‘ಅಂತರಂಗ, ಬಹಿರಂಗ ಶುದ್ಧಿಗೊಂಡಾಗ ಮನೆ ಮಹಾಮನೆ’

ರಾಯಚೂರು:

ಬಸವ ಕೇಂದ್ರದ 168 ನೇ ಮಹಾಮನೆ ಕಾರ್ಯಕ್ರಮ ನಗರದ ಆಶೀರ್ವಾದ ಕಾಲೋನಿಯ ಪುಷ್ಪಾ ಸೋಮಶೇಖರ ಬಾಗಾ ಅವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಕ್ತಾ ನರಕಲದಿನ್ನಿ ಮಾತನಾಡುತ್ತಾ, ಬಸವತತ್ವ ಸರಳವಾಗಿದ್ದು, ಎಲ್ಲರೂ ಆಚರಿಸುವಂತೆ ಬಸವಾದಿ ಶರಣರು ಹೇಳಿದ್ದಾರೆ. ಯಾವುದೇ ಆಡಂಬರವಿಲ್ಲದ ನಿತ್ಯ ಲಿಂಗಪೂಜೆಯನ್ನು ಮಾಡುತ್ತಾ, ಬಹಿರಂಗದ ಜೊತೆ ಅಂತರಂಗವನ್ನು ಕೂಡ ಶುದ್ಧಿ ಮಾಡಿಕೊಂಡಾಗ ಮನೆಯೇ ಮಹಾಮನೆ ಆಗುತ್ತದೆ ಎಂದರು.

ಬಸವ ಕೇಂದ್ರದ ಗೌರವಾಧ್ಯಕ್ಷರಾದ ಹರವಿ ನಾಗನಗೌಡರು, ಅಕ್ಕನ ಬಳಗದವರ ಕಾರ್ಯಸಾಧನೆಗಳನ್ನು ಶ್ಲಾಘಿಸಿದರಲ್ಲದೆ, ಇಂತಹ ಕಾರ್ಯಕ್ರಮಗಳು ನಗರದ ಪ್ರತಿಯೊಂದು ಬಡಾವಣೆಯಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಡೆದಾಗ ಮಾತ್ರ ಬಸವತತ್ವ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

 ಬಸವ ಕೇಂದ್ರದ ಉಪಾಧ್ಯಕ್ಷರಾದ ಚನ್ನಬಸವ, ಇಂಜನಿಯರ್ ಮಾತನಾಡುತ್ತಾ, ಬಸವಣ್ಣನವರು ಹೆಣ್ಣುಮಕ್ಕಳಿಗೆ ಹಾಗೂ ಸಮಾಜದ ಕಟ್ಟಕಡೆಯ ಜನರಿಗೆ ಸಮಾನತೆಯ ಧರ್ಮವನ್ನು ಕೊಟ್ಟರು. ಇಂದಿನ ಲಿಂಗಾಯತರೆಲ್ಲ 12ನೇ ಶತಮಾನಕ್ಕಿಂತ ಪೂರ್ವದಲ್ಲಿ ಶೂದ್ರರೇ ಆಗಿದ್ದರು. ಬಸವಣ್ಣನವರನ್ನು ಒಪ್ಪಿಕೊಂಡಿದ್ದಕ್ಕಾಗಿ ಇಂದು ಲಿಂಗಾಯತರಾಗಿ ಉನ್ನತಕ್ಕೇರಿದ್ದಾರೆಂದರು.

ಪ್ರತಿಯೊಬ್ಬರು ನಿತ್ಯ ಲಿಂಗಪೂಜೆ ಮಾಡಿಕೊಳ್ಳುತ್ತಾ, ಬಸವಾದಿ ಶರಣರು ಹಾಕಿಕೊಟ್ಟ ನೈಜ ಧರ್ಮದ ಮರ್ಮವನ್ನು ಅರಿತುಕೊಂಡು ‘ಲಿಂಗಾಂಗ ಸಾಮರಸ್ಯದಲ್ಲಿ’ ನಮ್ಮನ್ನು ನಾವು ತೊಡಗಿಸಿಕೊಂಡಲ್ಲಿ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯವೆಂದರು.

ವಚನ ಗಾಯನ ಮಾಡುವುದರೊಂದಿಗೆ, ಸಾಮೂಹಿಕ ಬಸವ ಪ್ರಾರ್ಥನೆಯನ್ನು ಜಗದೇವಿ ಚೆನ್ನಬಸವ, ಪೂರ್ಣಿಮಾ ಪಾಟೀಲ, ಡಾ. ಪ್ರಿಯಾಂಕ ಗದ್ವಾಲ, ತಾಯಮ್ಮಗೌಡ ಹೇಳಿಕೊಟ್ಟರು.

ಪಾರ್ವತಿ ಪಾಟೀಲ ಶರಣ ದಂಪತಿಗಳಿಗೆ ಇಷ್ಟಲಿಂಗ ಪೂಜಾ ವಿಧಾನವನ್ನು ಪ್ರಾತ್ಯಕ್ಷತೆಯ ಮೂಲಕ ತಿಳಿಸಿಕೊಟ್ಟು, ಇಷ್ಟಲಿಂಗ ಪೂಜೆಯನ್ನು ಮಾಡಿಸಿದರು.

ಸೋಮಶೇಖರ ಬಾಗಾ ಸ್ವಾಗತಿಸಿದರು. ಅಮರೇಗೌಡ ಪಾಟೀಲ ಪ್ರಸ್ತಾವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ನಾಗರಾಜ ಪಾಟೀಲ ವಂದಿಸಿದರು.

ಕಾರ್ಯಕ್ರಮದಲ್ಲಿ ಅನ್ನಪೂರ್ಣ ಹರವಿ, ನೀಲಕಂಠರಾಯ ವಕೀಲರು, ಸಿ.ಬಿ. ಪಾಟೀಲ ವಕೀಲರು, ಶರಣಬಸವ ಜಾಡಲದಿನ್ನಿ, ಅಮರೇಶ್ ನೆಲೋಗಿ, ಜಯಶ್ರೀ ಮಹಾಜನಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ವಚನದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *