸಲ ಹೇಳ್ತಾರ.
ಬಾಬಾಸಾಹೇಬರು ಬರದದ್ದು ಬ್ಯಾರೆ. ದಾಳಿಯಾಗ ಬೌದ್ಧ ಧರ್ಮ ಬಿದ್ದು ಬ್ರಾಹ್ಮಣ ಧರ್ಮ ಉಳಿದದ್ದು ಯಾಕಂದ್ರ ಪ್ರತಿ ಬ್ರಾಹ್ಮಣನೂ ಬೇಕಾದಾಗ ಪೂಜಾರಿ ಆಗಬಲ್ಲವ ಆಗಿದ್ದ. ಅಂದ್ರ ಆ ಏರ್ಪಾಡು ದಾಳಿಗಿಂತ ಮೊದಲ ಇತ್ತು.
ಪಡ್ಡೆ ಸಾಹೇಬರೇ, ಅಂಬೇಡ್ಕರ್ ಅವರು ಬರೆದದ್ದು ಯಾವ ಪುಟದಲ್ಲಿದೆ? ಯಾವ ಪುಸ್ತಕದಲ್ಲಿದೆ? ಒಮ್ಮೆ ತೆಗೆದು ತೋರಿಸಿ. ಬಾಬಾಸಾಹೇಬರು ಹೇಳಿದ್ದು ಬೌದ್ಧ ಧರ್ಮದ ಅವನತಿಯ ಕಾರಣವನ್ನು, ನೀವು ಹೇಳುತ್ತಿರುವ ಮೀಟಿಂಗ್ ಕಥೆಯನ್ನಲ್ಲ.
ಐದನೇ ಸಾಕ್ಷಿ ಪಡ್ಡೆ ಸಾಹೇಬರೇ ತಂದದ್ದು. ಡಿಎನ್ಎ! ಹತ್ತು ಮಂದಿದು ಟೆಸ್ಟ್ ಮಾಡಿಸೀನಿ, ಎಲ್ಲಾರದೂ ಮಿಶ್ರ, ಅದಕ್ಕ ಮೊದಲ ಜಾತಿ ಇರಲಿಲ್ಲ ಅಂತಾರ.
ಹತ್ತು ಮಂದಿ ಅಲ್ಲ, ಭಾರತದ ಎಪ್ಪತ್ಮೂರು ಸಮುದಾಯಗಳ ಡಿಎನ್ಎ ನೋಡಿದ ದೊಡ್ಡ ಅಧ್ಯಯನ 2013ರಾಗ ಅಮೆರಿಕದ ಜರ್ನಲ್ನ್ಯಾಗ ಬಂದದ. ಹೈದರಾಬಾದಿನ ವಿಜ್ಞಾನಿಗಳೂ ಅದರಾಗ ಇದ್ರು.
ಅವರು ಹೇಳೋದು ಏನು? ಮಿಶ್ರ ಆದದ್ದು ಖರೆ, ಆದ್ರ ಅದು ನಡದದ್ದು ಸುಮಾರು ನಾಲ್ಕು ಸಾವಿರದಿಂದ ಹತ್ತೊಂಬತ್ತುನೂರು ವರ್ಷದ ಹಿಂದ. ಆಮ್ಯಾಲೆ ಒಳಮದುವಿ ಶುರುವಾಗಿ ಹತ್ತಿರದ ಗುಂಪುಗಳ ನಡುವೂ ಮಿಶ್ರ ಅಪರೂಪ ಆತು. ಅಂದ್ರ ಮದುವಿಯ ಬಾಗಿಲು ಮುಚ್ಚಿದ್ದು ಬಸವಣ್ಣನಿಗಿಂತ ಸಾವಿರ ವರ್ಷ ಮೊದಲ.
ಪಡ್ಡೆ ಸಾಹೇಬರ ಡಿಎನ್ಎ ಕೂಡ ಪಡ್ಡೆ ಸಾಹೇಬರ ವಿರುದ್ಧ ಸಾಕ್ಷಿ ನುಡೀತು.
ಈಗ ಆರೋಪಿಯ ಮಾತು. ಸನಾತನ ಪದ್ಧತಿ ವಿರೋಧಿಸೇ ಇಲ್ಲದ ಬಸವಣ್ಣ ಹೇಳೋದು ಕೇಳ್ರಿ. “ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ… ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.”
ವೇದಕ್ಕ ಒರೆ, ಶಾಸ್ತ್ರಕ್ಕ ಬೇಡಿ, ಆಗಮಕ್ಕ ಮೂಗು ಕೊಯ್ಯೋದು. ಇದು ವಿರೋಧ ಅಲ್ಲಂದ್ರ ವಿರೋಧ ಅಂದ್ರ ಏನು ಪಡ್ಡೆ ಸಾಹೇಬರೇ? ಕಡೀ ಸಾಲು ನೋಡ್ರಿ. ವೇದ ಹಿಡಿದವರ ಮನಿ ಮಗ ಅಲ್ಲ, ಮಾದಾರ ಚೆನ್ನಯ್ಯನ ಮನಿ ಮಗ.
“ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ… ಕುಲವನರಸದಿರಿಂ ಭೋ!” ಕುಲದ ಹುಚ್ಚು ನಿನ್ನೆ ಮೊನ್ನೆ ಕುದರಿ ಮ್ಯಾಲೆ ಬಂದಿದ್ರ ಬಸವಣ್ಣ ವ್ಯಾಸನ ತಾಯಿ ತನಕ ಯಾಕ ಹೋಗ್ತಿದ್ದ?
ಇನ್ನ ಅರ್ಧ ಆಯುಷ್ಯ ವೀರಶೈವ ಮತ ಪ್ರಚಾರ. ಬಸವಣ್ಣನ ಸಾವಿರದ ನಾನೂರ ಹದಿನೇಳು ವಚನ ನನ್ನ ಮುಂದ ಅವ. “ವೀರಶೈವ” ಅನ್ನೋ ಶಬ್ದ ಬರೋದು ಬರೀ ನಾಲ್ಕರಾಗ.
ಅರ್ಧ ಜೀವನ ಒಂದು ಮತದ ಪ್ರಚಾರ ಮಾಡಿದವ ತನ್ನ ಮತದ ಹೆಸರು ನಾಲ್ಕು ಸಲ ಹೇಳಿದನಂತ! ನಮ್ಮೂರ ಹೊಟೆಲ್ನವನೂ ತನ್ನ ಅಂಗಡಿ ಹೆಸರು ದಿನಕ್ಕ ನಾಲ್ಕು ಸಲ ಹೇಳ್ತಾನ.
ಇವತ್ತು ಈ ಪಡ್ಡೆ ನಾಯಕನಿಗೆ ಮತ್ತು ಇವನಿಗೆ ಕುಮ್ಮಕ್ಕು ಕೊಡುತ್ತಿರುವ ಆ ವಿಚಿತ್ರವೀರ್ಯನ ಸಂತಾನಗಳಿಗೆ ನಾವು ತಕ್ಕ ಉತ್ತರ ಕೊಡಬೇಕಿದೆ.
ನಾವಿನ್ನೂ ಸುಮ್ಮನಿದ್ದರೆ, ನಮ್ಮ ಬಸವಣ್ಣನನ್ನು, ನಮ್ಮ ವಚನ ಸಾಹಿತ್ಯವನ್ನು ಇವರು ಹೀಗೇ ತಿರುಚುತ್ತಾ ಹೋಗುತ್ತಾರೆ.
ಇದು ಕೇವಲ ಇತಿಹಾಸದ ಪ್ರಶ್ನೆಯಲ್ಲ, ನಮ್ಮ ಅಸ್ಮಿತೆಯ ಪ್ರಶ್ನೆ. ನಾವು ಬಸವಣ್ಣನವರ ಮಕ್ಕಳು ಎಂದು ಹೇಳಿಕೊಳ್ಳುವುದಾದರೆ, ಅವರ ತತ್ವಗಳ ಮೇಲೆ ನಡೆಯುವವರಾದರೆ, ಈ ಸುಳ್ಳುಗಳ ಸರಮಾಲೆಯನ್ನು ನಾವು ಪ್ರತಿಭಟಿಸಲೇಬೇಕು.
ಈ ಪಡುವಾರಹಳ್ಳಿ ಪಡ್ಡೆಯ ಮಾತುಗಳನ್ನು ಕೇಳಿ ನಗುವ ಬದಲು, ಇವನ ಸುಳ್ಳುಗಳನ್ನು ದಾಖಲೆ ಸಮೇತ ಬಯಲು ಮಾಡೋಣ. ನಮ್ಮ ಯುವಕರು, ವಿದ್ಯಾರ್ಥಿಗಳು, ವಚನ ಸಾಹಿತ್ಯದ ಓದುಗರು ಮುಂದೆ ಬನ್ನಿ.
ಸತ್ಯಮೇವ ಜಯತೇ ಎಂದು ಬೊಬ್ಬೆ ಹೊಡೆಯುವ ಈತನಿಗೆ ಅಸಲಿ ಸತ್ಯದ ದರ್ಶನ ಮಾಡಿಸೋಣ. ನಮ್ಮ ಮೌನ ಅವರಿಗೆ ಸಮ್ಮತಿಯಾಗದಿರಲಿ. ಬಸವಣ್ಣನವರ ಹೆಸರಿಗೆ ಕಳಂಕ ತರುವವರನ್ನು ಸುಮ್ಮನೆ ಬಿಡುವುದು ಶರಣರ ಲಕ್ಷಣವಲ್ಲ. ಎದ್ದೇಳಿ, ಸತ್ಯದ ಪರವಾಗಿ ದನಿ ಎತ್ತಿ!

ಒಳ್ಳೆಯ ಸಂದೇಶ ರವಾನಿಸಿದ್ದಿರಿ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ
ಹಂಜಿಗೆ ನೇರವಾಗಿ ಹೆದರಿಸುವ ಧೈರ್ಯವಿಲ್ಲ ಆದ್ದರಿಂದ ತೆವಲಿಗೆ, ಮತ್ತು ಕುಮ್ಮಕ್ಕಿನಿಂದ ಬಾಯಿಗೆ ಬಂದಂತೆ ಮಾತನಾಡುವ ಇವನ ಬಾಯಿಗೆ ಬೀಗ ಹಾಕ್ಲೆ ಬೇಕಿದೆ. ಬಸವಾಭಿಮಾನಿಗಳು ಮತ್ತು ಬಸವಪರ ಮಠಗಳು. ಕ್ಷಮೆ ಕೇಳುವ ತನಕ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲೆ ಮಾಡಬೇಕಿದೆ