ಲಿಂಗೈಕ್ಯ ಡಾ. ಸಿದ್ಧಲಿಂಗ ಶ್ರೀಗಳವರ ಆಶಯ ಈಡೇರಿಸಲಾಗುತ್ತಿದೆ
ಅಣ್ಣಿಗೇರಿ:
ಅಲಕ್ಷಿತ ಸಮುದಾಯದ ಮಕ್ಕಳಿಗೆ ಶಿಕ್ಷಣವನ್ನು ನಮ್ಮ ಸಂಸ್ಥೆಯು ಕಳೆದ ಆರು ವರ್ಷಗಳಿಂದ ನೀಡುತ್ತಿದೆ ಎಂದು ಗದಗ ತೋಂಟದಾರ್ಯ ವಿದ್ಯಾಪೀಠದ ಇಲ್ಲಿನ ನಿಂಗಮ್ಮ ಹೂಗಾರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್.ಎಸ್. ಹರ್ಲಾಪೂರ ತಿಳಿಸಿದರು.

ಇಲ್ಲಿನ ನಿಂಗಮ್ಮ ಹೂಗಾರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಮೈಸೂರಿನ ಕವಿತಾ ಕಲಾ ತಂಡದ ‘ಕೌದಿ’ ಏಕವ್ಯಕ್ತಿ ನಾಟಕ ಪ್ರದರ್ಶನ ನಂತರ ಅವರು ಮಾತನಾಡಿದರು.
ಗದಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಅವರ ಆಶಯದಂತೆ ಪೌರಕಾರ್ಮಿಕರು, ಒಡ್ಡರು, ಭೋವಿ, ಹರಿಣಶಿಕಾರಿ ಹೀಗೆ ಅಲಕ್ಷಿತ ಸಮುದಾಯದ ಜೊತೆಗೆ ಅನಾಥೆಯಾದ ಬಾಲಕಿಗೆ ಒಂದನೆಯ ತರಗತಿಯಿಂದ ಪಿಯುಸಿವರೆಗೆ ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಪ್ರತಿ ವಿದ್ಯಾರ್ಥಿಗೆ ಒಂದೂವರೆ ಲಕ್ಷ ರೂಪಾಯಿ ವೆಚ್ಚವಾಗಲಿದೆ. ಈಮೂಲಕ ಅಲಕ್ಷಿತ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಮುಂದೆ ಬರಬೇಕು ಎನ್ನುವುದು ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಅವರ ಉದ್ದೇಶವನ್ನು ಈಡೇರಿಸಲಾಗುತ್ತಿದೆ ಎಂದು ಹೇಳಿದರು.
ಕೌದಿ ಹೊಲಿಯುವ ಅಲಕ್ಷಿತ ಸಮುದಾಯದ ಗೊಂದಲಿಗರು, ದಲಿತರ ಬವಣೆಯ ಬದುಕನ್ನು ಈ ನಾಟಕ ಅನಾವರಣಗೊಳಿಸಿದೆ ಜೊತೆಗೆ ಪರಿಣಾಮಕಾರಿಯಾಗಿತ್ತು ಎಂದು ವಿವರಿಸಿದರು.
ವೀರೇಶ ಶಾನುಭೋಗರ, ಎಸ್. ವಿ. ಕುರಡಗಿ, ಕಿರಣ ಬೂದಿಹಾಳ ಹಾಜರಿದ್ದರು.

ಇದಕ್ಕೂ ಮೊದಲು ಗಣೇಶ ಅಮೀನಗಡ ಅವರ ಕೌದಿ ನಾಟಕವನ್ನು ಕಲಬುರಗಿ ರಂಗಾಯಣದ ಕಲಾವಿದೆ ಭಾಗ್ಯಶ್ರೀ ಬಿ. ಪಾಳಾ ಪ್ರಸ್ತುತಪಡಿಸಿದರು. ಇದನ್ನು ವಿನ್ಯಾಸಗೊಳಿಸಿ, ಸಂಗೀತ ನೀಡಿ ನಿರ್ದೇಶಿಸಿದವರು ಜಗದೀಶ್ ಆರ್.ಜಾಣಿ. ಸಂಗೀತ ಹಾಗೂ ಬೆಳಕು ನಿರ್ವಹಣೆ ಅಭಿಷೇಕ್ ಅವರದು.

ಕೌದಿ ನಾಟಕ ನೋಡಿದ ನಂತರ ವಿದ್ಯಾರ್ಥಿಗಳು ಕೌದಿಯ ಮಹತ್ವ, ಕೌದಿ ಹೊಲಿಯುವವರ ಸಮಸ್ಯೆ, ಸವಾಲು ಹಾಗೂ ಸಂಕಟಗಳನ್ನು ಅರಿತರು. ಅಲ್ಲದೆ ತಮ್ಮ ಮನೆಯಲ್ಲಿ ಕೌದಿ ಹಾಸಲು, ಹೊದ್ದುಕೊಳ್ಳಲು ಬಳಸುತ್ತಿರುವ ಕುರಿತು ಸ್ಮರಿಸಿಕೊಂಡರು.

ಕೌದಿ ಹೊಲಿಯುವವರ ಸಂಪರ್ಕ ಸಂಖ್ಯೆ ಇದ್ದರೆ ತಿಳಿಸಿ