ಗದಗ:
೧೨ನೇ ಶತಮಾನ ಸರ್ವಕಾಯಕಗಳ ಶರಣರಿಗೆ ಕಾಯಕಗಳ ಮಹತ್ವ, ಸಮಾನತೆ ಅರುಹಿ ಯಾವ ಕಾಯಕವೂ ಕೀಳಲ್ಲ, ಕಾಯಕದಲ್ಲೇ ಕೈಲಾಸವಿದೆ ಎಂದು ಹೇಳಿದ ಬಸವಣ್ಣ ಸರ್ವಶರಣರನ್ನು ಅನುಭವ ಮಂಟಪಕ್ಕೆ ಕರೆ ತಂದರು.
ಅಲ್ಲಿ ಶರಣರ ನಡುವೆ ನಡೆವ ಸಂವಾದ, ಅನುಭಾವಗಳಿಂದ ಸರ್ವ ಶರಣರು ಜ್ಞಾನಿಗಳಾದರು, ಪವಿತ್ರ ವಚನ ಸಾಹಿತ್ಯ ರಚನೆಯಾಯಿತು.

ಈ ಅನುಭವ ಮಂಟಪದ ಅನುಭಾವದಲ್ಲಿ ಮಿಂದೆದ್ದ ಶರಣರಲ್ಲಿ ಕುಂಬಾರ ಗುಂಡಯ್ಯನವರೂ ಒಬ್ಬರೆಂದು ಶರಣತತ್ವ ಲೇಖಕಿ ಗಿರಿಜಕ್ಕ ಧರ್ಮರಡ್ಡಿ ಅವರು ತಿಳಿಸಿದರು.
ಅವರು ಬಸವದಳದ ಬಸವ ಮಂಟಪದಲ್ಲಿ ನಡೆದ ೧೭೦೭ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ “ಶರಣ ಕುಂಬಾರ ಗುಂಡಯ್ಯ” ಅವರ ಕುರಿತು ಉಪನ್ಯಾಸ ಮಾಡುತ್ತಾ ಬಸವಣ್ಣನವರ ಸಮಕಾಲಿನ ಹಿರಿಯ ಶರಣರಲ್ಲಿ ಒಬ್ಬರಾದ ಕುಂಬಾರ ಗುಂಡಯ್ಯನವರು ಬಸವಾದಿ ಶರಣರ ಅನುಭವ ಮಂಟಪದಲ್ಲಿ ಹದವಾಗಿ ಬೆಂದ ತತ್ವದ ಮಡಿಕೆಯಂತೆ ಶರಣರಾಗಿ ಹೊರಹೊಮ್ಮಿದವರಾಗಿದ್ದರು. ಅವರ ಕಾಯಕ ಮಣ್ಣಿನ ಮಡಿಕೆಗಳನ್ನು ಮಾಡುವ ಕಾಯಕವಾಗಿತ್ತು. ಕಾಯಕದಲ್ಲೇ ಗುಂಡಯ್ಯ ಕೈಲಾಸ ಕಾಣುತ್ತಿದ್ದರು.
ಜೊತೆಗೆ ಅವರ ಪತ್ನಿ ಶರಣೆ ಕೇತಲದೇವಿಯವರೂ ಗಂಡನ ಶರಣ ಸಂಪ್ರದಾಯದಲ್ಲೇ ನಂಬಿಕೆಯಿಟ್ಟು ಪತಿಯ ಜೊತೆ ಹೆಜ್ಜೆ ಹಾಕಿದವರು.
ಗುಂಡಯ್ಯನವರ ಜನ್ಮಸ್ಥಳ ಭಾಲ್ಕಿ ಪಟ್ಟಣವಾಗಿದೆ. ತಂದೆ ಸತ್ಯಣ್ಣ, ತಾಯಿ ಸಂಗಮ್ಮ. ಬಸವಣ್ಣನವರಿಂದ ಪ್ರಭಾವಿತರಾಗಿ ಕಲ್ಯಾಣಕ್ಕೆ ಪತ್ನಿಯೊಡನೆ ಆಗಮಿಸಿ ಅಲ್ಲಿಯ ಶರಣರ ಜೊತೆ ಸೇರಿ ಅನುಭಾವಿಯಾಗಿ ಹೊರಹೊಮ್ಮಿದ ಗುಂಡಯ್ಯನವರ ವಚನಗಳಾವವು ಸಿಕ್ಕಿಲ್ಲ. ಆದರೆ ಧರ್ಮಪತ್ನಿ ಕೇತಲದೇವಿಯವರ ಕುಂಭೇಶ್ವರ ಈ ಅಂಕಿತದಲ್ಲಿ ಬರೆದ ವಚನಗಳು ಸಿಕ್ಕಿವೆ.
ಆದರೆ ಚಾರಿತ್ರಿಕ ದಾಖಲೆಗಳು ಕುಂಬಾರ ಗುಂಡಯ್ಯನವರ ಬಗ್ಗೆ ಮಾಹಿತಿ ನೀಡುತ್ತವೆ. ಹರಿಹರ ಕವಿಯ ‘ಕುಂಬಾರ ಗುಂಡಯ್ಯ ರಗಳೆ’ ಎಂಬ ಕೃತಿಯೂ ಇದೆ. ಜನಪದ ಕಥೆಗಳಲ್ಲೂ ಗುಂಡಯ್ಯನವರ ಉಲೇಖವಾಗಿದೆ.
ಈ ವಚನಗಳಲ್ಲಿ “ಹದಮಣ್ಣಲ್ಲದೆ ಮಡಿಕೆಯಾಗದು ವೃತಹೀನನ ಬೆರೆಯಲಾಗದು, ಬೆರೆದಡೆ ನರಕ ತಪ್ಪದು ನಾನೊಲ್ಲೆ ಬಲ್ಲೆನಾಗಿ ಕುಂಬೇಶ್ವರ” ಹಾಗೂ “ಲಿಂಗವಂತರ ಲಿಂಗಾಚಾರ ಅಂಗಳಕೆ ಹೋಗಿ, ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು, ಕಾಣುದುದನಾಚರಿಸದೆ, ಕಂಡುದನು ನುಡಿಯದೆ, ಕಾಣದ್ದನ್ನು, ಕಂಡದ್ದನ್ನು ಒಂದೆಸಮವೆಂದು ಅರಿಯಬಲ್ಲರೆ ಕುಂಬೇಶ್ವರ ಲಿಂಗವೆಂಬೆನು.” ಇವು ಪ್ರಮುಖವಾದವು.

ಮಣ್ಣು, ನೀರು ಸೇರಿ ಹದವಾಗಿ ತುಳಿದು ತಿರುಗುಣಿಯಲ್ಲಿ ತಿರುಗಿಸಿ ಒಂದು ಆಕಾರಕ್ಕೆ ಬಂದ ನಂತರ ಭಟ್ಟಿಯಲ್ಲಿ ಹದವಾಗಿ ಬೇಯ್ದನಂತರ ಮಣ್ಣಿನ ಪಾತ್ರೆಯಾಗುತ್ತದೆ. ಹಾಗೆಯೇ ಮನುಷ್ಯನ ಜೀವನವಾಗಿದೆ. ಅಂದರೆ ಮಣ್ಣು, ನೀರು, ಬೇಯಿಸುವಿಕೆ ಕೊನೆಗೆ ಸುಂದರ ಮಡಿಕೆಯಾಗುವಿಕೆಯೇ ಸಂಸ್ಕಾರವಾಗಿದೆ. ಮಣ್ಣು ಹದ ಮಾಡುವುದು, ಬೇಯಿಸುವುದು ಇವೆಲ್ಲ ಸಂಸ್ಕಾರಪೂರ್ವದ ಹಂತಗಳಾಗಿವೆ.
ಶರಣ ಧರ್ಮದಲ್ಲಿ ಕಾಯಕಕ್ಕೆ ಬಹಳ ಮಹತ್ವವಿದೆ. ಹಾಗೆಯೇ ಪಂಚಭೂತಗಳಿಂದಾದ ಮಾನವನ ದೇಹವು ಭಕ್ತಿಯ ಸಂಸ್ಕಾರದಿಂದ ಪರಿಶುದ್ಧವಾಗಿರಬೇಕು ಎಂದು ತನ್ನ ವಚನಗಳಲ್ಲಿ ಹೇಳಿದ್ದಾಳೆ. ಮಾನವನ ಅಹಂಕಾರ ಮತ್ತು ಮಮಕಾರವನ್ನು ಕಟುವಾಗಿ ಟೀಕಿಸುವ ಶರಣೆ ತನ್ನಲ್ಲಿಯ ತಾನೆನ್ನುವ ಭಾವ ಅಳಿಯದ ಹೊರತು ದೇವರ ಸಾಕ್ಷಾತ್ಕಾರ ಸಾಧ್ಯವಿಲ್ಲವೆನ್ನುವದನ್ನು ಹೇಳುವರು.
ಶರಣ ಪಥದತ್ತ ನಡೆದಾತನಲ್ಲಿ ಲಿಂಗನಿಷ್ಠೆಯಲ್ಲದೇ ಮತ್ತೊಂದು ಭಾವವೆಂದಿಗೂ ಇರಕೂಡದು. ಕಣ್ಣಿಗೆ ಕಾಣದ್ದನ್ನು ಶರಣರು ಎಂದು ನಂಬಲಾರರು. ಕಾಣುತ್ತಿರುವುದನ್ನೇ ಪರಾಮರ್ಶಿಸುವರು. ವೈಧಿಕರಲ್ಲಿ ದೇವರು, ಭಕ್ತ ಬೇರೆ ಬೇರೆ ಎಂದಿದ್ದರೆ, ಲಿಂಗಾಯತರಲ್ಲಿ ದೇವರ ಕಲ್ಪನೆ ದೇವರು, ಭಕ್ತ ಈರ್ವರೂ ಒಂದೇ ಎಂಬ ಭಾವವಿದೆ.

ಶಿವಪೂಜೆ, ಶಿವಯೋಗವಾಗಿ ಕೊನೆಗೆ ಶಿವನನ್ನು ಸೇರುವುದಾಗಿದೆ. ಇಲ್ಲಿ ಭಕ್ತ, ದೇವರು ಎಂಬ ಭೇದಭಾವವಿಲ್ಲವೆಂದು ಅನೇಕ ವಚನಗಳ ಉದಾಹರಣೆ ನೀಡುತ್ತಾ ಗಿರಿಜಕ್ಕ ಧರ್ಮರಡ್ಡಿಯವರು ಹೇಳಿದರು.
ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪ್ರಾರಂಭದಲ್ಲಿ ಶರಣೆ ಚಿಂತಾಮಣಿ ಬಂಡಿವಡ್ಡರ ವಚನ ಪ್ರಾರ್ಥನೆ ಮಾಡಿದರು.
ಕಾರ್ಯಕ್ರಮದಲ್ಲಿ ಜಕ್ಕಪ್ಪ ಕುಂಬಾರ, ಕಾರ್ಯದರ್ಶಿ, ಕುಂಬಾರ ಕ್ಷೇಮಾಭಿವೃದ್ಧಿ ಸಂಘ ಅವರು ಅತಿಥಿಗಳಾಗಿದ್ದರು. ಸ್ವಾಗತವನ್ನು ಎಸ್. ಎನ್. ಹಕಾರಿ ಮಾಡಿದರು. ಪ್ರಕಾಶ ಅಸುಂಡಿ ಕಾರ್ಯಕ್ರಮ ನಿರೂಪಿಸಿದರು. ಕರಿಯಪ್ಪ ಸಂಶಿ ಶರಣು ಸಮರ್ಪಣೆ ಗೈದರು. ಪ್ರಕಟಣೆಗಳನ್ನು ಶೇಖಣ್ಣ ಕವಳಿಕಾಯಿ ಓದಿದರು.
