‘ಬಸವಣ್ಣನವರ ಆಶಯಗಳಿಗೆ ಕೈಜೋಡಿಸಿದ ಹೆಗ್ಗಳಿಕೆ ಅಪ್ಪಣ್ಣನವರದು’

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ:

ತಮ್ಮ ವೃತ್ತಿಯ ಜೊತೆಗೆ ಸಮಾಜದಲ್ಲಿನ ಮೌಢ್ಯವನ್ನು ಪ್ರಶ್ನಿಸುವ ಮೂಲಕ ಬಸವಣ್ಣನವರ ಆಶಯಗಳಿಗೆ ಕೈಜೋಡಿಸಿದ ಹೆಗ್ಗಳಿಕೆ ಹಡಪದ ಅಪ್ಪಣ್ಣನವರಿಗೆ ಸಲ್ಲುತ್ತದೆ ಎಂದು ಹೊಸಮಠದ ಪೂಜ್ಯ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಮಠದಲ್ಲಿ ಬಸವ ಕೇಂದ್ರದ ವತಿಯಿಂದ ಜರುಗಿದ ಶರಣ‌ ಸಂಗಮ ಹಾಗೂ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆರ್ಶಿವಚನ ನೀಡಿದರು.

ಪ್ರತಿ ಧರ್ಮದಲ್ಲೂ ಶೋಷಣೆ ಇದೆ. ಆದರೆ ಮೌಢ್ಯ ಮತ್ತು ಕಂದಾಚಾರಗಳನ್ನು ಪ್ರಶ್ನಿಸುವ ಛಾತಿ ಇದ್ದದ್ದು ಅನುಭವ ಮಂಟಪಕ್ಕೆ. ಅಂಥ ವಿಶಿಷ್ಟ ವೇದಿಕೆಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಮತ್ತು ಬದುಕಿನ ಸಾರ್ಥಕತೆ ಕುರಿತು ಅಪ್ಪಣ್ಣನವರು ತಮ್ಮ ವಚನಗಳಲ್ಲಿ ಸಾರಿರುವರು. ತಮ್ಮ ಪತ್ನಿ ಶರಣೆ ಲಿಂಗಮ್ಮನವರ ಜೊತೆಗೆ ಬದುಕಿನ ಸುಖ-ದುಃಖಗಳಲ್ಲಿ ಸಮಭಾಗಿ ಆದವರು. ಎಷ್ಟೇ ಕಷ್ಟ ಬಂದರೂ ಹಿಂದೆ ಸರಿಯದೇ ಶರಣ ದಂಪತಿಗಳವರು ಬಸವಣ್ಣವರೊಂದಿಗೆ ಸದಾ ಇರುತ್ತಿದ್ದರು ಎಂದರು.

ಶ್ರೀ ಹಡಪದ ಅಪ್ಪಣ್ಣ ಸೇವಾ ಸಂಘದ ಅಧ್ಯಕ್ಷ ಎಸ್.ಎನ್. ಕಾಯಕದ ಮಾತನಾಡಿ, ನಮ್ಮ ಸಮಾಜದವರು ನಿಷ್ಕಲ್ಮಶ ಮನಸ್ಸಿನವರು. ಸದಾ ಶ್ರಮಜೀವಿಗಳು. ಶರಣ ಸಂಸ್ಕೃತಿ ಹೆಚ್ಷಿಸಲು ಎಲ್ಲರೂ ಸೇರಿ ಅಪ್ಪಣ್ಣನವರ ಜಯಂತಿ ಆಚರಿಸುತ್ತಿರುವುದು ಅಭಿಮಾನ ಮೂಡಿಸಿದೆ ಎಂದರು.

ಸಮಾಜದ ಮುಖಂಡ ಎಸ್.ಬಿ. ಕ್ಯಾಲಕೊಂಡ ಮಾತನಾಡಿ, ಬಸವಣ್ಣ ಹಾಗೂ ಹಡಪದ ಅಪ್ಪಣ್ಣ ಅವರ ಮಧ್ಯೆ ಸ್ವಾಮಿನಿಷ್ಠೆ ಇತ್ತು. ಅಪ್ಪಣ್ಣನವರು ಎಲ್ಲ ಶರಣರ ಪ್ರೀತಿ ಗಳಿಸಿದ್ದರು. ಅನುಭವ ಮಂಟಪದಲ್ಲಿ ಪ್ರಮುಖ ನಿರ್ಣಯ ಕೈಗೊಳ್ಳುತ್ತಿದ್ದರು ಎಂದರು.

ಅಹಿಂದ ಮುಖಂಡ ಉಡಚಪ್ಪ ಮಾಳಗಿ ಮಾತನಾಡಿ, ಬಸವಣ್ಣನವರ ತತ್ವಾದರ್ಶಗಳನ್ನು ಶ್ರೀಮಠ ಸದಾ ಬೆಂಬಲಿಸುತ್ತದೆ. ಅದು ನಮಗೆ ಹೆಮ್ಮೆ ಮೂಡಿಸುತ್ತದೆ. ಶ್ರೀಮಠದ ಕೃಪೆಯಿಂದ ನಾವೆಲ್ಲರೂ ಸುಖಿಯಾಗಿದ್ದೇವೆ ಎಂದರು.

ಹಡಪದ ಅಪ್ಪಣ್ಣ ಸಮಾಜ ಸಂಘದದ ತಾಲೂಕಾಧ್ಯಕ್ಷ ಶಿವಾನಂದ ಲಕ್ಕಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮೂಡಣ ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಪತ್ರಕರ್ತರಾದ ಬಾಪು ನಂದಿಹಳ್ಳಿ ಅವರನ್ನು ಶ್ರೀ ಮಠದಿಂದ ಗೌರವಿಸಿ ಸನ್ಮಾನಿಸಲಾಯಿತು.

ಮಹಾಲಿಂಗಪ್ಪ ಹಡಪದ, ಅಂಬರೀಶ ಭಗವಾನಪುರ, ಬಸವರಾಜ ಕಾಯಕದ, ಶಿವಯೋಗೆಪ್ಪ ದೇವಗಿರಿ, ವಿರೂಪಾಕ್ಷಪ್ಪ ಹಡಪದ, ಲಲಿತಾ ಹಳಕೊಪ್ಪ, ಗೋಲಪ್ಪ ಹಳಕೊಪ್ಪ, ರಕ್ಷಿತಾ ಮಡಿವಾಳರ, ಕವಿತಾ ಬಣಕಾರ, ಶಶಿಕಲಾ ಬೈಲಣ್ಣನವರ, ಮುರಿಗೆಪ್ಪ ಹಳಕೊಪ್ಪ ಉಪಸ್ಥಿತರಿದ್ದರು.

ಮಮತಾ ಮಾಗಳ ವಚನ ಗಾಯನ ಮಾಡಿದರು. ನಿಂಗಪ್ಪ ಆರೇರ ನಿರೂಪಿಸಿದರು. ಗೂಳಪ್ಪ ಅರಳಿಕಟ್ಟಿ ಸ್ವಾಗತಿಸಿ, ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *