ಸಂವಿಧಾನ ಸಮರ್ಪಣಾ ದಿನದಂದು ಬೀದಿಗಿಳಿದು ಆಕ್ರೋಶ; ಅವಹೇಳನಕಾರಿಗಳ ಪ್ರತಿಕೃತಿ ದಹನ
ಹುಬ್ಬಳ್ಳಿ :
ವಿಶ್ವಗುರು ಬಸವಣ್ಣನವರ ವಿಚಾರಧಾರೆ ಹಾಗೂ ಭಾರತೀಯ ಸಂವಿಧಾನದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ, ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಗುರುವಾರ ಹುಬ್ಬಳ್ಳಿಯಲ್ಲಿ ವಿವಿಧ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಬಸವಣ್ಣನವರು ಸಾರಿದ ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಹಾಗೂ ಜಾತಿರಹಿತ ಸಮಾಜದ ಆಶಯಗಳು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಭಾರತೀಯ ಸಂವಿಧಾನದ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಬಳಿಕ ನೂರಾರು ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗುತ್ತಾ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಬಸವಣ್ಣನವರಿಗೆ ಮತ್ತು ಭಾರತೀಯ ಸಂವಿಧಾನಕ್ಕೆ ಅವಮಾನ ಮಾಡುವ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿ, ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವಂತೆ ಆಗ್ರಹಿಸಿದರು.
ಪ್ರತಿಕೃತಿ ದಹಿಸಿ ತೀವ್ರ ಆಕ್ರೋಶ ಪ್ರತಿಭಟನೆಯ ಸಂದರ್ಭದಲ್ಲಿ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಲಾದ ಹಂಜ್, ಈ ಹೇಳಿಕೆಯ ಹಿಂದಿನ ಶಕ್ತಿಯೆಂದು ಪ್ರತಿಭಟನಾಕಾರರು ಆರೋಪಿಸಿದ ವಿಶ್ವೇಶ್ವರ ಭಟ್ ಹಾಗೂ ಭಾರತೀಯ ಸಂವಿಧಾನದಲ್ಲಿ ಮನುಸ್ಮೃತಿ ಇದೆ ಎಂದು ಹೇಳಿಕೆ ನೀಡಿದ ಕನ್ನೇರಿ ಸ್ವಾಮೀಜಿ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಅವರು ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಜಾಗತಿಕ ಸಂದೇಶ ಸಾರಿದ ಮಹಾನ್ ಸಮಾಜ ಸುಧಾರಕರು. ಅದೇ ರೀತಿ ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕುವ ಅವಕಾಶ ಕಲ್ಪಿಸಿದೆ. ಇಂತಹ ಮಹಾನ್ ಚೇತನರ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಮುಖಂಡರು ಹೇಳಿದರು.
ಪ್ರತಿಭಟನೆಯ ಬಳಿಕ ತಹಶೀಲ್ದಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಬಸವಣ್ಣನವರು ಮತ್ತು ಭಾರತೀಯ ಸಂವಿಧಾನದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದವರ ವಿರುದ್ಧ ಸರ್ಕಾರ ತಕ್ಷಣವೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಸಮಗ್ರ ತನಿಖೆ ನಡೆಸಿ ಕಾನೂನುಬದ್ಧ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಸಮಾಜದ ಸ್ವಾಸ್ಥ್ಯ ಕದಡುವ, ಮಹನೀಯರ ಗೌರವಕ್ಕೆ ಧಕ್ಕೆ ತರುವ ಹಾಗೂ ಸಂವಿಧಾನದ ಆಶಯಗಳನ್ನು ಅವಮಾನಿಸುವ ಪ್ರವೃತ್ತಿಗಳಿಗೆ ಕಡಿವಾಣ ಹಾಕಬೇಕು. ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತವಾಗಿ ಮಾತನಾಡುವ ಸಂಸ್ಕೃತಿ ಬೆಳೆಸಬೇಕು. ಸಂವಿಧಾನ ಮತ್ತು ಬಸವಣ್ಣನವರ ವಿಚಾರಧಾರೆಗೆ ಗೌರವ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಘ ಪರಿವಾರದ ಮೌನದ ಬಗ್ಗೆ ಶ್ರೀ ಬಸವಾನಂದ ಸ್ವಾಮೀಜಿ ಪ್ರಶ್ನೆ ಪ್ರತಿಭಟನೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿಯವರು ಮಾತನಾಡಿ, ಬಸವಣ್ಣನವರ ವಿರುದ್ಧ ನಡೆದಿರುವ ಅವಹೇಳನಕಾರಿ ಕೃತ್ಯದ ಹಿಂದಿರುವ ಶಕ್ತಿಗಳನ್ನು ಬಯಲಿಗೆಳೆಯಬೇಕು ಎಂದು ಆಗ್ರಹಿಸಿದರು. ಈ ಪ್ರಕರಣದ ಕುರಿತು ಸಂಘ ಪರಿವಾರ ಏಕೆ ಮೌನವಾಗಿದೆ? ಈ ವಿಷಯದಲ್ಲಿ ಸಂಘ ಪರಿವಾರದವರು ತಮ್ಮ ನಿಲುವನ್ನು ಏಕೆ ಸ್ಪಷ್ಟಪಡಿಸುತ್ತಿಲ್ಲ? ಎಂದು ಅವರು ಪ್ರಶ್ನಿಸಿದರು.
ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಹನೀಯರ ಗೌರವಕ್ಕೆ ಧಕ್ಕೆ ತರುವ ಮತ್ತು ಸಂವಿಧಾನದ ಆಶಯಗಳನ್ನು ಅವಮಾನಿಸುವ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇಂತಹ ಹೇಳಿಕೆಗಳು ಸಮಾಜದಲ್ಲಿ ಅನಗತ್ಯ ಸಂಘರ್ಷ ಮತ್ತು ಅಶಾಂತಿಗೆ ಕಾರಣವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಮುಳ್ಳಳ್ಳಿಯ ಶ್ರೀ ಶಿವಯೋಗಿ ಸ್ವಾಮೀಜಿಯವರು ಮಾತನಾಡಿ, ಬಸವಣ್ಣನವರಿಗೆ ಮತ್ತು ಸಂವಿಧಾನಕ್ಕೆ ಅವಮಾನ ಮಾಡಿದವರಿಗೆ ಶಿಕ್ಷೆಯಾಗಬೇಕು. ಇಂತಹ ಕೃತ್ಯಗಳ ವಿರುದ್ಧ ಸಮಾಜ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಮೂವರು ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆದ ಈ ಪ್ರತಿಭಟನೆಗೆ ಬಸವಪರ, ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದು, ಬಸವತತ್ವ ಮತ್ತು ಸಂವಿಧಾನದ ಆಶಯಗಳ ರಕ್ಷಣೆಗೆ ಸಂಘಟಿತ ಹೋರಾಟದ ಅಗತ್ಯವನ್ನು ಒತ್ತಿಹೇಳಿದರು.
ವಿವಿಧ ಕ್ಷೇತ್ರಗಳ ಮುಖಂಡರು, ಹೋರಾಟಗಾರರು ಭಾಗಿಯಾಗಿದ್ದ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಹುಬ್ಬಳ್ಳಿ-ಧಾರವಾಡದ ವಿವಿಧ ಬಸವಪರ, ದಲಿತಪರ, ಕಾರ್ಮಿಕ, ರೈತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮತ್ತು ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಗುರುನಾಥ ಉಳ್ಳಿಕಾಶಿ, ಮಹೇಶ ಉಳ್ಳಿಕಾಶಿ, ರಮೇಶ ಭೋಸಲೆ, ಮಹೇಶ ಪತ್ತಾರ, ಬಸವರಾಜ ಸೂಳಿಭಾವಿ, ಶಂಕರ ಭೋಜಗಾರ, ಹನಮಂತ ಸೋಮನಪಲ್ಲಿ, ಏಕತಾ ಮಿಷನ್ನ ಗಂಗಾಧರ ಪೆರೂರ, ವಿಜಯಕುಮಾರ ಲುಂಜಾಲಾ, ಶಮೀಮ್ ಮುಲ್ಲಾ, ವಿನಾಯಕ ಓಸೇಕರ್, ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಮಾಜಿ ಎಂಎಲ್ಸಿ ಮೋಹನ ಲಿಂಬಿಕಾಯಿ, ಸದಾನಂದ ಡಂಗನವರ, ಅನ್ವರ್ ಮುಧೋಳ, ಬಾಬಾಜಾನ ಮುಧೋಳ, ರಾಜಶೇಖರ ಮೆಣಸಿನಕಾಯಿ, ಮೌಲಾಲಿ ಮುಲ್ಲಾ, ಹುಸೇನ್ ಬಾಷಾ, ವಸೀಮ ಹಕೀಮ, ಮೌಲಾ ಕುಮಟಾಕರ, ಓಂ ಶಂಭು, ಮಲ್ಲಪ್ಪ ತಡಸದ, ವಿಜಯಪುರದ ವಿಶ್ರಾಂತ ಕುಲಪತಿ ವಿ.ಬಿ. ಮಾಗನೂರ, ಬಸವಕೇಂದ್ರದ ಅಧ್ಯಕ್ಷ ಜಿ.ಬಿ. ಹಳ್ಯಾಳ, ರಾ.ಬ.ದಳದ ಅಧ್ಯಕ್ಷೆ ಅನ್ನಪೂರ್ಣಕ್ಕ ಕುಬಸದ, ಗುರುಸಿದ್ದಪ್ಪ ಶಿವಶಿಂಪಿ, ಜೆಎಲ್ಎಂ ಯುವ ಘಟಕದ ಜಿಲ್ಲಾಧ್ಯಕ್ಷ ಅಧ್ಯಕ್ಷ ಸಿ.ಜಿ. ಪಾಟೀಲ, ಎಸ್.ಬಿ. ಜೋಡಳ್ಳಿ, ಶಿವಾನಂದ ಬುರ್ಲಬಡ್ಡಿ, ಕೆ.ಎಸ್. ಇನಾಮತಿ, ನೀಲಾ ಇನಾಮತಿ, ಸುನಿಲಾತಾಯಿ ಬ್ಯಾಹಟ್ಟಿ, ಅಂಬಿಕಾ ಹಾಗೂ ಕುಮಾರಣ್ಣ ಪಾಟೀಲ ಸೇರಿದಂತೆ ಹಲವು ಗಣ್ಯರು ಮತ್ತು ಹೋರಾಟಗಾರರು ಭಾಗವಹಿಸಿದ್ದರು.
ಸಂವಿಧಾನ ಸಮರ್ಪಣಾ ದಿನದಂದು ನಡೆದ ಈ ಪ್ರತಿಭಟನೆ ಕೇವಲ ಕೆಲವು ವ್ಯಕ್ತಿಗಳ ಹೇಳಿಕೆಗಳನ್ನು ಖಂಡಿಸುವ ಕಾರ್ಯಕ್ರಮವಾಗಿ ಉಳಿಯದೆ, ಬಸವಣ್ಣನವರ ಸಮಾನತೆಯ ತತ್ವ ಮತ್ತು ಭಾರತೀಯ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಸಂಘಟಿತ ಜನಪರ ಹೋರಾಟವಾಗಿ ಗಮನ ಸೆಳೆಯಿತು.

ಬಸವಣ್ಣನವರು ಸಮಾಜದಲ್ಲಿದ್ದ ಜಾತಿ, ವರ್ಗ, ಲಿಂಗಭೇದ ಮತ್ತು ಅಸಮಾನತೆಗಳ ವಿರುದ್ಧ ವಚನಗಳ ಮೂಲಕ ಕ್ರಾಂತಿಕಾರಿ ಧ್ವನಿ ಎತ್ತಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಗೌರವ ದೊರೆಯುವಂತಹ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಈ ಇಬ್ಬರು ಮಹಾನ್ ಚೇತನರ ಆಶಯಗಳು ಸಮಾಜದಲ್ಲಿ ಜೀವಂತವಾಗಿರಬೇಕು ಎಂಬ ಸಂದೇಶವನ್ನು ಪ್ರತಿಭಟನಾಕಾರರು ಸಾರಿದರು.
ಸಂಘಟನೆಯ ಸಂಚಾಲಕರಾದ ಬಸವರಾಜ ಸೂಳೆಭಾವಿಯವರು ಬಸವಣ್ಣನವರ ವಿಚಾರಧಾರೆಗೆ ಅವಮಾನ ಸಹಿಸುವುದಿಲ್ಲ, ಭಾರತೀಯ ಸಂವಿಧಾನದ ಘನತೆಗೆ ಧಕ್ಕೆ ತರುವುದನ್ನು ಒಪ್ಪುವುದಿಲ್ಲ. ಮಹನೀಯರ ಗೌರವ ಮತ್ತು ಸಂವಿಧಾನದ ಮೌಲ್ಯಗಳ ರಕ್ಷಣೆಗೆ ಜನಪರ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಲಿವೆ ಎಂಬ ದೃಢ ಸಂದೇಶದೊಂದಿಗೆ ಪ್ರತಿಭಟನೆ ಮುಕ್ತಾಯಗೊಳಿಸಿದರು.
