‘ಬಸವಣ್ಣನವರ ತತ್ವಗಳನ್ನು ವಿಧಾನ ಪರಿಷತ್ ಮತ್ತು ವಿಧಾನ ಸಭೆಗಳಲ್ಲಿ ಅಳವಡಿಕೊಳ್ಳಬೇಕಾಗಿದೆ’
ಬಸವಕಲ್ಯಾಣ:
12ನೇ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು ಅನುಭವ ಮಂಟಪದ ಮುಖಾಂತರ ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟಿದ್ದರು ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸಭಾಪತಿ ಸ್ಥಾನ ದೊರೆತ ನಂತರ ಮೊದಲ ಬಾರಿಗೆ ನಗರಕ್ಕೆ ಭೇಟಿ ನೀಡಿ, ಬಸವೇಶ್ವರ ದೇವಸ್ಥಾನದ ದರ್ಶನ ಪಡೆದು ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರ ಕರ್ಮಭೂಮಿಗೆ ಬಂದಿರುವುದು ಖುಷಿ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಹಲವು ಬಾರಿ ಬಸವಕಲ್ಯಾಣ ನಗರಕ್ಕೆ ಬಂದು ಹೋಗಿದ್ದೇನೆ. ಆದರೆ, ಈ ಬಾರಿ ವಿಧಾನ ಪರಿಷತ್ ಸಭಾಪತಿಯಾದ ನಂತರ ಮೊದಲಿಗೆ ಬಸವಕಲ್ಯಾಣಕ್ಕೆ ಬಂದು ಅನುಭವ ಮಂಟಪಕ್ಕೆ ಭೇಟಿ ನೀಡಿ ಬಸವಣ್ಣನವರ ಮಾರ್ಗದಲ್ಲಿ ನಡೆಯಬೇಕು ಎಂದುಕೊಂಡಿದ್ದೇನೆ. ಬಸವಣ್ಣನವರ ಮಾರ್ಗದರ್ಶಿ ತತ್ವಗಳನ್ನು ವಿಧಾನ ಪರಿಷತ್ ಮತ್ತು ವಿಧಾನ ಸಭೆಗಳಲ್ಲಿ ಅಳವಡಿಕೊಳ್ಳಬೇಕಾಗಿದೆ ಎಂದರು.

ಈ ಹಿಂದೆ ನಗರದಲ್ಲಿ ಸೂಫಿ ಸಂತರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ 10 ದಿವಸಗಳ ಕಾಲ ಬಸವಕಲ್ಯಾಣದಲ್ಲಿಯೇ ವಾಸವಾಗಿದ್ದೆ. ಇಲ್ಲಿನ ಸರ್ವಧರ್ಮಗಳ ಜನರು ಕೊಟ್ಟ ಪ್ರೀತಿ, ವಿಶ್ವಾಸ ನಾನು ಎಂದೂ ಮರೆಯುವಂತಿಲ್ಲ ಎಂದು ತಿಳಿಸಿದರು.

ಶೇರ್-ಎ-ಸವರ್ ದರ್ಗಾಕ್ಕೆ, ಬಸವೇಶ್ವರ ದೇವಸ್ಥಾನಕ್ಕೆ ಹಾಗೂ ಬಡೇ ಶಾ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆದ ಅವರು, ನಾಲೆಡ್ಜ್ ಪಾರ್ಕ್ ಪಬ್ಲಿಕ್ ಶಾಲೆ ಹಾಗೂ ಅನುಭವ ಮಂಟಪ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿದರು.
ಈ ಸಂಧರ್ಭದಲ್ಲಿ ಶಾಸಕ ರಹೀಂ ಖಾನ್, ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ಮಾಜಿ ಸಚಿವ ರಾಜಶೇಖರ ಪಾಟೀಲ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಸೇರಿದಂತೆ ಅನೇಕ ಗಣ್ಯರು ಇದ್ದರು.
ಕೃಪೆ: ವಾರ್ತಾ ಭಾರತಿ

ಒಳ್ಳೆಯ ವಿಚಾರ ಜೈ ಬಸವ