ಭಾಲ್ಕಿ:
ಸಜ್ಜನರ ಸಂಗ ಹೆಜ್ಜೇನು ಸವಿದಂತೆ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಒಳ್ಳೆಯವರ ಒಡನಾಟ ಬೆಳೆಸಿಕೊಂಡು ಬದುಕು ಪಾವನಗೊಳಿಸಿಕೊಳ್ಳಬೇಕು ಎಂದು ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ ಹೇಳಿದರು.
ನಗರದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಬುಧವಾರ ಆಯೋಜಿಸಿದ್ದ ‘ಅಲ್ಲಮಪ್ರಭು ವಚನ ದರ್ಶನ ಪ್ರವಚನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಟ್ಟವರ ಸಹವಾಸ ವ್ಯಕ್ತಿತ್ವದ ಪತನಕ್ಕೆ ಕಾರಣವಾಗುತ್ತದೆ. ಹಾಗಾಗಿ ನಾವುಗಳು ಒಳ್ಳೆಯವರ ಸ್ನೇಹ ಬೆಳೆಸಿಕೊಳ್ಳಬೇಕು ಎಂದರು.
ಗಡಿಭಾಗದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರು ಶೈಕ್ಷಣಿಕ ಕ್ರಾಂತಿ ಮಾಡುವ ಮೂಲಕ ಯುವಕರಲ್ಲಿ ನೈತಿಕ ಪ್ರಜ್ಞೆ ಮಾನವೀಯ ಸಂಸ್ಕಾರ ಬಿತ್ತುತ್ತಿದ್ದಾರೆ. ಅವರ ಕಾರ್ಯಗಳ ಒತ್ತಡದಲ್ಲಿಯೂ ಒಂದು ತಿಂಗಳ ಪರ್ಯಂತ ಪ್ರವಚನ ಮಾಡುವ ಮೂಲಕ ನಮ್ಮೆಲ್ಲರ ಬಾಳು ಬೆಳಗಿಸುವ ಕಾರ್ಯ ಮಾಡುತ್ತಿದ್ದಾರೆ.
ಅವರ ಅಂಗನುಡಿಗಳು ನಾವು ಪ್ರತಿನಿತ್ಯ ಆಲಿಸಿ ಆಚರಣೆಯಲ್ಲಿ ತಂದಾಗ ನಮ್ಮ ಜೀವನ ಪಾವನವಾಗುತ್ತದೆ ಎಂದು ತಿಳಿಸಿದರು.
ನೇತೃತ್ವ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೊಳಾದರೂ ಭಕ್ತರಿಗೆ ಪ್ರವಚನದ ಮೂಲಕ ಜ್ಞಾನ ದಾಸೋಹವನ್ನು ಉಣಬಡಿಸುತ್ತಿದ್ದಾರೆ.
ಅಲ್ಲಮಪ್ರಭು ಅನುಭವ ಮಂಟಪಕ್ಕೆ ಗೌರವ ಘನತೆ ತಂದು ಕೊಟ್ಟವರು. ಅಂತಹ ಶರಣರ ಕುರಿತು ಪೂಜ್ಯರು ಅಲ್ಲಮಪ್ರಭುವಿನ ವಚನ ದರ್ಶನ ವಿಷಯದ ಮೇಲೆ ಪ್ರವಚನ ನೀಡುತ್ತಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಕಾಲಕ್ಕೆ ಆಗಮಿಸಿ ಪ್ರವಚನ ಆಲಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾನಿಧ್ಯ ವಹಿಸಿದ್ದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಅಲ್ಲಮಪ್ರಭುಗಳು ಶ್ರೇಷ್ಠ ಮಹಾನುಭಾವಿಗಳು ಅವರ ಚಿಂತನೆಗಳು ವ್ಯಕ್ತಿ, ಸಮಾಜ ಕಲ್ಯಾಣಕ್ಕೆ ದಾರಿದೀಪವಾಗಿವೆ. ಅವರ ವಚನಗಳು ಬೆಡಗಿನ ರೂಪದಲ್ಲಿದ್ದರೂ ಅದನ್ನು ಅನುಭಾವದಿಂದ ತಿಳಿದುಕೊಂಡರೆ ಮನಸ್ಸಿಗೆ ನೆಮ್ಮದಿ, ಶಾಂತಿ, ಸಮಾಧಾನ ದೊರೆಯುತ್ತದೆ. ಅವರ ಅನುಭಾವಿಕ ಚಿಂತನೆಗಳು ನಮ್ಮ ಜೀವನವನ್ನು ಅಧ್ಯಾತ್ಮದ ಕಡೆ ಕೊಂಡೊಯುತ್ತದೆ.
ಅಲ್ಲಮಪ್ರಭುವಿನ ಜೀವನ ಅಧ್ಯಾತ್ಮ ಜೀವಿಗಳಿಗೆ ಮಾದರಿಯಾಗಿದೆ. ವಿಶ್ವಗುರು ಬಸವಣ್ಣನವರು ಅನುಭವಮಂಟಪ ಸ್ಥಾಪಿಸಿದರು. ಅದರ ಶೂನ್ಯಪೀಠದ ಅಧ್ಯಕ್ಷರನ್ನಾಗಿ ಅಲ್ಲಮಪ್ರಭುಗಳಿಗೆ ಮಾಡಿದರು. ಅವರ ಅಧ್ಯಕ್ಷತೆಯಲ್ಲಿ ನಡೆದ ಅನುಭವಮಂಟಪದ ಚರ್ಚೆಗಳು, ಸಂವಾದಗಳು ಭಾರತೀಯ ಅಧ್ಯಾತ್ಮ ಜಗತ್ತಿನ ವಿಸ್ಮಯವಾಗಿವೆ.
ಅವರಲ್ಲಿದ್ದ ಅರಿವು, ಆಚಾರ ಮತ್ತು ಅನುಭಾವ ತಿಳಿದುಕೊಳ್ಳುವುದಕ್ಕಾಗಿಯೇ ಒಂದು ತಿಂಗಳ ಪರ್ಯಂತ ಪ್ರವಚನ ನಡೆಯುತ್ತದೆ. ತಾವೆಲ್ಲರೂ ಅಲ್ಲಮಪ್ರಭುವಿನ ವಚನ ಪ್ರಸಾದ ಸೇವಿಸಿಸಲು ಪ್ರತಿನಿತ್ಯ ಆಗಮಿಸಬೇಕೆಂದು ತಿಳಿಸಿದರು.
ಪ್ರಭುಲಿಂಗ ಸ್ವಾಮೀಜಿ, ಸಿದ್ಧಬಸವ ಸ್ವಾಮೀಜಿ, ಶಿವಬಸವ ಸ್ವಾಮೀಜಿ ಸಮ್ಮುಖ ವಹಿಸಿ, ಮಾತನಾಡಿದರು.
ತಾಲೂಕು ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗುಂಡಪ್ಪ ಸಂಗಮಕರ್ ಬಸವ ಗುರುವಿನ ಪೂಜೆ ನೆರವೇರಿಸಿದರು. ಗುರುಪ್ರಸಾದ ಶಾಲೆಯ ಮಕ್ಕಳು ವಚನ ನೃತ್ಯ ನಡೆಸಿ ಕೊಟ್ಟರು.
ಸಾಹಿತಿ ರಾಜು ಜುಬರೆ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶ್ರೀದೇವಿ ಶಾಂತಯ್ಯ ಸ್ವಾಮಿ, ಶೋಭಾ, ನಾಗಶೆಟ್ಟಿ ಚೋಳಾ, ಧನರಾಜ ಖರ್ಗೆ ಅವರಿಂದ ವಚನ ಭಜನೆ ನಡೆಯಿತು.
ಶ್ರಾವಣ ಮಾಸದ ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ಸ್ವರೂಪ ಬಂಡೆಪ್ಪ ಬಳತೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
