ಕಲಬುರಗಿ :
ಬಸವ ಸಮಿತಿ ಅನುಭಾವ ಮಂಟಪ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಲ್ಲಿ ಬಸವಾದಿ ಶರಣರ ಸ್ಮರಣಾರ್ಥ ಅರಿವಿನ ಮನೆ 896ನೆಯ ದತ್ತಿ ಕಾರ್ಯಕ್ರಮದಲ್ಲಿ ಅನುಭಾವ ನೀಡಿದ ಶರಣು ಚಿಂತಕಿ ಜಯಶ್ರೀ ಚಟ್ನಳ್ಳಿ ಅವರು, ಅಕ್ಕಮಹಾದೇವಿ ಹೆಸರಿಗೆ ತಕ್ಕಂತೆ ಅನುಭಾವದಿಂದಲೂ ಹಿರಿಯ ಅಕ್ಕನೇ ಆಗಿದ್ದಳು. ಆಕೆ ಜಗತ್ತಿನ ಮೊಟ್ಟಮೊದಲ ವಚನಕಾರ್ತಿ ಎಂದರು.

ಶಿವಮೊಗ್ಗ ಜಿಲ್ಲೆಯ ಉಡುತಡಿ ಆಕೆಯ ಜನ್ಮಸ್ಥಳವಾಗಿದೆ. ಅಕ್ಕ ಮೂರು ವರ್ಷದವಳಿದ್ದಾಗಲೇ ಆಧ್ಯಾತ್ಮ ಜೀವಿಯಾಗುವ ಲಕ್ಷಣಗಳಿದ್ದವು. ಅವರ ಮನೆಯ ಗುರುಗಳಾದ ಗುರುಲಿಂಗ ದೇವರಿಂದ ಆರಂಭಿಕ ಶಿಕ್ಷಣ – ಸಂಸ್ಕಾರ ಪಡೆದಳು. ನೀನೆಂಬುದು ನೀನಲ್ಲ, ನೀನೆಂಬುದು ದೇವರ ಸ್ವರೂಪವೆಂಬುವುದನ್ನು ಗುರುಗಳಿಂದ ತಿಳಿದಳು. ನರಜನ್ಮ ತೊಡೆದು ಹರಜನ್ಮ ಮಾಡುವವರು ಗುರುಗಳು. ತಂದೆ ತಾಯಿಯ ಉದರದಿಂದ ಹುಟ್ಟುವುದು ಮೊದಲನೇ ಹುಟ್ಟಾದರೆ ಗುರುವಿನಿಂದ ಲಿಂಗದೀಕ್ಷೆ ಪಡೆಯುವುದು ಎರಡನೆಯ ಹುಟ್ಟಾಗಿದೆ. ಪಂಚೇಂದ್ರಿಯಗಳ ಸಂಸಾರ ನಿಸ್ಸಾರವಾಗಿದೆ. ಆಧ್ಯಾತ್ಮ ಜೀವನ ಸಂಸಾರವಾಗಿದೆ. ಲಿಂಗದೀಕ್ಷೆ ಪಡೆದ ಅಕ್ಕ ಶರಣಸತಿ ಲಿಂಗಪತಿಯಾಗಿ ಬದುಕಿದಳು ಎಂದರು.
ಅಕ್ಕ ಯವ್ವನಕ್ಕೆ ಬಂದಾಗ ಮನೆಯವರು ಮದುವೆಗೆ ಒತ್ತಾಯಿಸಿದರು. ಆದರೆ ಅಕ್ಕ ಚೆನ್ನಮಲ್ಲಿಕಾರ್ಜುನನೇ ತನ್ನ ಗಂಡನೆಂದಳು. ನನಗೆ ಲೌಕಿಕಕೊಬ್ಬ ಗಂಡ ಪಾರಮಾರ್ಥಿಕಕೊಬ್ಬ ಗಂಡನಿಲ್ಲ. ನನಗೆ ಎರಡಕ್ಕೂ ಒಬ್ಬನೇ ಗಂಡನಿದ್ದಾನೆ ಅವನು ಚೆನ್ನಮಲ್ಲಿಕಾರ್ಜುನ ಎಂದಳು. ದೇವರನ್ನೇ ಗಂಡನೆಂದ ಜಗತ್ತಿನ ಮೊಟ್ಟ ಮೊದಲ ವೀರ ವೀರಾಗಿಣಿ ಎಂದು ತಿಳಿಸಿದರು.

ಮನೆಯವರೆಲ್ಲರ ಒತ್ತಾಯಕ್ಕೆ ಕೌಶಿಕ ಮಹಾರಾಜನನ್ನು ಕೆಲವು ಕರಾರುಗಳನ್ನು ಹಾಕಿ ಮದುವೆಯಾದಳು. ಕೌಶಿಕ ಕರಾರಿನನ್ವಯ ನಡೆದುಕೊಳ್ಳದೆ ಇದ್ದಾಗ ಅವನನ್ನು ತೊರೆದು ಕಲ್ಯಾಣದೆಡೆಗೆ ಹೊರಟಳು. ಹಸಿವಾದಡೆ ಭಿಕ್ಷಾನ್ನಗಳುಂಟು ತೃಷೆ ಆದರೆ ಕೆರೆ ಹಳ್ಳ ಬಾವಿಗಳುಂಟು ಶಯನಕ್ಕೆ ಹಾಳು ದೇಗುಲಗಳುಂಟು ಎಂದು ಧೈರ್ಯದಿಂದ ಹೇಳಿದಳು.
ಅಳಿಮಾಮರವೇ ಗಿಳಿ ಕೋಗಿಲೆ ನೀವು ಚೆನ್ನಮಲ್ಲಿಕಾರ್ಜುನನನ್ನು ಕಂಡಿರೆ ಎಂದು ಪ್ರಶ್ನಿಸಿ ಪ್ರಕೃತಿಯಲ್ಲಿ ದೇವರನ್ನು ಕಾಣುತ್ತಾಳೆ. ಅಲ್ಲಮಪ್ರಭುಗಳು ಅಕ್ಕನನ್ನು ನಾನಾ ವಿಧವಾಗಿ ಪ್ರಶ್ನಿಸಿ ಕಲ್ಯಾಣದ ಅನುಭವ ಮಂಟಪದಲ್ಲಿ ಬರಮಾಡಿಕೊಳ್ಳುತ್ತಾರೆ. ಅಕ್ಕ ಅಧ್ಯಾತ್ಮ ಲೋಕದ ವಿಸ್ಮಯ ಎಂದು ಅವರು ಹೇಳಿದರು.
ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಡಾ.ವೀರಣ್ಣ ದಂಡೆ, ದತ್ತಿ ದಾಸೋಹಿಗಳಾದ ಡಾ.ಜಯಶ್ರೀ ದಂಡೆ, ಉದ್ಯಮಿ ರಾಜೇಂದ್ರ ಖೂಬಾ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ಡಾ.ಕೆ. ಎಸ್. ವಾಲಿ, ಬಂಡಪ್ಪ ಕೇಸುರ, ಶರಣಗೌಡ ಪಾಟೀಲ ಪಾಳಾ, ಶಿವಾನಂದ ಹತ್ತಿ, ಉದ್ದಂಡಯ್ಯ ಭಾಗವಹಿಸಿದ್ದರು. ಸಾಕ್ಷಿ ಶಿವರಂಜನ ಸತ್ಯಂಪೇಟೆ ನಿರೂಪಿಸಿ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga
