ಶರಣ ಸಾಹಿತ್ಯ ಪ್ರಸಾರಕ್ಕೆ ಬದ್ದವಾದ ಪರಿಷತ್: ಸುಜಾತ ವಾರದ

ಗದಗ:

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಬಸವಾದಿ ಶರಣರ ವಚನ ಸಾಹಿತ್ಯ, ಮೌಲ್ಯಗಳು, ಶರಣ ಸಂಸ್ಕೃತಿ, ಆದರ್ಶಗಳನ್ನು ಪ್ರಸಾರ ಮಾಡಲು ಸ್ಥಾಪಿತವಾದ ಸಂಸ್ಥೆಯಾಗಿದೆ. ಸುತ್ತೂರು ಮಠದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತವಾದ ಈ ಸಂಸ್ಥೆ ೧೯೮೬ರಿಂದ ರಾಜ್ಯದ ಹಲವೆಡೆ ಪ್ರತಿವರ್ಷ ನಿರಂತರವಾಗಿ ಶರಣ ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಾ ಶರಣರ ವಚನ ಸಾಹಿತ್ಯ ಪ್ರಸಾರ ಮಾಡುತ್ತಿದೆಯೆಂದು ಶರಣತತ್ವ ಅನುಯಾಯಿ ಸುಜಾತ ವಾರದ ಅವರು ತಿಳಿಸಿದರು.

ಬಸವದಳದ ಬಸವ ಮಂಟಪದಲ್ಲಿ ನಡೆದ ೧೭೦೬ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ‘೧೪ನೇ ಶರಣ ಸಾಹಿತ್ಯ ಸಮ್ಮೇಳನದ ಅನುಭವಗಳು’ ಕುರಿತು ಮಾತನಾಡುತ್ತಾ, ಇಂದು ಬಸವಾದಿ ಶರಣರ ವಚನ ಸಾಹಿತ್ಯ ಬಹುಚರ್ಚಿತ ವಿಷಯ. ಬಹುಶಃ ಯಾವ ತತ್ವ ಸಿದ್ಧಾಂತ ಇಷ್ಟೊಂದು ಚರ್ಚೆಗಳಿಗೆ ಕಾರಣವಾಗಿರಲಾರವು. ಏಕೆಂದರೆ ವಚನಗಳೆಂದರೆ ಅವು ಸತ್ಯದ ಪ್ರತಿರೂಪವಾಗಿವೆ.

ರಾಜ್ಯಾದ್ಯಂತ ಬಹಳಷ್ಟು ಬಸವಪರ ಸಂಘಟನೆಗಳಿವೆ. ಅದೇ ಮಾರ್ಗದಲ್ಲಿ ಶರಣ ಸಾಹಿತ್ಯ ಪರಿಷತ್ ತನ್ನದೇ ಆದ ರೀತಿಯಲ್ಲಿ ವಚನ ಸಾಹಿತ್ಯ ಪ್ರಚುರಗೊಳಿಸುತ್ತಿದೆ. ಈ ಪೈಕಿ ಸಮ್ಮೇಳನಗಳನ್ನು ಹಮ್ಮಿಕೊಂಡು, ಚರ್ಚೆ, ಗೋಷ್ಠಿಗಳ ಮೂಲಕ ಜನರಿಗೆ ವಚನ ಸಾಹಿತ್ಯ ಮುಟ್ಟಿಸುತ್ತಿದೆ. ಅದೇ ರೀತಿ ಇತ್ತೀಚಿಗೆ ಬೆಂಗಳೂರಿನಲ್ಲಿ ೧೪ನೇ ಶರಣಸಾಹಿತ್ಯ ಸಮ್ಮೇಳನ ಜರುಗಿತು.

ಈ ಸಮ್ಮೇಳನದಲ್ಲಿ ನಾನು ನನ್ನ ಶರಣ ಪರಿವಾರದವರ ಜೊತೆ ಭಾಗಿಯಾಗುವ ಸುಸಂದರ್ಭ ಒದಗಿತು. ಅಲ್ಲಿ ಕಂಡ ಅನುಭವಗಳು ಅನನ್ಯವಾದವು. ಸಮ್ಮೇಳನವು ಆದಿಚುಂಚನಗಿರಿ ಶಾಖಾಮಠದ ಸ್ವಾಮಿಗಳಿಂದ ಉದ್ಘಾಟನೆಯಾಯಿತು. ಸಮ್ಮೇಳನದ ಅಧ್ಯಕ್ಷರಾಗಿ ಗೊ.ರು. ಚನ್ನಬಸವಪ್ಪನವರಿದ್ದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆ ನೋಡತಕ್ಕದ್ದಾಗಿತ್ತು.

ನಂತರ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಪೂ. ಸಾಣೇಹಳ್ಳಿ ಸ್ವಾಮೀಜಿಗಳಿಂದ ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಕುರಿತು ಮಾತನಾಡಿದರು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಲು ಕನಿಷ್ಠ ಹತ್ತುವರ್ಷಗಳಿಂದ ಸತತ ಪ್ರಯತ್ನ ನಡೆಯುತ್ತಲೇ ಇತ್ತು. ಬಸವಾಭಿಮಾನಿಗಳಾದ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಸಕ್ತಿ ಪರಿಣಾಮ ಬಸವಣ್ಣ ರಾಜ್ಯದ ಸಾಂಸ್ಕೃತಿಕ ನಾಯಕನಾದರು ಎಂದರು.

ಅಲ್ಲದೇ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಚಿತ್ರನಟ ದೊಡ್ಡಣ್ಣ ತಾವು ಅಪ್ಪಟ ಬಸವಾಭಿಮಾನಿ ಎಂದು ಅನೇಕ ವಚನಗಳನ್ನು ಸರಾಗವಾಗಿ ಹೇಳುವ ಮೂಲಕ ಪ್ರಚುರ ಪಡಿಸಿದರು. ಮತ್ತೋರ್ವ ಚಲನಚಿತ್ರ ನಟ ಶರತ್ ಲೋಹಿತಾಶ್ವರವರು ಕೂಡಾ ಭಾಗಿಯಾಗಿದ್ದರು.

ಇಲ್ಲಿ ಯುವಕರಿಗಾಗಿ ಗೋಷ್ಠಿಗಳು, ಅಧುನಿಕ ವಚನ ಗೋಷ್ಠಿ, ಸಂವಾದ, ಪ್ರಶ್ನೋತ್ತರ, ಕಣ್ಮುಂದೆ ಕಟ್ಟಿದ ವಚನ ಗಾಯನ, ವಚನ ನೃತ್ಯ ರೂಪಕ, ನಾಟಕಗಳು ಮನಸ್ಸಿಗೆ ಮುದ ನೀಡಿದ್ದಷ್ಟೇ ಅಲ್ಲ ಬಸವಾದಿ ಶರಣರೇ ಎದುರಿಗಿದ್ದಂತೆ ಭಾಸವಾಯಿತು.

ಜೊತೆಗೆ ಅಚ್ಚುಕಟ್ಟಾದ ಉಪಹಾರ, ಪ್ರಸಾದದ ವ್ಯವಸ್ಥೆ ನೆನಪಿಡುವಂತಿತ್ತು. ಒಟ್ಟಾರೆ ೧೪ನೇ ಶರಣ ಸಾಹಿತ್ಯ ಸಮ್ಮೇಳನ ಭಾಗವಹಿಸಿದ ಎಲ್ಲರ ಮನದಲ್ಲೂ ಶರಣರ ತತ್ವಗಳು ಅಚ್ಚೊತ್ತುವಂತೆ, ನೆನಪಿಡುವಂತೆ ಮಾಡುವಲ್ಲಿ ಯಶಸ್ವಿಯಾಯಿತೆಂದರು.

ಇದೇ ಸಮ್ಮೇಳನದಲ್ಲಿ ಭಾಗಿಯಾದ ಜಯಶ್ರೀ ಹಳ್ಳಿಕೇರಿ, ಸುವರ್ಣಾ ಗಾಳಪ್ಪನವರ ತಮ್ಮ ಅನುಭವಗಳನ್ನು ಇದೇ ಸಭೆಯಲ್ಲಿ ಹಂಚಿಕೊಂಡರು.

ನಂತರ ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಲಿಂಗಾಯತ ಧರ್ಮ ಆಚಾರ ಪ್ರದಾನವಾದ ಧರ್ಮ. ಇಲ್ಲಿ ಅರಿವು, ಅನುಭಾವಗಳೇ ಪ್ರಧಾನ. ಕಾಯಕ ಈ ಧರ್ಮದ ಜೀವಾಳವೆಂದರು.

ಪ್ರಾರಂಭದಲ್ಲಿ ವಚನ ಪ್ರಾರ್ಥನೆ ಜರುಗಿತು. ಸ್ವಾಗತವನ್ನು ಎಂ.ಬಿ. ಲಿಂಗದಾಳ ಮಾಡಿದರು. ಗಂಗಮ್ಮ ಹೂಗಾರ ಕಾರ್ಯಕ್ರಮ ನಿರೂಪಿಸಿದರು. ಗೀತಾ ಕೆಂಭಾವಿ ಶರಣು ಸಮರ್ಪಣೆ ಗೈದರು.

ಕೊನೆಗೆ ಇತ್ತೀಚಿಗೆ ಲಿಂಗೈಕ್ಯರಾದ ಖ್ಯಾತ ಗಾಯಕಿ ಎಸ್. ಜಾನಕಿಯವರಿಗೆ ಶೃದ್ಧಾಂಜಲಿ ಕೋರಲಾಯಿತು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *